Sunday, January 17, 2010

ಚಕ್ರವ್ಯೂಹ ಇದು ಚಕ್ರವ್ಯೂಹ, ನ್ಯಾಯ ಎಲ್ಲಿದೆ ....?ಸಂಕ್ರಾಂತಿಯ ಮರುದಿನ ದೀರ್ಘಾವಧಿಯ ಸೂರ್ಯಗ್ರಹಣ, ಏನಪ್ಪಾ ನಾಳಿನ ಕಾರ್ಯಕ್ರಮ ಅಂದುಕೊಂಡು ಮುಸುಕೆಳೆಯುವ ವೇಳೆಗೆ ಸುದ್ದಿ ಬಂತು. ಕಾಡಾನೆಗೆ ವರುಷದ ಮೊದಲ 'ಮಾನವಬಲಿ'ಯ ಸುದ್ದಿ ಜಿಲ್ಲೆಯ ಗಡಿಗ್ರಾಮದಿಂದ ಬಂದಪ್ಪಳಿಸಿತು. ಹಾಸನ ಜಿಲ್ಲೆಯಲ್ಲಿ ಕಾಡಾನೆಗೆ ಈ ದಶಕದಲ್ಲಿ 15ಮಾನವ ಬಲಿ ಆಗಿದೆ, 14 ಆನೆಗಳು ಮಾನವರಿಂದ ಜೀವತೆತ್ತಿವೆ. ಸುಗ್ಗಿಯ ಸಮಯದಲ್ಲಿ, ಬೆಳೆಯ ಸಂಧರ್ಭ ಆನೆಗಳ ದಾಂಗುಡಿ ರೈತರನ್ನು ನಿಸ್ಸಹಾಯಕರನ್ನಾಗಿ ಮಾಡಿದೆ. ಅಂತೆಯೇ ಮನುಷ್ಯರ ದೋಷದಿಂದಾಗಿ ಅನೆಗಳು ಜೀವಭಯದಿಂದ ಬದುಕುವಂತಾಗಿದೆ. ಆನೆ ಮತ್ತು ಮನುಷ್ಯ ರನಡುವಣ ಸಂಘರ್ಷ ಮಲೆನಾಡ ಬದುಕನ್ನು ಸಂಕಷ್ಟಮಯವಾಗಿಸಿದೆ. ಆಡಳಿತಶಾಹಿ ಈ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈ ಭಾಗದ ಆನೆಗಳು ಮತ್ತು ರೈತರ ಕೂಗು ಅರಣ್ಯರೋದನವಾಗಿದೆ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಯಾಕೆ ಹೀಗೆ?
ಕಳೆದ ನಾಲ್ಕು ದಶಕಗಳಿಂದೀಚೆಗೆ ಆನೆಗಳು-ರೈತರು ಅತಿ ಹೆಚ್ಚು ಸಂಕಟಕ್ಕ ಸಿಲುಕುವಂತಾಗಿದೆ. ದಕ್ಷಿಣದಲ್ಲಿರುವ ಸುಮಾರು 9109 ಹೆಕ್ಟೇರು ದಟ್ಟಾರಣ್ಯದ ಪಶ್ಚಿಮ ಘಟ್ಟದ ಸಾಲಿನಲ್ಲಿ ನೂರಾರು ಜಾತಿಯ ಕಾಡಿನ ಜೀವರಾಶಿಗಳು ಅಪಾಯದ ಅಂಚಿಗೆ ಸರಿದಿವೆ. ಮಲೆನಾಡ ಪರಿಸರದಲ್ಲಿ ಕಾಣಸಿಗುತ್ತಿದ್ದ ಪ್ರಾಣಿ ಪಕ್ಷಿಗಳು ಕಣ್ಮರೆಯಾಗಿವೆ. ಅಭಿವೃದ್ದಿಯ ಹೆಸರಿನಲ್ಲಿ ಅಣೆಕಟ್ಟೆಗಳು, ಜಲವಿದ್ಯುತ್ ಯೋಜನೆಗಳು ಅಲ್ಲಲ್ಲಿ ಜಾರಿಗೆ ಬರುತ್ತಿದ್ದಂತೆ ಸಮಸ್ಯೆಗಳ ಸರಮಾಲೆ ಧುತ್ತೆಂದು ಪ್ರತ್ಯಕ್ಷವಾಗುತ್ತಿವೆ. ಯೋಜನಾ ನಿರಾಶ್ರಿತರಾದವರಿಗೆ ಸರ್ಕಾರಗಳು ಸರಿಯಾದ ಪುನರ್ವಸತಿ ಒದಗಿಸದಿರುವುದು, ಪರಿಸ ರಸಮತೋಲನಕ್ಕೆ ಪೂರಕವಾದ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನೆಡೆ ಸಾಧಿಸಿರುವುದು ಸಮಸ್ಯೆಗೆ ಕಾರಣವಲ್ಲವೆ?
ಅಣೇಕಟ್ಟು ಗಳಿಂದ ನಿರಾಶ್ರಿತರಾದ ಮಾನವರಿಗೆ ಪುನರ್ವಸತಿ ಇರುವುದಾದರೆ, ಇಂತಹ ಯೋಜನೆಗಳಿಂದ ತೊಂದರೆ ಅನುಭವಿಸುವ ಪ್ರಾಣಿಗಳಿಗೇಕೆ ಪುನರ್ವಸತಿ ಇಲ್ಲ. ? ಎಲ್ಲಾ ಮನುಷ್ಯರಿಗೂ ಬದುಕುವ ಹಕ್ಕಿರುವಂತೆ ಕಾಡಿನ ಮೂ ಕಪ್ರಾಣಿಗಳಿಗೂ ಬದುಕುವ ಸ್ವತಂತ್ರವಾಗಿ ಜೀವಿಸುವ ಹಕ್ಕಿಲ್ಲವೇ? ಅಭಿವೃದ್ದಿಯ ನೆಪದಲ್ಲಿ ಯಾಕಾದರೂ ಜಲವಿದ್ಯುತ್ ಯೊಜನೆಗಳಿಗೆ, ಕಾಡಿನ ಮಧ್ಯೆ ರಸ್ತೆ ನಿರ್ಮಾಣಕ್ಕೆ, ಮನುಷ್ಯರ ಸುಳಿದಾಟಕ್ಕೆ ಯಾಕೆ ಅವಕಾಶ ಮಾಡಬೇಕು? ಇತ್ತೀಚೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 10ಕಿಮಿ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಪಶ್ಚಿಮಘಟ್ಟದ ಸಾಲಿನಲ್ಲಿ 18ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದೆ, ದಟ್ಟಾರಣ್ಯದಲ್ಲಿ ರೆಸಾರ್ಟ್ ಸಂಸ್ಕೃತಿಯನ್ನು ಪ್ರೊತ್ಸಾಹಿಸುತ್ತಿದೆ, ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಸಾಮಾಜಿಕ ನ್ಯಾಯದ ಹಂಚಿಕೆ ಸರಿಯಾಗಿಲ್ಲದ ಕಾರಣ ಮಲೆನಾಡು ಪ್ರದೇಶದ ಅರಣ್ಯಗಳ ಒತ್ತುವರಿ ಆಗುತ್ತಿದೆ, ಕಾಂಕ್ರಿಟ್ ಸಂಸ್ಕೃತಿ ತಲೆಎತ್ತಿದೆ ಪರಿಣಾಮ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.
ಮಲೆನಾಡು ಪ್ರದೇಶಗಳು ಹೇಗೆ ಬದಲಾವಣೆಯಾಗುತ್ತಿವೆ ಎಂಬುದಕ್ಕೆ ಸಣ್ಣದೊಂದು ಉದಾಹರಣೆಯನ್ನು ನೀಡಬಯಸುತ್ತೇನೆ. ಸಕಲೇಶಪುರ ತಾಲೂಕಿನಲ್ಲಿರುವ ಗಡಿಗ್ರಾಮ 'ವನಗೂರು-ಕೂಡುರಸ್ತೆ'ನನ್ನೂರು.3ದಶಕಗಳ ಹಿಂದೆ ತಂದೆಯ ಉದ್ಯೋಗದ ನಿಮಿತ್ತ ಊರನ್ನು ತೊರೆಯುವ ಅನಿವಾರ್ಯತೆ ಇತ್ತು. ಅತ್ತ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತು ಇತ್ತ ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ಊರು ದಟ್ಟಹಸಿರಿನ ನಿತ್ಯಹರಿದ್ವರ್ಣದ ಕಾಡಿನ ಪರಿಸರದಲ್ಲಿತ್ತು. ಈಗ್ಯೆ 30ವರ್ಷಗಳ ಹಿಂದೆ ಗ್ರಾಮಕ್ಕೆ ಆಧುನೀಕರಣದ ಗಾಳಿ ಬೀಸಿದಾಗ ಮೊದಲಬಾರಿಗೆ ಗ್ರಾಮಕ್ಕೆ ಡಾಂಬರು ಬಂದಿದ್ದು, ವಿದ್ಯುತ್ ಸಂಪರ್ಕ ಬಂದಿದ್ದು, ರೈತ ಸಂಘಟನೆಯ ಉತ್ತುಂಗದ ದಿನಗಳಿಗೆ, ಮಲೆನಾ ಡಸಂಸ್ಕೃತಿಗೆ ಮೆರುಗು ನೀಡುವ ಆಚರಣೆಗಳು, ವಿರಳವಾಗಿದ್ದ ಮನೆಗಳು, ಕಾಸರಗೋಡಿನ ರಾಯಭಾರಿಗಳಂತಿದ್ದ ಬ್ಯಾರಿಗಳು, ಊರಿನ ಆಸುಪಾಸಿನಲ್ಲಿದ್ದ ದಟ್ಟಾರಣ್ಯ ಎಲ್ಲದಕ್ಕೂ ನಾನೆ ಸಾಕ್ಷಿಯಾಗಿದ್ದೆ. ಕಳೆದ ಶನಿವಾರ ಊರು ಹೇಗಿದೆ ನೋಡೋಣ ಎಂದು ಹೊರಟ ನನಗೆ ಅಚ್ಚರಿ, ಆಘಾತ ಎರಡು ಒಟ್ಟಿಗೆ ಆಯಿತು. ಗ್ರಾಮಕ್ಕೀಗ ಆಧುನೀಕರಣದ ಸೋಂಕು ತಗುಲಿದೆ. ಹಸುರಿದ್ದ ಜಾಗವೀಗ ಒಣಗಿದ ಬಯಲಾಗಿದೆ. ಹಲವೆಡೆ ಕಾಡು ಬರಿದಾಗಿದೆ. ದೊಡ್ಡ ಪರ್ವತ ಗಳಲ್ಲಿ ಹರಳು ಕಲ್ಲನ್ನು ಮನಬಂದಂತೆ ಲೂಟಿ ಮಾಡಲಾಗಿದೆ. ಅರಣ್ಯದಲ್ಲಿದ್ದ ಬಿದಿರು ಕೊಳ್ಳೆಹೊಡೆಯಲಾಗಿದೆ, ಸರ್ಕಾರಿ ಜಾಗವನ್ನೆಲ್ಲಾ ಅತಿಕ್ರಮಿಸಿ ರಸ್ತೆಯುದ್ದಕ್ಕೂ ಖಾಸಗಿ ತೋಟ ಮಾಡಿದ್ದಾರೆ, ಗಿಡ-ಮರಗಳಿದ್ದ ಜಾಗದಲ್ಲಿ ಬೃಹತ್ತಾದ ಕಾಂಕ್ರೀಟ್ ಕಟ್ಟಡಗಳು ಬಂದಿವೆ, ಕಾಸರಗೋಡಿನ ಸಂಸ್ಕೃತಿಕ ರಾಯಭಾರಿಗಳು ನಾಮಾವಶೇಷವಾಗಿದ್ದಾರೆ, ಸನಿಹದಲ್ಲಿರುವ ಬೆಟ್ಟಗಳಿಗೆ ರಸ್ತೆಯಾಗಿದೆ, ಅಲ್ಲಿರುವ ಮರಮುಟ್ಟುಗಳನ್ನು ಕಡಿದು ಸಾಗಿಸಲಾಗಿದೆ, ಪರಿಚಯದ ಮುಖಗಳು ಮಾಯವಾಗಿವೆ ಅಪರಿಚಿತ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿವೆ, ನನ್ನೂರಿನಲ್ಲಿ ನಾನೇ ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ. ಊರಿನ ಸನಿಹದ ಹೊಂಗಡಹಳ್ಳದ ಪರಿಸರದಲ್ಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ದೆವ್ವದಂತೆ ಬಂದು ನಿಂತಿದೆ. ಈಗ ಅಲ್ಲಿ ಪರಿಸರ ಜಾಗೃತಿಯ ಹೋರಾಟ ಜಾಗೃತಾವಸ್ಥೆಯಲ್ಲಿದೆ! ಇದಲ್ಲವೇ ದುರಂತ.
ಯಾಕೆ ಇಂತಹ ಪರಿಸ್ಥಿತಿಗಳಿಗೆ ನಮ್ಮನ್ನೇ ನಾವು ಒಡ್ಡಿಕೊಳ್ಳುವ ದುಸ್ತಿತಿ ಬಂದಿದೆ? ಕಳೆದ ಹತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟು ಮಹತ್ವದ ತೀರ್ಪ ನೀಡಿ ಅರಣ್ಯ ಪ್ರದೆಶವನ್ನು ಒತ್ತುವರಿ ಮಾಡಿದವರ ವಿರುದ್ದ ಕ್ರಮ ಕೈಗೊಂಡು ತೆರವು ಗೊಳಿಸುವಂತೆ ಸ್ಪಷ್ಟ ಆದೇಶ ನೀಡಿತ್ತು. ಅಂತಹ ಸಂಧರ್ಭದಲ್ಲಿ ಒತ್ತುವರಿ ತೆರವುಗೊಳಿಸು ವಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಇಲಾಖೆಯವರ ಜೊತೆ ಪತ್ರಕರ್ತನಾಗಿ ಹೋಗುವ ಅವಕಾಶ ಒದಗಿಬಂದಿತ್ತು. ಆದರೆ ನಮ್ಮನ್ನು ಕರೆದೊಯ್ದ ಅಧಿಕಾರಿಗಳನ್ನು ಒತ್ತುವರಿಮಾಡಿದ ಜನರು ಪುನರ್ವಸತಿ (ಯೋಜನಾ ನಿರಾಶ್ರಿತರು)ಒದಗಿಸುವಂತೆ ಕೇಳಿದಾಗ ನಿರುತ್ತರರಾದರಲ್ಲದೇ ತೆರವುಗೊಳಿಸಿದ ನಾಟಕವಾಡಿ ದಾಖಲೆಗಳನ್ನು ಸೃಜಿಸಿ ವಾಪಾಸಾದರು! ಅದೇ ಬೃಹತ್ ಪ್ರಮಾಣದಲ್ಲಿ ಕಾಪಿ ಪ್ಲಾಂಟರುಗಳು ಮಾಡಿ ದ ಅರಣ್ಯ ಒತ್ತುವರಿಯುನ್ನ ತೆರವು ಗೊಳಿಸುವ ತಾಕತ್ತು ಸರ್ಕಾರಿ ಬಿಳಿಯಾನೆಗಳಿಗೆ ಇರಲಿಲ್ಲವೆಂಬುದು ವಿಷಾಧಕರ ಸಂಗತಿ. ಹೀಗೆ ನಮ್ಮಲ್ಲೇ ದೋಷವಿಟ್ಟುಕೊಂಡು ಪ್ರಾಣಿಗಳ ಮೇಲೆ ನಿರಂತರವಾಗಿ ಸಿಟ್ಟು ಪ್ರದರ್ಶಿಸಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಗ್ರಾಮಗಳಿಗೆ ಆನೆಗಗಳು ಹಾಡುಹಗಲೇ ದಾಂಗುಡಿ ಇಟ್ಟಿವೆ, ಕರಡಿಗಳು ಬಂದಿವೆ, ಚಿರತೆಗಳು ಇಂದಿಗೂ ಬರುತ್ತಲೇ ಇವೆ, ಮಂಗಗಳ ಹಾವಳಿ ಹೆಚ್ಚಿದೆ, ಕಾಡು ಜೇನುಗಳು ಊರಿಗೆ ಬರುತ್ತಿವೆ. ನವಿಲುಗಳು ಆಹಾರ ನೀರು ಅರಸಿ ಬರುತ್ತಿವೆ, ಮಲೆನಾಡ ಪರಿಸರದ ಕಾಳಿಂಗ ಸರ್ಪಗಳು ನಾಡಿಗೆ ಬಂದು ಜೀವ ಬಿಡುತ್ತಿವೆ. ಇದಕ್ಕೆ ಪರಿಹಾರ ಒಂದೇ, ಅದೇ 'ಸಾಮಾಜಿಕ ನ್ಯಾಯ'. ಸಧ್ಯ ಜಿಲ್ಲೆಯಲ್ಲೀಗ 38ಕ್ಕೂ ಹೆಚ್ಚು ಆನೆಗಳಿವೆ, ಅವುಗಳನ್ನು ಹಿಡಿದು ನಾಗರಹೊಳೆ ಅರಣ್ಯಕ್ಕೆ ಸಾಗಿಸು ವನಾಟಕ ನಡೆಯುತ್ತಿದೆ. ತೊಂದರೆ ಎದುರಾದಾಗಲೆಲ್ಲ ಒಂದು ಇಲ್ಲವೇ ಎರಡು ಆನೆಗಳನ್ನ ಹಿಡಿಯುವ ಪ್ರಸ್ತಾವನೆ ಬರುತ್ತಿದೆ. ಈ ನಾಟಕವಾಡಲು ಅರಣ್ಯ ಇಲಾಖೆ ಅಧಿಕಾರ ಶಾಹಿ ನಿಯತ್ತಿನಿಂದ ಕಾರ್ಯ ನಿರ್ವಹಿಸದೇ ವಾರ್ಷಿಕವಾಗಿ ಕೋಟ್ಯಾಂತರ ರೂಗಳ ವೆಚ್ಚ ತೋರಿಸಿ ದುಂಡಗಾಗುತ್ತಿದೆ. ಪ್ರಾಣಿಗಳಿಂ ದಹಾನಿಗೀಡಾದ ಬೆಳೆಗಳಿಗೆ 2ಅಂಕಿಯ ಪರಿಹಾರ ಪಡೆಯಲು ಲಂ ಚನೀಡಬೇಕಾದ ಪರಿಸ್ಥಿತಿ ಇದೆ. ಈ ದರಿದ್ರ ಚಕ್ರವ್ಯೂಹದ ವ್ಯವಸ್ಥೆಯಲ್ಲಿ ನ್ಯಾಯ ಎಲ್ಲಿದೆ ? ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮನುಷ್ಯ-ಮಾನವ ಇಬ್ಬರಿಗೂ ಉಳಿಗಾಲವಿಲ್ಲ ನೆನಪಿರಲಿ.

2 comments:

Madhusudhan.V said...

ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ನ್ಯಾಯ ಎಂಬ ಪರಿಕಲ್ಪನೆ ಈ ದೇಶದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗಿವೆ ಎಂಬ ಸತ್ಯ ಸರ್ಕಾರ ಹಾಗೂ ನ್ಯಾಯಾಂಗಕ್ಕೆ ಗೊತ್ತಿದ್ದರೂ ಅವು ಮೌನ ವಹಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ.

ಸಾಗರದಾಚೆಯ ಇಂಚರ said...

ಸರ್
ತುಂಬಾ ಸುಂದರ ಲೇಖನ
ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿ ಹೋಗುತ್ತಿವೆಯೇ ಹೊರತು ಪರಿಹಾರ ಬರುತ್ತಿಲ್ಲ
ಹೀಗೆಯೇ ಮುಂದುವರಿದರೆ?
ಒಳ್ಳೆಯ ವಿಚಾರಪೂರ್ಣ ಲೇಖನ