Sunday, August 8, 2010

ಕನ್ನಡ ಚಿತ್ರರಂಗದಲ್ಲಿ 'ಮತ್ತೆ ಮುಂಗಾರು'!

ಕನ್ನಡ ಚಿತ್ರರಂಗದ ಸ್ಥಿತಿ ಇವತ್ತು ಹೇಗಿದೆ? ಸಿದ್ದ ಮಾದರಿಯ ಕಥೆ, ಮಚ್ಚು-ಕತ್ತಿ-ಲಾಂಗು, ಅದೇ ಡೈಲಾಗು, ಅದೇ ಹಾಡು, ಅದೇ ಹಾಸ್ಯ, ರಿಮೇಕ್ ಚಿತ್ರಾನ್ನ, 4ಹಾಡು1ಫೈಟು1ಮಸಾಲೆ ಹಾಕಿ ಯಾವ್ದಾದ್ರೂ ಒಂದು ಥೇಟರಲ್ಲಿ ಬಿಡುಗಡೆ ಮಾಡಿದ್ರೆ ಸಾಕು ಒಂದಿಷ್ಟು ಹಕ್ಕುಗಳನ್ನ ಟಿವಿ ಯವರಿಗೆ ಮಾರಿಕೊಂಡ್ರೆ ಮುಗೀತು.ಪ್ರೇಕ್ಷಕರನ್ನ ಕುರಿತು ಈ ನನ್ನ ಮಕ್ಳು ಥೇಟರಿಗೆ ಬಂದು ಚಿತ್ರ ನೋಡಲ್ಲ ನಾವು ಉದ್ದಾರ ಆಗಲ್ಲ ಅಂತ ಡೈಲಾಗು ಬಿಸಾಕೋರು ಒಂದು ಕಡೆ ಆದ್ರೆ ನಾನೇ ಸುಪ್ರೀಂ ಎಂದು ಬೀಗುವ ನಿರ್ದೇಶಕರ ಸಂಘ, ಕಲಾವಿದರ ಸಂಘ,ಚಲನ ಚಿತ್ರ ವಾಣಿಜ್ಯ ಮಂಡಳಿ ದಿನಕ್ಕೊಂದು ರಾಧ್ದಾಂತ ಎಬ್ಬಿಸಿಕೊಂಡು ಪರಸ್ಪರರ ಮೇಲೆ ಕೆಸರೆರಚಾಡಿಕೊಂಡು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿವೆ. ನಾಯಕ ನಟರುಗಳೂ ಒಂದೇ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬದಲಾವಣೆಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳದೇ ಜಿಡ್ಡುಗಟ್ಟಿದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಅಲೆಯ ಕಥೆಗಳು, ಮನಕಲಕುವ ವಿಚಾರಗಳ ಸಂಕೀರ್ಣತೆ ಅದನ್ನು ತೆರೆಯ ಮೇಲೆ ಮೂಡಿಸುವ ಪ್ರಬುದ್ದತೆ ಕೊರತೆ ಇವತ್ತು ಕನ್ನಡ ಚಿತ್ರರಂಗದಲ್ಲಿದೆ. ಒಬ್ಬ ಪುಟ್ಟಣ್ಣ, ಒಬ್ಬ ಶಂಕರ್ ನಾಗ್,ಒಬ್ಬ ಗಿರೀಶ್ ಕಾಸರವಳ್ಳಿ, ಏಕಮೇವಾದ್ವಿತಿಯರೆನಿಸಿದ ರಾಜ್, ವಿಷ್ಣು, ಅಶ್ವಥ್ ಹೀಗೆ ಕನ್ನಡ ಚಿತ್ರರಂಗದಲ್ಲಿ ಛಾಪು ಉಳಿಸಿದ ಹಳಬರನ್ನು ಬಿಟ್ಟರೆ ಹೊಸಬರಲ್ಲಿ ಅಂತಹ ಗಟ್ಟಿತನ ಕೊರತೆ ಇವತ್ತಿಗೂ ಇದ್ದೇ ಇದೆ.
ಇದನ್ನೆಲ್ಲಾ ಇವತ್ತು ನಿಮ್ಮ ಮುಂದೆ ಹೇಳಲು ಕಾರಣವೂ ಇದೆ. ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ವಂತಿಕೆ ಇದೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ ಕನ್ನಡ ಚಿತ್ರರಂಗದಲ್ಲಿ ಕಳೆದ 2ದಶಕಗಳಿಂದ ಗುಣಮಟ್ಟದ ಚಿತ್ರಗಳ ಕೊರತೆ ಇದೆ. ಇಲ್ಲಿ ಪ್ರಯೋಗಶೀಲತೆಗೆ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವವರಿಲ್ಲ, ಸಂತೆಗೆ ಮೂರು ಮೊಳ ನೇಯುವವರದ್ದೇ ಕಾರುಬಾರು, ಸಂಘ-ಸಂಸ್ಥೆ ಹಾಗೂ ಮಂಡಳಿಗಳಲ್ಲೂ ಅವರದ್ದೇ ಆಟಾಟೋಪ. ಮೊನ್ನೆ ಮೊನ್ನೆ 92.7 ಬಿಗ್ ಎಫ್ ಎಂ ಮನರಂಜನಾ ರೇಡಿಯೋ ಪ್ರಸಾರದಲ್ಲಿ ಕನ್ನಡ ಚಿತ್ರರಂಗದ ಛತ್ರಿ ಯಾರು? ಎಂಬ ತರ್ಲೆ ಪ್ರಶ್ನೆಯನ್ನು ಇಟ್ಟು ಕನ್ನಡದ ಹಾಸ್ಯ ನಟರ ಪಟ್ಟಿ ನೀಡಿ ಆರಿಸುವಂತೆ ಕೋರಿತ್ತು. ಇದರಿಂದ ಸಿಟ್ಟಿಗೆದ್ದ ಚಲನ ಚಿತ್ರ ಮಂಡಳಿ ಸದರಿ ರೇಡಿಯೋ ವಿರುದ್ದ ಪ್ರತಿಭಟನಾರ್ಥವಾಗಿ ಚಲನಚಿತ್ರ ಚಟುವಟಿಕೆಗಳನ್ನು ಬಂದ್ ಮಾಡುವ ಬೆದರಿಕೆ ಒಡ್ಡಿತ್ತು. ಆಗ ಸಂಧಾನಕ್ಕೆ ಬಂದ ಖಾಸಗಿ ರೇಡಿಯೋದ ಮುಖ್ಯಸ್ಥರು ಕ್ಷಮೆಯಾಚಿಸಿದರು. ಅದಕ್ಕೆ ಮಂಡಳಿ ವಿಧಿಸಿದ ಶಿಕ್ಷೆ ಒಂದು ದಿನ ರೇಡಿಯೋ ಬಂದ್ ಮಾಡಬೇಕು, ಪ್ರತೀ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸಬೇಕು ಇತ್ಯಾದಿ. ಇದ್ಯಾವ ಸೀಮೆಯ ಶಿಕ್ಷೆ ಸ್ವಾಮಿ.? ಇದು ಶಿಕ್ಷೆಯ ಹುಟ್ಟಾ? ಅದ್ಯಾವುದೋ ಒಂದು ರೇಡಿಯೋ ನಟರನ್ನ ಅಪಮಾನಿಸಿದೆ ಎಂದಾದರೆ ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸುವ ಅವಕಾಶವಿದೆ ಹೀಗಿರುವಾಗ ಅರ್ಧ ಗಂಟೆಗೊಮ್ಮೆ ಕ್ಷಮೆಯಾಚಿಸುವುದು ಅಂದರೆ ಅದೆಂಥದ್ದು. ಇದೇ ಮಂಡಳಿ ತಿಂಗಳ ಹಿಂದೆ 'ರಾವಣ್' ಹಿಂದಿ ಚಿತ್ರ ರಾಜ್ಯದಲ್ಲಿ ಬಿಡುಗಡೆ ಯಾದಾಗ ಬಾಲ ಮುದುರಿಕೊಂಡು ತನ್ನ ನಿಯಮಗಳನ್ನು ಸಡಿಲಿಸಿತು. ಕನ್ನಡ ಚಿತ್ರ ರಂಗದ 75ರ ಸಂಭ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಸಮರ್ಪಕವಾಗಿ ಆಚರಿಸಲು ಸಾಮರ್ತ್ಯವಿಲ್ಲದ ಚಿತ್ರರಂಗದ ಮಂದಿಗೆ ತನ್ನದೇ ನಟರು,ನಟಿಯರು,ನಿರ್ದೇಶಕರು ಕೆಸರೆರಚಾಡಿಕೊಂಡಾಗ ಸರಿಯಾದ್ದೊಂದು ಖಾಜಿ ನ್ಯಾಯ ಮಾಡಲು ಆಗಲಿಲ್ಲ, ಅನೇಕ ದಶಕಗಳಿಂದ ಕನ್ನಡದಲ್ಲಿ ಪೈರಸಿ ತಡೆಗೆ ಕಟ್ಟುನಿಟ್ಟಾದ ಒಂದು ನಿಯಮ ಹೊರಡಿಸಲು ಆಗಲಿಲ್ಲ, ಹೊಡಿ-ಬಡಿ-ಕೊಚ್ಚು-ಕೊಲ್ಲು-ಸುಂದರ ಹೊರಾಂಗಣ,ಮಧುರ ಹಾಡುಗಳು, ಕೆಟ್ಟುಕೆರ ಹಿಡಿದ ಕಥೆ, ಸವಕಲು ನಿರೂಪಣೆ ಇಂಥಹದ್ದನ್ನು ವಿಮರ್ಶಿಸಿದರೆ ಪತ್ರಕರ್ತರ ವಿರುದ್ದ ಹರಿಹಾಯುವ ಸ್ಥಿತಿ ಇದೆ. ಇಂಥಹ ವೈರುದ್ಯ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬದಲಾವಣೆ ಗಾಳಿ ಬೀಸುವುದೇ? ಹೌದು ಖಂಡಿತವಾಗಿಯೂ ಒಂದು ಹಂತದಲ್ಲಿ ಇಂತಹದ್ದನ್ನ ನಿರೀಕ್ಷಿಸಲು ಸಾಧ್ಯವಿದೆ. ಹಳೆ ದಿನಗಳ ಮಾಧುರ್ಯವನ್ನ ತುಂಬಲು ಜಯಂತ್ ಕಾಯ್ಕಿಣಿ, ಯೋಗರಾಜ ಭಟ್ ರಂತಹವರ ಸಾಹಿತ್ಯ ಶ್ರೀಮಂತಿಕೆ, ಹರಿಕೃಷ್ಣ,ಮನೋಮೂರ್ತಿ, ಅನೂಪ್ ಸಿಳೀನ್, ರಿಕಿಕೇಜ್, ರಘು ದೀಕ್ಷಿತ್ ರಂತಹ ಹೊಸ ಅಲೆಯ ಸಂಗೀತ ನಿರ್ದೇಶಕರು, ಜೇಕಬ್ ವರ್ಗೀಸ್,ಸೈನೈಡ್ ನ ರಮೇಶ್, ಯೋಗರಾಜಭಟ್, ಸೂರಿ, ರಾಘವ(ದ್ವಾರ್ಕಿ), ಶಶಾಂಕ್, ಚಂದ್ರು, ಗುರುಪ್ರಸಾದ್ ರಂತಹ ಹೊಸ ತುಡಿತದ ನಿರ್ದೇಶಕರು ಮನಸ್ಸು ಮಾಡಿದರೇ ಮತ್ತೆ ಹಳೇ ದಿನಗಳ ವೈಭವ ಕನ್ನಡಕ್ಕೆ ಮರಳಬಹುದು. ಇಂತಹದ್ದೊಂದು ಬೆಳಕು ಕಾಣಿಸಿದ್ದು ಕಳೆದೆರೆಡು ವಾರಗಳಿಂದ ಬಿಡುಗಡೆಯಾದ ಕೆಲವು ಚಿತ್ರಗಳ ವಿಭಿನ್ನತೆಯಿಂದಾಗಿ. ಶಶಾಂಕ್ ರ ಕೃಷ್ಣನ್ ಲವ್ ಸ್ಟೋರಿ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಮತ್ತೆ ಮುಂಗಾರು ಅಂತಹ ಭರವಸೆಯನ್ನು ದಕ್ಕಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮತ್ತೆ ಮುಂಗಾರು ಕಥಾವಸ್ತುವಿನಿಂದಾಗಿ ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ಚಿತ್ರ.
'ಮತ್ತೆ ಮುಂಗಾರು' ಈ . ಕೃಷ್ಣಪ್ಪ ನಿರ್ಮಾಣದ ಹೊಸ ಚಿತ್ರ. ಮುಂಗಾರು ಮಳೆಯಂತಹ ಉತ್ತಮ ಮನರಂಜನಾ ಚಿತ್ರ ಮೊಗ್ಗಿನ ಮನಸ್ಸು ವಿನಂತಹ ಪ್ರಬುದ್ದ ಚಿತ್ರಗಳು ಇವರ ನಿರ್ಮಾಣದಲ್ಲೇ ಬಂದಿತ್ತು. ಈಗ ಮತ್ತೆ ಮುಂಗಾರು ಬಂದಿದೆ, ಇದು ಮೇಲ್ನೋಟಕ್ಕೆ ಪ್ರೇಮ ಕಥಾವಸ್ತುವಿನಂತಹ ಚಿತ್ರದಂತೆ ಬಿಂಬಿತವಾದರೂ ಆಂತರ್ಯದಲ್ಲಿ ಬೇರೆಯದೇ ಆದ ಕಥೆಯನ್ನು ಹೊಂದಿದೆ. ನಿರ್ದೇಶಕರು, ದೃಶ್ಯನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಸ್ವಲ್ಪ ಪ್ರಬುದ್ದತೆ ತೋರಿದ್ದರೆ ಇದು ಅಂತರಾಷ್ಟ್ರೀಯ ಗುಣಮಟ್ಟದ ಚಿತ್ರ ವಾಗಿ ರೂಪುಗೊಳ್ಳುವುದು ನಿಸ್ಸಂದೇಹ.ಅಂತಹ ಲೋಪಗಳ ನಡುವೆಯೂ ಮಾತೃ ಪ್ರೇಮೆ, ದೇಶಭಕ್ತಿ, ಪ್ರೇಮ, ಬದುಕಿನ ಅನಿವಾರ್ಯ ಸಂಕಟ ಹಾಗೂ ತಲ್ಲಣವನ್ನು ಮತ್ತೆ ಮುಂಗಾರು ಪ್ರೇಕ್ಷಕರಿಗೆ ಹಿಡಿ ಹಿಡಿಯಾಗಿ ಕಟ್ಟಿಕೊಡುತ್ತದೆ. ಮುಂಬೈ ಕಡಲತೀರದಲ್ಲಿ ಬದುಕುವ ವಲಸಿಗ ಮೀನುಗಾರರ ಬವಣೆ, ಅಲ್ಲಿ ನಾಯಕ-ನಾಯಕಿಯ ನಡುವೆ ನಡೆಯುವ ಪ್ರೇಮ, ತೆಗೆದುಕೊಳ್ಳುವ ಅನಿರೀಕ್ಷಿತ ತಿರುವು, ಕಡಲಿನಲ್ಲಿ ಉಂಟಾಗುವ ಚಂಡಮಾರುತದ ಸುಳಿಗೆ ಸಿಕ್ಕ ಭಾರತೀಯ ಮೀನುಗಾರರು ತಮಗೆ ತಿಳಿಯದಂತೆ ಪಾಕಿಸ್ತಾನದ ಸರಹದ್ದು ಮೀರಿದಾಗ ಅನುಭವಿಸುವ ಕಷ್ಟ, ಕತ್ತಲ ಕಾರಾಗೃಹದಲ್ಲಿ ಅನುಭವಿಸುವ ಪಡಿಪಾಟಲು, ಇಂದಿರಾಗಾಂದಿ-ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಕಾರ್ಗಿಲ್ ಯುದ್ದ ತದನಂತರ ವಾಜಪೇಯಿ ಸರ್ಕಾರದಲ್ಲಿ ಎರಡೂ ದೇಶಗಳ ನಡುವೆ ನಡೆಯುವ ಒಪ್ಪಂದದಿಂದ 21ವರ್ಷಗಳ ನಂತರ ಬಿಡುಗಡೆಯಾಗುವ ಮೀನುಗಾರರು ನಂತರದ ಕಥೆ ಪ್ರೇಕ್ಷಕರ ಕಣ್ಣಾಲಿಗಳು ನೀರು ತುಂಬುವಂತೆ ಮಾಡಿಬಿಡುತ್ತವೆ. ಅಷ್ಟರ ಮಟ್ಟಿಗೆ ನಿರ್ದೇಶಕ ರಾಘವ (ದ್ವಾರ್ಕಿ) ತನ್ನ ಶ್ರಮವನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ನಾಯಕ ಶ್ರೀನಗರ ಕಿಟ್ಟಿ ಸೇರಿದಂತೆ ಚಿತ್ರದ ಪ್ರತಿಯೊಂದು ಪಾತ್ರವೂ ಸಹಜತೆಗೆ ಒತ್ತುಕೊಡುವ ರೀತಿಯಲ್ಲಿ ಮೂಡಿಬಂದಿವೆ. ಎಷ್ಟೋ ದಿನಗಳ ನಂತರ ಕಾಡುವ ಚಿತ್ರವನ್ನು ರಾಘವ ಕೊಟ್ಟಿದ್ದಾರೆ. ಚಿತ್ರ ಹಲವು ಪ್ರಶ್ನೆಗಳನ್ನು ಮೂಡಿಸಿ ತಾರ್ಕಿಕ ವಾದ ುತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿ ಇಂತಹ ಕಥೆ ಬಂದು ಎಷ್ಟೋ ವರ್ಷಗಳಾಗಿತ್ತು. ಇರಲಿ ಕನ್ನಡ ಚಿತ್ರ ರಂಗದ ಸಧ್ಯದ ಪರಿಸ್ಥಿತಿ ಸುಧಾರಿಸಬೇಕಿದೆ, ಚಿತ್ರರಂಗದ ಮಂದಿ ವೈಯುಕ್ತಿಕ ತಗಾದೆ-ಸಂಘರ್ಷಕ್ಕೆ ಮಹತ್ವ ನೀಡದೇ ಗಂಭೀರವಾಗಿ ಸದಭಿರುಚಿಯ, ವಿಚಾರದ ತುಡಿತ, ಹದವರಿತ ಮನರಂಜನೆಗೆ ಆದ್ಯತೆ ನೀಡುವ ಚಿತ್ರಗಳ ನಿರ್ಮಾಣದಲ್ಲಿ ತೊಡಗುವ ಮೂಲಕ ಕನ್ನಡ ಚಿತ್ರರಂಗಕ್ಕೆ 'ಮತ್ತೆ ಮುಂಗಾರು' ಬರುವುದೇ ಕಾದು ನೋಡಬೇಕು.

6 comments:

ಸಾಗರದಾಚೆಯ ಇಂಚರ said...

ನಿಜ, ಕನ್ನಡ ಚಿತ್ರ ರಂಗ ಪುನಃ ಪುಟಿದೆಳಬೇಕಾಗಿದೆ
ಸುಂದರ ಬರಹ

ಶ್ರೀನಿವಾಸ ಡಿ. ಶೆಟ್ಟಿ said...

ಲೇಖನ ಚೆನ್ನಾಗಿದೆ.

- ಕತ್ತಲೆ ಮನೆ... said...

ಅಪ್ಪಟ ಚಿನ್ನದಂತ ಮಾತು,..
ಕನ್ನಡ ಚಿತ್ರರಂಗ ಹೊಲಸಾಗಿದೆ.,
ಗುರುಪ್ರಸಾದ್ ರಂಥ ಒಳ್ಳೆ ಸಂದೇಶ ಇರುವ ವಿಶೇಷ ಚಿತ್ರ ನಿರ್ದೇಶಕರು ಅದೇಕೋ ದೂರ ಉಳಿದಿದ್ದಾರೆ ಎನಿಸುತ್ತದೆ..
ರವಿಚಂದ್ರನ್ ಅಂತಹ ವಿಶೇಷ ಸೃಜನಾಶೀಲರು ತಮ್ಮ ಕಲೆಯನ್ನೇ ಮರೆತತಂತೆ ಇದ್ದಾರೆ.,.
http://manasinamane.blogspot.com/2010/06/blog-post.html

ಅರಕಲಗೂಡುಜಯಕುಮಾರ್ said...

@ಸಾಗರದಾಚೆಯ ಇಂಚರ,
ಹೌದು ಸಾರ್, ಆದರೆ ನಿಧಾನ ಗತಿಯ ಬದಲಾವಣೆ ಕಾದು ನೋಡೋಣ.ವಂದನೆಗಳು.

ಅರಕಲಗೂಡುಜಯಕುಮಾರ್ said...

@ ಶ್ರೀನಿವಾಸ್ ಸರ್,
Thanx for the coments..

ಅರಕಲಗೂಡುಜಯಕುಮಾರ್ said...

@ Kathalamane
U r thought is right.. keep on writing