Sunday, November 1, 2009

ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ ಗೊತ್ತಾ???

ವರಕವಿ ದ.ರಾ. ಬೇಂದ್ರೆ ಮೈಸೂರಿನ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕುವೆಂಪು ರವರೊಂದಿಗೆ ತೆಗೆಸಿದ ಫೋಟೋ
ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ? ಇಂತಹದ್ದೊಂದು ಪ್ರಶ್ನೆ ಕೇಳಿಕೊಳ್ಳುವ ದುರ್ಗತಿ ಸ್ವಾಭಿಮಾನಿ ಕನ್ನಡಿಗರದ್ದು ಅದು ದೌರ್ಭಾಗ್ಯದ ಸಂಗತಿಯೂ ಹೌದು. ಹಾಗಾದರೆ ಸ್ವಾಭಿಮಾನಿ ಗಳಲ್ಲದ ಕನ್ನಡಿಗರು ಯಾರು? ಇಂತಹ ವಿಭಿನ್ನ ಮನೋಭಾವದ ಗುಂಪು ಯಾಕೆ ಸೃಷ್ಟಿಯಾಗಿದೆ? ಇದರ ಪರಿಣಾಮಗಳೇನು? ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪ್ರೀತಿ ಯಾಕೆ ಜಾಗೃತವಾಗಬೇಕು? ಕನ್ನಡದ ಹೆಸರಿನಲ್ಲಿ ಇವತ್ತು ಏನೆಲ್ಲ ಆಗುತ್ತಿದೆ? ಯಾರ್ಯಾರು ಯಾವ ಯಾವ ರೀತಿಯ ಲಾಭ ಲೆಕ್ಕಾಚಾರಗಳನ್ನು ಕನ್ನಡ ಭಾಷೆಯನ್ನು ಮುಂದಿಟ್ಟುಕೊಂಡು ಮಾಡುತ್ತಿದ್ದಾರೆ? ಸರ್ಕಾರಗಳು ಏನು ಮಾಡುತ್ತಿವೆ? ಈ ನಡುವೆ ನಮ್ಮ ಕನ್ನಡಿಗರ ಮನಸ್ಥಿತಿ ಹೇಗಿದೆ? ನಮ್ಮ ಕನ್ನಡ ಸಂಸ್ಕೃತಿಗೆ ಯಾವ ರೀತಿಯ ಧಕ್ಕೆಯಾಗಿದೆ? ನಮ್ಮ ಕನ್ನಡವನ್ನು ಯಾಗಿಗೆಲ್ಲ ಅಡ ಇಡಲಾಗಿದೆ? ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು? ಎಂಬೆಲ್ಲಾ ಪ್ರಶ್ನೆಗಳು ಬೇತಾಳನಂತೆ ನಮ್ಮನಾವರಿಸಿವೆ. ಆದರೆ ಇವೆಲ್ಲಾ ಪ್ರಶ್ನೆಗೆ ಉತ್ತರ ಹುಡುಕಾಡುವವರು ಮಾತ್ರ ಅದೇ ಸ್ವಾಭಿಮಾನಿ ಕನ್ನಡಿಗರು! ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ , ಕನ್ನಡ ಜನರ ಹಿತಾಸಕ್ತಿಗೆ ನಮ್ಮ ನೆಲದಲ್ಲೆ ನಾವೇ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಒನ್ಸ್ ಎಗೈನ್ ಇಂತಹದ್ದೊಂದು ಪರಿಸ್ಥಿತಿಗೆ ಕಾರಣ ವಾಗಿರುವುದು ಮತ್ತದೇ ಜಾಗತೀಕರಣ!!
ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಮೊದಲು ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 40ಮಿಲಿಯನ್ ಜನ ಕನ್ನಡ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಜ್ಞಾನಪೀಠಿಗಳನ್ನು ಪಡೆದಿದೆ. 47ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.
ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿದೆ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನುವ ಸರ್ಕಾರಗಳು ರಾಜಕಾರಣಿಗಳು, ಮತ್ತು ಕೆಲವು ಸಾಹಿತ್ಯ ವಲಯದ ಅತಿಬುದ್ದಿವಂತರು ಈಗ ಏನೆನ್ನುತ್ತಾರೆ ಗೊತ್ತಿಲ್ಲ. ಕನ್ನಡ ನಮ್ಮ ಭಾವಸ್ಪೂರ್ತಿಯಾಗಿ, ನಮ್ಮ ಒಡಲಾಳದ ಧ್ವನಿಯಾಗಿ ನಮ್ಮ ನಿತ್ಯದ ಉಸಿರಾಗಿರುವಾಗ ಕನ್ನಡದ ಬಗ್ಗೆ ತಾತ್ಸಾರ ಅಸಡ್ಡೆ ಏಕೆ?

2 comments:

ಎಚ್.ಎನ್. ಈಶಕುಮಾರ್ said...

ಜಾಗತೀಕರಣ ಕನ್ನಡಕ್ಕೆ ಸಮಸ್ಯೆ ಅಲ್ಲ ಸರ್ ಅದಕ್ಕೆ ಕನ್ನಡವನ್ನು ಒಗ್ಗಿಸುವ ಕೆಲಸ ಕನ್ನಡಿಗರಿಂದ ಆಗಬೇಕು..
ನಿಜಕ್ಕೂ ಬಹಳ ಮಾಹಿತಿಗಳನ್ನೋಳಗೊಂಡಿದೆ ನಿಮ್ಮ ಬರಹ..ಧನ್ಯವಾದಗಳು..

ಅರಕಲಗೂಡುಜಯಕುಮಾರ್ said...

ಸರ್ ,"ಜಾಗತೀಕರಣ ಕನ್ನಡಕ್ಕೆ ಸಮಸ್ಯೆ ಅಲ್ಲ, ಅದಕ್ಕೆ ಕನ್ನಡವನ್ನು ಒಗ್ಗಿಸುವ ಕೆಲಸ ಕನ್ನಡಿಗರಿಂದ ಆಗಬೇಕು" ಎಂದು ನೀವು ಅಭಿಪ್ರಾಯ ವ್ಯಕ್ತಪಡಿಸಿರುವುದು ತಳಮಳ ಉಂಟುಮಾಡುವ ಸಂಗತಿ. ನೀವು ಸೂಕ್ಷ್ಮವಾಗಿ ಈ ವಿಚಾರವನ್ನು ಅವಲೋಕಿಸಬೇಕು, ಜಾಗತೀಕರಣದ ಪರಿಣಾಮ ಲಕ್ಷಾಂತರ ವಿಧೇಶಿ ಉದ್ದಿಮೆಗಳು ಮತ್ತು ಜನರು ರಾಜ್ಯದಲ್ಲಿ ಬಂದು ನೆಲೆಸಿದ್ದಾರೆ. ಜೊತೆಯಲ್ಲೇ ಅವರ ಭಾಷೆ ಮತ್ತು ಸಂಸ್ಕೃತಿಯೂ ಸಹ ನಮ್ಮ ನೆಲದಲ್ಲಿ ತಳವೂರುತ್ತಿದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಕಡಿಮೆಯಾಗಿದೆ, ಕನ್ನಡಿಗರ ಕಡೆಗಣೆಯಾಗುತ್ತಿದೆ, ಕನ್ನಡದ ಕಂಪು ಪಸರಿಸಲು ಅನ್ಯ ಭಾಷೆಗಳು ಅಡ್ಡಿ ಮಾಡಿವೆ ಹೀಗಿರುವಾಗ ಜಾಗತೀಕರಣ ಕನ್ನಡಕ್ಕೆ ಸಮಸ್ಯೆ ಅಲ್ಲ ಎನ್ನುವ ಅಭಿಪ್ರಾಯ ಸಾಧುವೇ? ಅದಕ್ಕೆ ಕನ್ನಡ ಒಗ್ಗಿಸುವ ಕೆಲಸ ಮಾಡಿದರೆ ಅದು ನಮ್ಮ ಭಾಷಾ ಬೆಳವಣಿಗೆಗೆ ಧಕ್ಕೆಯಲ್ಲವೇ? ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ... ಇದು ಚರ್ಚಾ ರೂಪ ಪಡೆಯಲಿ ಎಂಬುದಷ್ಟೇ ನನ್ನ ಆಶಯ ಸಾರ್.