Sunday, March 14, 2010

ಮಹಿಳಾ 'ಮೀಸಲು' ವಿರೋಧವೇಕೆ ಗೊತ್ತಾ?


ಮಹಿಳಾ ಮೀಸಲು ವಿಧೇಯಕ ಮಂಡನೆಗೆ ಮೊನ್ನೆ ಮೊನ್ನೆಯಷ್ಟೇ ಸಂಸತ್ ನಲ್ಲಿ ಅವಕಾಶ ಸಿಕ್ಕಿದೆ,ಅಷ್ಟಕ್ಕೆ ಭಗಿನಿಯರಿಗೆ ಭಾಗಿನ , ನಾರಿಗೆ ರಹದಾರಿ ಇತ್ಯಾದಿ ಪದಗಳ ವರ್ಣನೆ ಆರಂಭವಾಗಿದೆ. ಆದರೆ ಮಹಿಳಾ ಮೀಸಲು ವಿಧೇಯಕಕ್ಕೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಯಾಕೆ ಹೀಗೆ? ಆಧುನಿಕ ಜಗತ್ತಿನಲ್ಲೂ ಮಹಿಳೆಯ ಸ್ಥಾನಮಾನ ಬದಲಾಗಿಲ್ಲ,ಸಾಮಾಜಿಕ ಕಾರಣಗಳಿಂದಾಗಿ ಮಹಿಳೆ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ,ಪುರುಷ ಸಮಾಜದಿಂದ ಶೋಷಣೆ ನಿತ್ಯ ನಿರಂತರವಾಗಿದೆ ಎನ್ನುವ ಕೂಗು ಇದೆಯಾದರೂ ಹಿಂದಿನಷ್ಟು ಈಗಿಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿ. ಅಷ್ಟಕ್ಕೂ ಮಹಿಳೆಯರಿಗೆ ಸಮಾನತೆ ಸರಿ ಮೀಸಲಾತಿ ಯಾಕೆ ಬೇಕು? ಮೀಸಲು ನೀಡುವುದರಿಂದ ಅವರ ಸಾಧಿಸೋದೇನು? ಮೀಸಲು ಸಿಕ್ಕರೆ ಏನಾಗುತ್ತೆ? ಮೀಸಲಾತಿ ಅನಿವಾರ್ಯತೆ ಮಹಿಳೆಯರಿಗಿದೆಯೇ ? ಧಾರ್ಮಿಕ ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವ ಭಾರತದಂತಹ ದೇಶದಲ್ಲಿ ಮಹಿಳಾ ಮೀಸಲಾತಿ ಎಷ್ಟರ ಮಟ್ಟಿಗೆ ಸಹಕಾರಿಯಾದೀತು? ಇದರ ಪರಿಣಾಮಗಳೇನು? ಎಂಬಿತ್ಯಾದಿ ಪ್ರಶ್ನೆಗಳೇಳುವುದು ಸಹಜ.
ಭಾರತ ದೇಶ 2000ಕ್ಕೂ ಹೆಚ್ಚ ಧಾರ್ಮಿಕ ಪಂಥಗಳನ್ನು ಹೊಂದಿದ ದೇಶ. ಇಲ್ಲಿ ದೇವರುಗಳಿಗೆ ಇರುವಷ್ಟೇ ಮಹತ್ವ ಮಹಿಳೆಗಿದೆ. ಆದರೆ ಸಮಾನತೆಯ ವಿಚಾರ ಬಂದಾಗ ಮಾತ್ರ ಮಹಿಳೆಗಿಂತ ಪುರುಷ ಪ್ರಧಾನವಾಗಿ ವಿಜೃಂಬಿಸುತ್ತಾನೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಮಹಿಳೆಗಿರುವಷ್ಟು ಕಾನೂನಿನ ರಕ್ಷಣೆ ನಮ್ಮ ಧೇಶದಲ್ಲಿಲ್ಲ, ಹಾಗೂ ಸಾರ್ವಜನಿಕ ಆಗುಹೋಗುಗಳಲ್ಲಿ ಪಾಲ್ಗೊಳ್ಳುವಿಕೆಯೂ ಕಡಿಮೆಯೇ ಆಗಿದೆ. ಕಟ್ಟಾ ಧರ್ಮ ಪಾಲನೆ, ಬಳುವಳಿಯಾಗಿ ಬಂದ ಆಚರಣೆಗಳು ಮಹಿಳೆಯರನ್ನು ತೃಣಕ್ಕೆ ಸಮಾನವಾಗಿ ನೋಡುವ ರೀತಿ ಯನ್ನು ಬೆಳೆಸಿ ಬಿಟ್ಟಿದೆ. ಮಹಿಳೆ ಎಂದರೆ ಅಬಲೆ, ಗಂಡಸಿನ ಅಡಿಯಾಳು, ಮದುವೆಯಾದವನ ಹಿತಾಸಕ್ತಿಗೆ ತಕ್ಕಂತೆ ನಡೆದುಕೊಳ್ಳಬೇಕು, ಶೋಷಣೆಯನ್ನು ಉಸಿರೆತ್ತದಂತೆ ಸಹಿಸಿಕೊಂಡು ಕಷ್ಟವೋ ಸುಖವೋ ಜೀವನ ಮಾಡಬೇಕು, ಪುರುಷನಿಗಾಗಿ ತನ್ನ ಸ್ವಾತಂತ್ರ್ಯವನ್ನು ಬದಿಗಿಡಬೇಕು, ತನ್ನ ಸ್ವಾಭಿಮಾನವನ್ನು ಬದಿಗಿಡಬೇಕು ಇತ್ಯಾದಿ ನಂಬಿಕೆಗಳು ಇಲ್ಲಿ ತಳವೂರಿವೆ. ಅದರಲ್ಲೂ ದೇಶದ ವರ್ಣ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ಅನಿಷ್ಟ ಸಂಪ್ರದಾಯಗಳಿವೆ. ಇದಕ್ಕೆ ತದ್ವರುದ್ದವಾಗಿ ಘಟವಾಣಿಗಳಾಗಿ ಪುರುಷರನ್ನು ಶೋಷಿಸುವ ಮಹಿಳೆಯರ ಸಂಖ್ಯೆಯೂ ಕಡಿಮೆ ಏನಿಲ್ಲ(ಕ್ಷಮಿಸಿ!).
ಮಹಿಳೆಯರಿಗೆ ಮೀಸಲಾತಿ ಎಂಬ ಕಲ್ಪನೆ ಹುಟ್ಟಿದ್ದು ಹಿಂದಿನ ಶತಮಾನದ ದಾರ್ಶನಿಕರು-ಸಾಧು-ಸಂತರಿಂದ. ಜಗಜ್ಜ್ಯೋತಿ ಬಸವೇಶ್ವರ ರು ಮಹಿಳೆಯರ ಮೇಲಿನ ಶೋಷಣೆಯನ್ನು ಮತ್ವಿತಿತರ ಸಾಮಾಜಿಕ ಹುಳುಕುಗಳನ್ರೋನು ವಿರೋಧಿಸಿ ಬ್ರಾಹ್ಮಣ್ಯ ವನ್ನು ತ್ಯಜಿಸಿದವರು. ಮುಂದೆ ಮಹಿಳೆಯರ ಸಮಾನತೆಯ ಹಕ್ಕುಗಳಿಗೆ, ಸಾಮಾಜಿಕ ಪಿಡುಗುಗಳನ್ನು ತಡೆಯುವ ನಿಟ್ಟಿನಲ್ಲಿ ಹತ್ತು ಹಲವು ಮಂದಿ ಹೋರಾಟ ನಡೆಸಿದರು. ಆದರೆ ಅದಕ್ಕೆ ಭಾರತದಲ್ಲಿ ಸಂವಿಧಾನಿಕ ಮಾನ್ಯತೆಯನ್ನು ದೊರಕಿಸಿಕೊಡಲು ಪ್ರಥಮ ಬುನಾದಿ ಹಾಕಿದ್ದು ಮಾತ್ರ ಡಾ|| ಬಿ ಆರ್ ಅಂಬೇಡ್ಕರ್! ಮಹಿಳಾ ಮೀಸಲು, ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕಿಗೆ ಒತ್ತಾಯ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಈ ಮೂರು ವಿಚಾರಗಳನ್ನು ಪ್ರಬಲವಾಗಿ ಪ್ರತಿಪಾದಿಸಿದ ಅಂಬೇಡ್ಕರ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೇ ಕೊಟ್ಟು ಹೊರನಡೆದಿದ್ದರು. ಅಲ್ಲಿಂದ ಕುಂಟುತ್ತಲೇ ಸಾಗಿ ಬಂದ ಮಹಿಳಾ ಮೀಸಲು ವಿಧೇಯಕ 1973ರಲ್ಲಿ ಒಮ್ಮೆ ಉಸಿರಾಡಲು ಯತ್ನಿಸಿ ಸತ್ತು ಹೋಗಿತ್ತು. ನಂತರ ಅದನ್ನು ಕೈಗೆತ್ತಿಕೊಂಡದ್ದು ಎಚ್ ಡಿ ದೇವೇಗೌಡ ಪ್ರಧಾನಿಯಾದಾಗಲೇ, ಆಮೇಲೆ ಅದು ಎನ್ ಡಿ ಎ ಸರ್ಕಾರವಿದ್ದಾಗ ಪ್ರಸ್ತಾಪವಾಗಿತ್ತು ಅಲ್ಲಿಂದ 18ವರ್ಷಗಳ ನಂತರ ಈಗ ಯುಪಿಎ ಸರ್ಕಾರದಲ್ಲಿ ಮೀಸಲು ಸಾಕಾರವಾಗುವ ಸಾಧ್ಯತೆ ನಿಚ್ಚಳವಾಗಿದೆ. ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷಗಳು ಸಹಾ ಕೈ ಜೊಡಿಸಿರುವುದು ಸಂತಸದ ವಿಷಯವೇ ಹೌದು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಒದಗಿಸುವ ಮೊಲಕ ಮೊದಲ ಹೆಜ್ಜೆ ಇರಿಸಿದ್ದು ಕಾಂಗ್ರೆಸ್ ಪಕ ಆಡಳಿತದಲ್ಲಿದ್ದಾಗಲೇ. ಅಂದು ಪಿ ವಿ ನರಸಿಂಹರಾವ್ ದೇಶದ ಪ್ರಧಾನಿಯಾಗಿದ್ದಾಗ ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 1/3ಭಾಗದಷ್ಟು ಸ್ಥಾನಗಳನ್ನು ಮೀಸಲು ಇರಿಸುವ ಮಹತ್ವದ ನಿರ್ದಾರವನ್ನು ಕೈಗೊಂಡರು. ಅದಕ್ಕಾಗಿ ಸಂವಿಧಾನದ 73ನೇ ತಿದ್ದುಪಡಿಯನ್ನು ಮಾಡಲಾಗಿತ್ತು ಮತ್ತು ಆ ಮೂಲಕ ಇತಿಹಾಸವನ್ನು ಬರೆಯಲಾಗಿತ್ತು. ಆದರೆ ಆಗಿದ್ದೇನು? ಇವತ್ತು ದೇಶದ ಕೆಲವೇ ರಾಜ್ಯಗಳಲ್ಲಿ ಮಾತ್ರ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದೆ. ಮಹಿಳೆಯರನ್ನು ಸಬಲರನ್ನಾಗಿಸಬೇಕಾದರೆ ಶಿಕ್ಷಣ ಕೊಡಬೇಕು ಜೊತೆಗೆ ರಾಜಕೀಯ ಶಕ್ತಿಯನ್ನು ನೀಡಬೇಕು,ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲು ನೀಡಲಾಗಿದೆ ಆದಾಗ್ಯೂ ಮಹಿಳೆಯರು ಗೋಳು ತಪ್ಪೀತೆ ಎಂದರೆ ಇಲ್ಲ ಎಂಬ ುತ್ತರ ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತದೆ. ಹಾಗಾಗಿ ರಾಜಕೀಯ ಮೀಸಲಾತಿ ಮಹಿಳೆಯನ್ನು ಸಬಲಳನ್ನಾಗಿ ಮಾಡುವುದೇ ಎಂಬ ಹಿನ್ನೆಲೆಯಲ್ಲಿ ಅವಲೋಕಿಸಿದಾಗ, ಸ್ತಳೀಯ ಸಂಸ್ಥೆಗಳಲ್ಲಿ ಕೊಡಮಾಡಿದ ಅವಕಾಶವನ್ನು ಮಹಿಳೆಯರು ಪಡೆದಿದ್ದಾರಾದರೂ ಸ್ವತಂತ್ರವಾಗಿ ತಮ್ಮ ಅಧಿಕಾರ ಚಲಾಯಿಸಲು ಅಸಹಾಯಕರಾಗಿದ್ದಾರೆ. ಪ್ರತೀ ಪಂಚಾಯತ್ ನಲ್ಲೂ ಹೆಂಡತಿಯರು ಅಧ್ಯಕ್ಷರು /ಸದಸ್ಯರು ಆಗಿದ್ದರೆ ಗಂಡಂದಿರು ಅನಧಿಕೃತವಾಗಿ ಅವರ ಅಧಿಕಾರ ಚಲಾಯಿಸುತ್ತಿರುತ್ತಾರೆ. ನಾಮಕಾವಸ್ಥೆಗೆ ಮಹಿಳೆ ಇರಬೇಕಾದ ಪರಿಸ್ಥಿತಿ ಇದೆ. ಒಂದು ಸಣ್ಣ ುದಾಹರಣೆ ಬೇಕಾ ? ಮಹಿಳೆ ರಾಜಕೀಯವಾಗಿ ಅಧಿಕಾರಕ್ಕೆ ಬಂದಳೆನ್ನಿ ಕಡ್ಡಾಯವಾಗಿ ಆಕೆಯ ಹೆಸರಿನ ಹಿಂದೆ ಅಥವ ಮುಂದೆ ಗಂಡ ಎನಿಸಿಕೊಂಡ ಪ್ರಾಣಿಯ ಹೆಸರು ರಾರಾಜಿಸಲೇಬೇಕು ಇದು ವಿಪರ್ಯಾಸವಲ್ಲವೇ? ಅದೇ ಗಂಡಸರು ಅಧಿಕಾರ ಹಿಡಿದಾಗ ಪತ್ನಿ ಹೆಸರು ಹೋಗಲಿ ಎಂದರೆ ತಾಯಿಯ ಹೆಸರನ್ನಾದರೂ ಹೆಸರಿನ ಮುಂದೆ ಅಥವ ಹಿಂದೆ ಇಟ್ಟುಕೊಳ್ಳಬೇಕಾದುದು ಧರ್ಮವಲ್ಲವೇ?
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 933 ಮಹಿಳೆಯರಿಗೆ 1000 ಪುರುಷರು ಇದ್ದಾರೆ. ಪ್ರತಿನಿತ್ಯ ಹುಟ್ಟುವ ೈದು ಹೆಣ್ಣುಮಕ್ಕಳಲ್ಲಿ ಒಂದು ಮುಗುವನ್ನು ಹುಟ್ಟುತ್ತಲೇ ಸಾಯಿಸಲಾಗುತ್ತಿದೆ.ಈ ಭಾರಿಯ ಲೋಕಸಭೆಯಲ್ಲಿ ಕೇವಲ 10% ನಷ್ಟು ಮಹಿಳೆಯರಿದ್ದಾರೆ. ಸಂಸತ್ ನಲ್ಲಿ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳಲ್ಲೂ ಇದೇ ಸ್ಥಿತಿ ಇದೆ. ಇವತ್ತು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಕಾಲಿಡುವಷ್ಟು ಸಮರ್ಥಳಾಗಿದ್ದಾಳಾದರೂ ಪುರುಷ ಪ್ರಧಾನ ಸಮಾಜ ಅದನ್ನು ವ್ಯವಸ್ಥಿತವಾಗಿ ತಡೆದಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಮೀಸಲು ಸಿಕ್ಕರೆ ಅಂತಹ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸ ಬಲ್ಲಳು ಎಂಬ ನಿರೀಕ್ಷೆ ಇದೆ. ಮಹಿಳಾ ಮೀಸಲು ನಿಜವಾಗಿ ದಕ್ಕಬೇಕಾಗಿರೋದು ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರಿಗೆ. ಸಮಾಜದಲ್ಲಿ ಹಿಂದುಳಿದ/ದಲಿತ ವರ್ಗದವರಿಗೆ. ಈ ನಿಟ್ಟಿನಲ್ಲಿ ಇದೇ 19ರಂದು ಮಂಡನೆಯಾಗಲಿರುವ ಮಹಿಳಾ ಮಸೂದೆ ಹಲವು ಬದಲಾವಣೆಗೆ/ವಿಶ್ಲೇಷಣೆಗೆ ಒಳಪಡಬೇಕಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮಸೂದೆ ಜಾರಿಯಾಗದಿದ್ದರೆ ಮೀಸಲು ಊಳ್ಳವರ ಪಾಲಾಗಲಿದೆ. ಶಾಸಕರ ಪತ್ನಿಯರು, ಶೋಕಿವಾಲಿಗಳು, ರಾಜಕೀಯ ಪಡಸಾಲೆಯ ನಾರೀಮಣಿಯರು ಮೀಸಲು ಕಬಳಿಸಿದರೆ ಮದ್ಯಮ-ಬಡವರ್ಗದ ಮಹಿಳೆಯರು ಕೂಪದಲ್ಲೇ ದಿನ ದೂಡಬೇಕಾಗುತ್ತದೆ. ಆದ್ದರಿಂದ ಲಾಲೂ,ಮುಲಯಾಲಂ,ಮಮತಾ ಬ್ಯಾನರ್ಜಿ,ಮಾಯಾವತಿ ಪಟ್ಟು ಹಿಡಿದಿರುವಂತೆ ಮಸೂದೆಯು ಬದಲಾವಣೆಗೆ ಒಳಪಡಲೇಬೇಕಾಗಿದೆ ಇಲ್ಲದಿದ್ದರೆ ನಿಜವಾದ ಪ್ರಮೀಳೆಯರಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಈ ಮಹಿಳಾ ಮೀಸಲಾತಿ ಅನ್ನುವುದೇ ಒಂದು ತಮಾಷೆಯ ಸಂಗತಿ ಯಾಕೆಂದರೆ ಜನ್ಮ ನೀಡುವ ತಾಯಿಗೆ ಸಮಾನತೆ ಕೋಡೋಕೆ ಕಾನೂನು ಮೂಲಕ ಮೀಸಲು ತರಬೇಕಾ? ಪ್ರತಿಯೊಬ್ಬರು ತಮ್ಮ ತಾಯಿಯನ್ನು ಪ್ರೀತಿಸುವಂತೆ ಎಲ್ಲಾ ಮಹಿಳೆಯರ ಬಗೆಗೂ ಗೌರವ ನೀಡಿದರೆ, ಮತ್ತು ಅದು ಅಂತರ್ಗತವಾಗಿ ಬಂದರೆ ಈ ಮೀಸಲು ಯಾರಿಗೆ ಬೇಕಾಗಿದೆ ಹೇಳಿ?

3 comments:

ಗುರು-ದೆಸೆ !! said...

'ಅರಕಲಗೂಡುಜಯಕುಮಾರ' ಅವ್ರೆ..,

ವಿಮರ್ಶೆ ಚೆನ್ನಾಗಿದೆ...


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ)

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್
ವಿಮರ್ಶೆ ಸೊಗಸಾಗಿದೆ
ಹಬ್ಬದ ಶುಭಾಶಯಗಳು

ನಿರಂತರ said...

Very fine clarification JK