Sunday, August 21, 2011

ಅಣ್ಣಾ ಹಜಾರೆ ಅಂದ್ರೆ ಯಾರು ಗೊತ್ತೇನ್ರೀ??

ಅದು 1962 ವರ್ಷ.ಭಾರತ ಮತ್ತು ಚೈನಾ ದೇಶದ ನಡುವಣ ಯುದ್ದದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯ ಸೈನಿಕರು ಹತರಾಗಿದ್ದರು. ಆಗ ಭಾರತ ಸರ್ಕಾರ ದೇಶಪ್ರೇಮ ಹೊಂದಿದ ಉತ್ಸಾಹಿ ಯುವಜನರನ್ನು ಭಾರತೀಯ ಸೇನೆಗೆ ಸೇರುವಂತೆ ಕರೆ ನೀಡಿತ್ತು. ಸರ್ಕಾರದ ಕರೆಗೆ ಒಗೊಟ್ಟ ರಾಲೇಗಾಂವ್ ಸಿದ್ದಿ ಗ್ರಾಮದ ಉತ್ಸಾಹಿ ಯುವ ತರುಣನೊಬ್ಬ 1963ರಲ್ಲಿ ಸೇನೆಗೆ ಸೇರಿದ. ಸಿಪಾಯಿಯಾಗುವ ಕನಸು ಹೊತ್ತಿದ್ದ ಆ ತರುಣ ತನ್ನ ಕಡಿಮೆ ಎತ್ತರದ ಕಾರಣದಿಂದಾಗಿ ಸೇನೆಯ ಟ್ರಕ್ ನಡೆಸುವ ಚಾಲಕನಾದ, ಆ ಮೂಲಕ ಭಾರತೀಯ ಸೇನೆಯ ಯೋಧನಾಗಿ ರೂಪುಗೊಂಡವನು ಸತತವಾಗಿ 15ವರ್ಷಗಳ ಸೇವೆಯಲ್ಲಿ ಸಿಕ್ಕಿಂ, ಭೂತಾನ್, ಜಮ್ಮು-ಕಾಶ್ಮೀರ, ಅಸ್ಸಾಂ ಮತ್ತು ಮಿಜೋರಾಂ, ಲೇಹ್-ಲಡಾಕ್ ಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ. ಅದೊಂದು ದಿನ ತನ್ನ ಸೇವಾವಧಿಯಲ್ಲೇ ವ್ಯವಸ್ಥೆಯ ಹುಳುಕುಗಳ ಬಗ್ಗೆ ಜಿಗುಪ್ಸೆ-ಅಸಹನೆಯನ್ನು ಹೊಂದಿದ್ದ, ಜೀವನದ ಪ್ರತೀ ಘಟ್ಟದಲ್ಲೂ ಎದುರಾಗುತ್ತಿದ್ದ ವ್ಯತಿರಿಕ್ತ ಪರಿಣಾಮಗಳು ಆ ಯೋಧನಿಗೆ ತೀವ್ರ ರೇಜಿಗೆ ಹುಟ್ಟಿಸಿಬಿಟ್ಟಿತ್ತು. ತನ್ನೆಲ್ಲ ಪ್ರಶ್ನೆಗಳನ್ನು ಸೇರಿದಂತೆ 2ಪುಟಗಳ ದೀರ್ಘ ಪತ್ರವನ್ನು ಬರೆದು ಆತ್ಮಹತ್ಯೆಗೆ ಯೋಜಿಸಿದ ಯುವಕನಿಗೆ ಹೊಸದೆಹಲಿಯ ರೈಲ್ವೇ ಸ್ಟೇಷನ್ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ಬುಕ್ ಸ್ಟಾಲ್ ಒಂದರಲ್ಲಿ ನೇತುಹಾಕಿದ್ದ ಪುಸ್ತಕ ಆಕರ್ಷಿಸಿತು. ಅದು ಸ್ವಾಮಿವಿವೇಕಾನಂದರು ಜೀವನದ ಉದಾತ್ತ ದ್ಯೇಯಗಳ ಬಗೆಗೆ ಬರೆದ ಪುಸ್ತಕ. ಪುಸ್ತಕ ಕೊಂಡು ಓದಿದ ಯುವಕನಿಗೆ ಆತ್ಮಹತ್ಯೆಗೆ ಮುನ್ನ ಬರೆದ 2ಪುಟಗಳ ಪತ್ರದಲ್ಲಿ ಎತ್ತಿದ್ದ ಹಲವು ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಲಭಿಸಿತ್ತು. ಪುಸ್ತಕ ಓದಿದ ಆತ ತನ್ನ ನಿಲುವು ಬದಲಿಸಿಕೊಂಡ ಹೊಸ ಜೀವನಕ್ಕೆ ತನ್ನನ್ನು ತೊಡಗಿಸಿಕೊಳ್ಳಲು ಅನುವಾದ. ಜೀವನವೆಂದರೆ ಅದು ವ್ಯರ್ಥವಲ್ಲ, ಸಾರ್ಥಕತೆಯನ್ನು ಕಾಣುವ ಬದುಕು ಎಂದು ಆಗ ಅವನಿಗೆ ಅನಿಸಲಾರಂಭಿಸಿತು. ಇದು ಆತನ ಯೋಚನಾ ಲಹರಿಯನ್ನು ಬದುಕಿನ ದಿಕ್ಕನ್ನು ಸಂಪೂರ್ಣವಾಗಿ ಯು ಟರ್ನ್ ತೆಗೆದುಕೊಳ್ಳುವಂತೆ ಮಾಡಿಬಿಟ್ಟಿತು. ಜನರ ಸೇವೆಗೆ ತನ್ನ ಜೀವನ ಮುಡಿಪು, ಅದರಲ್ಲೆ ನನ್ನ ಬದುಕಿನ ಸೇವೆ ಅಡಗಿದೆ ಎಂದು ಆತನಿಗೆ ಅನಿಸಿದ್ದೇ ತಡ ತನ್ನ ನಿರ್ಧಾರಕ್ಕೆ ಗಟ್ಟಿತನ ದೊರಕಿಸಿಕೊಂಡು ಬಿಟ್ಟ ಯೋಧ, ನವ ತರುಣನೇ ಅಣ್ಣಾ ಸಾಹೇಬ್ ಹಜಾರೆ!


ಇವತ್ತು ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ವಿರೋಧಿ ಆಂಧೋಲನದ ಕ್ರಾಂತಿಯ ಕಿಡಿಯನ್ನು ಹೊತ್ತಿಸಿರುವ 74ರ ವಯೋವೃದ್ದ ಅಣ್ಣಾ ಹಜಾರೆ ತನ್ನ ಜೀವನದಲ್ಲಿ ಸಾಗಿ ಬಂದ ಹಾದಿ ತೋರುತ್ತಿರುವ ಬದ್ದತೆ ಇದೆಯಲ್ಲ ಅದು ಪ್ರಶ್ನಾತೀತವಾದುದು ಮತ್ತು ಯುವ ಜನತೆಗೆ ಆದರ್ಶಯುತವಾದುದು. ತನ್ನ 26ನೇ ವಯಸ್ಸಿನಲ್ಲೇ ಸಾರ್ವಜನಿಕ ಸೇವೆಗೆ ತನ್ನ ನಿರ್ಧಾರ ತೆಗೆದುಕೊಂಡು ಬ್ರಹ್ಮಚಾರಿಯಾಗಿಯೇ ಉಳಿಯುವ ಅಚಲ ನಿರ್ಧಾರ ಕೈಗೊಂಡ ಅಣ್ಣಾ 15ವರ್ಷಗಳ ಸೇನಾ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ಅಹಮ್ಮದ್ ನಗರ ಜಿಲ್ಲೆಯ ರಾಲೇ ಗಾಂವ್ ಸಿದ್ದಿ ಎಂಬ ಬರಪೀಡಿತ ಹಳ್ಳಿಗೆ ಬಂದು ನೆಲೆನಿಂತ. ಆ ಹಳ್ಳಿಯಲ್ಲಿ ವಾರ್ಷಿಕವಾಗಿ 400-500ಮಿಮಿ ಮಳೆಯಾಗುತ್ತಿದ್ದರೂ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಲವು ಕಿಮಿಗಳ ದೂರದಿಂದ ಕುಡಿಯುವ ನೀರನ್ನು ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು, ಆಹಾರ ಧಾನ್ಯಗಳಿಗೆ ಅಕ್ಕಪಕ್ಕದ ಗ್ರಾಮದವರನ್ನ ಅವಲಂಬಿಸಬೇಕಾಗಿತ್ತು. ಅರಾಜಕತೆಯ ತಾಣವಾಗಿದ್ದ ಗ್ರಾಮದಲ್ಲಿ ಸಲೀಸಾಗಿ ಸಿಗುತ್ತಿದ್ದುದು ಸಾರಾಯಿ ಮಾತ್ರ! ಇದೆಲ್ಲವನ್ನೂ ಮನಗಂಡ ಅಣ್ಣಾ ಗ್ರಾಮದ ಜನರನ್ನೆಲ್ಲ ಒಗ್ಗೂಡಿಸಿದರು. ದೊರೆಯುತ್ತಿದ್ದ ಅಲ್ಪ ನೀರನ್ನೇ ಸಂರಕ್ಷಣೆ ಮಾಡುವುದು ಹೇಗೆ,ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸುವುದು ಹೇಗೆ?ಸಾಮಾಜಿ ಅನಿಷ್ಠಗಳನ್ನು ತಡೆಯಲು ಏನು ಮಾಡಬೇಕು ಎಂದೆಲ್ಲಾ ಚಿಂತಿಸಿದರು ಅದಕ್ಕೆ ಪೂರಕವಾದ ಮಾರ್ಗೋಪಾಯಗಳನ್ನು ರೂಪಿಸುವ ಮೂಲಕ ಅಭಿವೃದ್ದಿಯ ಮುನ್ನುಡಿಯನ್ನು ಬರೆದರು. 50ಕ್ಕೂ ಹೆಚ್ಚು ನಾಲಾ ಬಂಡಿಂಗ್ ನಿರ್ಮಾಣವಾಯಿತು. ನೀರು ಸಂಗ್ರಹಕ್ಕೆ ಬ್ಯಾರೇಜ್ ನಿರ್ಮಾಣ ಮಾಡಲಾಯಿತು. ಅನಾಮತ್ತಾಗಿ 500ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು ಅರಣ್ಯವನ್ನು ಬೆಳೆಸಲಾಯಿತು. ಗ್ರಾಮ ಪಂಚಾಯ್ತಿಗೆ ಪುನಶ್ಚೇತನ ನೀಡಿದ ಅಣ್ಣಾ ಅದನ್ನು ಶಕ್ತಿಯುತ ಕೇಂದ್ರವಾಗಿ ರೂಪುಗೊಳಿಸಿದರು. ಗ್ರಾಮಕ್ಕೆ ಬೇಕಾದ ಸ್ಕೂಲು, ಆಸ್ಪತ್ರೆ, ಹಾಸ್ಟೆಲುಗಳನ್ನು ಸಹಾ ಕಟ್ಟಿದ ಅಣ್ಣಾ ಇದಕ್ಕಾಗಿ ಬಳಸಿದ್ದು ಒನ್ಸ್ ಎಗೇನ್ ಅದೇ ಗ್ರಾಮದ ಜನರನ್ನು! ಅಂದರೆ ಜನಶಕ್ತಿಯನ್ನೆ ಬಂಡವಾಳ ಮಾಡಿಕೊಂಡ ಅಣ್ಣಾ ತಾನಂದುಕೊಂಡಿದ್ದನ್ನೆಲ್ಲ ಸಾಕಾರ ಮಾಡಿಕೊಂಡರು. ಇದೀಗ ಅಣ್ಣಾ ಹಜಾರೆಯ ಗ್ರಾಮದ ದೇಶದ ಆದರ್ಶ ಗ್ರಾಮವಾಗಿ ಮಾರ್ಪಟ್ಟದೆ ದೇಶ ವಿದೇಶಗಳಿಂದ ಜನ ಅಲ್ಲಿಗೆ ಬರುತ್ತಿದ್ದಾರೆ. ಅಭಿವೃದ್ದಿಗೆ ಅದು ಮಾದರಿಯಾಗಿ ನಿಂತಿದೆ.

1991ರಲ್ಲಿ ಅಣ್ಣಾ ಭ್ರಷ್ಟಾಚಾರ ವಿರೋಧಿ ಆಂಧೋಲನವನ್ನು ಸಂಘಟಿಸಿದರು. ಆಗ ಮಹಾರಾಷ್ಟ್ರದಲ್ಲಿ 42ಜನ ಅರಣ್ಯಾದಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಹಲವು ಕೋಟಿ ರೂಪಾಯಿಗಳನ್ನು ವಂಚಿಸಿದ್ದರು. ಈ ವಂಚನೆಯ ವಿರುದ್ದ ದಾಖಲೆಗಳೊಂದಿಗೆ ಹೋರಾಡಿದ ಅಣ್ಣಾ ನಿಗೆ ಸೋಲು ಕಾದಿತ್ತು. ಯಾಕೆಂದರೆ ಸದರಿ ಹಗರಣದಲ್ಲಿ ಪ್ರಭಾವ ಶಾಲಿ ಮಂತ್ರಿಯೋರ್ವನ ಕೈವಾಡವೂ ಇತ್ತು.ಬೇಸತ್ತ ಅಣ್ಣಾ ಆಗ ತಮಗೆ ಕೊಡಮಾಡಿದ್ದ ಪದ್ಮಶ್ರೀ ಪುರಸ್ಕಾರ ಹಾಗೂ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ನೀಡಿದ್ದ ವೃಕ್ಷಮಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿದರು, ಧೃತಿಗೆಡದ ಅಣ್ಣಾ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ಉಪವಾಸ ಕುಳಿತರು ಕಡೆಗೆ ಮಣಿದ ಸರ್ಕಾರ ಸದರಿ ಹಗರಣಕ್ಕೆ ಸಂಬಂದಿಸಿದಂತೆ 6ಮಂದಿ ಮಂತ್ರಿಗಳನ್ನು 400ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಮಾಡಿತು. ಈ ಪ್ರಕರಣದಲ್ಲಿ ಅಗತ್ಯ ಮಾಹಿತಿಗಳ ಅವಶ್ಯಕತೆಯನ್ನು ಮನಗಂಡ ಅಣ್ಣಾ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರುವಂತೆ 1997ರಲ್ಲಿ ಚಳುವಳಿ ಆರಂಭಿಸಿದರು. ತೀವ್ರ ಒತ್ತಡದ ಪರಿಣಾಮ 2003ರಲ್ಲಿ ರಾಷ್ಟ್ರಪತಿಯವರು ಮಾಹಿತಿ ಹಕ್ಕು ಕಾಯ್ದೆಯನ್ನು ದೇಶಾಧ್ಯಂತ ಜಾರಿಗೆ ತರಲು ಅಂಕಿತ ಹಾಕಬೇಕಾಯ್ತು. ಇಂತಹ ಅಣ್ಣಾ ಹಜಾರೆ ಇವತ್ತು ಪ್ರಬಲ ಲೋಕಪಾಲ ಮಸೂದೆಗೆ ಪಟ್ಟು ಹಿಡಿದು ಕುಳಿತಿದ್ದಾರೆ ಇಡೀ ದೇಶದ ಜನತೆ ಇವತ್ತು ಅಣ್ಣಾ ಹಿಂದೆ ಹೊರಟಿದೆ, ಜಾಗತಿಕವಾಗಿ ಯಾವ ದೇಶದಲ್ಲೂ ಈ ಮಟ್ಟಿಗಿನ ಭ್ರಷ್ಟಾಚಾರದ ವಿರುದ್ದದ ಹೋರಾಟ ನಡೆದಿರಲಾರದು. 2ನೇ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವಂತೆ ಆಂಧೋಲನ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಣ್ಣಾ ಹಜಾರೆಯ ಬೆಂಬಲಕ್ಕೆ ನಾವೂ ಕೈ ಜೋಡಿಸಬೇಕಲ್ಲವೇ???? (ಸಶೇಷ)

2 comments:

Anonymous said...

Nice article

Anonymous said...

Very Nice