Sunday, November 14, 2010

ಎಡಬಿಡಂಗಿ ಸರ್ಕಾರಕ್ಕೆ ಮಗ್ಗುಲ ಮುಳ್ಳುಗಳು!

ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನು ಮಾಡುತ್ತೆ? ಅಲ್ವಾ ಹಾಗೆ ಇವತ್ತಿನ ರಾಜ್ಯ ಸರ್ಕಾರದ ಸ್ಥಿತಿ ಇದೆ. ದಕ್ಷಿಣ ಭಾರತದಲ್ಲಿ ಪ್ರಥಮ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಅದಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ವಿರೋಧ ಪಕ್ಷದಲ್ಲಿ  ಹಲವು ದಶಕಗಳ ಕಾಲ ನಾಯಕನಾಗಿ ನುರಿತ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಮಯ ಸಾಧಕತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರುಗಳು ಅಧಿಕಾರದ ವ್ಯಾಮೋಹಕ್ಕೆ ಬಿದ್ದು ಕಾಟ ಕೊಡುತ್ತಿದ್ದಾರೆ. ಎಲ್ಲಾ ಪಕ್ಷಗಳ ಶಾಸಕರುಗಳು ದುಡ್ಡಿಗೆ ತಮ್ಮನ್ನು ಮಾರಿಕೊಳ್ಳುತ್ತಾ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ದೊಡ್ಡಣ್ಣನಂತಿರ ಬೇಕಾಗಿದ್ದ ರಾಜ್ಯಪಾಲ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ನಡೆದು ಕೊಳ್ಳುತ್ತಿದ್ದಾರೆ.  ಈ ನಡುವೆ ಮತದಾರ ದಿಗ್ಮೂಡನಾಗಿ ಇವನ್ನೆಲ್ಲಾ ನೋಡುವಂತಾಗಿದೆ. ಹಗರಣ ತಮಗೆ ಹೊಸದಲ್ಲ ಎನ್ನುವಂತೆ ಕೆಐಎಡಿಬಿ ಹಗರಣದ ಮೂಲಕ ಸ್ವಜನ ಪಕ್ಷಪಾತ ಆರೋಪಕ್ಕೆ ಸಿಎಂ ಯಡಿಯೂರಪ್ಪ ಸಿಲುಕಿದ್ದಾರೆ. ಇಂತಹ ಸಂಧಿಗ್ದ ಸನ್ನಿವೇಶದಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆಗಳು ಏಪ್ರಿಲ್-ಮೇ ವೇಳೆಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.ಆಂತರಿಕ ಶಿಸ್ತಿಗೆ ಹೆಸರಾದ ಪಕ್ಷವಿದ್ದರೂ ಯಾಕೆ ಇಂತಹ ಅಭದ್ರತೆ ಕಾಡುತ್ತಿದೆ? ಬದಲಾದ ಸನ್ನಿವೇಶಗಳೇನು?ರಾಜ್ಯದ ರಾಜಕೀಯ ಎಲ್ಲಿಗೆ ಬಂದು ತಲುಪಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 
       ಮೊನ್ನೆ ನನ್ನ ಯುವ ಮಿತ್ರನೊಬ್ಬ 'ಇನ್ಮುಂದೆ ವೋಟ್ ಮಾಡಬಾರ್ದು ಅಂತ ನಿರ್ಧರಿಸಿ ಬಿಟ್ಟಿದೀನಿ, ಈ ರಾಜಕೀಯದೋರ ಆಟಗಳನ್ನು ನೋಡಿ ಸಾಕಾಗಿದೆ' ಎಂದ. ಇತ್ತೀಚೆಗೆ ಶಾಸಕರ ತಮಿಳುನಾಡು-ಹೈದರಾಬಾದ್-ಗೋವಾ ರೆಸಾರ್ಟ್ ಪ್ಯಾಕೇಜ್ ಪ್ರವಾಸ ಆತನನ್ನ ಕಂಗೆಡಿಸಿತ್ತು. ಪತ್ರಿಕೆ ತೆಗೆದರೂ ಅದೇ ಸುದ್ದಿ, ಟೀವಿ ಚಾನೆಲ್ ತಿರುಗಿಸಿದರೂ ಅದೇ ಸುದ್ದಿ ಬದುಕಿನ ಜಂಜಡದಲ್ಲಿ ತೀರಾ ರೇಜಿಗೆ ಹುಟ್ಟಿಸಿದ ಸದರಿ ಸುದ್ದಿ ಆತನ ಮನಸ್ಥಿತಿಗೆ ಕಾರಣವಾಗಿತ್ತು. ಯಾಕೆ ಹೀಗಾಗುತ್ತೆ? ರಾಜಕೀಯದಲ್ಲಿ ಸ್ಥಿತ್ಯಂತರಗಳು ಹೊಸದೇನಲ್ಲ,ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಉಂಟಾದ ರಗಳೆಗಳಿವೆಯಲ್ಲ ಅಂತಹವು ಈ ಹಿಂದೆ ಘಟಿಸಿರಲಿಲ್ಲ. ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಪಕ್ಷೇತರರನ್ನು ಒಲಿಸಿಕೊಂಡು ಸರ್ಕಾರ ರಚಿಸಿತು. ಆಮೇಲೆ ಸರ್ಕಾರವನ್ನು ಸುಭದ್ರ ಗೊಳಿಸಲು ಶಾಸಕರ ಬೇಟೆ ಆರಂಭಿಸಿತು. ಒಬ್ಬೊಬ್ಬ ಶಾಸಕನಿಗೂ ನಿಗಮ-ಮಂಡಳಿ ಅಧ್ಯಕ್ಷಗಿರಿ, ಸಚಿವ ಸಂಪುಟದಲ್ಲಿ ಸ್ಥಾನ ಪ್ಲಸ್ ಕೋಟಿ ಕೋಟಿ ದುಡ್ಡು ಕೊಟ್ಟು ಅನಿಷ್ಠ ಸಂಪ್ರದಾಯ ಹುಟ್ಟುಹಾಕಿದ ರೆಡ್ಡಿಗಳು ಮೊದಲಿಗೆ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದರು. ನಂತರ ಬ್ಲಾಕ್ ಮೇಲ್ ಶುರುವಿಟ್ಟುಕೊಂಡು ಸರ್ಕಾರವನ್ನು ಹೈರಾಣ ಮಾಡಿದರು. ಸಚಿವ ಸಂಪುಟದ ಸಚಿವರುಗಳೂ ದಿಕ್ಕು ದೆಸೆಯಿಲ್ಲದಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲು ಶುರುವಿಟ್ಟರು. ಅನ್ನದಾತನಿಗೆ ವಂಚಿಸಿ ಆರ್ಥಿಕ ವಲಯದ ನೆಪದಲ್ಲಿ ದುಡ್ಡು ಮಾಡಿಕೊಂಡರು. ನೈತಿಕತೆಗೆ ಧಕ್ಕೆ ಬರುವ ರೀತಿಯಲ್ಲಿ  ಚಾರಿತ್ರ್ಯವನ್ನು ಬಹಿರಂಗವಾಗಿ ಹರಾಜಿಗಿಟ್ಟರು.ಮುಖೇಡಿ ಮುಖ್ಯಮಂತ್ರಿ ಕುರ್ಚಿಯ ಆಸೆಗೆ ಬಿದ್ದು ಭ್ರಷ್ಟಾಚಾರಕ್ಕೆ ಇಂಬು ಕೊಟ್ಟರು, ಹಗೆತನಕ್ಕೆ ಸಾಥ್ ನೀಡಿದರು. ಕನಿಷ್ಠ ತನ್ನ ಸಚಿವ ಸಂಪುಟದ ಸದಸ್ಯರನ್ನು ಹದ್ದುಬಸ್ತಿನಲ್ಲಿಟ್ಟು ಕೊಳ್ಳಲು ಆಗದ  ಮುಖ್ಯಮಂತ್ರಿಯಿಂದ ರಾಜ್ಯದ ಆಡಳಿತವನ್ನು ನಿಯಂತ್ರಿಸಲು ಸಾಧ್ಯವೇ? 
          ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿಯ ವಿರುದ್ಧ ಬಂಡೆದ್ದು ರೆಸಾರ್ಟು ಪ್ರವಾಸಕ್ಕೆ ಹೋದ ಬಿಜೆಪಿಯ ಸಚಿವರುಗಳನ್ನು ಉರಿಯುವ ಮನೆಯ ಗಳ ಹಿರಿದಂತೆ ಸಮಯ ಸಾಧಕತನ ಪ್ರದರ್ಶಿಸಿ ಆಮಿಷವೊಡ್ಡಿ ಸೆಳೆದ ಜಾತ್ಯಾತೀತ ಜನತಾದಳದ ಕುಮಾರಸ್ವಾಮಿ ಸಾಧಿಸಿದ್ದೇನು? ಕಾಂಗ್ರೆಸ್ ನಲ್ಲಿ ಕಾಲೆಳೆಯುವವರ ಮಧ್ಯೆಯೂ ವರ್ಚಸ್ಸು ಪ್ರದರ್ಶಿಸಿ ಬಿಜೆಪಿಯ  ಆಂತರಿಕ ಬಿಕ್ಕಟ್ಟನ್ನು ಲಾಭಕ್ಕೆ ತಿರುಗಿಸಿ ಮುಖ್ಯಮಂತ್ರಿಯಾಗುವ ಕನಸು ಕಂಡ ಸಿದ್ಧರಾಮಯ್ಯಗೆ ಇಂತಹದ್ದೆಲ್ಲ ಬೇಕಿತ್ತಾ? ಹಿಂದೆ ಅಪ್ಪನ ಮಾತು ತಿರಸ್ಕರಿಸಿ  ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಿದ್ದರೆ ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೇ? ಒಂದಂತೂ ಸತ್ಯ ರಾಜಕೀಯದಲ್ಲಿ ಅಂತರ್ಗತವಾಗಿದ್ದ ಜಾತಿ ರಾಜಕೀಯ ಕುಮಾರಸ್ವಾಮಿಯ ತಪ್ಪು ಹೆಜ್ಜೆಯಿಂದಾಗಿ ಎದ್ದು ನಿಂತಿತು. ಪರಿಣಾಮ ಇವತ್ತು ಪಕ್ಷ ರಾಜಕೀಯಕ್ಕಿಂತ ಜಾತಿ ರಾಜಕೀಯ ಪ್ರಧಾನವಾಗಿದೆ. ಜಾತಿ ರಾಜಕೀಯದ ಪರಿಣಾಮ ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇವತ್ತು ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿ ಜಾತೀಯತೆಗೆ ಮನ್ನಣೆ ನೀಡಲಾಗಿದೆ, ಅನ್ಯ ಪಕ್ಷಗಳ ಶಾಸಕರುಗಳ ಕ್ಷೇತ್ರಕ್ಕೆ ಅಭಿವೃದ್ದಿಯ ಸೋಂಕು ಇಲ್ಲ. ದಿಕ್ಕು ದೆಸೆಯಿಲ್ಲದಂತೆ ಪದೇ ಪದೇ ನಡೆಯುತ್ತಿರುವ ಐಎಎಸ್-ಐಪಿಎಸ್-ಕೆಎಎಸ್ ಅಧಿಕಾರಿಗಳ ವರ್ಗಾವರ್ಗಿ, ಉಸ್ತುವಾರಿ ಸಚಿವರುಗಳ ಬದಲಾವಣೆ ಅನಿಶ್ಚಿತ ರಾಜಕೀಯ ನಡೆಗಳು ರಾಜ್ಯದ ಆಡಳಿತಕ್ಕೆ ಅಡ್ಡಗಾಲಾಗಿವೆ. ಈ ನಡುವೆ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿರುವ ರಾಜ್ಯಪಾಲ ಬಿಜೆಪಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿ ಕಾಂಗ್ರೆಸ್ ಧೋರಣೆಯ ನಿಲುವುಗಳನ್ನು ಪ್ರದರ್ಶಿಸುತ್ತಾ ಆ ಸ್ಥಾನದ ಘನತೆಯನ್ನು ಕಳೆದಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅನುಕೂಲ ಸಿಂಧುವಿನಂತೆ ವರ್ತಿಸುತ್ತಿರುವ ರಾಜ್ಯಪಾಲರು ಪಕ್ಷಾತೀತವಾಗಿ ನಡೆಯದೇ ಇರುವುದು ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುತ್ತಿದೆ.
ಈಗ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬೇಕಿದೆ, ಈ ಸಂಧರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ಮುಕ್ತವಾಗಿ  ಮೀಸಲಾತಿ ನಿಯಮಗಳನ್ನು ಪ್ರಕಟಿಸಿ ಚುನಾವಣೆಗೆ ಮುಂದಾಗಬೇಕಾಗಿದೆ. ಆದರೆ ಅನಧಿಕೃತವಾಗಿ ಲಭ್ಯ ಮಾಹಿತಿಯ ಪ್ರಕಾರ  ಚುನಾವಣಾ ಆಯೋಗ ಮೀಸಲಾತಿ ನಿಗದಿ ಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಬದಲಾವಣೆ ಮಾಡಿ ಪಂಚಾಯತ್ ರಾಜ್ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಸಹಿದೆ. ಸುಗ್ರಿವಾಜ್ಞೆಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆಯೆಂದು ಪ್ರತಿಪಕ್ಷಗಳ ಬೆದರಿಕೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮೀಸಲು ಬದಲಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ.ರಾಜ್ಯಪಾಲರು ಕಾನೂನು ಸೂಕ್ಷ್ಮ ತಿಳಿಸಿ ತಿರಸ್ಕರಿಸಿದ್ದಾರೆ. ವಾಸ್ತವವಾಗಿ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಈಗಲೂ ಸಹಾ ಕಾಂಗ್ರೆಸ್ ಮತ್ತು ಜೆಡಿಎಸ್ ಒಲವಿನ ಕೆಲವು ಅಧಿಕಾರಿಗಳಿದ್ದು ಅವರುಗಳು ಬೇಕೆಂತಲೇ ಸೃಷ್ಟಿಸುತ್ತಿರುವ ಎಡವಟ್ಟುಗಳಿಂದ ಸಿಎಂ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಇನ್ನು ಸಚಿವ ಸಂಪುಟದ ಕಥೆ, ತನ್ನ ಒಟ್ಟು ಸದಸ್ಯ ಸ್ಥಾನಕ್ಕೆ ಅನುಗುಣವಾಗಿ ಅತೀ ಹೆಚ್ಚಿನ ಸಂಖ್ಯೆಯ ಸಚಿವರುಗಳನ್ನು ನೇಮಿಸಿಕೊಂಡಿರುವ ಯಡಿಯೂರಪ್ಪ ಮತ್ತಿಬ್ಬರು ಸಚಿವ ಸ್ಥಾನಗಳನ್ನು ತುಂಬಲು ರೆಡಿಯಾಗಿದ್ದಾರೆ, ಅಲ್ಲಿಗೆ ಸಚಿವ ಸ್ಥಾನಗಳ ಕೋಟಾ ತುಂಬುತ್ತದೆ ಆದರೂ ಇನ್ನೂ ಹತ್ತು ಹದಿನೈದು ಶಾಸಕರುಗಳು ಸಚಿವ ಪದವಿಯ ಕ್ಯೂ ನಲ್ಲಿ ಇರುವುದರಿಂದ ಯಡಿಯೂರಪ್ಪ ನವರಿಗೆ ಕಷ್ಟ ಕೈ ಹಿಡಿಯುವುದು ಖಚಿತ, ಇರುವವರನ್ನು ಕಿತ್ತು ಸಚಿವ ಸಂಪುಟಕ್ಕೆ ಹೊಸಬರನ್ನು ತೆಗೆದುಕೊಂಡರೆ ಅದು ಉರಿಯುವ ಭಿನ್ನಮತೀಯರ ಗುಂಪಿಗೆ ತುಪ್ಪ ಸುರಿದಂತಾಗುತ್ತದೆ.ಒಂದು ವೇಳೆ ನಾಯಕತ್ವ ಬದಲಾವಣೆ ಆಗಬೇಕು ಎಂಬುದಾದರೆ ಯಡಿಯೂರಪ್ಪ ಅದಕ್ಕೆ ಸಿದ್ದರಿಲ್ಲ, ಪರಿಸ್ಥಿತಿ ಕೈ ಮೀರಿದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಸಿದ್ದರಿದ್ದಾರೆಂದು  ಮೂಲಗಳು ಹೇಳುತ್ತವೆ.ರಾಜ್ಯದ ರಾಜಕೀಯದಲ್ಲಿ ಇನ್ನು ಏನೇನು ನೋಡಬೇಕು.

2 comments:

ವಸಂತ್ said...

ಸತ್ಯವಾದ ಮಾತುಗಳು ಸರ್. ರಾಜಕೀಯ ಅಂದರೆ ಹೇಸಿಗೆ ಹುಟ್ಟುತ್ತದೆ. ಅಧಿಕಾರಕ್ಕೆ ಬಂದು ಯಾರನ್ನು ಉದ್ದಾರ ಮಾಡಬೇಕಿತ್ತೊ ಅವರನ್ನು ಉದ್ದಾರ ಮಾಡುತ್ತಿಲ್ಲ. ಕೇವಲ ಕುರ್ಚಿಗಾಗಿ ಹಣಬಲ, ದೈವಬಲ, ಅಧಿಕಾರದ ಬಲಗಳನ್ನು ಮುಂದಿಟ್ಟುಕೊಂಡು ಬೀಗುತ್ತಿರುವ ಸರ್ಕಾರ. ಜನಸಮಾನ್ಯರನ್ನು ನಿಜವಾಗಿಯು ಉದ್ದಾರ ಮಾಡುತ್ತ ಎಂದರೆ ???? ಹಲವಾರು ಪ್ರಶ್ನೆಗಳು ಉದ್ಭವವಿಸುತ್ತವೆ. ಇದಕ್ಕೆ ಉತ್ತರವನ್ನು ಸಹ ಮುಂದೆ ಜನಗಳೇ ನೀಡಬೇಕು.

ವಸಂತ್

ಅರಕಲಗೂಡುಜಯಕುಮಾರ್ said...

@ ವಸಂತ್, ನಿಮ್ಮ ಅಭಿಪ್ರಾಯ ಸರಿಯಾಗಿದೆ, ಬೀದಿ ನಾಯಿಯನ್ನು ಒಮ್ಮೆಲೆ ರಾಜನ ಸಿಂಹಾಸನದ ಮೇಲೆ ಕೂರಿಸಿದರೆ ಏನಾಗುತ್ತೊ ಅಂತಹದ್ದು ಈಗ ಆಗಿದೆ. ಮತದಾರನು ಭ್ರಷ್ಟನಾಗಿದ್ದಾನೆ ರಾಜಕಾರಣಿ ಪರಮ ಭ್ರಷ್ಟ ನಾಗಿದ್ದಾನೆ ಹೇಳಿ ಈಗ ಯಾರನ್ನು ಯಾರು ಕಾಪಾಡಬೇಕು?