Sunday, April 24, 2011

"ಸನಾತನ ಧರ್ಮ"ದ ಬಾಬಾ ಅನಂತದೆಡೆಗೆ

ಬಡತನ, ಅಜ್ಞಾನ ಇರುವೆಡೆ ಮೂಡನಂಬಿಕೆ, ಅತಿಯಾದ ಧಾರ್ಮಿಕ ಆಚರಣೆ, ಕಂದಾಚಾರಗಳು ನೆಲಯೂರಿರುತ್ತವೆ, ಜಗತ್ತಿನ ವಿವಿಧ ಭಾಗಗಳಲ್ಲಿ ಇಂತಹ ಅಂಧಶ್ರದ್ದೆ, ಆಚರಣೆಯನ್ನೆ ಬಂಡವಾಳ ಮಾಡಿಕೊಂಡು ಬೆಳೆದು ನಿಂತವರಿದ್ದಾರೆ. ಜನ ಸಾಮಾನ್ಯರ ಸಂಕುಚಿತ ಧೋರಣೆ, ಅಮಾಯಕತೆಯನ್ನೆ ಎನ್ ಕ್ಯಾಶ್ ಮಾಡಿಕೊಳ್ಳುವ ಪದ್ಧತಿ ಆಧುನಿಕ ಜಗತ್ತು ಬೆಳೆದಂತೆಲ್ಲ ಬೇರೆ ಬೇರೆ ಮಾರ್ಗಗಳಲ್ಲಿ ಆವರಿಸಿಕೊಳ್ಳುತ್ತಾ ಸಾಗಿದೆ. ಇದರ ಬೆನ್ನಿಗೆ ಧಾರ್ಮಿಕತೆಯ ಹೆಸರು ಹೇಳಿಕೊಂಡು ಸ್ವಾಮೀಜಿಗಳು, ಬಾಬಾಗಳು, ದೇವಮಾನವರು, ಪೂಜಾರಿಗಳು ಇತ್ಯಾದಿಗಳು ಹುಟ್ಟಿಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬಾಬಾ ಹೆಸರಿನಿಂದ ಕರೆಯಲ್ಪಡುತ್ತಿದ್ದ ಸತ್ಯನಾರಾಯಣ ರಾಜು ಅಲಿಯಾಸ್ ಸತ್ಯ ಸಾಯಿ ಬಾಬಾ ಇಹಲೋಕ ತ್ಯಜಿಸಿದ್ದಾರೆ.  ಸಮಾಜದಲ್ಲಿ ಎಷ್ಟೋ ಮಂದಿ ಬಾಬಾಗಳು ಇದ್ದಾರೆ ಆದರೆ ಈ ಸತ್ಯ ಸಾಯಿ ಬಾಬಾ ಕಥೆ ಏನು? ಈತ ಬೆಳಕಿಗೆ ಬಂದದ್ದು ಹೇಗೆ? ಇವರ ಸಮಾಜ ಮುಖಿ ಕೆಲಸಗಳೇನು? ಇವರ ಪ್ರಸ್ತುತತೆ ಏನು? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. 

          ಈ ಬಾಬಾ ಬೆಳಕಿಗೆ ಬಂದ ಕಥೆಯೂ ವಿಚಿತ್ರವೂ ಆಗಿದೆ. ಈತ ಬೆಳೆಯುತ್ತಾ ಬಂದಂತೆಲ್ಲಾ ಸಮಾಜ ಮುಖಿಯಾದದ್ದು , ಸಮಾಜದ ವಿವಿಧ ಸ್ಥರಗಳ ಜನರನ್ನು ಆವರಿಸಿಕೊಂಡಿದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡದ್ದು, ವಿವಿಧ ಸಂಧರ್ಭಗಳಲ್ಲಿ ಪವಾಡಗಳ ಮೂಲಕ ಜನರನ್ನು ಮೋಡಿ ಮಾಡುವ ಮೂಲಕ ಸೆಳೆದದ್ದು ರೋಚಕ ಕಥೆಯೇ ಆಗಿದೆ. ಬಹುತೇಕ ಮಂದಿಗೆ ತಿಳಿದಿರುವಂತೆ ಪಕ್ಕದ ಆಂಧ್ರ ಜಿಲ್ಲೆಯ ಪುಟ್ಟಪರ್ತಿಯ ಈಶ್ವರಮ್ಮ ಮತ್ತು ಪೆದ್ದವೆಂಕಮ್ಮ ರಾಜು ರತ್ನಾಕರಂ ರ ಮಗನಾಗಿ 23, ನವೆಂಬರ್ 1926ರಲ್ಲಿ ಜನಿಸಿದವನೇ ಸತ್ಯನಾರಾಯಣ ರಾಜು. ಈತನ 16ನೇ ವಯಸ್ಸಿನಲ್ಲಿ ಸಹೋದರನೊಂದಿಗೆ ಆಟವಾಡುವಾಗ ಚೇಳು ಕುಟುಕಿದ್ದೇ ನೆಪವಾಗಿ ಅಂದಿನಿಂದ ತನ್ನ ನಡವಳಿಕೆಯಲ್ಲಿ ಸತ್ಯನಾರಾಯಣ ರಾಜು ಬದಲಾವಣೆ ತಂದು ಕೊಂಡನಲ್ಲದೇ ಅಸ್ಖಲಿತವಾಗಿ ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸಲಾರಂಭಿಸಿದನಂತೆ. ಆತನಿಗೆ ಸಂಸ್ಕೃತದ ಲವಲೇಶವೂ ಪರಿಚಯವಿಲ್ಲದಿದ್ದರೂ ಮಾತನಾಡಿದ್ದು ಮತ್ತು ಅನಂತದಿಂದ ಬೂದಿಯನ್ನು ಸೃಷ್ಟಿಸಿಕೊಟ್ಟನಂತೆ.ಈ ಘಟನೆಯಿಂದ ವಿಚಲಿತರಾದ ಸತ್ಯನಾರಾಯಣ ರಾಜುವಿನ ತಂದೆ ಬಾರು ಕೋಲು ಹಿಡಿದು ಹೆದರಿಸಿ ಕೇಳಿದಾಗ ನಾನು ಸಾಯಿಬಾಬಾ, ಸತ್ಯ ಸಾಯಿ ಬಾಬಾ, ಶಿರಡಿ ಸಾಯಿಬಾಬಾ ನ ಅಂಶವಾಗಿ ಜನ್ಮಿಸಿದ್ದೇನೆ ಎಂದನಂತೆ. ಅಂದಿನಿಂದ ತನ್ನ ಸಾಮಾಜಿಕ ಸಂಬಂಧಗಳಿಗೆ ಕಡಿವಾಣ ಹಾಕಿದ ಬಾಬಾ ಆಧ್ಯಾತ್ಮಿಕದತ್ತ ಒಲವು ತೋರಿಸಿದರಂತೆ. ಚೇಳು ಕುಟುಕಿದ ಘಟನೆಯ ನಂತರ ಕಣ್ಮರೆಯಾಗಿ ದೇಶಾಂತರ ಹೋಗುವ ಬಾಬಾ 3ವರ್ಷಗಳ ನಂತರ ವಾಪಾಸಾಗಿ ಪುಟ್ಟಪರ್ತಿಯಲ್ಲಿ ಆಧ್ಯಾತ್ಮಿಕ ವಿಚಾರಗಳೆಡೆಗೆ ಜನರನ್ನು ಆಕರ್ಷಿಸುತ್ತಾರೆ. ಇದೇ ಸಂಧರ್ಭದಲ್ಲಿ ಶೂನ್ಯದಿಂದ ಬೂದಿ, ಉಂಗುರ ಇತ್ಯಾದಿಗಳನ್ನು ತೆಗೆದುಕೊಡುವ ಮೂಲಕ ಭಕ್ತರನ್ನು ಮೋಡಿ ಮಾಡಿದ ಬಾಬಾನಿಗೆ 1944ರಲ್ಲಿ ಭಕ್ತರು ಮಂದಿರ ಕಟ್ಟಿದರು. 
       ಅಲ್ಲಿಂದ ಮುಂದೆ ದೇಶದಾಧ್ಯಂತ, ಜಗತ್ತಿನಾಧ್ಯಂತ ತನ್ನ ಪ್ರಭಾವಳಿಯನ್ನು ಬೆಳೆಸಿಕೊಂಡ ಬಾಬಾ ಅನಾಮತ್ತು 114 ದೇಶಗಳಲ್ಲಿ 1200 ಸಾಯಿಕೇಂದ್ರಗಳನ್ನು ಹೊಂದಿದ್ದಾರೆ.178ದೇಶಗಳಲ್ಲಿ 6ಮಿಲಿಯನ್ ಸಂಖ್ಯೆಯಲ್ಲಿ ಬಾಬಾನ ಅನುಯಾಯಿಗಳಿದ್ದಾರೆ. 6ಬಾರಿ ಹೃದಯಾಘಾತ ಹಾಗೂ ಒಮ್ಮೆ ಪಾರ್ಸ್ವವಾಯು ಆಗಿದ್ದರೂ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಬಾಬಾ ಬದುಕುಳೀದಿದ್ದರೆಂದು ಆತನ ಭಕ್ತರು ನಂಬುತ್ತಾರೆ. ಶೂನ್ಯದಿಂದ ಬೂದಿ ಇತ್ಯಾದಿ ಸೃಷ್ಟಿಸುತ್ತಿದ್ದ ಬಾಬಾನನ್ನು ಒಮ್ಮೆ ಎಚ್ ನರಸಿಂಹಯ್ಯ ವೈಚಾರಿಕ ದೃಷ್ಟಿಯಿಂದ ಪ್ರಶ್ನಿಸಿದ್ದಾಗ, ಸವಾಲನ್ನು ಸ್ವೀಕರಿಸಲೊಲ್ಲದ ಬಾಬಾ ಆಧ್ಯಾತ್ಮಿಕ ಶಕ್ತಿಯನ್ನು ಆಧ್ಯಾತ್ಮಿಕವಾಗಿಯೇ ತಿಳಿದುಕೊಳ್ಳಬೇಕೆ ವಿನಹ ವೈಜ್ಞಾನಿಕ ಪ್ರಯೋಗದಿಂದ ಪರಿಶೀಲಿಸಬಾರದು ಎಂದು ಹೇಳುವ ಮೂಲಕ ತಳ್ಳಿಹಾಕಿದ್ದರು. ಈ ವಿಚಾರಗಳೆಲ್ಲ ಒತ್ತಟ್ಟಿಗಿರಲಿ ಸತ್ಯ ಸಾಯಿಬಾಬಾ ಇಷ್ಟವಾಗುವುದು ಆತನ ಸಾರ್ವಜನಿಕ ಸೇವಾ ಕಾರ್ಯಗಳ ಮೂಲಕ. ಪುಟ್ಟಪರ್ತಿ ಹಾಗೂ ಬೆಂಗಳೂರಿನ ಆಡುಗೋಡಿಯಲ್ಲಿ ಬಾಬಾ ನಿರ್ಮಿಸಿರುವ ಉಚಿತ ಆಸ್ಪತ್ರೆಯಲ್ಲಿ ಇದುವರೆಗೂ 250,000ಅಧಿಕ ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿ ಉಚಿತ ಸರ್ಜರ, ಉಪಚಾರ, ಔಷದೋಪಚಾರ ನಡೆಯುತ್ತಿರುವುದು ಪ್ರಶಂಸನೀಯವೇ ಆಗಿದೆ. ಧಾರ್ಮಿಕ ದತ್ತಿ ಸಂಸ್ಥೆಗಳು, ಉಚಿತ ಸೇವಾ ಕೇಂದ್ರಗಳು, ವಿಶ್ವವಿದ್ಯಾನಿಲಯ, ಶಾಲೆಗಳು ನಿರ್ಮಿಸಿದ ಬಾಬಾ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ 1.2ಮಿಲಿಯನ್ ಜನರಿಗೆ ಅನುಕೂಲವಾಗುವಂತೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ತನ್ನ ಸಾಮಾಜಕಿ ಕಳಕಳಿಯನ್ನು ಮೆರೆದಿದ್ದಾರೆ. ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಿಗೆ ತೆರಳಿ ಆಧ್ಯಾತ್ಮಿಕವಾಗಿ ತನ್ನ ಸೇವೆಯನ್ನು ನೀಡಿರುವ ಬಾಬಾ ಜಗತ್ತಿನಾಧ್ಯಂತ ತನ್ನ ವರ್ಚಸ್ಸನ್ನು ಬೆಳೆಸಿದ್ದರು ಆ ಮೂಲಕ ಭಾರತೀಯ ಸನಾತನ ಧರ್ಮದ ಪ್ರತಿಪಾದಕರಾಗಿಯೂ ಇದ್ದರು ಎಂಬುದು ಇಲ್ಲಿ ಗಮನೀಯ ಅಂಶ. ಆದರೆ ಸದರಿ ಆತ ಬದುಕಿದ್ದಾಗಲೇ ಸತ್ಯ ಸಾಯಿ ಬಾಬಾ ನ ಹೆಸರಿನಲ್ಲಿ ಮನೆ ಮನೆಗಳಲ್ಲಿ ಪವಾಡ ನಡೆಯುತ್ತಿದೆಯೆಂಬ ಗುಲ್ಲು ಹಬ್ಬಿಸುತ್ತಿದ್ದ ಮಂದಿ ಬಾಬಾ ಅನಂತದೆಡೆಗೆ ಸರಿದ ನಂತರವೂ ಹೊಸ ವರಸೆಗಳನ್ನು ತೋರುವುದನ್ನ ಇನ್ನಾದರೂ ಕಡಿವಾಣ ಹಾಕಬೇಕು ಆ ನೆರಳಲ್ಲಿ ಬರುವ ಸಂತತಿಗಳನ್ನು ನಿರ್ಬಂದಿಸಬೇಕು.. ಯಾವುದೇ ಬಾಬಾ ಗಳು ಜನಸಾಮಾನ್ಯರ ಆಕರ್ಷಣೆಗೆ ಪವಾಡ ಮತ್ತಿತರ ವರಸೆಗಳನ್ನು ತೋರುತ್ತಾರಾದರೂ ಸಮಾಜ ಮುಖಿಯಾಗಿ ಅವರು ಮಾಡುವ ಕೆಲಸಗಳು ಮಾತ್ರ ಬಹುಕಾಲ ಉಳಿಯಬಲ್ಲದು. ಈ ನಿಟ್ಟಿನಲ್ಲಿ ಸತ್ಯ ಸಾಯಿ ಬಾಬಾ ಪ್ರಸ್ತುತವಾಗುತ್ತಾರೆ. ಇವತ್ತು ಜನಸಾಮಾನ್ಯರ ಮೌಡ್ಯಗಳನ್ನು ಬಂಡವಾಳ ಮಾಡಿಕೊಳ್ಳುವ ಅನೇಕ ಮಂದಿ ಸ್ವಾಮೀಜಿಗಳು ಬಾಬಾಗಳು ತಮ್ಮ ವೈಯುಕ್ತಿಕ ಪ್ರಭಾವಳಿಗೆ ಮಾತ್ರ ಸೀಮಿತ ಮಾಡಿಕೊಂಡಿರುತ್ತಾರೆ ಆದರೆ ಸಮಾಜ ಮುಖಿಯಾಗಿಯೂ ಸೇವಾ ಹಸ್ತವನ್ನು ಚಾಚುವ ಮೂಲಕ ತಮ್ಮ ಇನ್ನೊಂದು ಮುಖವನ್ನ ಮರೆಯಾಗಿಸುವ ಬಾಬಾಗಳು ಇದ್ದಾರೆ. ಆಧ್ಯಾತ್ಮಿಕವಾಗಿ ಭಾರತೀಯ ಪರಂಪರೆಯನ್ನು ಅಂತರ ರಾಷ್ರ್ಟೀಯ ಮಟ್ಟದಲ್ಲಿ ಪ್ರಚುರ ಪಡಿಸಿದ (ಪವಾಡ ಹೊರತು ಪಡಿಸಿ) ಸತ್ಯ ಸಾಯಿ ಬಾಬಾ ನಿಜಕ್ಕೂ ಸ್ಮರಣಾರ್ಹರು ಆಗಬಹುದಲ್ಲವೇ?

No comments: