Wednesday, March 23, 2011

ಟಿಆರ್ ಪಿ ಎಂಬ ಹುಚ್ಚುಕುದುರೆಗೆ ಭಾವನೆಗಳ ಬಲಿಯಾಕೆ?

ನರಂಜನೆಯ ನೆಪದಲ್ಲಿ ಮನೆ-ಮನಗಳಿಗೆ ಎಡತಾಕುತ್ತಿರುವ  ಕಿರುತೆರೆಯ ರಿಯಾಲಿಟಿ  ಶೋಗಳೀಗೆ ಕಡಿವಾಣ ಹಾಕುವ ದಿನ ಹತ್ತಿರ ಬರುತ್ತಿದೆ. ಕಳೆದ ವಾರ ಕೇಂದ್ರ ಸರ್ಕಾರ ಕಿರುತೆರೆಯ ಅನಾರೋಗ್ಯಕರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಈ ನಡುವೆ ಕನ್ನಡದ ಕಿರುತೆರೆಯೊಂದರಲ್ಲಿ ಪ್ರಸಾರವಾಗುತ್ತಿರುವ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು-2 ಕಾರ್ಯಕ್ರಮದ ಕೆಲವು ಎಪಿಸೋಡ್ ಗಳಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಗತಿಯನ್ನು ಮಾಧ್ಯಮದ ಆಗುಹೋಗುಗಳನ್ನು ಮುಕ್ತವಾಗಿ ತೆರೆದಿಡುತ್ತಿರುವ ಸಂಪಾದಕೀಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತರುವ ಮೂಲಕ ಆಶಾದಾಯಕ ಬೆಳವಣಿಗೆಗೆ ಕಾರಣವಾಗಿದೆ.  ಈ ಸಂಧರ್ಭದಲ್ಲಿ ಕಿರುತೆರೆಯ ಆಗು ಹೋಗುಗಳೇನು? ಅಲ್ಲಿ ಎಂತಹ ವಿಷಯ ಗಳಿಗೆ ಆದ್ಯತೆ ಸಿಗುತ್ತಿದೆ? ಮೌಡ್ಯದ ಕೂಪಕ್ಕೆ ಹೇಗೆ ಜನರನ್ನು ಸೆಳೆಯಲಾಗುತ್ತಿದೆ? ಇದರ ಪರಿಣಾಮಗಳೇನು? ಎಂಬುದು ಪ್ರಸಕ್ತ ದಿನಗಳಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಿದೆ.

       ಕನ್ನಡದ ಮಟ್ಟಿಗೆ ಟಿವಿಛಾನಲ್ ಗಳು ಬಂದದ್ದು 90ರ ದಶಕದ ಆರಂಭದಲ್ಲಿ.. ತಮಿಳರ ಉದಯ ವಾಹಿನಿ ಆರಂಭವಾದಾಗ ತಂತ್ರಜ್ನರು ಊರೂರು ಸುತ್ತುತ್ತಾ ಶಾಲಾ-ಕಾಲೇಜುಗಳನ್ನು ಮತ್ತು ಪೋಷಕರುಗಳನ್ನು ಸಂಪರ್ಕಿಸುತ್ತಾ ಇಂತಿಷ್ಟು ಎಂದು ಫೀಸು ನಿಗದಿ ಮಾಡಿ ಒಂದು ಡ್ಯಾನ್ಸ್ ಕಾರ್ಯಕ್ರಮ ಇಟ್ಟು ಕೆಮರಾದಲ್ಲಿ ಚಿತ್ರಿಸಿ ಕೆಲ ದಿನಗಳ ನಂತರ ಟಿವಿಯಲ್ಲಿ ಪ್ರಸಾರಿಸುತ್ತಿತ್ತು.ಮುಂದೆ ಸಿನಿಮಾ ಹಾಡುಗಳು ಬಂದವು, ಸಿನಿಮಾಗಳು ಬಂದವು, ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಗಳು ಕನ್ನಡಕ್ಕೆ ಬಂದವು ನಿಧಾನವಾಗಿ ಇತರೆ ಕಾರ್ಯಕ್ರಮಗಳು ಮೈದಳೆದವು. ದಿನಕಳೆದಂತೆ ಇವು ಜನರ ಮನಸ್ಸನ್ನ ಸೆಳೆಯುತ್ತಾ ಹೋದವು. ಈ ನಡುವೆ ನಿಧಾನವಾಗಿ ಹೊಸ ಛಾನಲ್ ಗಳ ಲಗ್ಗೆ ಇಟ್ಟವು ನೋಡಿ. ಆಗ ಶುರುವಾಗಿದ್ದು ನಿಜವಾದ ಪೈಪೋಟಿ. ಆದರೆ ಅಂತಹ ಪೈಪೋಟಿಗಳು ಹೋಗಿ ಮುಟ್ಟಿದ್ದು ಎಲ್ಲಿಗೆ ? ಜನರ ಮನಸ್ಸನ್ನ ಕೆರಳಿಸುವ, ಭಾವನೆಗಳನ್ನು ಬಡಿದೆಬ್ಬಿಸುವ ಅನಾರೋಗ್ಯಕರ ಕಾರ್ಯಕ್ರಮಗಳು ಮನೆಯಂಗಳಕ್ಕೆ ಬಂದಿಳಿದಿವೆ. ಇಂತಹ ಕಾರ್ಯಕ್ರಮಗಳಿಗೆ ಸಿಗುತ್ತಿರುವ ಭಾರಿ ಪ್ರಮಾಣದ ಜಾಹೀರಾತುಗಳು ಜಾಗತೀಕರಣದ ಕೊಡಗೆಯೇ ಆಗಿದೆ. 
                
            ಭಾರತ ದೇಶದ ಸನಾತನ  ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಮಹತ್ವವಿದೆ., ಎಲ್ಲಕ್ಕಿಂತ ಹೆಚ್ಚಾಗಿ ಭಾವನೆಗಳಿಗೆ ಬೆಲೆ ಇದೆ. ಹೀಗಿರುವಾಗ ಕೀಳು ಅಭಿರುಚಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮೊದಲಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಂದ ಮೊದಲುಗೊಂಡು  ಅನಾಚಾರ ಬಿತ್ತರವಾಗುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುವ ಯಾವುದೇ ಧಾರಾವಾಹಿ ತೆಗೆದುಕೊಳ್ಳಿ ಅಲ್ಲಿ ಅನೈತಿಕ ಸಂಬಂಧಗಳ ಕಥೆ ಅನಾವರಣವಾಗುತ್ತದೆ. ಗಂಡಸರನ್ನು ಬಹುತೇಕ ಅಳುಬುರುಕರು ಮತ್ತು ಅಂಜುಬುರುಕರಂತೆ ತೋರಿಸಲಾಗುತ್ತದೆ, ಅತ್ತೆ-ಸೊಸೆ ರಗಳೆಯನ್ನು ಹಸಿ ಹಸಿಯಾಗಿ ತೆರೆದಿಡುತ್ತದೆ.ನಂತರದ್ದು ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುವ ಕ್ರೈಂ ಸ್ಟೋರಿಗಳ ಹಸಿಯಾದ ಕಾರ್ಯಕ್ರಮ. ಅದಕ್ಕೆ ಮರುಸೃಷ್ಟಿಯ ಲೇಪನ ಬೇರೆ! ಇಂತಹ ಕಾರ್ಯಕ್ರಮಗಳಿಗೆ ಆಂಕರ್ ಗಳಾಗಿ ಬರುವ ಮಹಿಳಾ ವಾಚಕಿಯರಿಂದ ಕೇಳಿಸಲಾಗದ ಅಸಹ್ಯ ಮಾತುಗಳನ್ನ ರಸವತ್ತಾಗಿ ಹೇಳಿಸಲಾಗುತ್ತದೆ. (ಉದಾ: ಅತ್ಯಾಚಾರ,ಅಕ್ರಮ ಸಂಬಂಧಗಳೂ ಇತ್ಯಾದಿ) ಇದು ಕೇಳುಗರಿಗೆ ಮುಜುಗುರವಾಗಬೇಕಾದರೆ ಇನ್ನು ಓದುವವರಿಗೆ ಇನ್ನೆಷ್ಟು ಮುಜುಗುರವಾಗಬೇಕು ಊಹಿಸಿ. ಮಿತಿ ಮೀರಿದ ವರ್ತನೆಗಳು ಕಂಡು ಬರೋದು ನ್ಯೂಸ್ ಛಾನಲ್ ಗಳಿಂದ ಈಗ್ಯೆ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ಬಿಸಿ ಚರ್ಚೆಗೆ ವಕಾಲತ್ತು ವಹಿಸಿ ಬಂದದ್ದು ನರ್ಸು ಜಯಲಕ್ಷ್ಮಿ!ಈಕೆಯಿಂದ ಪ್ರವಾದಿಯಂತಹ ಮಾತು ಕೇಳುವ ಹಣೆ ಬರಹ ವೀಕ್ಷಕ ದೊರೆಯದ್ದು. ಮತ್ತೊಂದು ಪ್ರಕರಣದಲ್ಲಿ ಪುತ್ತೂರು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಹೋಲುವ ಯುವತಿಯೊಬ್ಬಳು ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿರುವ ಕುರಿತು ಆಕೆಯ ಮುಖವನ್ನ ಮರೆಮಾಚಿ ಸುದ್ದಿ ಪ್ರಸಾರ ಮಾಡಿದ 'ಸಮಯ' ಹಾಟ್ ಡಿಸ್ಕಶನ್ ಟೇಬಲ್ ಗೆ ಆಕೆಯನ್ನು ನೇರವಾಗಿ ತೋರಿಸಿದ್ದು ಯಾವ ಉದ್ದೇಶವೋ ತಿಳಿಯಲಿಲ್ಲ. ಇನ್ನು ಮಹಿಳೆಯರಿಗಾಗಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಲೈಂಗಿಕ ವಿಚಾರಗಳ ಚರ್ಚೆ, ಸಂವಾದಗಳ ಹೆಸರಿನಲ್ಲಿ ನಡೆಯುವ ಕಾಮ ಚರ್ಚೆಗಳು ವೀಕ್ಷಕರ ಹಿತಾಸಕ್ತಿಗಳೇ? 
        ಇತ್ತಿಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿರುವುದು ಕಿರುತೆರೆಯಲ್ಲಿ ಜ್ಯೋತಿಷ್ಯ ಹೇಳುವ ಕಿರಾತಕರ ಬಗ್ಗೆ. (ಎಲ್ಲ ಜ್ಯೋತಿಷಿಗಳ ಬಗ್ಗೆ ಈ ಮಾತು ಹೇಳುತ್ತಿಲ್ಲ) ಬೆಳಿಗ್ಗೆ ಬೆಳಿಗ್ಗೆಯೇ ಛಾನಲ್ ಗಳಲ್ಲಿ ವಕ್ಕರಿಸುವ ಈ ಮಂದಿ ವಿವಿಧ ರೀತಿಯ ವೇಷಭೂಷಣಗಳೊಂದಿಗೆ ಕಾಣಿಸಿಕೊಳ್ಳುತ್ತಾ ಉಚಿತ ಸಲಹೆಗಳನ್ನು ತಮಗೆ ತೋಚಿದಂತೆ ನೀಡುತ್ತಾರೆ. ಲ್ಯಾಪ್ ಟಾಪ್ ಗಳನ್ನು ತರುವ ಮೂಲಕ ಇಲ್ಲೂ ಹೈಟೆಕ್ ಪ್ರದರ್ಶಿಸುವ ಸ್ವಾಮಿಗಳಿಗೆ ಈಗೀಗ ಸುಂದರ ತರುಣಿಯರು ನಿರೂಪಕರು. ಜೀ. ಕನ್ನಡದಲ್ಲಿ ಭವಿಷ್ಯ ನುಡಿಯುವ ನರೇಂದ್ರ ಶರ್ಮಎಂಬಾತನಂತೂ ಮನಸ್ಸಿಗೆ ಬಂದದ್ದನ್ನು ಒದರುತ್ತಾ ಮಹಿಳೆಯರನ್ನು ತುಚ್ಚವಾಗಿ ಬಯ್ಯುತ್ತಾ ಪ್ರಳಯಕ್ಕೆ ಸಲ್ಲದ ಕಾರಣಗಳನ್ನು ನೀಡುತ್ತಾ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾನೆ. ಈತನ ಕುಚೇಷ್ಟೆ ಹಾಗೂ ದುಡ್ಡು ಮಾಡುವ ಹಪಾಹಪಿಗೆ ವೀಕ್ಷಕ ಭಕ್ತರುಗಳು ಅಮಾಯಕವಾಗಿ ಬಲಿಯಾಗುತ್ತಿದ್ದಾರೆ. ಕಳೆದವಾರ ಈತ ಪ್ರಳಯವನ್ನ ತಡೆಯಲು ನಡೆಸಿದನೆನ್ನಲಾದ ಪೂಜೆಗೆ ಸಾವಿರಾರು ಮಂದಿ ಭಕ್ತರು ಸಾವಿರಾರು ಮೈಲುಗಳ ದೂರದಿಂದ ಬಂದಿದ್ದರಂತೆ. ಇಂತಹದ್ದಕ್ಕೆಲ್ಲ ಟಿವಿ ಚಾನಲ್ ಗಳು ಸಾಥ್ ನೀಡುತ್ತಾ ವೀಕ್ಷಕರ ಹಿತಾಸಕ್ತಿಯನ್ನ ಮರೆತಿವೆ. ಛಾನಲ್ ಗಳ ನಿರ್ವಾಹಕರಿಗೆ ತಕ್ಕ ಪಾಠ ಕಲಿಸದ ಹೊರತು ಇಂತಹ ಕಾರ್ಯಕ್ರಮಗಳಿಗೆ ಅಂತ್ಯವಿರುವುದಿಲ್ಲ. ದುಡ್ಡು ಮಾಡುವ ಭರದಲ್ಲಿ ಟಿಆರ್ ಪಿ ಎಂಬ ಹುಚ್ಚು ಕುದುರೆಗೆ ಜನರ ಭಾವನೆಗಳು ಯಾಕೆ ಬಲಿಯಾಗಬೇಕು? ಇದನ್ನ ವಿರೋಧಿಸುವ ಧೋರಣೆ ಬೆಳೆಯಬೇಕು ವೀಕ್ಷಕ ಪ್ರಭು ಇಂತಹದ್ದೊಂದು ಸಮರಕ್ಕೆ ಸಜ್ಜಾಗಲೇ ಬೇಕಲ್ಲವೇ?
'ಸಂವಾದ'ಡಾಟ್ ಕಾಂ ನಲ್ಲಿ ಈ ಲೇಖನವನ್ನು ಪ್ರಕಟಿಸಿದ ಸಂಪಾದಕರಾದ ರವಿಅರೇಹಳ್ಳಿಯವರಿಗೆ ಧನ್ಯವಾದಗಳು "ಸಂವಾದ"ಓದಿಗೆ ಇಲ್ಲಿ ಕ್ಲಿಕ್ಕಿಸಿ http://www.samvaada.com/themes/article/230/hightech_touch_asrologer.htm 

2 comments:

Chamaraj Savadi said...

ರೇಟಿಂಗ್ ರೇಸ್‌ನಲ್ಲಿ ಹುಚ್ಚು ಕುದುರೆಗಳಂತೆ ಓಡ್ತಿವೆ ಚಾನೆಲ್‌ಗಳು. ಬರೀ ದೂಳು. ಮುನ್ನುಗ್ಗುವ ಹುಚ್ಚು. ಎತ್ತ ಹೋಗುತ್ತಿದ್ದೇವೆ ಎಂಬ ದೂರದೃಷ್ಟಿ ಇಲ್ಲದ ಕುರುಡುತನ. ನೋಡುಗನಿಗೆ ಏನು ಬೇಕೆಂಬುದನ್ನೇ ಯಾರೂ ಅರ್ಥ ಮಾಡಿಕೊಳ್ತಿಲ್ಲ. ಈಗಿರುವುದಕ್ಕಿಂತ ಉತ್ತಮವಾಗಿ, ಭಿನ್ನವಾಗಿ, ಅರ್ಥಗರ್ಭಿತವಾಗಿ ಕಾರ್ಯಕ್ರಮ ಹಾಗೂ ಸುದ್ದಿ ರೂಪಿಸುವುದು ಹೇಗೆಂಬುದರ ಬಗ್ಗೆ ಚಿಂತನೆಯೇ ನಡೀತಿಲ್ಲ.

ಹೀಗಾಗಿ, ಮುದ್ರಣ ಮಾಧ್ಯಮಕ್ಕೆ ಹೋಲಿಸಿದರೆ ದೃಶ್ಯ ಮಾಧ್ಯಮ ದಶಕಗಳಷ್ಟು ಹಿಂದಿದೆ. ಹೊಣೆಗೇಡಿತನದಲ್ಲಿ ಒಂದು ದಶಕ ಮುಂದೆ ಹೋಗಬಿಟ್ಟಿದೆ.

ಸಾಗರದಾಚೆಯ ಇಂಚರ said...

tumba olleya baraha sir
samaajada moole molleyinda olleya vishayagala sangrahisi bareyuva nimma shailige hatsoff