Saturday, December 24, 2011

ರೈತ ದಿನಾಚರಣೆಯ ನೆನಪಲ್ಲಿ......


ಅದು 2009ರ ವರ್ಷ, ಆ ಸುದ್ದಿ ನನಗೆ ಕುತೂಹಲ ಮತ್ತು ದಿಗಿಲು ಹುಟ್ಟಿಸಿತ್ತು, ಆ ಹಳ್ಳಿಯ ಜನ ತಮ್ಮ ಜಮೀನು ಮತ್ತು ಹಳ್ಳಿಯನ್ನೇ ಹರಾಜಿಗಿಟ್ಟಿದ್ದರು. ಅದು ಪಂಜಾಬ್ ನ ಮುಂದುವರಿದ ಹಳ್ಳಿ ಅಂದರೆ ಆಧುನಿಕ ಜಗತ್ತಿನ ಎಲ್ಲಾ ಸೌಕರ್ಯಗಳನ್ನು ಪಡೆದ ಶ್ರೀಮಂತ ಹಳ್ಳಯೆಂದರೂ ತಪ್ಪಾಗಲಾರದೇನೋ. ಆ ಗ್ರಾಮದ ರೈತರು ತಮ್ಮ ಜಮೀನು ಸೇರಿದಂತೆ ಹಳ್ಳಿಯನ್ನೂ ಮಾರಾಟಕ್ಕಿಟ್ಟಿದ್ದರು.  ಬಹುತೇಕ ರೈತಾಪಿ ಕುಟುಂಬಗಳೇ ವಾಸಿಸುವ ಆ ಗ್ರಾಮದಲ್ಲಿ 1994ರ ಜಾಗತೀಕರಣ ನೀತಿಯ ನಂತರ ದಿಕ್ಕು ದೆಸೆಯೇ ಬದಲಾಗಿತ್ತು.  ದೇಸೀ ಪದ್ದತಿಯಲ್ಲಿ ಕೃಷಿ ನಡೆಸುತ್ತಿದ್ದ ಅಲ್ಲಿಯ ರೈತರು ನಂತರ ಹೊಸ ವೈಜ್ಞಾನಿಕ ಪದ್ದತಿಗೆ ಮಾರು ಹೋದರು, ದೀರ್ಘಾವದಿಯ ಬೆಳೆ ಬೆಳೆಯುವ ಬದಲಿಗೆ ಅಲ್ಪಾವಧಿಯ ಬೆಳೆ ಬೆಳೆಯಲು ಮುಂದಾಗಿದ್ದರು, ಹೊಸ ತಳಿಗಳ ಬಳಕೆ ಹೆಚ್ಚಿತು, ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಆಸ್ಪದ ಸಿಗತೊಡಗಿತು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅಧಿಕವಾಯಿತು, ನೀರಾವರಿಗೆ ಥರಹೇವಾರಿ ಆದುನಿಕ ಉಪಕರಣಗಳು ಬಂದವು, ಕೃಷಿಕಾರ್ಮಿಕರಿಗೆ ಬದಲಾಗಿ ಆಧುನಿಕ ಉಪಕರಣಗಳು ಬಂದವು, ಪ್ರತೀ ಮನೆಗೂ ಟ್ರಾಕ್ಟರ್ ಗಳ ಆಗಮನವಾಯಿತು. ಆಹಾರ ಬೆಳೆಗಳಿಗೆ ಬದಲಾಗಿ ವಾಣಿಜ್ಯ ಬೆಳೆಗಳು, ಹೈಬ್ರಿಡ್ ಬೆಳೆಗಳು ಆವರಿಸಿದವು. ಬ್ಯಾಂಕುಗಳು ಸಾಲದ ಹೊಳೆಯನ್ನೇ ಹರಿಸಿದವು. ಸಾಮಾನ್ಯ ರೈತ ಸಿರಿವಂತನಾದ, ಶ್ರಮದ ಜೀವನ ಮರೆಯಾಯಿತು ಆಧುನಿಕ ಬದುಕಿನ ಶೈಲಿ ತಳವೂರಿತು. ಜೊತೆಯಲ್ಲಿ ನೆಮ್ಮದಿ ಕೆಡಿಸುವ ಪರ್ವಕಾಲವೂ ಆರಂಭವಾಯಿತು. ಹವಾಗುಣ ಮೊದಲಿನಂತಿರಲಿಲ್ಲ, ನಿರೀಕ್ಷಿತ ಮಳೆಗಳು ಕೈಕೊಟ್ಟವು, ಕ್ರಿಮಿನಾಶಕ ಹಾಕಿದರೂ ಅದನ್ನೇ ತಿಂದು ಬದುಕುವ ಕೀಟಗಳು ಮತ್ತು ಕಾಯಿಲೆಗಳು ಬೆಳೆಗಳನ್ನು ಹಾಳು ಮಾಡಿದವು, ವಿರಾಮವಿಲ್ಲದೇ ಬೆಳೆ ಬೆಳೆಯುತ್ತಿದ್ದುದರಿಂದ ಹಾಗೂ ಹೆಚ್ಚಿನ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಿದ್ದರಿಂದ ಮಣ್ಣಿನ ಪಿಎಚ್ ಮೌಲ್ಯ ಹಾಳಾಯ್ತು ಭೂಮಿ ಬರಡಾಯಿತು. ಅಲ್ಲಿ ಏನೂ ಬೆಳೆಯದಂತಾಯಿತು. ಆಹಾರ ಬೆಳೆಗಳಿಗೆ ನಿರ್ಲಕ್ಷಿಸಿದ್ದರಿಂದ ರೈತರು ಪೇಟೆಗೆ ಹೋಗಿ ಭತ್ತ,ಗೋದಿಯಂತಹ ಆಹಾರ ಬೆಳೆ  ಖರಿದೀಸುವ ದುಸ್ತಿತಿ ಎದುರಾಯಿತು. ಕೈತುಂಬಾ ದುಡ್ಡು, ಐಷಾರಾಮಿ ಸೌಕರ್ಯ, ವಾಹನಗಳನ್ನು ಹೊಂದಿದ್ದರೂ ಬೂಮಿ ಬರಡಾಗಿದ್ದರಿಂದ ರೈತರ ಬದುಕು ಅಸಹನೀಯವಾಯಿತು. ಸಾಲಕೊಟ್ಟ ಬ್ಯಾಂಕುಗಳು  ಎದೆಮೇಲೆ ನಿಂತು ವಸೂಲಿಗೆ ಮುಂದಾದವು, ಬೇರೆ ದಾರಿಯಿಲ್ಲದ ರೈತಾಪಿ ಮಂದಿ ಜಮೀನುನೊಂದಿಗೆ ಗ್ರಾಮವನ್ನೇ ಹರಾಜಿಗೆ ಇಟ್ಟುಬಿಟ್ಟರು! ಇದು ಪಂಜಾಬ್ ನ ಹಳ್ಳಿಯೊಂದರ ನೈಜ ಕಥೆ.
ಪ್ರಸಕ್ತ ಸಂಧರ್ಭದಲ್ಲಿ   ಸ್ವತಂತ್ರ ಭಾರತದ ಪ್ರತೀ ಹಳ್ಳಿಗಳ ರೈತರ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇವತ್ತು ಡಿ.23, "ರೈತ ದಿನಾಚರಣೆ" ಈ ಸರ್ಕಾರಕ್ಕೆ ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ  ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ  1938ರಲ್ಲಿ  ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ  ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ  9000ಕ್ರಿ ಪೂ. ದ ಇತಿಹಾಸ ಇರುವುದು  ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Sunday, December 11, 2011

ಮಡೇಸ್ನಾನ ನಿಷೇದಕ್ಕೆ ಅಷ್ಟಮಂಗಳ ಪ್ರಶ್ನೆ ಬೇಕಾ?ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯ ದಿನದಂದು ಎಂಜಲು ಎಲೆ ಮೇಲೆ ಉರುಳುವ ಸೇವೆ ಇದೆ ! ತಕ್ಷಣವೇ ಅದಕ್ಕೊಂದು ಕರೆಕ್ಷನ್ ಹಾಕಿದ ಗೆಳೆಯ "ಆದ್ರೆ ಅಲ್ಲಿ ಬ್ರಾಹ್ಮಣರು ಉಂಡ ಎಲೆಗಳ ಮೇಲೆ, ಬ್ರಾಹ್ಮಣರೇ ಉರುಳುತ್ತಾರೆ" ಎಂದು ನಸುನಕ್ಕ. ಶಾಕ್ ಆಗುವ ಸರದಿ ನನ್ನದು. ಅದೇ ದಿನ ಹಾಸನದ ಮಿತ್ರರೊಬ್ಬರು ಫೋನಾಯಿಸಿ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲೂ ಅಪೇಕ್ಷೆ ಈಡೇರಿಕೆಗಾಗಿ ಬರಿಯ ನೆಲದ ಮೇಲೆ ಊಟ ಮಾಡುವ ಪದ್ದತಿ ಇದೆ ಎಂದರು. ಆಮೇಲೆ ಹುಡುಕುತ್ತಾ ಹೋದರೆ ಇಂತಹ ವಿವಿಧ ಅನಾಗರಿಕ ಪದ್ದತಿಗಳು ನಮ್ಮ ಸುತ್ತಲೂ ಸಂಪ್ರದಾಯದ ಹೆಸರಿನಲ್ಲಿ ಚಾಲ್ತಿಯಲ್ಲಿರುವುದು ಅರಿವಿಗೆ ಬಂದು ದಿಗಿಲಾಯ್ತು. ಇದೆಲ್ಲದಕ್ಕಿಂತ ಹೆಚ್ಚು ವಿಷಾಧಭಾವ ಮೂಡಿಸಿದ ಸಂಗತಿ ಹಿರಿಯ ಸಚಿವ ವಿ ಎಸ್ ಆಚಾರ್ಯ ಹೇಳಿಕೆ. ಮಡೇಸ್ನಾನ ನಿಷೇದಿಸುವ ಕುರಿತು ಅಷ್ಟಮಂಗಳ ಪ್ರಶ್ನೆಯ ನಂತರ ನಿರ್ಧರಿಸಲಾಗುವುದಂತೆ, ಹಾಗೆಯೇ ಸಾಂಪ್ರಾದಾಯಿಕ ಪದ್ದತಿಗಳ ಆಚರಣೆ ಜನರ ಹಕ್ಕು ಅದಕ್ಕೆ ಅಡ್ಡಿ ಉಂಟು ಮಾಡಬಾರದಂತೆ ! ಇದು ಜವಾಬ್ದಾರಿಯುತ ಸಚಿವರುಗಳು  ಹಾಗೂ ಸಿಎಂ ಡೀವಿ ಮಾತನಾಡುವ ಪರಿ. ಕಳೆದ 15ದಿನಗಳಿಂದ ಮಡೇ ಸ್ನಾನ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ವಿಚಾರವನ್ನ ಚರ್ಚೆಗೆ ತಂದಿದ್ದಾರೆ. ಇರಲಿ ಇಂತಹದ್ದೊಂದು ಅನಿಷ್ಠ ಸಂಪ್ರದಾಯ ಕುರಿತ ಚರ್ಚೆ ನಾಗರಿಕ ಸಮಾಜದ ನಾಗರೀಕರಿಗೆ ಅಗತ್ಯವೇ ಆಗಿದೆ. 
         ಭಾರತ ದೇಶ ಹೇಳಿ ಕೇಳಿ ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದ, ವಿವಿಧ ಧರ್ಮಗಳನ್ನು ಹೊಂದಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಈ ನಡುವೆಯೇ ನಾಗರಿಕ ಸಮಾಜಕ್ಕೆ ವಿರುದ್ದವಾದ ಆಚರಣೆಗಳನ್ನು ಕಾಲಘಟ್ಟಕ್ಕೆ ತೊರೆಯದೇ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯನ್ನು ಅತ್ಯಂತ  ಪುರಾತನವಾದ ನಾಗರಿಕೆತೆಯನ್ನು ಹೊಂದಿದ ರಾಷ್ಟ್ರವೆಂದು ಗುರುತಿಸಲಾಗುತ್ತದೆ. ಭಾರತೀಯ ಪರಂಪರೆಗೆ 8000ವರ್ಷಗಳಷ್ಟು ಹಳೆಯ ಇತಿಹಾಸವಿರುವುದನ್ನು ಕಾಣಬಹುದು. ವರ್ಗಬೇಧ, ಜಾತೀಯತೆ ಮತ್ತಿತರ ಅನಿಷ್ಟ ಸಂಪ್ರದಾಯಗಳ ವಿರುದ್ದ ಅನೇಕ ಸಮಾಜ ಸುಧಾರಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಲ್ಲಿ ಕಾಲ ಕಳೆದಂತೆ ಒಂದೊಂದೆ ಅನಿಷ್ಠ ಸಂಕೋಲೆಗಳು ಕಳಚುತ್ತಾ ಬಂದಿವೆ. ಹಿಂದಿನ ಕಾಲ ಘಟ್ಟದಲ್ಲಿ ಅರಿವಿನ ಕೊರತೆಯಿಂದಾಗಿ ಅನಾಗರಿಕ ಆಚರಣೆಗಳನ್ನು ಪೋಷಿಸಿಕೊಂಡು ಬರಲಾಗಿತ್ತಾದರೂ ಕಾಲಘಟ್ಟದ ಬದಲಾವಣೆಯಿಂದ ಅಲ್ಲೆಲ್ಲ ಹೊಸತನದ ಅರಿವು ಮೂಡುತ್ತಿದೆ. 
          ಮೊನ್ನೆ ಸುಬ್ರಹ್ಮಣ್ಯ ದೇಗುಲದಲ್ಲಿ ಚಂಪಾ ಷಷ್ಠಿಯಂದು ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿದ ಶಿವರಾಂ ಎಂಬುವವರಿಗೆ ಮನಸ್ಸೋ ಇಚ್ಚೆ ಸಾರ್ವಜನಿಕವಾಗಿಯೇ ಥಳಿಸಲಾಗಿದೆ, ಸಾಲದ್ದು ಎಂಬಂತೆ ದೇಗುಲದ ಮುಂದೆ ಭಕ್ತಾದಿಗಳ ಹೆಸರಿನ ಅನಾಗರಿಕರು ಮಡೇಸ್ನಾನದ ಪರವಾಗಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ, ರಾಜ್ಯ ಸರ್ಕಾರ ತನ್ನದೇ ಆಡಳಿತದ ಸ್ಥಳೀಯ ಸಹಾಯಕ ಆಯುಕ್ತರು ನಿಷೇದಿಸಿದ ಮಡೇಸ್ನಾನವನ್ನು ಬೆಂಬಲಿಸಲು ಮೀನ ಮೇಷ ಎಣಿಸುತ್ತಾ, ಎಸಿ ಆದೇಶವನ್ನು ರದ್ದುಗೊಳಿಸಿ ಅಧಿಕೃತವಾಗಿ ಮಡೇಸ್ನಾನಕ್ಕೆ ಅವಕಾಶ ಮಾಡಿದೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಮಡೇಸ್ನಾನ ನಿಷೇಧಕ್ಕೆ ಅಷ್ಟಮಂಗಳ ಪ್ರಶ್ನೆಯನ್ನು ಕಾಯುವುದಾದರೆ ಅವರು ದೇಶದ ಕಾನೂನಿಗೆ, ಸಂವಿಧಾನಕ್ಕೆ ಕೊಡುವ ಗೌರವವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಭಾವನಾತ್ಮಕ ವಿಚಾರಗಳು ನಾಗರೀಕತೆಯ ಚೌಕಟ್ಟಿನಲ್ಲಿರಬೇಕೆ ವಿನಹ ಎಲ್ಲೆಯನ್ನು ಮೀರುವಂತಾಗಬಾರದಲ್ಲವೇ?
             ಧೃಶ್ಯ ಮಾಧ್ಯಮವೊಂದರ ವರದಿಗಾರ ಅದೇ ಛಾನಲ್ ಗೆ ಸಂಬಂಧಿಸಿದ ಪತ್ರಿಕೆಯಲ್ಲಿ ಮಡೆ ಸ್ನಾನದ ಪರವಾಗಿ ವಿಚಾರ ಮಂಡಿಸುತ್ತಾ "ಈ ಸಂಪ್ರದಾಯ ಮುಂದುವರಿಯಬೇಕು ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ಪಟ್ಟು ಹಿಡಿದದ್ದು ಮಲೆಕುಡಿಯ ಜನಾಂಗದವರೇ ಹೊರತು ಮೇಲ್ಜಾತಿಯವರಲ್ಲ ಎನ್ನುತ್ತಾರೆ ಆದರೆ ಆದರೆ ಅನಿಷ್ಠ ಪದ್ದತಿಯನ್ನು ಜೀವಂತವಾಗಿಡುವ ಉದ್ದೇಶದಿಂದ ಮಲೆಕುಡಿಯರಂತಹ ಅಮಾಯಕ ಜನರನ್ನು ಕಾಲ ಕಾಲಕ್ಕೆ ಪಾಲಿಶ್ ಮಾಡಿ ಅನುಕೂಲಕ್ಕೆ ಬಳಸುವಂತಹ ಪಟ್ಟಭದ್ರ ಹಿತಾಸಕ್ತಿಗಳಿಗೆ ನಾಗರೀಕತೆಯ ಅರಿವಿಲ್ಲವೇ?  ಅದೇ ರೀತಿ ನೆಲದ ಮೇಲೆ ಊಟ ಮಾಡುವುದು ಮುಖ್ಯ ಪ್ರಾಣನಿಗೆ ಸಲ್ಲಿಸುವ ಸೇವೆಯಂತೆ ಇದಕ್ಕೆ ಉಡುಪಿ ಮಠದಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವಂತೆ ಹಾಗೆಂದ ಮಾತ್ರಕ್ಕೆ ಇಂತಹದ್ದನ್ನು ಪುರಸ್ಕರಿಸಬೇಕೆ? ಇದ್ಯಾವ ಸೀಮೆಯ ನಾಗರೀಕ ಪದ್ದತಿ? ಇದಕ್ಕೆ ಶುಲ್ಕ ಬೇರೆ ಬೇಕಿತ್ತಾ?  ಮಡೇಸ್ನಾನ ತೀರಾ ವೈಯುಕ್ತಿಕವಾದ ಸೇವೆ ದೇವರ ಮಾಮೂಲು ಸೇವಾ ಪಟ್ಟಿಯಲ್ಲಿ ಇದು ಸೇರಿಲ್ಲ ಎನ್ನಲಾಗುತ್ತದೆ ಹಾಗಾದರೆ ಚಂದ್ರಗುತ್ತಿಯ ಬೆತ್ತಲೆ ಸೇವೆ ತೀರಾ ವೈಯುಕ್ತಿಕ ಮತ್ತು ಭಾವನಾತ್ಮಕವಾದುದು, ಉತ್ತರ ಕರ್ನಾಟಕದಲ್ಲಿ ಬಸವಿ ಬಿಡುವ ಪದ್ದತಿ ವೈಯುಕ್ತಿಕವಾದುದು ಹೀಗೆ ಹೇಳುತ್ತಾ ಹೋದರೆ ಹಲವಾರು ಅನಿಷ್ಠ ಸಂಪ್ರದಾಯಗಳನ್ನು ಪಟ್ಟಿ ಮಾಡಬಹುದು. ಇವತ್ತು ನಾವೆಲ್ಲ ಯಾವ ಕಾಲ ಘಟ್ಟದಲ್ಲಿದ್ದೇವೆ? ವೈಜ್ಞಾನಿಕ ಅವಿಷ್ಕಾರಗಳು ಕಣ್ಣ ಮುಂದಿವೆ ಹೀಗಿದ್ದರೂ ಇಂತಹ ಮೂಡನಂಬಿಕೆಗಳ ಆಚರಣೆ ಬೇಕಾ ಎಂಬ ಪ್ರಶ್ನೆ ಮೂಡುತ್ತದೆ,. ಇದೇ ಲೇಖನದಲ್ಲಿ ಸದರಿ ವರದಿಗಾರ ಒಂದು ಪ್ರಶ್ನೆ ಮುಂದಿಡುತ್ತಾನೆ ಬಕ್ರಿದ್ ದಿನ ಕುರಿ ಕಡಿಯುವುದು ನಂಬಿಕೆಯ ಬಾಗ, ದೀಪಾವಳಿಗೆ ಕೋಳಿ ಬಲಿ ನೀಡುವುದು ಸಂಪ್ರದಾಯ ಅದೇ ರೀತಿ ಮಡೇಸ್ನಾನ ದಕ್ಷಿಣ ಕನ್ನಡದ ನಂಬಿಕೆ ಎಂದು ವಿತಂಡವಾದವನ್ನು ಮುಂದಿಡುತ್ತಾನೆ. ಕುರಿ-ಕೋಳಿ ಬಲಿ ಅನಾಗರಿಕ ಕೃತ್ಯವೆಂದೇ ಕಾಣಬಹುದು ಆದರೆ ಅದು ಆಹಾರ ಸೇವನೆಯ ಅನಿವಾರ್ಯ ಭಾಗ, ಮಾಂಸಹಾರ ಇಲ್ಲದಿದ್ದರೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಸಿವಿನಿಂದ ಸಾಯುವುದನ್ನು ಕಾಣಬೇಕಿತ್ತು, ಅಷ್ಟಕ್ಕೂ ಸಸ್ಯಾಹಾರಿಗಳ ಸೇವಿಸುವ ಗೋವಿನ ಹಾಲು ಮಾಂಸಜನ್ಯವಾದುದೇ ಅಲ್ಲವೇ ಆಗ ಅದು ಸಸ್ಯಾಹಾರ ಹೇಗಾದಿತು ?
       ಅನಾಗರಿಕ ಕೃತ್ಯಗಳನ್ನು ಬೆಂಬಲಿಸುವ ಭರದಲ್ಲಿ ವಿತಂಡ ವಾದಗಳು ಮತ್ತು ಸಮಂಜಸವಲ್ಲದ ತರ್ಕಗಳು ಹಾದಿ ತಪ್ಪಿಸುತ್ತವೆಯೇ ವಿನಹ ಸರಿಯಾದ ಪರಿಹಾರೋಪಾಯ ಕಂಡು ಕೊಳ್ಳಲಾಗುವುದಿಲ್ಲ. ಆರೋಗ್ಯವಂತ ಸಮಾಜದ ನಡೆಗೆ ಆರೋಗ್ಯವಂತ ಚಿಂತನೆಗಳು ಮಾತ್ರ ಬೇಕು ಅದು ನಾಗರೀಕತೆಯ ಲಕ್ಷಣವಾಗುತ್ತದೆ ಆದರೆ ತರ್ಕಕ್ಕೆ ಪ್ರತಿ ತರ್ಕ ಎಂದು ಮುಂದುವರೆದರೆ ಅದಕ್ಕೆ ಸರಿಯಾದ ಪರಿಹಾರ ದೊರಕಲಾರದು. ಸರ್ಕಾರವೂ ಕೂಡ ಮಡೇಸ್ನಾನ ಮತ್ತು ಮಡೇಸ್ನಾನದಂತಹ ಅನಿಷ್ಠ ಆಚರಣೆಗಳನ್ನು ನಿಷೇದಿಸುವಲ್ಲಿ ಸಂವಿದಾನದ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕೆ ವಿನಹ ಅಷ್ಟಮಂಗಳ ಪ್ರಶ್ನೆಯ ಮೂಲಕ ಅಲ್ಲ ಎಂಬುದನ್ನು ಅರಿಯಬೇಕಲ್ಲವೇ?