Sunday, August 9, 2009

ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಯಾಕಿಷ್ಟು ಗೋಂದಲ?

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿಸಿಬಿಸಿ ವಾತಾವರಣ. ರಾಜ್ಯ ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದ ಜನತೆಯ ಗಮನ ಸೆಳೆದದ್ದು ದೇಶದ ಮಹಾನ್ ದಾರ್ಶನಿಕ, ಕವಿ, ಸಂತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯ ವಿಚಾರ.!
ಹೌದು ಪ್ರತಿಮೆ ಸ್ಥಾಪನೆಯ ವಿಚಾರ ಯಾಕಿಷ್ಟು ಕಗ್ಗಂಟಾಗಬೇಕು? ಪ್ರತಿಮೆ ಸ್ಥಾಪಿಸುವುದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಉಪಯೋಗ ಯಾರಿಗೆ ? ಪ್ರತಿಮೆ ಸ್ಥಾಪನೆಗೆ ವಿರೋಧ ಯಾಕೆ? ಅಷ್ಟಕ್ಕೂ ಈ ತಿರುವಳ್ಳುವರ್ ಯಾರು? ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡಿರಲಿಕ್ಕೆ ಸಾಕು. ಸರಿ ಹಾಗಾದರೆ ವಿಚಾರಕ್ಕೆ ಬರೋಣ ಅಂತೀರಾ. ಆಗಲಿ ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿಚಾರ ಹೊಸದೇನಲ್ಲ, ಕಳೆದ ೧೮-20ವರ್ಷಗಳಿಂದ ಇಂತಹದ್ದೊಂದು ಪ್ರಸ್ತಾಪವಿತ್ತು. ದೇಶದ ಮಹಾನ್ ಸಂತರು, ದಾರ್ಶನಿಕರ ಶ್ರೇಷ್ಠರ ಪೈಕಿ ಒಬ್ಬರೆನಿಸಿಕೊಳ್ಳುವ ತಿರುವಳ್ಳುವರ್ ಬರೆದ ಪ್ರಸಿದ್ದ ಕೃತಿ ತಿರುಕ್ಕುರಲ್ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ನಮ್ಮಲ್ಲಿ ಹಲವು ಸಂತರು, ತತ್ವ ಪದಗಳನ್ನುಪ್ರಚುರ ಪಡಿಸಿದಂತೆ ಸರ್ವಜ್ಙ ಬದುಕಿನ ತತ್ವ ಸಿದ್ದಾಂತಗಳನ್ನು ಜಗತ್ತಿಗೆ ಸಾರಿದಂತೆ ತಿರುವಳ್ಳುವರ್ ಕೂಡ ಬಡತನ, ಸಂಪತ್ತು, ಅದೃಷ್ಠ, ಅವಿವೇಕತನ, ಗೆಳೆತನ, ಮಾತು, ನ್ಯಾಯ, ಅವಕಾಶ, ಬುದ್ದಿವಂತಿಕೆ, ಒಳ್ಳೆಯತನ, ಪ್ರೀತಿ, ಸತ್ಯ, ಸಸ್ಯಾಹಾರ, ಪಾಪ, ಸಾಮರಸ್ಯ, ಕುಟುಂಬ ಮತ್ತು ಸದ್ಗುಣ ಹೀಗೆ ೧೭ ವಿಚಾರಗಳ ಬಗೆಗೆ ವಿಸ್ತ್ರತವಾಗಿ ವ್ಯಾಖ್ಯಾನ ಮಾಡಿದ್ದಾರೆ. ಬೈಬಲ್, ಕುರಾನ್, ಭಗವದ್ಗೀತೆಗಳ ರೀತಿ ಈ ತಿರುಕ್ಕುರಲ್ ಒಂದು ಪ್ರಮುಖ ಗ್ರಂಥ. ತಿರುವಳ್ಳುವರ್ ಯಾವ ಕಾಲದಲ್ಲಿ ಬದುಕಿದ್ದ ಎಂಬ ಬಗ್ಗೆ ಎಲ್ಲಿಯೂ ಸ್ಪಷ್ಠ ಉಲ್ಲೇಖಗಳು ಸಿಗುತ್ತಿಲ್ಲವಾದರೂ ಲಭ್ಯ ಮಾಹಿತಿಗಳ ಪ್ರಕಾರ 2ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಜೀವಿಸಿದ್ದ ಎಂಬ ಮಾಹಿತಿಯಿದೆ. ತಮಿಳುನಾಡಿನಲ್ಲಿ ಪಾಂಡ್ಯರು ಆಡಳಿತ ನಡೆಸಿದ ಸಂಧರ್ಭದಲ್ಲಿ ಕವಿಗಳಿಗೆ ಸಾಹಿತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರೋತ್ಸಾಹ ಸಿಕ್ಕಿತ್ತು. ಹಾಗಾಗಿ ಅದೇ ಅವಧಿಯಲ್ಲಿ ತಿರುವಳ್ಳುವರ್ ಬದುಕಿದ್ದಿರಬಹುದು ಎಂದೂ ಹೇಳಲಾಗುತ್ತದೆ. ತಿರುವಳ್ಳುವರ್ ತಮಿಳುನಾಡಿನ ಮೈಲಾಪುರಂ ನಲ್ಲಿ ಜನಿಸಿ ಮಧುರೈಗೆ ತೆರಳಿ ಸಾಧನೆಗೈಯುತ್ತಾರೆ, ಮುಂದೆ ಚೆನ್ನೈನಲ್ಲಿ ನೆಲೆಸಿರುತ್ತಾರೆ ಎಂಬ ಐತಿಹ್ಯವೂ ಇದೆ. ಇವರ ಪತ್ನಿ ವಾಸುಕಿ ಎಂದು ಇವರದ್ದು ಅಂತರ್ಜಾತಿಯ ವಿವಾಹವು ಆಗಿದೆ ಹಾಗಾಗಿ ಜಾತಿ ಮತಗಳ ಎಲ್ಲೆಯನ್ನು ಮೀರಿದ ಮಹಾನ್ ದಾರ್ಶನಿಕ ಎಂದು ಬಣ್ಣಿಸಲಾಗುತ್ತದೆ. ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಕರುಣಾನಿಧಿ ಕನ್ಯಾಕುಮಾರಿಯಲ್ಲಿ 133ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ. ತಿರುವಳ್ಳುವರ್ ರ ಆತಿಕರ್ಮ ಎಂಬ ಕೃತಿಯ 133ಅದ್ಯಾಯಗಳನ್ನು ಪ್ರತಿನಿಧಿಸುವಂತೆ ಈ ಎತ್ತರದ ಮೂರ್ತಿಯನ್ನು ಸ್ಥಾಪಿಸಲಾಗಿದೆಯಂತೆ. ಸಧ್ಯ ರಾಜ್ಯದ ಕೋಲಾರ ಜಿಲ್ಲೆಯಲ್ಲೂ ಇವರ ಮೂರ್ತಿ ಪ್ರತಿಷ್ಠಾಪಿತವಾಗಿದೆ. ಹೀಗಿರುವಾಗ ಬೆಂಗಳೂರಿನ ಹಲಸೂರಿನಲ್ಲಿ ಪ್ರತಿಮೆಸ್ಥಾಪನೆಗೆ ಏಕಿಷ್ಟು ವಿರೋಧ ಎಂದು ತಿಳಿಯೋಣ, ಇದು ಉಪಚುನಾವಣೆಯ ಸಂಧರ್ಬ, ಹಾಗೂ ಸಧ್ಯದಲ್ಲಿಯೇ ಬೆಂಗಳೂರಿನಲ್ಲಿ ಮಹಾನಗರಪಾಲಿಕೆಯ ಚುನಾವಣೆಗಳು ಸನಿಹದಲ್ಲಿವೆ. ಈ ಸಂಧರ್ಭ ಏಕಾಏಕಿ ತಮಿಳುನಾಡಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ಕರುಣಾನಿಧಿಯವರನ್ನು ಭೇಟಿಯಾಗಿ ತಮಿಳುನಾಡಿನಲ್ಲಿ ಸರ್ವಜ್ಞ ನ ಮೂರ್ತಿ ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸುವ ಪ್ರಸ್ತಾವ ಮಾಡಿದರು. ಮಾಡಲಿ ಬೇಡ ಅಂತ ಅಲ್ಲ ಆದರೆ ಪ್ರತಿಮೆ ಸ್ಥಾಪನೆ ವಿಚಾರ ಖಂಡಿತವಾಗಿ ಸಾರ್ವತ್ರೀಕರಣ ವಾಗಬೇಕಿರಲಿಲ್ಲ ಅಲ್ಲವೇ? ಪ್ರತಿಮೆ ಸ್ಥಾಪನೆ ಸಂಬಂಧ ಮಾದ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಸಿಗುವಂತೆ ನೋಡಿಕೊಂಡು ಪ್ರತಿಮೆ ಸ್ಥಾಪಿಸ ಹೊರಟರೆ ಏನಾಗುತ್ತದೆ ಇದರ ಹಿಂದಿನ ರಾಜಕೀಯ ಉದ್ದೇಶ ಯಾರಿಗೂ ತಿಳಿಯದ್ದೇನಲ್ಲ. ವಿರೋಧ ಪಕ್ಷಗಳ ಮುಖಂಡರುಗಳು ಕೂಡ ತುಟಿಪಿಟಕ್ಕೆನ್ನದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೋಡಿ ಕನ್ನಡ ಅಂದರೆ ಅದು ಅನ್ನದ ಭಾಷೆ, ಅದು ನಮ್ಮ ಭಾವನಾತ್ಮಕ ಸಂಗತಿ ಕೂಡಾ. ಇಲ್ಲಿ ಪ್ರತಿಮೆ ಸ್ಥಾಪಿಸುವುದು, ಸಮಾನ ಗೌರವ ನೀಡುವುದು, ಆದರ ಸ್ಥಾಪನೆಯಿಂದ ಆಗುವ ಅನುಕೂಲ/ಅನಾನುಕೂಲ ಒತ್ತಟ್ಟಿಗಿರಲಿ. ಮೊದಲನೆಯದಾಗಿ ತರಾತುರಿಯಲ್ಲಿ ಪ್ರತಿಮೆ ಸ್ಥಾಪನೆ ಸಧ್ಯದ ಪರಿಸ್ಥಿತಿಯಲ್ಲಿ ಸೂಕ್ತವಾಗಿರಲಿಲ್ಲ,ಹೋಗಲಿ ಕಳೆದ 20ವರ್ಷಗಳಿಂದ ವಿವಾದಾತ್ಮಕವಾಗಿದ್ದ ಪ್ರತಿಮೆ ಸ್ಥಾಪನೆ ವಿಚಾರ ಬಗೆಹರಿಯಿತೆಂದೇ ಸಂತಸಪಡೋಣ, ಆದರೆ ಅದಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಂಡ ಸರ್ಕಾರ ಪ್ರತಿಮೆ ಸ್ಥಾಪನೆ ವಿಚಾರವನ್ನು ಸಾರ್ವತ್ರೀಕರಣ ಮಾಡುವ ಅವಶ್ಯಕತೆ ಇತ್ತೇ? ರಾಜ್ಯದ ವಿರುದ್ದ ಸದಾ ದುಂಡಾವರ್ತನೆ ನಡವಳಿಕೆಯನ್ನೇ ಪ್ರದರ್ಶಿಸುತ್ತಿರುವ ತಮಿಳುನಾಡು, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡುವುದರಿಂದ ರಾಜ್ಯದ ಜೊತೆ ಸಹಕಾರ ಮನೋಭಾವನೆ ಹೊಂದುತ್ತದೆ ಎಂಬುದೇ ಅಪನಂಬಿಕೆ ಅಲ್ಲವೇ? ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ವ್ಯಾಜ್ಯ ಇನ್ನು ಬಗೆಹರಿದಿಲ್ಲ, ಹೊಗೆನ್ಕಲ್ ನಡುಗಡ್ಡೆಯ ಜಂಟಿ ಸರ್ವೆಗೆ ತಮಿಳುನಾಡು ಒಪ್ಪಿಲ್ಲ, ಕೇಂದ್ರ ಸರ್ಕಾರ ಕನ್ನಡಕ್ಕೆ ನೀಡಿದ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ತೊಡರುಗಾಲಾದ ತಮಿಳುನಾಡು ಸುಪ್ರೀಂ ಕೋರ್ಟ ನಲ್ಲಿ ಅರ್ಜಿಸಲ್ಲಿಸಿದೆ, ಬೆಂಗಳೂರನ್ನು ಕೇಂದ್ರಾಢಲಿತ ಪ್ರದೇಶ ಮಾಡಿ ಕೇಂದ್ರದ ಪೋಲೀಸ್ ಠಾಣೆ ತೆಗೆಯಿರಿ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡುವ ತಮಿಳರ ವರ್ತನೆ ಸರಿಹೋಗಿಲ್ಲ, ರಾಜ್ಯದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರಗಳು, ಅನೇಕ ಉದ್ದಿಮೆಗಳು , ಕಾರಿಡಾರು ಯೋಜನೆಗಳು ರೈಲುಯೋಜನೆಗಳು, ತಂತ್ರಜ್ಞಾನ ಪಾರ್ಕುಗಳು ಹೀಗೆ ದಕ್ಕಿಸಿಕೊಂಡ ತಮಿಳುನಾಡು ವಂಚಿಸಿದ್ದು ಕಣ್ಣೆದುರಿಗಿರುವ ಸತ್ಯ ಹಾಗೆಂದು ತಿರುವಳ್ಳುವರ್ ಪ್ರತಿಮೆ ಸ್ಥಾನೆ ವಿಚಾರವನ್ನು ಇದಕ್ಕೆ ಥಳುಕು ಹಾಕಬೇಕೆ ಎಂಬ ಪ್ರಶ್ನೆ ಬರುವುದು ಸಹಜ. ಪ್ರತಿಮೆ ವಿಚಾರ ರಾಜಕೀಯ ಕಾರಣಗಳಿಗಾಗಿ ಸಾರ್ವತ್ರೀಕರಣವಾದಾಗ ಈ ಪ್ರಶ್ನೆಗಳನ್ನು ಎತ್ತುವುದು ಅನಿವಾರ್ಯವಲ್ಲವೇ? ಇನ್ನೊಂದು ವಿಚಾರ ಕಳೆದ 10-15ವರ್ಷಗಳಲ್ಲಿ ಪ್ರತಿಮೆ ಸ್ಥಾಪಿಸುವುದರಿಂದ ಏನೇನು ತೊಡಕುಗಳಾಗಿವೆ ಎಂಬುದು ಮಾಧ್ಯಮ ಮಿತ್ರರಿಗೆ ತಿಳಿಯದ ವಿಚಾರವೇನಲ್ಲ, ಹಾಗಿದ್ದಾಗ್ಯೂ ಒಂದು ಪ್ರತಿಮೆ ಸ್ಥಾಪಿಸುವುದರಿಂದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತಾಯಿತೆ ವಿನಹ ಸಮಾನ ಗೌರವ ನೀಡಿದಂಗೆ ಆಗಲಿಲ್ಲ ಏನಂತೀರಿ?

No comments: