Sunday, January 31, 2010

ನೀನಾರಿಗಾದೆಯೋ ಎಲೆ ಮಾನವ........?


"ನಮ್ಮನೆ ಹತ್ತಿರ ಕಸದ ರಾಶಿ ಇದೆ, ಈ ವಾರ ಅಲ್ಲಿಗೆ ಬಂದ್ಬಿಡಿ ಸಾರ್ ....!, "ಅದೇ ಆ ರಸ್ತೆ ತಿರುವು ಇದೆಯಲ್ಲ ಅಲ್ಲಿ ಗುಂಡಿ ಬಿದ್ದಿದೆ,ನಾನು ಸುಮಾರ್ ದಿವಸದಿಂದ ಓಡಾಡ್ತೀದಿನಿ.ಈ ನಗರ ಸಭೆಯವರಿಗೆ ಕಣ್ಣಿಲ್ವಾಂತ? ನನಗಂತೂ ಓಡಾಡೋಕೆ ಆಗ್ತಿಲ್ಲ ಸ್ವಾಮಿ... ಈ ಸಲಿ ಏನಾದ್ರು ಆ ಕಡೆ ಬರ್ತೀರೋ..? ಇಂತಹ ಕೊಂಕು ನುಡಿಯನ್ನು ಬಹಳ ಜನರ ಬಾಯಲ್ಲಿ ಕೇಳಿ ಬಿಟ್ಟಿದೀವಿ ಸಾರ್ , ಏನ್ಮಾಡೋದು ಹೇಳಿ ನಮ್ ಕೈಲಿ ಸುಮ್ನೆ ನೋಡಿಕೊಂಡು ಕೂರೋಕೆ ಆಗಲ್ಲ ಮೊದಲು ನಾಗರಿಕೆ ವೇದಿಕೆ ಹೆಸರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಗುಡಿಸೋದು, ಗಿಡ ನೆಡೋದು, ಸ್ವಚ್ಚತೆ ಕಾಯೋದು ಎಲ್ಲಾ ನಡೀತಿತ್ತು ಆದರೆ ಒಂದು ನಿರಂತರತೆ ಅಂತ ಸಿಕ್ಕಿದ್ದು ಮಾತ್ರ 'ನಮ್ಮೂರ ಸೇವೆ' ಅಂತ ಒಂದು ಸೇವಾ ಗುಂಪು ಸೃಷ್ಟಿಯಾದಾಗಲೇ ನೋಡಿ ಎಂದವರು ಹಾಸನ ನಗರದ 'ನಮ್ಮೂರ ಸೇವೆ'ಯ ಸಂಚಾಲಕರಾದ ಎಸ್ ಪಿ ರಾಜೀವ್ ಗೌಡ. ಹೌದು "ನಮ್ಮೂರ ಸೇವೆ" 154 ತುಂಬಿ ಮುನ್ನಡೆಯುತ್ತಿದೆ ಅಂದರೆ ಸತತ 3ವರ್ಷಗಳ ಸೇವೆಯಲ್ಲಿದೆ. ಕೇವಲ 12ಮಂದಿ ಸಮಾನಾಸಕ್ತ ಗೆಳೆಯರು ಸೇರಿ ಆರಂಭಿಸಿದ ಸೇವೆಗೆ ಜೊತೆಯಾದವರ ಸಂಖ್ಯೆ ಈಗ ಹತ್ತಿರ ಹತ್ತಿರ 200! ಯಾವುದೇ ಫಲಾಪೇಕ್ಷೆ ಇಲ್ಲದೇ ತಮ್ಮ ಪಾಡಿಗೆ ತಾವು ಸಾರ್ವಜನಿಕ ಸೇವೆಯಲ್ಲಿ ತೊಡಗುವುದಿದೆಯಲ್ಲ ಅದಕ್ಕಿಂತ ದೊಡ್ಡ ಸೇವೆ ಬೇರೆ ಯಾವುದು ಇರಲಾರದು.ನಮ್ಮೂರ ಸೇವೆ ಯ 'ನಾಗರೀಕರು' ಇದುವರೆಗೆ 5000ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟಿದ್ದಾರೆ, ಸಹಕಾರದ ಕೊರತೆಯಿಂದ ಅವುಗಳ ಪೈಕಿ 2500-3000 ಗಿಡ ಮರಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ.ನಮ್ಮೂರ ಸೇವೆಯಿಂದ ಹಲವು ಬಡಾವಣೆಗಳು, ಕೊಳಗೇರಿಗಳು, ಮುಖ್ಯ ರಸ್ತೆಗಳು, ಇತರೆ ರಸ್ತೆಗಳು ಸ್ವಚ್ಚವಾಗುತ್ತಿವೆ, ಅನಗತ್ಯ ಗುಂಡಿಗಳು ಮುಚ್ಚಲ್ಪಟ್ಟಿವೆ, ನಗರದ ಹತ್ತು ಹಲವು ಸಂಘಟನೆಗಳು,ಪತ್ರಕರ್ತರು, ಗಣ್ಯರು, ವೃದ್ದ ಜೀವಗಳು, ಮಕ್ಕಳು ,ಮಹಿಳೆಯರೆನ್ನದೇ ಹಲವು ಮಂದಿ ಪ್ರಜ್ಞಾವಂತ ನಾಗರೀಕರು ಇಂದಿಗೂ ನಮ್ಮೂರ ಸೇವಾ ಆಂಧೋಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ, ನಿರಾಪೇಕ್ಷ ಸೇವೆ ಮಾತ್ರವೇ ಮುಖ್ಯ. ಆದರೆ ಇಂತಹ ಪ್ರಯತ್ನ ಕಣ್ಣ ಮುಂದಿದ್ದರೂ ಸಾರ್ವಜನಿಕ ಜವಾಬ್ದಾರಿಯಿಂದ ನುಣುಚಿಕೊಂಡು ಬೀಜ ಒಡೆಸಿಕೊಂಡ ಹೋರಿಯಂತಾಗಿರುವ ಅಧಿಕಾರಶಾಹಿ ವ್ಯವಸ್ಥೆ ಮಾತ್ರ ಇನ್ನು ಜಾಗೃತಿಯ ದೀವಿಗೆ ಕಂಡಿಲ್ಲದಿರುವುದು ದುರಂತದ ಸಂಗತಿ.
ಅದು ತಕ್ಕಮಟ್ಟಿಗೆ ಮೂಲಭೂತ ಸೌಲಭ್ಯ ಹೊಂದಿದ ಗ್ರಾಮ, ಅಲ್ಲಿ ಆಧುನಿಕತೆಯ ಪರಿಣಾಮ ಸುಸಜ್ಜಿತ ಚರಂಡಿ, ರಸ್ತೆ ,ಬಸ್ ನಿಲ್ಧಾಣ,ಶಾಲೆ, ಅಂಗನವಾಡಿ ವಿದ್ಯುತ್ ಹೀಗೆ ಏನೆಲ್ಲಾ ಬಂದಿದ್ದರು ಜನರ ತುಕ್ಕು ಹಿಡಿದ ಮನಸ್ಥಿತಿಯಿಂದಾಗಿ, ಹಾಳು ರಾಜಕೀಯದಿಂದಾಗಿ ಬದಲಾಗದೇ ಉಳಿದು ಬಿಟ್ಟಿದ್ದಾರೆ. ಇದು ನನ್ನೂರು ಸ್ವಚ್ಚವಾಗಿರಬೇಕು, ನನ್ನ ಜನಕ್ಕೆ ಒಳ್ಳೆಯ ಗಾಳಿ, ಬೆಳಕು,ನೀರು, ಪರಿಸರ ಬೇಕು ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಬದುಕಿದರೆ ಸಾಲದು ಎಲ್ಲರೂ ಬದುಕಬೇಕು ಅನ್ನುವ ಮನಸ್ಥಿತಿ ಇರಬೇಕು.ಆದರೆ ಅಂತಹುದನ್ನೆಲ್ಲ ಸುಲಭದಲ್ಲಿ ನಿರೀಕ್ಷಿಸಲು ಸಾಧ್ಯವೇ ಇಲ್ಲ ಬಿಡಿ. ನನ್ನೂರಿನ ಪಕ್ಕದ ಗ್ರಾಮ ಪೇಟೆ ಮಾಚಗೌಡನ ಹಳ್ಳಿ ಪಟ್ಟಣದಿಂದ 1-2ಕಿಮಿಗಳ ಸನಿಹದಲ್ಲಿದೆ. ಅಲ್ಲಿ ಒಬ್ಬ ಪ್ರಜ್ಞಾವಂತ ರೈತ ಯುವಕ ಪ್ರತಿನಿತ್ಯ ದಿನಬೆಳಗಾಗೆದ್ದು ಗ್ರಾಮ ಸ್ವಚ್ಚತೆಗೆ ಮುಂದಾಗುತ್ತಾನೆ. ಊರಿನ ಬೀದಿಗಳನ್ನು ಸ್ವಚ್ಚವಾಗಿ ಗುಡಿಸಿ, ಚರಂಡಿಯನ್ನು ಸ್ವಚ್ಚಮಾಡಿ ನೀರು ಹಾಕಿ, ತಿಪ್ಪೆ ಸ್ಥಳಾಂತರಿಸಿ,ಊರ ಶಾಲೆಯ ಅಂಗಳ ಶುಚಿಮಾಡಿ ಮರಗಿಡಗಳಿಗೆ ಪೋಷಣೆ ನೀಡಿ , ಅನಗತ್ಯ ಗಿಡಗಂಟಿ ತರಿದು ಹಾಕಿ ನಂತರವಷ್ಠೇ ತನ್ನ ಕಾಯಕ್ಕಕ್ಕೆ ಹೊರಡುತ್ತಾನೆ. ನೀರು ಬಂದ ಸಮಯಕ್ಕೆ ಅನಗತ್ಯ ನೀರು ಪೋಲಾಗುವುದನ್ನು ತಡೆಯುತ್ತಾನೆ, ಬಣ್ಣ ಮಾಸಿದ ಸರ್ಕಾರಿ ಕಟ್ಟಡಗಳಿಗೆ ಸ್ವತಹ ಆಸಕ್ತಿ ವಹಿಸಿ ಬಣ್ಣ ಕಾಣಿಸುತ್ತಾನೆ, ಕಾಲ ಕಾಲಕ್ಕೆ ಕೃಷಿ ಮಾಹಿತಿ ನೀಡುವ ಭಿತ್ತಿ ಪತ್ರಗಳನ್ನು ನಿಗದಿ ಪಡಿಸಿದ ಜಾಗೆ ಗುರುತಿಸಿ ಬಸ್ ನಿಲ್ದಾಣದಲ್ಲಿ ಹಾಕುತ್ತಾನೆ,ಗಿಡ ನೆಡುತ್ತಾನೆ, ಸಾವಯವ ಕೃಷಿಯ ಮಹತ್ವ ಹೇಳುತ್ತಾನೆ ಹೀಗೆ ಜನೋಪಯೋಗಿ ಕಾಯಕದಲ್ಲಿ ತೊಡಗುವ ಈತ ಜನರ ಕಣ್ಣಲ್ಲಿ "ಹುಚ್ಚ". ಯಾರ ಮಾತಿಗೂ ಕಿವಿ ಗೊಡದ ಆತ ಮಾತ್ರ ಎಂದಿನಂತೆ ತನ್ನ ಕೆಲಸವನ್ನು ಯಾವುದೇ ಪ್ರಚಾರವಿಲ್ಲದೇ ಮಾಡುತ್ತಲೇ ಇದ್ದಾನೆ, ಆತನ ಹೆಸರು ಅಪ್ನಾದೇಶ್ ಆನಂದ್. ದಶಕಗಳ ಹಿಂದೆ ಐಎಎಸ್ ಅಧಿಕಾರಿ ಈಗಿನ ಬೆಂಗಳೂರು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಹೊಸದಾಗಿ ಸಾರ್ವಜನಿಕ ಸೇವೆಗೆ ಕಾಲಿರಿಸಿದ ಸಂಧರ್ಭದಲ್ಲಿ ಸರ್ಕಾರಗಳನ್ನು ನೆಚ್ಚಿ ಕೂರದೇ ಜನರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ 'ಅಪ್ನಾದೇಶ್' ನಂತಹ ಸೇವಾ ಗುಂಪುಗಳನ್ನು ಸ್ವಯಂ ಪ್ರೇರಿತವಾಗಿ ಹುಟ್ಟುಹಾಕಿದ್ದರು, ಆ ಬಗ್ಗೆ ರೇಡಿಯೋದಲ್ಲಿ ಕೇಳಿ ತನ್ನನ್ನು ತಾನೇ ಸೇವೆಗೆ ಅರ್ಪಿಸಿಕೊಂಡವರು ಈ ಅಪ್ನಾದೇಶ್ ಆನಂದ್.
ಇಂತಹ ಸೇವೆಗಳ ನಡುವೆ ಪಶ್ಚಿಮ ಘಟ್ಟ ಹಾಗೂ ಅಲ್ಲಿನ ಜೀವ ವೈವಿದ್ಯ ಉಳಿಸಲು ಗುಂಡ್ಯಾ ಯೋಜನೆ ವಿರೋದಿಸುವ ಹಾಸನದ ಕಿಶೋರ್ ಮತ್ತು ಗೆಳೆಯರ ತಂಡ, ಜಿಲ್ಲೆಯ ರೈತರು ಆಲೂಗಡ್ಡೆ ಬೆಳೆಯಿಂದ ಕೋಟ್ಯಾಂತರ ನಷ್ಟ ಅನುಭವಿಸಿದ ಸಂಧರ್ಭದಲ್ಲಿ ಕೃಷಿ ಸಂವಾದ, ಜಾಗೃತಿ, ಕೃಷಿ ಸಹಾಯಕ್ಕಾಗಿ ಯೋಗಾರಮೇಶ್ ಹುಟ್ಟುಹಾಕಿದ ಪೊಟ್ಯಾಟೊ ಕ್ಲಬ್ ,ಪರಿಸರ ಜಾಗೃತಿಗಾಗಿ ತನ್ನನ್ನೇ ಅರ್ಪಿಸಿಕೊಂಡ ಚನ್ನರಾಯ ಪಟ್ಟಣದ ಅಶೋಕ್ ಕುಮಾರ್, ಹಳೆಬೀಡಿನ ಉಮೇಶ್,ಸಾಲುಮರದ ತಿಮ್ಮಕ್ಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಟಿ ಎಚ್ ಅಪ್ಪಾಜಿಗೌಡ ಹೀಗೆ ಹತ್ತು ಹಲವು ಮಂದಿ ಸೂಕ್ಷ್ಮ ಸಂವೇದನೆಯ ಸಮಾಜ ಸೇವಕರು ನಮ್ಮ ನಡುವೆಯೇ ಇದ್ದಾರೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಕಿಡಿಗೇಡಿಗಳು ಅಡ್ಡಿಮಾಡುವ ಪ್ರಕ್ರಿಯೆಗಳನ್ನು ನಡೆಸಿದರು ಅವರ'ಸಂವೇದನೆ'ಯ ಗಟ್ಟಿತನ ಸಡ್ಡು ಹೊಡೆದು ನಿಲ್ಲುತ್ತದೆ.
ಸೇವೆ ಎಂಬ ಪದ ಜಾಗತೀಕರಣದ ಸಂಧರ್ಭದಲ್ಲಿ ಅರ್ಥವನ್ನೇ ಕಳೆದುಕೊಂಡಿದೆ ಎಲ್ಲಿ ಸ್ಥಳೀಯ ಸಂಸ್ಥೆಗಳು, ಸರ್ಕಾರಗಳು, ಅನಾಗರಿಕ ಮಂದಿ ತಮ್ಮ ಹೊಣೆಗೇಡಿತನದಿಂದ ವರ್ತಿಸಲಾರಂಭಿಸುತ್ತಾರೋ ಅಲ್ಲೆಲ್ಲಾ 'ಸಮಾಜ ಸೇವೆ' ಯ ಮೂಲಕ ಸಮಾಜ ಸೇವಕರು ಹುಟ್ಟುತ್ತಾರೆ. ಗಾಂಧೀಜಿ,ಬಾಬಾ ಆಮ್ಟೆ, ಮದರ್ ಥೆರೆಸಾ ಇನ್ನು ಹಲವು ಮಂದಿ ಸಮಾಜ ಸೇವೆಯ ಸಾಕ್ಷಿ ಪ್ರಜ್ಞೆಯಂತೆ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದಾರೆ. ಒಂದು ಸಾರ್ಥಕ ಬದುಕಿಗೆ ಸ್ವಲ್ಪವಾದರೂ ಸೇವಾ ಮನೋಭಾವ ಮತ್ತು ಜಾಗೃತ ಮನಸ್ಥಿತಿ ಬೇಕಾಗುತ್ತದೆ ಅದು ಸಾಧ್ಯವಾಗದಿದ್ದರೆ ಕೆಲವು ರೀತಿಯ ಸೇವೆಗಳಿವೆ, ಶ್ರೀಮಂತರು, ಸಂಘ-ಸಂಸ್ಥೆಗಳು ಸೇರಿಕೊಂಡು ಮಾಡುವ ತೋರಿಕೆಯ ಸಮಾಜ ಸೇವೆ.ಸ್ವಾರ್ಥ ಹಿತಾಸಕ್ತಿಯಿಂದ ಮಾಡುವ ಸೇವೆ, ಕೃಷಿಕರ ಉದ್ದಾರದ ನೆಪದಲ್ಲಿ ಮಾಡುವ ಸೇವಾ ವಂಚನೆ, ಬಡರೋಗಿಗಳನ್ನು ಆದರಿಸುವ ನೆಪದಲ್ಲಿ ಹಿತಾಸಕ್ತಿ ಸಾದಿಸುವ ಸೇವೆ, ಉದ್ಯಮಗಳನ್ನು ವಿಸ್ತರಿಸುವ, ವ್ಯವಹಾರ ವಹಿವಾಟುಗಳನ್ನು ವೃದ್ದಿಸಿಕೊಳ್ಳಲು ಮಾಡುವ ಸೇವೆ, ದುಡ್ಡಿಗಾಗಿಯೇ ಮಾಡುವ ಸೇವೆ, ರಾಜಕೀಯ ಹಿತಾಸಕ್ತಿಗೆ ಸೇವೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಸಮಾಜ 'ಸೇವೆ'ಗಳು ಜಾಗೃತ ಸ್ಥಿತಿಯಲ್ಲಿವೆ.ಇದು ಸಮಾಜದ ದುರಂತ, ಏನಿದ್ದರೇನು ಯಾರಿಗೂ ಉಪಯೋಗವಿಲ್ಲ ಎಂಬಂತೆ ಬದುಕುವುದಕ್ಕಿಂತ ಕೊಂಚವಾದರೂ ಸಾರ್ಥಕ ಬದುಕಿನ ನೀತಿಗಳನ್ನು ಅನುಸರಿಸಿ ಜೀವನವನ್ನು ಸಮಾಜ ಸೇವೆಗೆ ಅಲ್ಪ ಮಟ್ಟಿಗಾದರೂ ಮುಡುಪಿಡಿ ಅದು ನಿಮ್ಮನ್ನು ಅಜರಾಮರವಾಗಿಸುವುದು. ಅದಕ್ಕೆ ನಿಮ್ಮನ್ನೆ ನೀವು ಪ್ರಶ್ನೆ ಮಾಡಿಕೊಳ್ಳುವ, ವಿಶ್ಲೇಷಿಸುವ ಮನೋಧರ್ಮ, ಒಳಿತು ಕೆಡಕುಗಳನ್ನು ಅರಿಯುವ ಜಾಗೃತ ಪ್ರಜ್ಞೆ ಬೆಳೆಸಿಕೊಳ್ಳಿ ಹತ್ತು ಜನರಿಗೆ ಬೇಕಾದವರಾಗಿ ಬದುಕಿ,ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ, ಗೇಲಿ ಪ್ರವೃತ್ತಿ ಕೈಬಿಡಿ ನಾನು ಏನು ಮಾಡಿದ್ದೇನೆ ಎಂಬುದನ್ನು ವಿಮರ್ಶಿಸಿಕೊಳ್ಳಿ 'ಅನಾಗರಿಕ'ರಾಗಿ ಉಳಿಯದಿರಿ ನಾಗರೀಕರಾಗಿರಿ. ಸೇವೆ ಸ್ವಾರ್ಥ ಒಳ್ಳೆಯ ಉದ್ದೇಶಕ್ಕಿರಲಿ ದುರುದ್ದೇಶಕ್ಕಲ್ಲ ನೆನಪಿರಲಿ.

2 comments:

kuusu Muliyala said...

ನಿಮ್ಮ ಕಾಳಜಿಗೆ ಹ್ಯಾಟ್ಸಾಫ .
ನಾನು ನಿಮ್ಮ ಜೊತೆ

ಸಾಗರದಾಚೆಯ ಇಂಚರ said...

ನಿಮ್ಮ ಕಳಕಳಿ ಇಷ್ಟವಾಯಿತು
ನಿಮ್ಮ ಎಲ್ಲ ಲೇಖನಗಳೂ ಸಮಾಜದ ಪರವಾಗಿ ಕಾಳಜಿ ತೋರುವಂತದ್ದು