Sunday, September 19, 2010

ಇಂಥ ಗಣೇಶೋತ್ಸವಗಳು ಬೇಕಾ??


ದು ಗಣೇಶೋತ್ಸವ ಆಚರಣೆಯ ಸಂಧರ್ಭ, ನಗರಗಳಲ್ಲಿ,ಪಟ್ಟಣಗಳಲ್ಲಿ,ಗಲ್ಲಿಗಳಲ್ಲಿ, ಹಳ್ಳಿಗಳಲ್ಲಿ, ಕೇರಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತಿಷ್ಟಾಪನೆಯಾಗಿಬಿಡುವ ಗಣೇಶ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರೀಕರಣದ, ಕಂಡವರ ಸ್ವ-ಹಿತಾಸಕ್ತಿಯ ಉತ್ಸವ ಮೂರ್ತಿಯಾಗಿರುವದು ಅತ್ಯಂತ ವಿಷಾಧದ ಸಂಗತಿ. ಇವತ್ತು ಜಾಗತಿಕವಾಗಿ ವರಸಿದ್ದಿ ವಿನಾಯಕನ ಜನಪ್ರಿಯತೆ ಪಸರಿಸಿದೆ. ಭಾರತದಲ್ಲಿ ಪ್ರಧಾನ ಪೂಜೆ ಹಾಗೂ ವೈಭವದ ಉತ್ಸವ ನಡೆಯುವುದು ಮಾತ್ರ ಗಣೇಶನಿಗೆ ಆಗಿದೆ. ಎರಡನೇ ಸ್ಥಾನದಲ್ಲಿ ದುರ್ಗಿ, ಕಾಳೀ ಉತ್ಸವಗಳು ಜರುಗುತ್ತವೆ. ಐತಿಹಾಸಿಕ ಹಿನ್ನೆಲಯ ಗಣೇಶನ ಪ್ರಾಮುಖ್ಯತೆ ಮತ್ತು ಆತನ ಉತ್ಸವಗಳು ಇಂದಿನ ದಿನಗಳಲ್ಲಿ ಸಾಗಿರುವ ದಿಕ್ಕು ಹೇಗಿದೆ? ಗಣೇಶ ಎಂದರೆ ಯಾರು? ಇತರೆ ದೇವರುಗಳಿಗಿಂತ ಈತನ ಹೆಚ್ಚುಗಾರಿಕೆ ಏನು? ಗಣೇಶ ಪೂಜೆ ಆರಂಭವಾಗಿದ್ದು ಯಾವಾಗ? ವಿದೇಶಗಳಿಗೆ ಗಣೇಶ ಕಾಲಿಟ್ಟಿದ್ದು ಹೇಗೆ? ಸಾರ್ವಜನಿಕ ಗಣೇಶ ಉತ್ಸವಗಳು ಯಾಕೆ ಬೇಕು ? ಅದು ಶುರುವಾಗಿದ್ದು ಹೇಗೆ? ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಆವರಿಸುವುದು ಸಹಜವೇ.
ಗಣೇಶ ಎಂದರೆ ಯಾರು ಎಂಬ ಪ್ರಶ್ನೆಗೆ ಎಂತಹ ಚಿಕ್ಕಮಕ್ಕಳು ಸಹಾ ಥಟ್ಟಂತ ಉತ್ತರಿಸಿ ಬಿಡುತ್ತವೆ ಆದರೆ ಗಣೇಶನ ಕುರಿತು ಸಾಮಾನ್ಯವಾಗಿರುವ ಕಥೆಗಳನ್ನು ಹೊರತು ಪಡಿಸಿ ವಿಭಿನ್ನ ರೀತಿಯ ಕಥೆಗಳು ಸಹಾ ಇವೆ. ಇರಲಿ ಅದನ್ನು ತಿಳಿಯುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿಯೋಣ. ಗಣೇಶ ಎಂಬ ಪದ ಸಂಸ್ಕೃತದ ಗಣೇಸ ಎಂಬ ಪದದಿಂದ ಎರವಲಾಗಿ ಪಡೆದುದಾಗಿದೆ. ಗಣ ಗಳ ಅಧಿಪತಿ ಗಣೇಶ ಹಾಗಾಗಿ ಗಣೇಶ ಎಂದಾಗಿದೆ, ಅಷ್ಟೇ ಅಲ್ಲ ಆತ ಗಜ ಮುಖವನ್ನು ಹೊಂದಿರುವುದರಿಂದ ಗಜಮುಖ ಹೀಗೆ ಸಾಗುವ ಗಣೇಶನ ಹೆಸರಿನ ಪುರಾಣಕ್ಕೆ ಅಂತ್ಯವಿಲ್ಲ. ನಿಮಗೆ ಗೊತ್ತೆ ಗಣೇಶ ನಿಗೆ ಸಾವಿರಕ್ಕೂ ಮಿಕ್ಕಿದ ಹೆಸರುಗಳು ಇವೆ. ಗಣೇಶನಿಗೆ ಪೂಜಿಸಲು ಗಣೇಶ ಸಹಸ್ರನಾಮವೇ ಇದೆ! ಗಣೇಶ, ಶಿವ-ಪಾರ್ವತಿಯ ಮಗ, ಆತ ಹುಟ್ಟಿದ್ದು, ಗಜಮುಖ ಬಂದಿದ್ದಕ್ಕೆ ಇರುವ ಸಾಧಾರಣ ಕಥೆಗಿಂತ ವಿಭಿನ್ನ ಕಥೆಯೊಂದಿದೆ. ಗಣೇಶ ಹುಟ್ಟಿದಾಗ ಅಶ್ವಿನಿ ದೇವತೆಗಳು ಬಾಲಗಣಪನ್ನ ನೊಡಲು ಬರುತ್ತಾರೆ, ಹೀಗೆ ಬಂದವರಲ್ಲಿ ಛಾಯಾದೇವಿಯ ಮಗ ಶನಿಯು ಸಹಾ ಇರುತ್ತಾನೆ. ಆತನ ಮರೆಯಲ್ಲಿ ನಿಂತು ಬಾಲಗಣಪನ್ನು ನೋಡುವಾಗ ಪಾರ್ವತಿಗಮನಿಸಿ ಗಣಪನ್ನನು ತೊಡೆಯ ಮೇಲೆ ಹಾಕಿಕೊಳ್ಳುತ್ತಾಳಂತೆ, ಆಗ ಮನಸ್ಸು ಬೇಡವೆಂದರೂ ಕುತೂಹಲ ತಡೆಯದ ಶನಿಯು ಗಣೇಶನನ್ನು ನೇರ ನೋಟದಿಂದ ನೋಡಿದ ಪರಿಣಾಮ ಗಣೇಶನ ಮುಖ ಸುಟ್ಟು ಬೂದಿಯಾಗುತ್ತದೆ.. ಆಗ ಪಾರ್ವತಿಯು ಶನಿಗೆ ಹೆಳವನಾಗುವಂತೆ ಶಾಪಕೊಟ್ಟು ತೆವಳಿಕೊಂಡು ಹೋಗುವಂತೆ ಮಾಡುತ್ತಾಳಂತೆ, ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ಶನಿಯ ತಾಯಿ ಛಾಯಾದೇವಿ ಗಣೇಶನಿಗೆ ಡೊಳ್ಳುಹೊಟ್ಟೆ ಬಂದು ಆತನು ನಿಧಾನವಾಗಿ ಸಂಚರಿಸುವಂತೆ ಶಪಿಸುತ್ತಾಳೆ. ನಂತರ ಶಿವನು ಗಜಮುಖವನ್ನು ತರಿಸಿ ಬಾಲಗಣೇಶನಿಗೆ ಜೀವ ತರಿಸುತ್ತಾನಂತೆ ಗಜಮುಖವನ್ನೇ ಏಕೆ ಆಯ್ಕೆ ಮಾಡಿದೆ ಎಂದರೆ ರಾಕ್ಷಸ ಗಣಗಳನ್ನು ಹೆದರಿಸಲು ಆ ಮುಖ ಎನ್ನುತ್ತಾನೆ. ಈ ಕಥೆ ಕೇಳಲು ವಿನೋದವಾಗಿದೆ. ಅತ್ಯಂತ ಬುದ್ದಿವಂತನಾದ ಗಣಪ ತಂದೆ-ತಾಯಿಯರ ಮನವನ್ನು ಗೆಲ್ಲುತ್ತಾನೆ ಆ ಮೂಲಕ ಶಿವನಿಂದ ಸಮಸ್ತರ ವರಸಿದ್ದಿಸುವ ಶಕ್ತಿಯನ್ನು ಪಡೆದು ವರಸಿದ್ದಿ ವಿನಾಯಕನಾಗುತ್ತಾನೆ ಎಂಬ ಮಾತಿದೆ. ಇಂದಿಗೂ ವಿವಾದಾತ್ಮಕವಾಗಿ ಚರ್ಚಿಸುವ ವಿಚಾರವೆಂದರೆ ಗಣೇಶ ಬ್ರಹ್ಮಚಾರಿ ಇಲ್ಲವೇ ಇಬ್ಬರು ಹೆಂಡಿರ ಗಂಡ ಎಂಬ ಮಾತಿದೆ. ಅದಕ್ಕೆ ಪೂರಕವಾಗಿರುವ ಕಥೆಯೊಂದರ ಪ್ರಕಾರ ಗಣೇಶನಿಗೆ ಸಿದ್ದಿ ಮತ್ತು ಬುದ್ದಿ,ರಿದ್ದಿ ಎಂಬ ಪತ್ನಿಯರಿದ್ದು ಶುಭ-ಲಾಭ ಹಾಗೂ ಜೈ ಸಂತೋಷಿಮಾ ಎಂಬ ಮಕ್ಕಳು ಇದ್ದರು ಎನ್ನಲಾಗುತ್ತದೆ. ಕೆಲವು ಉಲ್ಲೇಖಗಳಲ್ಲಿ ಗಣೇಶ ಆನೆ ಮುಖದೊಂದಿಗೆ ಹುಟ್ಟಿದ ಆದ್ದರಿಂದಲೇ 'ಗಜಮುಖ'ನೆಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಗೆ ಗಣೇಶನ ಕುರಿತ ಲಭ್ಯವಿರುವ ಮುದ್ಗಲ್ ಪುರಾಣ ಮತ್ತು ಗಣೇಸ ಪುರಾಣ, ಶಿವಪುರಾಣ ಗಳಲ್ಲಿ ಮಾಹಿತಿ ಇದೆ.'ಬ್ರಹ್ಮಾನಂದ ಪುರಾಣದಲ್ಲಿ 'ಭೂತ-ವರ್ತಮಾನ-ಭವಿಷ್ಯತ್' ಮಾನದ ಸಂಕೇತವೇ ಗಣೇಶ ಹಾಗಾಗಿ ಆತನಿಗೆ 'ಲಂಬೋದರ'/ಮಹೊದರ ಎನ್ನಲಾಗುವುದಂತೆ. ಇನ್ನೊಂದು ವಿಶೇಷವೆಂದರೆ ಗಣೇಶನನ್ನು 32ಮಾದರಿಗಳಲ್ಲಿ ಕಾಣಬಹುದು!
ಗಣೇಶನ ಪೂಜೆ ಮೊದಲಿಗೆ ಆರಂಭವಾದ ಬಗ್ಗೆ ಮಾಹಿತಿ ಲಭ್ಯವಾಗುವುದು ಗುಪ್ತರ ಕಾಲದಲ್ಲಿ, ಅದಕ್ಕು ಮುಂಚೆ 4 ಮತ್ತು 5ನೇ ಶತಮಾನದಲ್ಲಿ ಗಣೇಶನ ಆರಾಧನೆಯ ಬಗ್ಗೆ ಸುಳುಹು ಲಭ್ಯವಾಗುತ್ತದೆ. ಗುಪ್ತರ ಆಡಳಿತಾವದಿಯಲ್ಲಿ ಬರ್ಮಾ ದಲ್ಲಿ ಸ್ಥಾಪಿತವಾದ ಶಿವ ದೇಗುಲದ ಆವರಣದಲ್ಲಿ ಸಿಗುವ ಗಣೇಶ ನೇ ಮೊದಲ ಅಸ್ತಿತ್ವದ ಕುರುಹು. ಪುರಾತನ ಕಾಲದ ಪಳೆಯುಳಿಕೆಗಳಾದ ಎಲ್ಲೋರ ಗುಹೆಗಳಲ್ಲು ಗಣೇಶನ ಚಿತ್ರಗಳು ಕಾಣ ಸಿಗುತ್ತವೆ. ಇದಕ್ಕೂ ಮುನ್ನ ಬುಡಕಟ್ಟು ಜನಾಂಗದ ಮಂದಿ ಆನೆಮುಖದ ಗಣೇಶನನ್ನು ಪೂಜಿಸುತ್ತಿದ್ದ ಬಗ್ಗೆಯೂ ಸುಳುಹು ಲಭಿಸುತ್ತವೆಯಾದರೂ ನಿಖರವಾಗಿ ಯಾವಾಗ ಎಂಬುದು ಮಾತ್ರ ಇಂದಿಗೂ ನಿಗೂಢವೇ!ಪ್ರಸಕ್ತ ಸಂಧರ್ಬದಲ್ಲಿ ಗಣೇಶ ಜಾತಿ-ಮತ-ಪಂಥವನ್ನು ಮೀರಿ ಬೆಳೆದಿದ್ದಾನೆ. ದೇಶದಲ್ಲಷ್ಟೇ ಅಲ್ಲ ದಕ್ಷಿಣ ಆಪ್ರಿಕಾ, ಜಾವಾ, ಸುಮಾತ್ರ, ಕಾಂಬೋಡಿಯಾ, ಪ್ರಾನ್ಸ್, ಶ್ರೀಲಂಕಾ, ಜಪಾನ್, ಮಲೇಷಿಯಾ ಹೀಗೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹಿಂದೂಗಳಲ್ಲದ ಭಕ್ತರನ್ನು ಸಂಪಾದಿಸಿದ್ದಾನೆ. ಗಣೇಶ ಮೊದಲಿಗೆ ದ್ರಾವಿಡರ ದೇವರೆಂದು ಪರಿಗಣಿತವಾದರೂ ನಂತರದ ದಿನಗಳಲ್ಲಿ ಆತ ಆರ್ಯರ ದೇವರೆಂದೇ ಬಿಂಬಿತನಾಗಿದ್ದಾನೆ. ಬ್ರಾಹ್ಮಣ ಸಮುದಾಯದವರು ಮಾತ್ರ ಮನೆಯಲ್ಲಿರಿಸಿ ಪೂಜಿಸುತ್ತಿದ್ದ ವಿಘ್ನೇಶ್ವರನನ್ನು 1893ರಲ್ಲಿ ದೇಶಭಕ್ತ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯದ ಜಾಗೃತಿಗಾಗಿ ಬ್ರಾಹ್ಮಣರು/ ಅಬ್ರಾಹ್ನಣರನ್ನು ಬ್ರಿಟೀಷರ ವಿರುದ್ದ ಒಂದುಗೂಡಿಸುವ ಸಲುವಾಗಿ ಗಣೇಶನನ್ನು ಸೀಮಿತವಲಯದಿಂದ ಮುಕ್ತಗೊಳಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದರು. ಪರಿಣಾಮವಾಗಿ ಇವತ್ತು ದೇಶದ ಉದ್ದಗಲಕ್ಕೂ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅಂದು ತಿಲಕರು ಅಂದುಕೊಂಡ ಉದ್ದೇಶ ಗಣೇಶನ ಮೂಲಕ ಸಾಧ್ಯವಾಯಿತು. ಆದರೆ ಇವತ್ತೇನಾಗಿದೆ? ಗಣೇಶ ಸ್ವಾರ್ಥದ ಹಿತಾಸಕ್ತಿಗಳ ಕೈಗೊಂಬೆಯಾಗಿದ್ದಾನೆ ಎಂದು ಹೇಳಲು ವಿಷಾಧವಾಗುತ್ತದೆ. ಇವತ್ತು ಪ್ರತಿ ಊರುಗಳಲ್ಲಿ ಅಲ್ಲಿನ ಗಲ್ಲಿಗಳಲ್ಲಿ ಸ್ಥಾಪಿತವಾಗುವುದು ಜಾತಿ ಗಣೇಶ, ರಾಜಕೀಯದ ಗಣೇಶ, ಸಂಘದ ಪ್ರತಿಷ್ಠೆಯ ಗಣೇಶ, ಹಣ ಉಳ್ಳವರ ಪ್ರದರ್ಶನದ ಗಣೇಶ, ಹಪ್ತಾ ವಸೂಲಿಯ ಗಣೇಶ, ಪೋರ್ಕಿಗಳ ಗಣೇಶ ಹೀಗೆ ಒಂದೇ ಎರಡೇ. ನಾನು ಈಗಾಗಲೇ ಹೇಳಿದಂತೆ ಗಣೇಶನ ಮಹಿಮೆಗಳನ್ನು ಸಾರುವ ಹಿನ್ನೆಲೆಯಲ್ಲಿ 32ಮಾದರಿಯ ಗಣೇಶ ಇದ್ದರೆ ಇವತ್ತು ವೀರಪ್ಪನ್ ಗಣೇಶ, ಬಿನ್ ಲಾಡೆನ್ ಗಣೇಶ ನಕ್ಸಲೈಟ್ ಗಣೇಶ, ಭಯೋತ್ಪಾದಕ ಗಣೇಶ, ವಿದೇಶಗಳಲ್ಲಿ ಬಫೂನ್ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿದರೆ ವಿದೇಶೀಯರು ಚಪ್ಪಲಿಯ ಮೇಲೆ, ಬೆತ್ತಲೆ ಬೆನ್ನು, ಹೊಟ್ಟೆ, ತೊಡೆ ಇತ್ಯಾದಿಗಳ ಮೇಲೆಲ್ಲ ಗಣೇಶನ ಚಿತ್ತಾರವನ್ನು ಹಾಕಿಕೊಳ್ಳುವುದು ಅತ್ಯಂತ ಬೇಸರದ ಸಂಗತಿ. ಗಣಪತಿ ಭಾವೈಕ್ಯತೆಯ ಶಕ್ತಿಯ ಸಂಕೇತ ಅದು ನಂಬಿದ ಜನರ ಭಾವನಾ ಸಂಕೇತವೂ ಹೌದು ಹೀಗಿರುವಾಗ ಇದನ್ನೆಲ್ಲ ಸಹಿಸಲಾದೀತೆ? ಗಣಪತಿಯ ಹೆಸರು ಹೇಳಿ ಬೋಗಸ್ ಲಾಟರಿ ಮಾಡುವುದು, ಬಲವಂತದ ಚಂದಾ ವಸೂಲು ಮಾಡುವುದು, ಬೇಕಿಲ್ಲದ ಅದ್ದೂರಿತನ ಪ್ರದರ್ಶಿಸಿ ಹಣ ಪೋಲು ಮಾಡುವುದು ಬೇಕಾ ಹೇಳಿ? ಅತ್ತ ವೇದಿಕೆಯಲ್ಲಿ ಗಣೇಶನನ್ನು ಕೂರಿಸಿ ಆತನ ಎದುರು ಭಾಗದ ವೇದಿಕೆಯಲ್ಲಿ ಮೈಮಾಟ ಪ್ರದರ್ಶಿಸುವ ನಂಗಾನಾಚ್ ನೃತ್ಯ ವೈಭವ, ಪೋಲಿ ಹಾಡುಗಳ ಸುಗಮ ಸಂಗೀತ ಇವೆಲ್ಲಾ ಬೇಕೇನ್ರಿ? ಯಾವುದೋ ಜಾಗ ಕಬಳಿಸುವ ಸಲುವಾಗಿ ಗಣೇಶ ಸಮಿತಿ ಮಾಡಿ ಎಡವಟ್ಟು ಜಾಗದಲ್ಲಿ ಗಣೇಶನ್ನು ಪ್ರತಿಷ್ಠಾಪಿಸುವುದು, ಹಾದಿ-ಬಿದಿ ಬದಿ ಗಣೇಶನನ್ನು ಕೂರಿಸುವುದು, ಚರಂಡಿ ದುರ್ವಾಸನೆ ಬಳಿ ಗಣೇಶನನ್ನು ಪ್ರತಿಷ್ಠಾಪಿಸುವುದು ಎಷ್ಟು ಸರಿ ಸ್ವಾಮಿ? ಇನ್ನು ಕೆಲವೆಡೆಗಳಲ್ಲಿ ಗಣೇಶನನ್ನು ಕೂರಿಸಲು ಚೀಟಿ ಹಾಕಿ 'ಚೀಟಿ ಗಣೇಶ'ನನ್ನು ಸಹಾ ಕೂರಿಸುವ ಪ್ರವೃತ್ತಿ ಉಂಟು. ಒಟ್ಟಾರೆ ಹೇಳುವುದಾದರೆ ಗಣೇಶನ ಹೆಸರಿನಲ್ಲಿ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳು ವ್ಯಯ ಮತ್ತು ಪರಿಸರ ಮಾಲಿನ್ಯ ಆಗುತ್ತಿದೆ. ಭಕ್ತಿ-ಭಾವದ ವರಸಿದ್ದಿ ವಿನಾಯಕನಿಗೆ ಇಂತದ್ದೆಲ್ಲಾ ಅವಾಂತರ ಬೇಕೇನ್ರಿ? ನೀವೇನಂತೀರಿ???

1 comment:

- ಕತ್ತಲೆ ಮನೆ... said...

ವಿಭಿನ್ನವಾದ ಕಥೆ.. ನನಗೆ ತಿಳಿದಿರಲೇ ಇಲ್ಲ..