Saturday, June 27, 2009

ಕೆ ಪಿ ಎಸ್ ಸಿ - ಮರುಕಳಿಸಿದ ಗೊಂದಲ, ಬೇಕಾ ಇದು?

ಇಂದು ಕರ್ನಾಟಕ ಲೋಕಸೇವಾ ಆಯೋಗ ಗ್ರಾಮ ಪಂಚಾಯತ್ ಹಂತ-೧, ಹಂತ-೨ ಕ್ಕೆ ರಾಜ್ಯಾಧ್ಯಂತ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಗೊಂದಲ ಉಂಟಾಯಿತು. ಇಂತಹ ಗೊಂದಲ, ನೇಮಕಾತಿ ಅಕ್ರಮಗಳು ಕೆಪಿಎಸ್ಸಿಗೆ ಹೊಸದೇನಲ್ಲ ಬಿಡಿ. ಆದರೂ ಒಂದು ಅತ್ಯಂತ ವಿಶ್ವಾಸಾರ್ಹ, ಸ್ವತಂತ್ರವಾದ ನೇಮಕಾತಿ ಆಯೋಗ ಪದೇ ಪದೇ ಪರೀಕ್ಷಾ ಅಕ್ರಮ, ಮೀಸಲು ಅಕ್ರಮ, ಅಂಕಗಳ ವ್ಯತ್ಯಾಸ, ಜಾತೀಯತೆ, ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಬಹಿರಂಗ, ಒಂದೇ ಮನೆಯ ಸದಸ್ಯರಿಗೆ ಸಮನಾದ ಆಯ್ಕೆ ಅಂಕಗಳನ್ನು ನೀಡುವಿಕೆ, ಸಮಿತಿ ಸದಸ್ಯರ ಭ್ರಷ್ಠಾಚಾರ, ಪಕ್ಷಪಾತ ಧೋರಣೆ, ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ನಿಧಾನ ಗತಿ ಹೀಗೆ ಸಾರ್ವಜನಿಕವಾಗಿ ಪದೇ ಪಧೇ ಮುಜುಗರಕ್ಕೊಳಗಾಗುವುದು ಸರಿಯೇ? ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಇರುವಷ್ಟೇ ಮಹತ್ವದ ಗೌರವ ಈ ಸಂಸ್ಥೆಗೆ ಇದೆ, ಸರ್ಕಾರಿ ಉದ್ಯೋಗವರಸುವ ಯುವಜನರಿಗೆ ಹೊಣೆಗಾರಿಕೆಯ ಉದ್ಯೋಗ ಕಲ್ಪಿಸುವ ಸ್ವಾಯತ್ತ ಸಂಸ್ಥೆಗೆ ಅದರದ್ದೇ ಆದ ಸ್ಥಾನಮಾನ ಇದೆ. ಭಾರತೀಯ ಸೇವೆಗಳ ನೇಮಕಾತಿಗಾಗಿ 1921ರಲ್ಲಿ ಸೆಂಟ್ರಲ್ ರಿಕ್ರೂಟ್ಮೆಂಟ್ ಬೋರ್ಡ್ ಕಾರ್ಯ ಆರಂಭಿಸಿತು, 1940ರ ವರೆಗೂ ಸರ್ಕಾರಿ ಸಚಿವಾಲಯದಲ್ಲೇ ಇದರ ಕಛೇರಿ ಇತ್ತು. ಮುಂದೆ ಸಾರ್ವಜನಿಕ ಸೇವೆಗಳ ಆಯುಕ್ತರ ನೇಮಕಾತಿ ಯಾದಾಗ 1950ರ ಸಂವಿಧಾನದ ಅನುಚ್ಚೇದ ಕಲಂ14ರನುಸಾರ ದೇಶದ ಎಲ್ಲ ರಾಜ್ಯಗಳಲ್ಲೂ 1951ರಿಂದ ಲೋಕಸೇವಾ ಆಯೋಗಗಳು ಅಸ್ತಿತ್ವಕ್ಕೆ ಬಂದವು. ಸರ್ಕಾರಿ ಸೇವೆಗೆ ಪಾರದರ್ಶಕ ನೇಮಕಾತಿ, ಸ್ಫರ್ದಾತ್ಮಕ ಪರೀಕ್ಷೆಗಳನ್ನು ನಡೆಸುವುದು, ನೇಮಕಾತಿಯಲ್ಲಿ ಸಂವಿಧಾನಾತ್ಮಕವಾಗಿ ಪಾಲಿಸಬೇಕಾದ ಸಾರ್ವಜನಿಕ ಆಶಯಗಳನ್ನು ಪಾಲಿಸುವುದು ಲೋಕಸೇವಾ ಆಯೋಗದ ಕರ್ತವ್ಯ. ಕರ್ನಾಟಕದಲ್ಲಿ ಲೋಕಸೇವಾ ಆಯೋಗ ಅಸ್ತಿತ್ವಕ್ಕೆ ಬಂದ ಮೇಲೆ ಇದುವರೆಗೂ 12ಮಂದಿ ಚೇರ್ಮನ್, 35ಮಂದಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ ಇಬ್ಬರು ಸದಸ್ಯರನ್ನು ನೇಮಿಸಲಾಗಿದೆ. ಒಟ್ಟಾರೆಯಾಗಿ ಆಯೋಗದ ಒಂದು ಸಮಿತಿಯಲ್ಲಿ ಅಧ್ಯಕ್ಷರು ಸೇರಿದಂತೆ 8ಮಂದಿ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕ ನ್ಯಾಯ ಕಲ್ಪಿಸುವ ಹಿನ್ನೆಲೆಯೋ ಏನೋ ರಾಜ್ಯದ ಎಲ್ಲ ಪ್ರಮುಖ ಜಾತಿಗಳ ತಲಾ ಒಬ್ಬರು ಸಮಿತಿಯಲ್ಲಿದ್ದಾರೆ. ಈ ಪೈಕಿ ಗೋನಾಳ್ ಭೀಮಪ್ಪ ಅಧ್ಯಕ್ಷರು ಮತ್ತು ಸದಸ್ಯರು(ಪ.ಜಾತಿ), ಇನ್ನು ಸದಸ್ಯರಾದ ದಾಸಯ್ಯ(ಪ.ಜಾತಿ), ನಾಗರಾಜ್ (ಕುರುಬ), ರುದ್ರೆಗೌಡ(ಲಿಂಗಾಯಿತ), ರಾಮಕೃಷ್ಣ(ಒಕ್ಕಲಿಗ), ಕೃಷ್ಣಪ್ರಸಾದ್(ಕುಂಬಾರ), ಬಿ ಪಿ ಕನಿರಾಂ (ಲಂಬಾಣಿ) ಇನ್ನೊಬ್ಬರು ರಿಯಾಜ್ ಅಹ್ಮದ್(ಮುಸ್ಲಿಂ), ಇನ್ನು ಒಂದು ಬ್ರಾಹ್ಮಣ ಸದಸ್ಯರನ್ನು ತೆಗೆದು ಕೊಳ್ಳುವ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ. ಸದರಿ ಸ್ಥಾನಗಳಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಸೇವೇ ಸಲ್ಲಿಸಿದ ಎ ವರ್ಗದ ನಿವೃತ್ತ ಅಧಿಕಾರಿಗಳು, ನಿವೃತ್ತ ಕುಲಪತಿಗಳು ಅರ್ಹತೆ ಆಧಾರದಲ್ಲಿ ನೇಮಕವಾಗುತ್ತಾರೆ. ಕಳೆದ 2ದಶಕಗಳಿಂದ ಈ ನಿಯಮಗಳನ್ನು ಸರ್ಕಾರಗಳು ಸದಸ್ಯರ ಹೆಸರುಗಳನ್ನು ಶಿಫಾರಸ್ಸು ಮಾಡುವಾಗ ಸಮರ್ಪಕವಾಗಿ ಪಾಲಿಸಿಲ್ಲ ದಿರುವ ಅನುಮಾನವಿದೆ, ಪರಿಣಾಮ ವಿಶ್ವಾಸಾರ್ಹವಾದ ಸಂಸ್ಥೆಯೊಂದು ಪದೇ ಪದೇ ಮುಜುಗುರಕ್ಕೊಳಗಾಗುತ್ತಿದೆ. ಕೆಪಿಎಸ್ಸಿ ಕಳೆದ ಬಾರಿ ದ್ವಿತಿಯ ದರ್ಜೆ ಮತ್ತು ಪ್ರಥಮ ದರ್ಜೆ ಗುಮಾಸ್ತರ ಪರೀಕ್ಷೆ ಸಂಧರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗ, ತಪ್ಪು ಪ್ರಶ್ನೆ, ತಪ್ಪು ಉತ್ತರಗಳನ್ನು ಪ್ರಕಟಿಸಿದ್ದರೆ, ಕೆ.ಇ.ಎಸ್ ಪರೀಕ್ಷೆಯ ಫಲಿತಾಂಶ, ಉಪನ್ಯಾಸಕರ ನೇಮಕಾತಿ ಆದೇಶವನ್ನು ತಡಮಾಡುತ್ತಿದೆ. ಈಗ ಗ್ರಾ.ಪಂ. ಕಾರ್ಯದರ್ಶಿಗಳ ಪರೀಕ್ಷೆಯಲ್ಲಿ ಕೆಲವರಿಗೆ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿ ಪರೀಕ್ಷಾ ಕೇಂದ್ರದ ಮಾಹಿತಿ ನೀಡಿದ್ದರೆ ಇನ್ನು ಕೆಲವರಿಗೆ ಮಾಹಿತಿ ಒದಗಿಸಿಲ್ಲ, ಪ್ರವೇಶ ಪತ್ರದ ಹಿಂಬದಿಯಲ್ಲಿ ಎಸ್ ಎಸ್ ಎಲ್ ಸಿ , ಪದವಿಯಲ್ಲಿ ಕನ್ನಡ ಬಾಷೆ ಓದಿದ್ದರೆ ವಿನಾಯ್ತಿ ಇದೆ ಎಂದಿದೆಯೇ ಹೊರತು ಆಯೋಗ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಅಭ್ಯರ್ಥಿಗಳಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಲಾಗಿಲ್ಲ, ಪರಿಣಾಮ ಲಕ್ಷಾಂತರ ಮಂದಿ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ನಿರಾಶೆಯಿಂದ ತೆರಳುವಂತಾಯಿತು ಯಾಕೆ ಹೀಗೆ? ಇನ್ನಾದರೂ ಕೆ ಪಿ ಎಸ್ ಸಿ ಸಾರ್ವಜನಿಕವಾಗಿ ಯಾವುದೇ ಶಂಕೆಗೆ ಒಳಗಾಗದಂತೆ ಕಾರ್ಯ ನಿರ್ವಹಿಸಬೇಕಾದ ಅಗತ್ಯತೆ ಇದೆ. ಏಕೆಂದರೆ ಒಮ್ಮೆ ಸಾರ್ವಜನಿಕವಾಗಿ ವಿಶ್ವಾಸ ಕಳೆದುಕೊಂಡರೆ ಅಂತಹ ಸಂಸ್ಥೆ ಜನಮನ್ನಣೆ ಗಳಿಸುವುದಿಲ್ಲ..!

No comments: