Wednesday, December 26, 2012

ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು


ಸಿನಿಮಾ ತಾರೆಯರ ಮಕ್ಕಳು ಸಿನಿಮಾಗೆ ಬರೋದು ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಲು ಹವಣಿಸೋದು ಮಾಮೂಲು ಸಂಗತಿ. ಅದ್ರೆ ಇಲ್ಲಿ ಕೊಂಚ ಬದಲಾವಣೆುದೆ, ಅದೇನಪ್ಪಾ ಅಂದ್ರೆ ನಿಮಗೆ ಶಂಕ್ರಣ್ಣನ ಮಗಳು ಕಾವ್ಯ ಗೊತ್ತಲ್ವಾ ಅವರು ಈಗ ಉದ್ಯಮಿಯಾಗುತ್ತಿದ್ದಾರೆ. ಇನ್ನಾ ಗೊತ್ತಾಗ್ಲಿಲ್ವಾ.. ಓಕೆ "ಷಯಕ್ಕೆ ಬರ್ತೀನಿ. ಕನ್ನಡ ಚಿತ್ರರಂಗದ ಧ್ರುವತಾರೆ ವರ್ಕಾಲಿಕ್‌ ನಟ ನಿರ್ದೇಶಕ ಆಟೋರಾಜ ಶಂಕರ್‌ ನಾಗ್‌ ತೀರಿಕೊಂಡು 22ವರ್ಷಗಳು ಕಳೆದು ಹೋಗಿದೆ. ಅಂದು ದಾವಣಗೆರೆ ಸಮೀಪದ ಆನಗೋಡು ಬಳಿ ಸಂಭ"ಸಿದ ದುರಂತದಲ್ಲಿ ಕಿಂಚಿತ್ತೂ ಘಾಸಿಯಾಗದೇ ಅಮನೊಂದಿಗೆ ಉಳಿದದ್ದೇ 5ವರ್ಷದ ಪೋರಿ ಕಾವ್ಯ ಶಂಕರ್‌ನಾಗ್‌! ಅದೇ ಪೋರಿ ಈಗ ಅರುಂಧತಿನಾಗ್‌ ರ ನೆರಳಲ್ಲಿ ಬೆಳೆದ 27ರ ಹರೆಯದ ಗೃಹಿಣಿ! 2ವರ್ಷಗಳ ಹಿಂದೆಯಷ್ಟೇ ಇಷ್ಟಪಟ್ಟ ಬಾಲ್ಯದ ಒಡನಾಡಿ ಸಲೀಲ್‌ ಎಂಬುವವರೊಂದಿಗೆ ಹಸೆಮಣೆ ಏರಿ ಸುದ್ದಿಯಾಗಿದ್ದ ಕಾವ್ಯ ಈಗ ಮತ್ತೊಮೆ ಸುದ್ದಿಯಾಗುತ್ತಿರುವುದು ಸೋಪ್‌ ಉದ್ಯಮಕ್ಕೆ ಕಾಲಿಡುತ್ತಿರುವುದರಿಂದ. 
ಕ್ರಿಯೇಟಿವಿಟಿಗೆ ಮತ್ತೊಂದು ಹೆಸರೇ ಶಂಕರ್‌ ನಾಗ್‌, ಸಿನಿಮಾ ಸಾಧ್ಯತೆಗಳನ್ನು ಮೀರಿ ಸಮಾಜ ಮುಖಿಯಾಗಿ ಚಿಂತಿಸುತ್ತಾ ಹತ್ತು ಹಲವು ಚಿಂತನೆಗಳಿಗೆ ರೂಪು ನೀಡಲು ಶ್ರಮಿಸುತ್ತಿದ್ದ ಶಂಕರ್‌ ಅದೇ ಕಾರಣಕ್ಕಾಗಿ ಇಂದಿಗೂ ಕನ್ನಡಿಗರ ಮನದಾಳದಲ್ಲಿ ಹಸಿರಾಗಿದ್ದಾರೆ. ಹೀಗೆ ಶಂಕರ್‌ನಾಗ್‌ ಕಂಡ ಕನಸುಗಳಲ್ಲಿ ಸಾಕಾರಗೊಂಡಿದ್ದು ಬೆಂಗಳೂರು ಮೆಟ್ರೋ ಮತ್ತು ಅದಕ್ಕಿಂತಲೂ ಮುಂಚೆ ತಾನು ಉದ್ಯಮದಲ್ಲಿ ದುಡಿದದ್ದನ್ನೆಲ್ಲ ಖರ್ಚು ಮಾಡಿ, ಸಾಲ ಸೋಲ ಮಾಡಿ ನಿರ್ಮಿಸಿದ್ದು ದೇಸೀ ರೆಸಾರ್ಟ್‌ ನ ಮೊದಲ ಅದ್ಭುತ ಕಲ್ಪನೆ ಕಂಟ್ರಿಕ್ಲಬ್‌! ಅಲ್ಲಿನ ರಂಗಶಂಕರ ಜಾಗತಿಕ ನಾಟಕ ಪ್ರದರ್ಶನಗಳ ತವರಾಗಿ ಪರಿಗಣಿತವಾಗಿದೆ. ವಿವಿಧ ದೇಶಗಳ ವಿವಿಧ ಭಾಷೆಯ ನಾಟಕಗಳು ವರ್ಷದ 360ದಿನವೂ ಅಲ್ಲಿ ಲಭ್ಯ. ಅದು ಲಾಭವೋ ನಷ್ಟವೋ ಶಂಕರನ ಕನನ್ನು ನನಸು ಮಾಡಲು ಪತ್ನಿ ಅರುಂಧತಿ ನಾಗ್‌ ಶ್ರಮಿಸುತ್ತಿರುವ ಪರಿಯಂತೂ ಅಪರಿಮಿತವೇ ಹೌದು. 
ಹೀಗೆ ತಂದೆ-ತಾಯಿ, ದೊಡ್ಡಪ್ಪ-ದೊಡ್ಡಮ ಸಿನಿಮಾ ರಂಗದಲ್ಲಿದ್ದರೂ ಆ ನೆರಳನ್ನು ಅನುಸರಿಸದ ಶಂಕರ್‌ ಪುತ್ರಿ ಕಾವ್ಯ ಶಂಕರ್‌ ನಾಗ್‌ ಭರತ ನಾಟ್ಯ ಪಟುವಾದರೂ ಹೆಚ್ಚು ವಾಲಿಕೊಂಡಿದ್ದು ಶೈಕ್ಷಣಿಕ "ಷಯಕ್ಕೆ, ಬೆಂಗಳೂರಿನ ಜಿಕೆ"ಕೆ ಯಲ್ಲಿ ವೈಲ್ಡ್‌ ಲೈಫ್‌ ಬಯಾಲಜಿ ತೆಗೆದುಕೊಂಡು ಸ್ನಾತಕ ಪದ" ಗಳಿಸಿರುವ ಅವರು ಶಾಲಾ ಗೆಳತಿ ಮಯೂರ ಕಡೂರ್‌ ಜೊತೆ ಸೇರಿಕೊಂಡು ರಸಾಯನಿಕ ರ"ತವಾದ ದೇಸೀ ಸೋಪ್‌ ಅನ್ನು ಉತ್ಪಾದಿಸುವ ಪ್ಯಾಕ್ಟರಿಯನ್ನು ಆರಂಭಿಸಿದ್ದಾರೆ. ಈ ಕುರಿತು ಎರಡು ಅಂತರ್ಜಾಲ ಪುಟವನ್ನು ಸಹಾ ತೆರೆದಿರುವ ಕರತಯಾರಿಕಾ ಸೋಪ್‌ ಗಳನ್ನು ಉತ್ಪಾದಿಸುತ್ತಿದ್ದಾರೆ ಮತ್ತು ಅದನ್ನು ವಿದೇಶಗಳಿಗೂ ಮಾರಾಟ ಮಾಡಲು ಜಾಲವನ್ನು ವಿಸ್ತರಿಸುತ್ತಿದ್ದಾರೆ. ಈ ಕುರಿತು ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಾವು ದೇಸೀ ಉತ್ಪನ್ನವನ್ನು ತಯಾರಿಸುವ ಉದ್ಯಮಿಯಾಗುತ್ತಿರುವ ಕನಸನ್ನು ಬಿಚ್ಚಿಟ್ಟಿದ್ದಾರೆ. 
ಕಾವ್ಯ ನಾಗ್‌ ಮತ್ತು ಮಯೂರ ಕಡೂರ್‌ ಹಳೆಯ ಗೆಳತಿಯರು, ಸ್ವಂತ ಉದ್ಯಮದ ಕನಸು ಕಂಡ 27ರ ನವ ತರುಣಿಯರು. ಇಬ್ಬರೂ ಒಟ್ಟಿಗೆ ಓದಿದ್ದು ನಗರದ ವ್ಯಾಲೀ ಸ್ಕೂಲ್‌ ನಲ್ಲಿ, ಅವರಿಬ್ಬರೂ ತಮನ್ನು ಮಂಗಗಳು ಎಂದೇ ಪ್ರೀತಿಯಿಂದ ಕರೆದುಕೊಳ್ಳುತ್ತಾರಂತೆ ! ಕಾವ್ಯ ವೈಲ್ಡ್‌ ಲೈಫ್‌ ಬಯಾಲಜಿಯ ಸ್ನಾತಕ ಪಧವೀಧರೆಯಾದರೆ ಮಯೂರ ದಂತ ವೈದ್ಯ ವಿದ್ಯಾರ್ಥಿನಿ. ಕಾವ್ಯ ಹೆಚ್ಚು ಸಮಯ ಕಳೆದದ್ದು ಶಂಕರ್‌ ನಾಗ್‌ ರ 2ಎಕರೆ ವಿಸ್ತೀರ್ಣದಲ್ಲಿರುವ ಮಣಿಪಾಲ್‌ ಕೌಂಟಿಯ ಫಾರ್ಮ ಹೌಸ್‌ ನಲ್ಲಿ. ಶಾಲೆಗೆ ಹೋಗಿ ಬಂದ ನಂತರ ಹೆಚ್ಚಾಗಿ ಅಲ್ಲಿಯೇ ದಿನಗಳನ್ನು ಕಳೆದ ಕಾವ್ಯ ಪ್ರಕೃತಿ ಪ್ರಿಯೆ, ಸುತ್ತಲೂ ಪ್ರಾಣಿಗಳಿರಬೇಕು ಭೂಮಿಯಲ್ಲಿ ಕೆಲಸ ಮಾಡಬೇಕು ಎಂಬುದು ಅವರ ಅನುಭವದ ಮಾತು ಹೌದಂತೆ. ಅವರ ಶಾಲಾವರಣದಲ್ಲಿ ಅತೀ ಹೆಚ್ಚು ಮಂಗಳು ದಾಂಗುಡಿಯಿಡುತ್ತಿದ್ದವಂತೆ, ಅವುಗಳ ಒಡನಾಟ, ತಮಾಷೆ ಸ್ವಭಾವ ಎಲ್ಲ ಇಷ್ಟವಾಗಿ ಇವರು ಆರಂಭಿಸಿರುವ "ಸೋಪ್‌" ಉದ್ಯಮಕ್ಕೂ ಡು ಬಂದರ್‌ ಎಂಬ ಹೆಸರನ್ನಿಟ್ಟಿದ್ದಾರೆ. ಹಿಂದಿ ಭಾಷೆಯಲ್ಲಿ ಬಂದರ್‌ ಎಂದರೆ ಮಂಗ ಎಂಬ ಆರ್ಥ"ದೆ ಹಾಗಾಗಿ ಅದೇ ಹೆಸರನ್ನು ಆಯ್ದುಕೊಂಡಿದ್ದಾರೆ.  ನಾಯಿಗಳು ಮತ್ತು ಗಿನಿಪಿಗ್‌ ಗಳನ್ನು ಸಹಾ ಸಾಕಿಕೊಂಡಿರುವ ಕಾವ್ಯಳಿಗೆ ಅಮ ಅರುಂಧತಿ ನಾಗ್‌ ಎಲ್ಲ ಹಂತಗಳಲ್ಲೂ ಪ್ರೋತ್ಸಾಹ ನೀಡುವುದರ ಜೊತೆಗೆ ವಿಮರ್ಶೆಯನ್ನೂ ಮಾಡುತ್ತಾರಂತೆ. ಶೈಕ್ಷಣಿಕ ಅವಧಿಯಲ್ಲಿ ಅವರು ಕಾಸರಗೋಡಿನ ಪ್ರಯೋಗಾಲಯದಲ್ಲಿ ಕೈಗೊಂಡ ಓಂದು ಸಂಶೋಧನೆಯ ಫಲವೇ ಅವರ ಉದ್ಯಮ ಆರಂಭಕ್ಕೆ ಕಾರಣವಾಗಿದೆ ಎನ್ನುತ್ತಾರೆ. ರಂಗಭೂಮಿ ಮತ್ತು ಚಿತ್ರರಂಗದ ಹಿನ್ನೆಲೆಯಿದ್ದರೂ ಉದ್ಯಮಿಯಾಗಿದ್ದು ಯಾಕೆ ಎಂದು ಪ್ರಶ್ನಿಸಿದರೆ ಅದು ತನ್ನ ಆಯ್ಕೆಯಾಗಿರಲಿಲ್ಲ ನನಗೆ ಇಷ್ಟವಾಗಿದ್ದನ್ನೆ ಮಾಡಿದ್ದೇನೆ ಶಾಲಾ ದಿನಗಳಲ್ಲಿ ನಟಿಸಿದ್ದು ನೃತ್ಯ ಮಾಡಿದ್ದು ಬಿಟ್ಟರೆ ಮತ್ತೇ ಬೇರೆನಿಲ್ಲ, ನನ್ನ ಅಮ ನನಗೆ ಇಂಥದ್ದನ್ನೇ ಮಾಡು ಎಂದೇನೂ ಒತ್ತಡ ಹೇರಿಲ್ಲ, ಪ್ರಕೃತಿಯ ನಡುವೆ ಹೆಚ್ಚು ಕಳೆದಿದ್ದರಿಂದ ನನ್ನ ಆಲೋಚನಾ "ಧಾನವೂ ಬೇರೆಯೇ ಆಗಿದೆ, ನಾನು 5ವರ್ಷದವಳಿರುವಾಗ ಅಪ್ಪ ಹೋಗಿದ್ದಾರೆ, ನಾಟಕಗಳನ್ನು ನೋಡಿ ಆನಂದಿಸುತ್ತೇನಷ್ಟೇ ಎನ್ನುತ್ತಾರೆ. 
      ಕಾವ್ಯ ಶಂಕರ್‌ ನಾಗ್‌ ಸಿನಿಮಾ ಜಗತ್ತಿಗೆ ಅಭಿಮುಖವಾಗಿ ವಿಭಿನ್ನ ನೆಲೆಗಟ್ಟಿನಲ್ಲಿ ಹೊಸ ಆಯಾಮಕ್ಕೆ ಕಾಲಿರಿಸಿದ್ದಾರೆ, ಆ ಮೂಲಕ ಸಮಾಜಮುಖಿಯಾಗುವ ಅಪ್ಪನ ಗುಣವನ್ನೇ ಕಾಯ್ದುಕೊಂಡಿದ್ದಾರೆ. ಶಂಕರ್‌ನಾಗ್‌ ರ ಕನಸಿನ ಕುಡಿ ದೇಸೀ ಶೈಲಿಯ ಹ್ಯಾಂಡಿಮೇಡ್‌ ಸೋಪ್‌ ಉದ್ಯಮ ಬೆಳೆಯಲಿ ಕನ್ನಡ ನಾಡಿನಾಧ್ಯಂತ ತನ್ನ ಕಂಪನ್ನು ಪಸರಿಸಲಿ ಎಂದು ಜನತಾ ಮಾಧ್ಯಮ ಹಾರೈಸುತ್ತದೆ. ಕಾವ್ಯ ಶಂಕರ್‌ ನಾಗ್‌ ಮತ್ತು ಮಯೂರ ಕಡೂರ್‌ ತಮ ಉದ್ಯಮದ ಮತ್ತು ಉತ್ಪಾದನೆಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿಯೇwww.dobandar.com  ಮತ್ತು www.dobandar.itshandmade.in  ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿದ್ದಾರೆ ಆಸಕ್ತರು ಭೇಟಿ ನೀಡಬಹುದು, ನೀವು ಕಾವ್ಯ ಶಂಕರ್‌ ನಾಗ್‌ ಗೆ ಗುಡ್‌ ಲಕ್‌ ಹೇಳಿ

Sunday, December 9, 2012

ಜಾತಿ ರಾಜಕಾರಣ ಉಳಿದೀತೇ?


ಅನಾಮತ್ತು 40ವರ್ಷಗಳ ಕಾಲ ಬಿಜೆಪಿಯಲ್ಲಿ ತಳಗಿ-ಬೆಳಗಿ ಅಧಿಕಾರಕ್ಕೆ ಬಂದಮೇಲೆ ಅಧಿಕಾರವನ್ನೂ ಅನುಭವಿಸಿ ಜೈಲಿಗೆ ಹೋಗುವ ದಿಸೆಯಲ್ಲಿ ಅಧಿಕಾರ ಕಳೆದುಕೊಂಡು ತಳಮಳಿಸುತ್ತಿದ್ದ ಬಿ ಎಸ್ ಯಡಿಯೂರಪ್ಪ ತಮ್ಮ ಆಟ ಬಿಜೆಪಿ ಯಲ್ಲಿ ಇನ್ನೂ ನಡೆಯದು ಎಂದು ಗೊತ್ತಾದ ದಿನ ರಾಜೀನಾಮೆ ಬಿಸುಟು ಕರ್ನಾಟಕ ಭಾರತೀಯ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದಾರೆ. ಭಾನುವಾರ ಪಕ್ಷದ ಮೊದಲ ಸಮಾವೇಶವೂ ನಡೆದಿದೆ. ಒಬ್ಬ ಹಿರಿಯ ಮುತ್ಸದ್ದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎತ್ತರಕ್ಕೆ ಬೆಳೆದು ರಾಜ್ಯದಲ್ಲಿ  ಬಿಜೆಪಿಯ ಪ್ರಶ್ನಾತೀತ ನಾಯಕರಾಗಿ ವರ್ಚಸ್ಸು ಇಟ್ಟುಕೊಂಡಿದ್ದ ಬಿಎಸ್ ವೈ ಈಗ ತಮ್ಮ ಪಥ ಬದಲಿಸಿದ್ದಾರೆ. ಬಿಜೆಪಿಗೆ ಪರ್ಯಾಯ ಪಕ್ಷವನ್ನು ರಾಜ್ಯದ ಮಟ್ಟಿಗೆ ಹುಟ್ಟುಹಾಕಿದ್ದಾರೆ. ಇದು ನಿಜಕ್ಕೂ ಪರ್ಯಾಯವೇ ? ಅವರೇನು ಕರ್ನಾಟಕದ ಕರುಣಾನಿಧಿಯೆ?  ಸ್ವಾತಂತ್ರ್ಯ ನಂತರ ಇಂತಹ ಎಷ್ಟೋ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ ಆದರೆ ಅಸ್ಥಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಕೆಜೆಪಿ ಗತಿ ಏನಾಗಬಹುದು? ರಾಷ್ಟ್ರದಲ್ಲಿ ವಿವಿಧ ಆಯಾಮಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ ಅವುಗಳಲ್ಲಿ ಉಳಿದವೆಷ್ಟು? ಕಳೆದು ಹೋದದ್ದೆಷ್ಟು? ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿದೆಯೇ?ಹಾಗಾದರೆ ಅದು ಯಾವ ಮಾನದಂಡದಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜವೇ ಆಗಿದೆ. 

       ಭಾರತ ದೇಶ ಹೇಳಿ ಕೇಳಿ  ಸಂಕೀರ್ಣವಾದ ಜಾತೀಯ ವ್ಯವಸ್ಥೆಯನ್ನೊಳಗೊಂಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಂದು ಜಾತಿಗೂ ತನ್ನದೇ ಆದ ಇತಿಹಾಸವಿದೆ, ಆ ಇತಿಹಾಸಕ್ಕೊಬ್ಬ ವಾರಸುದಾರ, ಅದೇ ನೆಲೆಗಟ್ಟಿನಲ್ಲಿ ದೇವರುಗಳು, ಸ್ವಾಮೀಜಿಗಳು ಇರುವಂತೆಯೇ ರಾಜಕೀಯ ಪುಡಾರಿಗಳು ಇದ್ದಾರೆ. ಅನುಕೂಲಕ್ಕೆ ತಕ್ಕಂತೆ ಬೇಯಿಸಿಕೊಳ್ಳಲು ಜನರ ಭಾವನೆಗಳು ಮಾರಾಟಕ್ಕಿವೆ! ಅಂದಾನುಕರಣೆ, ಮೌಢ್ಯ ಇವುಗಳನ್ನೆ ಬಂಡವಾಳ ಮಾಡಿಕೊಳ್ಳುವ ದುಷ್ಟ ಹಿತಾಸಕ್ತಿಗಳು ಸಮಾಜದ ವಿವಿಧ ಸ್ಥರದಲ್ಲಿ ಮನೆ ಮಾಡಿರುವುದರಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರನ್ನು ಬಳಸಿಕೊಂಡು ಬಿಡುತ್ತಾರೆ. ಖಾವಿ-ಖಾದಿ ದೇಶವನ್ನು ಒಡೆದು ಆಳುವ ನಿಟ್ಟಿನಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಪ್ರಧಾನ ಸ್ಥಾನಕ್ಕೆ ಬಂದು ಕುಳಿತಿವೆ.ಜಗತ್ತಿನ  ಸುಮಾರು 136 ರಾಷ್ಟ್ರಗಳಿಗೆ ಮಾದರಿಯಾದ ಶ್ರೇಷ್ಠ ಸಂವಿಧಾನವನ್ನು ಭಾರತ ದೇಶ ಹೊಂದಿದ್ದರೂ ಸಹಾ ಖಾವಿ ಮತ್ತು ಖಾದಿಗಳ ಅಂದಾ ದರ್ಬಾರು ಮಾತ್ರ ನಿರಂತರವಾಗಿ ಸಾಗಿದೆ. ದೇಶದ ಒಟ್ಟು ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ತಂದೊಡ್ಡಬಲ್ಲ ಜಾತೀಯ ಸಮಾಜದ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಿದೆ. ಇದಕ್ಕೆ ಆಗಿಂದ್ದಾಗ್ಯೆ ಬುನಾದಿ ಹಾಕುತ್ತ ತಮ್ಮ ಅಸ್ತಿತ್ವ ಜೀವಂತವಾಗಿರುವಂತೆ ಕಾದುಕೊಂಡವರು ರಾಜಕಾರಣಿಗಳು. ಧಾರ್ಮಿಕ ಬಾವನೆಗಳು, ಜಾತೀಯ ವ್ಯವಸ್ಥೆ, ಸ್ಥಳೀಯ ಸಮಸ್ಯೆಗಳು ಹೀಗೆ ಅನೇಕ ಕಾರಣಗಳು ರಾಜಕೀಯ ಪಕ್ಷಗಳ ಹುಟ್ಟಿಗೆ ಕಾರಣವಾಗುತ್ತವೆ. ಆದರೆ ವೈಯುಕ್ತಿಕ ಲಾಭಗಳಿಗಾಗಿ ಕಾಟಾಚಾರಕ್ಕೆ ಯಾವುದಾದರೊಂದ ಸಮಸ್ಯೆಯನ್ನು ಮುಂದು ಮಾಡಿಕೊಂಡು ಬೆಳೆದು ಬಿಡುವ ಹುನ್ನಾರವು ಇರುತ್ತದೆ. ಈ ದಿಸೆಯಲ್ಲಿ ಒಂದು ಸಣ್ಣ ಇಣುಕು ನೋಟವನ್ನು ಹಾಕಬಹುದು. 

      ಸ್ವಾತಂತ್ರ್ಯ ನಂತರ ಮೊದಲು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನದೇ ಆದ ಧ್ಯೇಯ ಧೋರಣೆಗಳನ್ನಿಟ್ಟುಕೊಂಡು ಅಧಿಕಾರ ನಡೆಸಿತು. ಇದಕ್ಕೆ ಪರ್ಯಾಯವಾಗಿ ಅನೇಕ ಪಕ್ಷಗಳು ಹುಟ್ಟಿಕೊಂಡವು. ಜನತಾ ಪಕ್ಷ ಮತ್ತು ನ್ಯಾಷನಲ್ ಫ್ರಂಟ್ ಆ ಸಾಲಿನಲ್ಲಿ ಬಂದ ಪ್ರಮುಖ ರಾಷ್ಟ್ರೀಯ ಪಕ್ಷಗಳು. ಇದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳು ಸಹಾ ತಮ್ಮ ಛಾಪನ್ನು ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿವೆ. ಈ ಪೈಕಿ ಮೊದಲ ಸಾಲಿನಲ್ಲಿ ಕಾಣ ಬರುವುದು ತಮಿಳು ನಾಡು ರಾಜ್ಯದ ಡಿಎಂಕೆ ಪಕ್ಷ. ತಮಿಳುನಾಡಿನ ಇ ವಿ ರಾಮಸ್ವಾಮಿ ನಾಯ್ಕರ್ ರಿಂದ 1925ರಲ್ಲಿ ಪುರೋಹಿತಷಾಹಿ ವ್ಯವಸ್ಥೆಯ ವಿರುದ್ದ ನಡೆಸಿದ ಆಂಧೋಲನಕ್ಕೆ ಪ್ರಾದೇಶಿಕ ಪಕ್ಷದ ರೂಪು ಸಿಕ್ಕಿತ್ತು.ಮುಂದೆ ರೂಪಾಂತರಗೊಂಡು ಡಿಎಂಕೆ ಎಂದು ನಾಮಕರಣ ಗೊಂಡ ಪಕ್ಷ ಹಿಂದಿ ಭಾಷೆಯ ಹೇರಿಕೆ ವಿರುದ್ದ ನಡೆಸಿದ ಚಳುವಳಿಯಲ್ಲಿ ಯಶಸ್ಸು ಕಂಡಿತಲ್ಲದೇ 1967ರಲ್ಲಿ ತಮಿಳು ನಾಡಿನ ರಾಜಕಾರಣದಲ್ಲಿ ತನ್ನ ಅಸ್ಥಿಭಾರವನ್ನು ಸ್ಥಾಪಿಸಿತು. 1968ರಲ್ಲಿ ಕರುಣಾನಿಧಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದು ಈಗ ಇತಿಹಾಸ!

      ಪಕ್ಕದ ಆಂಧ್ರ ಪ್ರದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡ ಎನ್ ಟಿ ರಾಮರಾವ್ ತೆಲುಗು ಸಿನಿಮಾಗಳಲ್ಲಿ ರಾಮ-ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ನಟಿಸುತ್ತಾ ಜನರ ಮನಸ್ಸನ್ನು ಆವರಿಸಿಕೊಂಡು ರಾಜಕೀಯ ಪ್ರವೇಶಿಸಿ ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದ್ದಲ್ಲದೇ 1983ರಲ್ಲಿ ಮುಖ್ಯ ಮಂತ್ರಿಯಾಗಿ ಆಳಿದ್ದು ಸಾಧನೆಯೇ ಸರಿ.ಪಂಜಾಬ್ ನಲ್ಲಿ ಗುರುಧ್ವಾರ ದ ನಿಯಂತ್ರಣದಲ್ಲಿ 1920ರಲ್ಲಿಯೇ ಸ್ಥಾಪನೆಗೊಂಡ ಅಕಾಲಿದಳ ಸಾಂಪ್ರದಾಯಿಕ ಸಿಖ್ ಪರಂಪರೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕತೆಗಾಗಿ ಹೋರಾಟ ನಡೆಸಿತಲ್ಲದೇ ಮುಂದೆ 1985ರಲ್ಲಿ ಅಧಿಕಾರಕ್ಕೂ ಬರುವಲ್ಲಿ ಯಶಸ್ವಿಯಾಗಿತ್ತು. ಜುಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ಥಿತ್ವದಲ್ಲಿದ್ದ ಆಲ್ ಇಂಡಿಯಾ ಮುಸ್ಲಿಂ ಲೀಗ್ ವಿರುದ್ಧ ಅಲೆಯಲ್ಲಿ ಜನ್ಮ ತಳೆದ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಶೇಕ್ ಮೊಹಮ್ಮದ್ ಅಬ್ದುಲ್ಲಾ ನೇತೃತ್ವದಲ್ಲಿ ಮಂಚೂಣಿಗೆ ಬಂತು. ಅಂದಿನ ಪ್ರಧಾನಿ ನೆಹರೂ ಜೊತೆ ನಿಕಟವಾಗಿದ್ದ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ 1980ರ ವೇಳೆಗೆ ಅಧಿಕಾರ ಹಿಡಿಯುವಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಯಶ ಕಂಡಿತ್ತು. ಈಗಲೂ ಅದೇ ಆಡಳಿತ ನಡೆಸುತ್ತಿದೆ. 1980ರಲ್ಲಿ ಅಸ್ಸಾಂ ರಾಜ್ಯದಲ್ಲಿ ಜನ್ಮತಳೆದ ಮತ್ತೊಂದು ಪ್ರಾದೇಶಿಕ ಪಕ್ಷ ಅಸ್ಸಾಂ ಗಣ ಪರಿಷತ್. ಅಸ್ಸಾಂ ಗೆ ಮುಸ್ಲಿಂ ಬೆಂಗಾಲಿಗಳು ಮತ್ತು ಬಾಂಗ್ಲಾದೇಶಿಯರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬಂದು ಅಸ್ಸಾಂ ಮಿಗಳೇ ಅಲ್ಪಸಂಖ್ಯಾತರಾಗುವ ಸಂಧರ್ಭ ಬಂದಾಗ ಜನ್ಮ ತಾಳಿದ್ದೇ ಅಸ್ಸಾಂ ಗಣಪರಿಷತ್  ಅಲ್ಲಿ ನೆಲೆ ಕಂಡಿದೆಯಷ್ಟೇ ಅಲ್ಲ ಇವತ್ತಿಗೂ ಅದೇ ಸಮಸ್ಯೆಯಲ್ಲೇ ಪರಿತಪಿಸುತ್ತಿದೆ.

      ಇದೇ ರೀತಿ ಜಾತಿಯಾಧಾರದಲ್ಲಿ ರೂಪುಗೊಂಡ ಪಕ್ಷಗಳನ್ನು ಸಹಾ ದೇಶದಲ್ಲಿ ಕಾಣಬಹುದು. ದಲಿತರು-ಹಿಂದುಳಿದವರು-ಶೋಷಿತರನ್ನು ಸಂಘಟಿಸಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದ ಜನತಾದಳ, ಉತ್ತರ ಪ್ರದೇಶದಲ್ಲಿ ನೆಲೆ ಕಂಡುಕೊಂಡ ಮುಲಯಾಲಂ ಸಿಂಗ್ ಯಾದವ್ ರ ಸಮಾಜವಾದಿ ಪಕ್ಷ, ಕಾನ್ಷಿರಾಂ ಸ್ಥಾಪಿಸಿದ ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ ಪಿ)  ತನ್ನ ಸಿದ್ದಾಂತಗಳಲ್ಲಿ ಕೊಂಚ ರಾಜೀ ಮಾಡಿಕೊಂಡು ಬೆಳೆದ ಪರಿಣಾಮ ಇವತ್ತು ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಅನುಭವಿಸಿದ ಪ್ರಾದೇಶಿಕ ಪಕ್ಷಗಳಾಗಿವೆ.ಕರ್ನಾಟಕ ರಾಜ್ಯದಲ್ಲೂ ಅನೇಕ ಪ್ರಾದೇಶಿಕ ಪಕ್ಷಗಳನ್ನು ಅನೇಕ ಘಟಾನುಘಟಿಗಳು ಸ್ಥಾಪಿಸಿದ್ದಾರೆ ಆದರೆ ಅವುಗಳ ಪೈಕಿ ಅಧಿಕಾರ ಹಿಡಿದದ್ದು ಜಾತ್ಯಾತೀತ ಜನತಾ ದಳ ಒಂದೆ.

      ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪಡಿಸಿ 7ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಆಗಿ ಹೋಗಿವೆ. ಇವುಗಳ ಪೈಕಿ ಕೊಡಗು ರಾಜ್ಯದ ಪ್ರತ್ಯೇಕತೆಗಾಗಿ ಕೂರ್ಗ್ ನ್ಯಾಷನಲ್ ಕೌನ್ಸಿಲ್ ಅನ್ನು ಎನ್ ಯು ನಾಚಪ್ಪ ಸ್ಥಾಪಿಸಿದ್ದರೆ, ವಾಟಾಳ್ ನಾಗರಾಜ್ , ಕನ್ನಡ ಚಳುವಳಿ ವಾಟಾಳ್ ಪಕ್ಷ, 1994ರಲ್ಲಿ ಎಸ್ ಬಂಗಾರಪ್ಪ ಸ್ಥಾಪಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷ, 1978ರಲ್ಲಿ ಕಾಂಗ್ರೆಸ್ ಒಡಕಿನಿಂದ ಹುಟ್ಟಿಕೊಂಡ ಕರ್ನಾಟಕ ಕ್ರಾಂತಿ ರಂಗ ಪಕ್ಷದ ನೇತೃತ್ವ ವಹಿಸಿದ್ದು ಮಾಜಿ ಮುಖ್ಯ ಮಂತ್ರಿ ಡಿ ದೇವರಾಜ್ ಅರಸ್, 20ವರ್ಷಗಳ ಇವರ ರಾಜಕೀಯ ಬದುಕಿನಲ್ಲಿ ಕಡೆಗೆ ಉಳಿಸಿದ್ದು ಅರಸು ಕಾಂಗ್ರೆಸ್! ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್, ವಿಜಯಸಂಕೇಶ್ವರ್ ಸ್ಥಾಪಿಸಿದ ಕರ್ನಾಟಕ ವಿಕಾಸ ಪಕ್ಷ, ಅರಸು ಸಂಯುಕ್ತ ಪಕ್ಷ,ಗುಂಡೂರಾವ್ ನೇತೃತ್ವದ ಇಂದಿರಾ ಕಾಂಗ್ರೆಸ್ ಜನತಾ ಪಕ್ಷ ಚೂರಾಗಿ ರಾಮಕೃಷ್ಣ ಹೆಗಡೆ ನೇತೃತ್ವದ ಒಂದು ದಳ, ದೇವೆಗೌಡರ ಇನ್ನೊಂದು ದಳ, ಸಂಯುಕ್ತ ದಳ ಹೀಗೆ ಯಾವುವೂ ನೆಲೆ ಕಂಡು ಕೊಳ್ಳಲು ವಿಫಲವಾದವು. ವಿಶ್ವವೇ ನಿಬ್ಬೆರಗಾಗುವಂತಹ ವಿಧಾನಸೌಧವನ್ನು ಅಮೃತ ಶಿಲೆಯಿಂದ ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕಟ್ಟಿದ ಸ್ವರಾಜ್ಯ ಪಕ್ಷ ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿದೆ.

      ಹೀಗೆ ರಾಜ್ಯದ ಇತಿಹಾಸದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಇಲ್ಲದ ಸಂಧರ್ಭದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ರೆಡ್ಡಿ ಪಡೆಯ ಶ್ರೀರಾಮುಲು ನೇತೃತ್ವದಲ್ಲಿ ಬಿಎಸ್ ಆರ್ ಪಕ್ಷ ಮತ್ತು ಇದೀಗ ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದ್ದಾರೆ. ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಉಳಿಸಿಕೊಳ್ಳಲು ತನ್ನದೇ ಆದಂತಹ ಗಟ್ಟಿತನದ ಅಂಶಗಳು ಕಾರಣವಾಗಿದ್ದರೆ, ರಾಜ್ಯದಲ್ಲಿ ಬಹುತೇಕ ವಾಗಿ ಅಧಿಕಾರ ವಂಚಿತರು ಅಧಿಕಾರ ದಾಹದಿಂದ ಸ್ಥಾಪಿಸಿದ ಪ್ರಾದೇಶಿಕ ಪಕ್ಷಗಳಾಗಿದ್ದವು ಇವಕ್ಕೆ ನಿರ್ದಿಷ್ಟ ನೈತಿಕ ನೆಲೆಗಟ್ಟು ಇಲ್ಲವಾದ್ದರಿಂದ ಹಾಗೆಯೇ ಮರೆಗೆ ಸರಿದವು. ರೆಡ್ಡಿ ಪಾಳಯದ ಬಿಎಸ್ ಆರ್ ಪಕ್ಷ ಕೂಡ ಕಾಂಗ್ರೆಸ್ ಸಖ್ಯ ಹೊಂದಿ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಪರಿತಪಿಸುತ್ತಿದೆ. ಒಂದೊಮ್ಮೆ ಬಿಜೆಪಿ ಪಾಳಯದಲ್ಲಿ ಹಣದ ಹೊಳೆಯನ್ನೇ ಹರಿಸಿ ಅತ್ಯಂತ ಕೆಟ್ಟ ರಾಜಕೀಯ ಸನ್ನಿವೇಶಕ್ಕೆ ಕಾರಣವಾಗಿದ್ದ ಬಿಎಸ್ ಆರ್ ಪಕ್ಷ ಈಗ ಪಶ್ಚಾತ್ತಾಪದ ಹಾದಿಯಲ್ಲಿದ್ದು ಇನ್ನಷ್ಟೇ ತನ್ನ ಹಣೆ ಬರಹವನ್ನು ಪರೀಕ್ಷೆಗೆ ಒಡ್ಡಬೇಕಿದೆ. ದೇಶದಲ್ಲಿಯೇ ಅತ್ಯಂತ ಕೆಟ್ಟ ಆಡಳಿತ ಮತ್ತು ಭ್ರಷ್ಟಾಚಾರದಿಂದ ನಾಚಿಕೆ ಪಡುವಂತ ಸ್ಥಿತಿಯನ್ನು ರಾಜ್ಯಕ್ಕೆ ತಂದೊಡ್ಡಿದ್ದ ಬಿ ಎಸ್ ಯಡಿಯೂರಪ್ಪ ಇವತ್ತು ಪ್ರವರ್ಧಮಾನಕ್ಕೆ ಬರಲು ಮತ್ತು ಮಹತ್ವದ ಪ್ರಾದೇಶಿಕ ಪಕ್ಷ ಜನಿಸಲು ಕಾರಣ  ಮತ್ತೊಂದು ಪ್ರಾದೇಶಿಕ ಪಕ್ಷದ ಅಪ್ಪ-ಮಕ್ಕಳ  ಸ್ವಾರ್ಥದ ರಾಜಕೀಯ! ಕರ್ನಾಟಕ ಜನತಾ ಪಕ್ಷದ ಉದ್ದೇಶವೂ ಸಹಾ ರಾಜ್ಯದಲ್ಲಿ ಅಧಿಕಾರ ಹಿಡಿಯುವುದೇ ಆಗಿದೆ, ಮತ್ತು ಪ್ರಮುಖವಾಗಿ ಜಾತೀಯ ರಾಜಕಾರಣದ ದುರ್ಗಂಧ ಎಲ್ಲೆಡೆಯೂ ಆಘ್ರಾಣಿಸಲು ಸಿಗುತ್ತಿದೆ, ಇಲ್ಲಿಯೂ ಅಪ್ಪ-ಮಕ್ಕಳ ದರ್ಬಾರು, ಮತ್ತು ಬಿಜೆಪಿಯಲ್ಲಿ ಕಳಂಕಿತರಾಗಿದ್ದ ಅನೇಕ ಜನಪ್ರತಿನಿಧಿಗಳನ್ನು ಒಳಗೊಂಡಿರುವುದು ಪಕ್ಷದ ಉಳಿವನ್ನು ಚುನಾವಣೆಯಲ್ಲಿ ಅಗ್ನಿಪರೀಕ್ಷೆಗೆ ಒಡ್ಡಲಿದೆ. ಇವೆರೆಡೂ ಪಕ್ಷಗಳಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಮುಖ್ಯವಾಗಿರುವುದರಿಂದ ಮತ್ತು ಸೈದ್ದಾಂತಿಕ ನೆಲಗಟ್ಟು ಇಲ್ಲದಿರುವುದರಿಂದ ಭವಿಷ್ಯದಲ್ಲಿ ಇವು ನಶಿಸುವುದು ನಿಶ್ಚಿತ ಎಂದೆನಿಸುತ್ತಿದೆ, ನಿಮಗೆ ಏನನಿಸೀತೋ?


Friday, November 16, 2012

'ಗಿರಿ'ಶಿಖರವೇರಿದ ಹಳ್ಳಿಹೈದ!ಹೊಸನಗರ ಗಿರೀಶ್ ನಾಗರಾಜೇಗೌಡ ವಿಶ್ವ ಒಲಿಂಪಿಕ್ಸ್ ನ  ಕ್ರೀಡಾಪುಟಗಳ ಇತಿಹಾಸದಲ್ಲಿ ಸಾಧನೆಯ ಶಿಖರಕ್ಕೇರಿದ ನವಪೀಳಿಗೆಯ ತರುಣ,ಈಗ ಎಲ್ಲರಿಗೂ ಚಿರಪರಿಚಿತ ಹೆಸರು. ಪ್ಯಾರಾಲಿಂಪಿಕ್ಸ್ ಗೂ ಮುನ್ನ ಏಷ್ಯನ್ ಗೇಮ್ಸ್, ಸೇರಿದಂತೆ 4ಪ್ರಮುಖ ಕ್ರೀಡಕೂಟದಲ್ಲಿ ಪದಕದ ಸಾಧನೆಯನ್ನು ಮಾಡಿದ್ದರೂ ಅಪರಿಚಿತವಾಗಿಯೇ ಉಳಿದಿದ್ದ ಗಿರೀಶ ಆಗ ಅನುಭವಿಸಿದ ನೋವು ಸಂಕಟ, ಅಪಮಾನ ಆತನನ್ನು ಒಂದೇ ಒಂದು ಗೆಲುವಿಗಾಗಿ ಹಂಬಲಿಸುವಂತೆ ಮಾಡಿತ್ತು ಅದನ್ನು  ಪ್ಯಾರಾಲಿಂಪಿಕ್ಸ್ ಮೂಲಕ ದಕ್ಕಿಸಿಕೊಂಡ ಗಿರೀಶ್  ಇವತ್ತು ಗೆಲುವಿನ ಹೆಬ್ಬಾಗಿಲನ್ನು ದಾಟಿ ಜಗತ್ತಿಗೆ ತನ್ನ ಶ್ರೇಷ್ಠತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟರ ಮಟ್ಟಿಗೆ ಆತ ತನ್ನ ಹುಟ್ಟೂರಿಗೆ ಮತ್ತು ಭಾರತ ದೇಶಕ್ಕೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತಂದಿದ್ದಾನೆ. ಗೆಲುವಿಗೆ ಮುನ್ನ ಆತ ಸಾಗಿ ಬಂದ ಹಾದಿ ಸುಲಭದ್ದೇನೂ ಆಗಿರಲಿಲ್ಲ, ಯಾವುದೇ ಸೌಲಭ್ಯಗಳಿಲ್ಲದೇ, ಗಾಡ್ ಫಾದರ್ ಗಳಿಲ್ಲದೇ ಆರ್ಥಿಕ ಸಂಕಷ್ಟದ ನಡುವೆಯೂ ಗಿರೀಶ ಬೆಳ್ಳಿ ಹುಡುಗನಾಗಿ ಬೆಳೆದು ನಿಂತ ಬಗೆ  ಹೇಗೆ ಗೊತ್ತೇ?

ಅರಕಲಗೂಡು ತಾಲೂಕಿನ ಗಡಿಭಾಗದಲ್ಲಿ ಬರುವ ಪುನರ್ವಸತಿ ಗ್ರಾಮ ಹೊಸನಗರದ ಕೃಷಿಕ ನಾಗರಾಜೇಗೌಡ ಹಾಗೂ ಜಯಮ್ಮ ದಂಪತಿಗಳ 2ನೆಯ ಪುತ್ರ ಗಿರೀಶ. ಹುಟ್ಟಿದ್ದು ಜನವರಿ 26, 1988ರ ಗಣರಾಜ್ಯೋತ್ಸವ ದಿನದಂದು. ಹೇಮಾವತಿ ನದಿ ಯೋಜನೆಯಲ್ಲಿ ಸಂತ್ರಸ್ತರಾದವರ ಪುನರ್ವಸತಿ ಗ್ರಾಮ ಹೊಸನಗರ ತಾಲೂಕಿನ ಕೊಡಗು ಗಡಿ ಭಾಗದಲ್ಲಿ ಈ ಗ್ರಾಮ ಇಂದಿಗೂ ಅಭಿವೃದ್ದಿಯಿಂದ ಮೂಲ ಸೌಕರ್ಯಗಳಿಂದ ದೂರ ದೂರ. ಗ್ರಾಮದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಗಿರೀಶನ ಓದು ಆರಂಭ, ನಂತರ ಮರಿಯಾನಗರದಲ್ಲಿ ಅಧ್ಯಯನ ಮುಂದುವರಿಕೆ ಆ ಸಂಧರ್ಬದಲ್ಲಿ ನಡೆದ ಶಾಲಾ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ಈತ ಅಂಗವಿಕಲನೆನ್ನುವ ಕಾರಣಕ್ಕೆ ತಿರಸ್ಕರಿಸಲಾಯಿತು. ಇದರಿಂದ ತೀವ್ರವಾಗಿ ಮನನೊಂದ ಎಳೆಯ ಗಿರೀಶನನ್ನ ಆದರಿಸಿ ಆಡಲು ಮೊದಲು ಅವಕಾಶ ನೀಡಿದ್ದು ಅದೇ ಶಾಲೆಯ ಮುಖ್ಯ ಶಿಕ್ಷಕಿ ಮೇರೀ ಟೀಚರ್. ಬೆಳ್ಳಿಯ ನಗೆ ಬೀರಿದಾಗ ಮೊದಲಿಗೆ ಗಿರೀಶ ನೆನೆದದ್ದು ಮೇರಿ ಟೀಚರ್ ಅನ್ನೇ. ಮುಂದೆ ಬನ್ನೂರು ಹೈಸ್ಕೂಲಿನಲ್ಲಿ ಕಲಿಯುವಾಗ ನಡೆಯುತ್ತಿದ್ದ ಶಾಲಾ ಕ್ರೀಡಾ ಕೂಟಗಳಲ್ಲಿ ಗಿರೀಶನಿಗೆ ಆಡುವ ಅವಕಾಶವೇ ಸಿಗುತ್ತಿರಲಿಲ್ಲ ಬದಲಿಗೆ ತನ್ನ ಸಹಪಾಠಿ ಆಟಗಾರರ ಬಟ್ಟೆ ಹಿಡಿದು ಕಾಯುವ ಕೆಲಸ, ಅಪ್ಪಿ ತಪ್ಪಿ ಆಟಗಾರರ ಬ್ಯಾಟು, ಚೆಂಡು ಹಿಡಿದು ಆಡುವ ಪ್ರಯತ್ನ ಮಾಡಿದರೆ ಹಿಯಾಳಿಕೆಯ ಮಾತು. ಪಿಯುಸಿ ಗೆ ಕೊಡಗು ಜಿಲ್ಲೆಯ ಕ್ರೀಡಾ ಶಾಲೆಯಲ್ಲಿ ಅವಕಾಶ ಗಿಟ್ಟಿಸಿದ ಅಲ್ಲಿ ಮೊದಲಿಗೆ ಸಾಧನೆಯ ಪ್ರಯತ್ನ, ಮುಂದೆ ಹಾಸನದ ಗೊರೂರು ಎಎನ್ ವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟ ಆಡುವ ಅವಕಾಶಕ್ಕೆ ಕಾತುರ, ಒಮ್ಮೆ ಹೇಗೋ ಅವಕಾಶ ಗಿಟ್ಟಿಸಿ  ಹಿಂದಿನ ದಿನವೇ ಹಾಸನದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರೀಡಾಂಗಣಕ್ಕೆ ಬಂದರೆ ಮರುದಿನ ಈತ ಅಂಗವಿಕಲನೆನ್ನುವ ಕಾರಣಕ್ಕೆ ಅವಕಾಶ ನಿರಾಕರಣೆ, ಆದರೂ ಪರಿ ಪರಿಯಾಗಿ ವಿನಂತಿಸಿ ಅವಕಾಶ ಗಿಟ್ಟಿಸಿದ ಗಿರೀಶ್ ಅವತ್ತೇ ಹೈಜಂಪ್ ನಲ್ಲಿ ರಜತ ಪದಕ ಪಡೆದಿದ್ದ, ಅವರ ಕಾಲೇಜಿಗೆ ಆ ಕ್ರೀಡಾಕೂಟದಲ್ಲಿ ದಕ್ಕಿದ್ದು ಅದೊಂದೆ ಪದಕ!

ಇಷ್ಟಕ್ಕೂ ಆಟ ಆಡಲು ಬೇಕಾದಷ್ಟು ಕ್ರೀಡೆಗಳಿವೆ ಆದರೂ ಗಿರೀಶ ಹೈ ಜಂಪ್ ಅನ್ನೇ ಆರಿಸಿಕೊಂಡಿದ್ದೇಕೆ? ಎಂಬ ಪ್ರಶ್ನೆ ಏಳುವುದು ಸಹಜ. ಹಳ್ಳಿಗಾಡು ಪ್ರದೇಶದಲ್ಲಿ ಆಟದ ಯಾವುದೇ ಪರಿಕರಗಳಿಲ್ಲ, ಆಡಲು ಸೂಕ್ತ ಮೈದಾನಗಳಿಲ್ಲ ಆದರೆ ಜಿಗಿಯಲು ಮತ್ತು ಓಡಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಹಾಗಾಗಿ ಗಿರೀಶ ತನ್ನ ಕುಟುಂಬದ ಬಡತನದ ನಡುವೆಯೂ ತನ್ನ ಅಂಗವೈಕಲ್ಯವನ್ನು ಮರೆಸುವ ಓಡುವ ಮತ್ತು ಜಿಗಿಯುವ ಆಟದಲ್ಲಿ ತನಗೆ ಅರಿವಿಲ್ಲದಂತೆ ತೊಡಗಿಕೊಂಡ, ಮೊದಲಿಗೆ ಮನೆಯ ಹಿತ್ತಲಲ್ಲಿ ಟೇಪ್ ರೆಕಾರ್ಡರ್ ಕೆಸೆಟ್ ನ ರೀಲನ್ನು ಟೊಂಗೆಗಳಿಗೆ ಕಟ್ಟಿ ಹಾರುತ್ತಿದ್ದವ ಗ್ರಾಮದ ಹುಡುಗರ ಜೊತೆ ಸೇರಿ ಬೀದಿಯಲ್ಲಿ ಓಡೋಡಿ ಬಂದು ಜಿಗಿಯುವ ಪ್ರಯತ್ನ ಮಾಡುತ್ತಿದ್ದ ಅಷ್ಟೇ ಅಲ್ಲ ಕೈಕಾಲು ಚೆನ್ನಾಗಿರುವ ಇತರೆ ಹುಡುಗರೊಂದಿಗೆ ಪಂಥಾಹ್ವಾನ ನೀಡುತ್ತಿದ್ದ. ಆಗ ಹುಟ್ಟಿನಿಂದಲೇ  ಮುರುಟಿ ಹೋದಂತಿದ್ದ  ಎಡಗಾಲು ಪಾದ ನೋವಾಗಿ ರಕ್ತ ಒಸರುತ್ತಿದ್ದರೂ ಹುಡುಗ ಅದನ್ನು ಲೆಕ್ಕಿಸದೇ ಸಾಧನೆ ಮಾಡುತ್ತಲೇ ಹೋದ ಮತ್ತು ಅದೊಂದು ದಿನ ಒಲಿಂಪಿಕ್ಸ್ ಎತ್ತರವನ್ನು ಜಿಗಿದು ಬಿಟ್ಟ!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಕೇವಲ ಹತ್ತು ಮಂದಿ. ಆಗೀಗ ಹಲವು ಪದಕಗಳು ಭಾರತಕ್ಕೆ ಪ್ಯಾರಾಲಿಂಪಿಕ್ಸ್ ನಲ್ಲಿ ದಕ್ಕಿದೆಯಾದರೂ ಇತ್ತೀಚೆನ ದಿನಗಳಲ್ಲಿ ಪೂರಾ ನಿರಾಸೆಯೆ ಇತ್ತು ಪದಕ ಗೆಲ್ಲದಿದ್ದರೂ ತಕ್ಕ ಮಟ್ಟಿಗಿನ ಸಾಧನೆ ಮಾಡಿದ ರಾಜ್ಯದ ಈಜು ಪಟು ಫರ್ಮಾನ್ ಭಾಷಾ ಬಿಟ್ಟರೆ ಅಂತಹ ಹೇಳಿಕೊಳ್ಳುವ ಕ್ರೀಡಾಪಟುಗಳು ಭಾರತದ ಪಟ್ಟಿಯಲ್ಲಿರಲಿಲ್ಲ. ಅಥ್ಲೆಟಿಕ್ಸ್ ನಲ್ಲಿ ಪ್ರತಿನಿಧಿಸಿದ್ದ 5ಮಂದಿ ಪೈಕಿ ಹೆಚ್ಚಿನ ಸಾಧನೆ ಮಾಡಿ ಭರವಸೆ ಮೂಡಿಸಿದ್ದ ಗಿರೀಶ್ ಪದಕ ಗೆಲ್ಲುವ ಫೇವರಿಟ್ ಆಗಿದ್ದರು. ಆದರೂ ಗಿರೀಶ್ ಗೆ ತನ್ನ ಸಾಧನೆಯನ್ನು ಉತ್ತಮ ಪಡಿಸಕೊಳ್ಳುತ್ತೇನೆ ಎಂಬ ಭರವಸೆಯಿತ್ತೇ ವಿನಹ ಬೆಳ್ಳಿ ಗೆಲ್ಲುತ್ತೇನೆ ಎಂಬ ಕನಸು ಇರಲಿಲ್ಲ. ಆದರೂ ಒಲಿಂಪಿಕ್ಸ್ ಕನಸನ್ನು ನಿಜ ಮಾಡಿಕೊಳ್ಳಲು ಹೊಟ್ಟೆ ಪಾಡಿನ ಉದ್ಯೋಗ ಬಿಟ್ಟು , ಗಾಡ್ ಫಾದರ್ ಗಳ ನೆರವಿಲ್ಲದೇ ತನ್ನ ಹಿಂದಿನ ಸಾಧನೆಗಳ ಆಧಾರದಲ್ಲೆ ಲಂಡನ್ ಗೆ ಹೋಗುವ ಅವಕಾಶವನ್ನು ಗಿರೀಶ್ ಗಳಿಸಿದ್ದರು. ಆ ಹೊತ್ತಿಗಾಗಲೇ ಹೈಜಂಪ್ ನಲ್ಲಿ ಭಾರತದ ನಂ.1 ಆಟಗಾರನಾಗಿ ಮತ್ತು ವಿಶ್ವದಲ್ಲಿ ನಾಲ್ಕನೆಯ ಸ್ಥಾನವನ್ನು ಗಿರೀಶ್ ಪಡೆದಿದ್ದರು. ಲಂಡನ್ ಕನಸು ಕಣ್ಣೆದುರಿಗಿತ್ತು ಆದರೆ ಅಲ್ಲಿಗೆ ಹೋಗಲು ಆರ್ಥಿಕ ನೆರವಿಗಾಗಿ ಗಿರೀಶ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆ ಸಂಧರ್ಭದಲ್ಲಿ ತನ್ನ ಸಾಧನೆಯ ಆಧಾರದಲ್ಲಿ ತನಗೇನಾದರೂ ಸರ್ಕಾರಿ ನೌಕರಿ ಸಿಕ್ಕಿತೇ ಎಂದು ಹಾಸನ ಜಿಲ್ಲಾಧಿಕಾರಿ ಕಛೇರಿಗೆ ಹೋದರೆ ಗಂಟೆ ಗಟ್ಟಲೆ ಹೊರಗೆ ಕಾದು ನಿಲ್ಲಬೇಕಾಯ್ತು ಮತ್ತು ತಾತ್ಸಾರದ ಭರವಸೆ ನೀಡಿ ಸಾಗ ಹಾಕಲಾಯಿತು. ಒಮ್ಮೆ ತನ್ನ ಕಾಲಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಬಳಿ ತೆರಳಿ ಫಿಟ್ ನೆಸ್ ಸರ್ಟಿಫಿಕೆಟ್ ಗೆ ವಿನಂತಿಸಿದರೆ ಅವರು ಅದನ್ನು ನಿರಾಕರಿಸಿದರು ಮತ್ತು ಪರಿಚಿತರೊಬ್ಬರ ಮೂಲಕ ಹೇಳಿಸಿದಾಗ ಕಾಟಾಚಾರಕ್ಕೆ ಏನೋ ಒಂದು ಗೀಚಿ ಕಳಿಸಿದರು. ವಿಜಯ ಶಾಲೆ ಮಕ್ಕಳು, ಪೊಟ್ಯಾಟೋ ಕ್ಲಬ್ ಅಲ್ಪ ಪ್ರಮಾಣದ ಆರ್ಥಿಕ ಸಹಾಯ ಮಾಡಿದರೆ ಜಿಲ್ಲಾ ಕಸಾಪ ಸೇರಿದಂತೆ ಒಂದೆರೆಡು ಸಂಸ್ಥಗಳು ಗೆಲುವಿಗೆ ಹಾರೈಸಿ ಲಂಡನ್ ಗೆ ಕಳುಹಿಸಿಕೊಟ್ಟವು. ಈಗ ಗಿರೀಶ ನಿಗೆ ವಿಜಯಲಕ್ಷ್ಮಿ ಒಲಿದು ಬಂದಿದ್ದಾಳೆ ಜೊತೆಗೆ ಧನಲಕ್ಷ್ಮಿಯೂ ಸಹ. ಆದರೂ ಗಿರೀಶ ಸರಳತೆ ಮತ್ತು ಸಜ್ಜನಿಕೆ ಹಾಗೆಯೇ ಇದೆ ಅದೇ ಗಿರೀಶ ಮತ್ತೊಂದು ಸಾಧನೆಗೆ ಕಾದಿದ್ದಾರೆ.

ಗಿರೀಶ್ ಗೆ ಪ್ಯಾರಾಲಿಂಫಿಕ್ಸ್  ಗೆಲುವು ದೊರೆಯುತ್ತಿದ್ದಂತೆ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂದಾಗಿದ್ದು ಬೆಂಗಳೂರಿನ ಸಮರ್ಥನಂ ಎಂಬ ಸಂಸ್ಥೆ. ಗಿರೀಶನನ್ನು ಪ್ರಮೋಟ್ ಮಾಡಿದ್ದೇ ತಾವು, ಅವನ ಸಾಧನೆಯ ಹಿಂದೆ ನಮ್ಮ ಪರಿಶ್ರಮವಿದೆ ಎಲ್ಲ ರೀತಿಯ ಸಹಾಯವನ್ನು ನಾವು ಮಾಡಿದ್ದೇವೆ ಎಂದು ದೇಶೀಯ ಮತ್ತು ವಿದೇಶಿ ಚಾನಲ್ ಗಳಲ್ಲಿ ಪ್ರಚಾರ ಗಿಟ್ಟಿಸಿಬಿಟ್ಟಿತು. ಇದ್ಯಾವುದಿದು ಸಮರ್ಥನಂ ಅಂತ ಪರಿಶಿಲಿಸಿದರೆ ಅನಾವರಣಗೊಂಡ ಸತ್ಯ ಗೆಲುವಿನ ಹಿಂದೆ ಎನ್ ಕ್ಯಾಶ್ ಮಾಡಿಕೊಳ್ಳಲು ಎಂತಹ ವಂಚಕರಿರುತ್ತಾರೆಂಬ ಸತ್ಯವನ್ನು. ಸಮರ್ಥನಂ ಎಂಬ ಸಂಸ್ಥೆ  ಅಂಗವಿಕಲರಿಗೆ ಕಂಪ್ಯೂಟರ್ ತರಬೇತಿ ಮತ್ತು ಕಾಲ್ ಸೆಂಟರ್ ತರಬೇತಿ ನೀಡುವ ಸಂಸ್ಥೆ ಇಲ್ಲಿ ಗಿರೀಶ ಸರ್ಕಾರಿ ಪ್ರಾಯೋಜಕತ್ವದಲ್ಲಿ 4-5ತಿಂಗಳು ತರಬೇತಿ ಪಡೆದಿದ್ದರಷ್ಟೆ ಅದೂ 2011ರಲ್ಲಿ. ಕ್ರೀಡೆಗೆ ಸಂಬಂದಿಸಿದ ಯಾವುದೇ ತರಬೇತಿಯಾಗಲಿ ಸಹಾಯವಾಗಲಿ ಈ ಸಂಸ್ಥೆಯಿಂದ ಆಗಿಲ್ಲ ಆದರೆ ಗಿರೀಶನ ಗೆಲುವಿನ ನೆಪದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮತ್ತು ಸರ್ಕಾರಗಳಿಂದ ಹೊಸ ಪ್ರಾಜೆಕ್ಟ್ ಪಡೆದ ಈ ಸಂಸ್ಥೆಗಳನ್ನು ನಿರ್ಬಂದಿಸುವ ಅಗತ್ಯವಿದೆ. ಸಧ್ಯ ಗಿರೀಶರಿಗೆ ಲಂಡನ್ ಕನ್ನಡಿಗರು ಮತ್ತು ದುಬೈ ಕನ್ನಡಿಗರು ಸತ್ಕರಿಸಿದ್ದಾರೆ ಸಚಿನ್, ಸಲ್ಮಾನ್ ಖಾನ್, ಸೈನಾ ನೆಹ್ವಾಲ್ ಮುಂತಾದವರಿಂದ ಪ್ರೋತ್ಸಾಹ ಸಿಕ್ಕಿದೆ. ದೇಶದ ಪ್ರತಿಷ್ಟಿತ ಸಿಎನ್ ಎನ್ ಐ ಬಿ ಎನ್ ಛಾನಲ್ ಗಿರೀಶನ ಕುರಿತು ಸಾಕ್ಷ್ಯ ಚಿತ್ರ ನಿರ್ಮಿಸಲು ಮುಂದಾಗಿದೆ, ರಾಜ್ಯ ಸರ್ಕಾರ ರಾಜ್ಯೊತ್ಸವದ ಗರಿ ನೀಡಿದೆ ಈಗ ಜಿಲ್ಲಾಡಳಿತವೂ ಸಹಾ ಗಿರೀಶನನ್ನು ಸತ್ಕರಿಸುತ್ತಿದೆ 

Sunday, October 28, 2012

ಸ್ವಾಭಿಮಾನವಿದ್ದರೆ ಕನ್ನಡಿಗರಾಗಿ ಬದುಕಿ!


ಮತ್ತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಬಂದಿದೆ, ಆದರೆ ಸಂಭ್ರಮ ಪಡುವ ಸ್ಥಿತಿಯಲ್ಲಿ ಕನ್ನಡಿಗರಿಲ್ಲ.! ಕನ್ನಡದ ಬಗೆಗಿನ ಪ್ರೀತಿಯಿದ್ದರೂ   ಯಾಂತ್ರಿಕ ಬದುಕಿನಲ್ಲಿ ಅವೆಲ್ಲ ಕಳೆದು ಹೋಗುತ್ತವೆ ಎಂಬುದು ಸತ್ಯ ವಾದರೂ ಅದು ಕನ್ನಡಿಗರ ಪಾಲಿನ ದೌರ್ಬಾಗ್ಯವೂ ಹೌದು.  ದೇಶದಲ್ಲಿ ಒಕ್ಕೂಟ ರಾಜ್ಯ ವ್ಯವಸ್ಥೆ ಬಂದು ಅನಾಮತ್ತು 62ವರ್ಷ ಕಳೆದಿದೆ, ಮೈಸೂರು ಪ್ರಾಂತ್ಯ ಕರ್ನಾಟಕ ರಾಜ್ಯವಾಗಿ ಅಜಮಾಸು 38ವರ್ಷಗಳಾಗಿವೆ ಆದರೆ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಇನ್ನೂ ನಮ್ಮ ಹೋರಾಟ ಮುಂದುವರೆದಿದೆ! ಇಂತಹ ಪರಿಸ್ಥಿತಿ ನಮಗೆ ಬೇಕಾ? ಯಾಕೆ ಹೀಗಾಯ್ತು ? ಇದನ್ನೆಲ್ಲಾ ನೆನಪಿಸಿಕೊಳ್ಳೋಕೆ ಪ್ರತೀ ಸಲವೂ ಕನ್ನಡ ರಾಜ್ಯೋತ್ಸವವೇ ಬರಬೇಕಾ?ಎಲ್ಲಿಗೆ ಬಂದು ನಿಂತಿದ್ದೇವೆ ನಾವು? ಹೀಗೊಂದು ಪ್ರಶ್ನೆ ನಮ್ಮಲ್ಲಿ ಸಹಜವೇ?

ಪ್ರತೀ ಸಲವೂ ಪ್ರಶ್ನೆಗಳೇನೋ ಇರುತ್ತವೆ ಆದರೆ ಆ ಕ್ಷಣಕ್ಕೆ ಮಾತ್ರ , ಸ್ವಾಭಿಮಾನದ ಕೊರತೆಯೋ ಗೊತ್ತಿಲ್ಲ ಆದರೆ ಜಾಗತೀಕರಣದ ಪ್ರಭಾವ ಕನ್ನಡದ ನೆಲದ ಕಗ್ಗಂಟಿಗೆ ಕಾರಣ ವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಉಳಿದಿಲ್ಲ. ಜಾಗತೀಕರಣವೇ ಹಾಗೆ ಕಾಲು ಚಾಚಿದೆಡೆ ಸಂಸ್ಕೃತಿಯ ಮೂಲ ಬೇರನ್ನೆ ಅದು ಕತ್ತು ಹಿಸುಕಿ ಬಿಡುತ್ತದೆ ಮತ್ತು ಒಂದು ದಿನ ಸದ್ದಿಲ್ಲದಂತೆ ಜಾಗ ಖಾಲಿ ಮಾಡಿಬಿಡುತ್ತದೆ. ದೇಶೀಯ ಸಾಂಸ್ಕೃತಿಕ ನೆಲೆಗಟ್ಟನ್ನ ಮಲೀನ ಗೊಳಿಸುತ್ತಿರುವ ಉದಾರೀಕರಣದ ಪ್ರಭಾವ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಾಗಿದ್ದರೆ ಅದು ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ. ಅಲ್ಲೀಗ ಶೇ.30-35 ರಷ್ಟು ಮಾತ್ರ ಕನ್ನಡದ ಮಂದಿ ಸಿಗಲು ಸಾಧ್ಯ ಉಳಿದಂತೆ ವಿವಿಧ ರಾಜ್ಯಗಳ, ದೇಶಗಳ ಮಂದಿ ವಿವಿಧ ಕಾರಣಗಳಿಗಾಗಿ ಎಲ್ಲಡೆಯೂ ನೆಲೆಸಿದ್ದಾರೆ. ಕನ್ನಡ ಭಾಷೆಗೆ 20ಸಾವಿರ ವರ್ಷಗಳ ಪ್ರಾಚೀನ ಇತಿಹಾಸವಿದೆ ರಾಜ್ಯದಲ್ಲಿ ಕನ್ನಡ ಮಾತನಾಡುವ 70ಮಿಲಿಯನ್ ಕನ್ನಡಿಗರಿದ್ದಾರೆಂಬ ಅಂದಾಜಿದೆ, ಹಾಗೆಯೇ ಜಾಗತಿಕವಾಗಿ ಅತೀ ಹೆಚ್ಚು ಮಾತನಾಡುವ 40ಪ್ರಮುಖ ಭಾಷೆಗಳಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನವಿದೆ. ಅಂತಹ ಸಮೃದ್ದ ನುಡಿ ಕನ್ನಡಕ್ಕೆ ಇವತ್ತು ರಾಜ್ಯದಲ್ಲಿ ನೆಲೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸಂಧರ್ಭ ಸೃಷ್ಟಿಯಾಗಿದೆ, ಇದು ದುರಂತ ಅಲ್ಲವೇ?

1952ರಲ್ಲಿ ನಡೆದ ಮಾತೃಭಾಷಾ ಚಳುವಳಿಯ ತೀವ್ರತೆ ಇವತ್ತು ಪ್ರಾದೇಶಿಕವಾಗಿ ರಚನೆಯಾಗಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷೆಯ ಉಳಿವಿಗೆ ಅವಕಾಶ ನೀಡಿದೆಯಾದರೂ ಜಾಗತೀಕರಣದ ಬಿಸಿ ಎಲ್ಲ ಹಂತದಲ್ಲೂ ಕನ್ನಡದ ಉಳಿವಿಗೆ ಅಡ್ಡಿಯಾಗಿದೆ. ಆದರೂ 70ಮಿಲಿಯನ್ ಗೂ ಅಧಿಕ ಮಂದಿ ಮಾತನಾಡುವ ಕನ್ನಡ ಭಾಷೆಯನ್ನು ಯಾರೂ ಸುಲಭವಾಗಿ ಅಳಿಸಲು ಸಾಧ್ಯವಿಲ್ಲ ಎಂಬ ಭಾವನೆ ಇದೆಯಾದರೂ ಬೇರು ಮಟ್ಟದಲ್ಲ ಆಗುತ್ತಿರುವ ಸಂಚಲನಗಳು ಮುಂದೊಂದು ದಿನ ಕನ್ನಡ ಭಾಷಿಕರಿಗೆ ಮತ್ತು ಸಂಸ್ಕೃತಿಗೆ ಅಪಾಯವೇ ಆಗಿದ್ದಾರೆ.1952ರ ಫೆಬ್ರುವರಿ 21ರಲ್ಲಿ  ಬೆಂಗಾಲಿಗಳು ಪೂರ್ವ ಪಾಕಿಸ್ತಾನ(ಈಗಿನ ಭಾಂಗ್ಲಾದೇಶ)ದ ಢಾಕಾ ನಗರದಲ್ಲಿ ನಡೆಸಿದ ಮಾತೃಭಾಷಾ ಚಳುವಳಿಮಾದರಿಯಾಗಬೇಕಿದೆ. ಬದಲಾಗುತ್ತಿರುವ ವಿದ್ಯಮಾನಗಳನುಸಾರ ಪರೋಕ್ಷವಾಗಿ ಕನ್ನಡಕ್ಕೆ ಅಡ್ಡಿಯಾಗುವಂತಹ ಕ್ರಿಯೆಯನ್ನು ಸ್ವತ: ರಾಜ್ಯ ಸರ್ಕಾರವೇ ಮಾಡುತ್ತಿದೆ.  ಮತ್ತು ಬಲಿದಾನ ಮಾತೃಭಾಷೆಯ ಮಹತ್ವನ್ನು ಜಗತ್ತಿಗೆ ಸಾರಿವೆ. ಇದೇ ಇವತ್ತು ಕನ್ನಡ ಭಾಷಿಕರಿಗೆ ರಾಜ್ಯದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಮತ್ತು ಪುನರ್ ಸಂಘಟನೆಯ ನೆಪದಲ್ಲಿ ಕನ್ನಡ ಮಾತೃಭಾಷೆಯ ಕುರಿತು ಕಾಳಜಿಯಿಲ್ಲದ ಅದ್ಯಾರೋ ತಲೆಮಾಸಿದ ದೆಹಲಿಯ ಆಡಳಿತ ಮತ್ತು ಯೋಜನೆಯ ರಾಷ್ಟ್ರೀಯ ವಿವಿ ಕುಲಪತಿ ಡಾ || ಆರ್ ಗೋವಿಂದ ಎಂಬುವವರ ನೇತೃತ್ವದಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 6ಮಂದಿ ಸೇರಿ  ವರದಿಯೊಂದನ್ನು ಸಿದ್ದಪಡಿಸಿ 1-7ನೇ ತರಗತಿಯ 30ಕ್ಕಿಂತ ಕಡಿಮೆ ಮಕ್ಕಳಿರುವ  12740ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಸಮಿತಿಯಲ್ಲಿ ಕರ್ನಾಟಕ ರಾಜ್ಯ ಮಾನವ ಸಂಪನ್ಮೂಲಾಭಿವೃದ್ದಿ ಕೇಂದ್ರದ ಪ್ರತಿನಿಧಿಯಾಗಿ ಸುರೇಶ್ ಅಂಗಡಿ ಸಹಾ ಇದ್ದಾರೆ. ವರದಿಯಲ್ಲಿ ಸಮಿತಿ ಹೇಳಿರುವುದಾದರೂ ಏನು ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದ್ದು ಶಾಲೆಗಳಿಗೆ ಅಗತ್ಯ ಸಂಖ್ಯೆಯ ಮಕ್ಕಳು ಲಭ್ಯರಿಲ್ಲ ಆದ್ದರಿಂದ ಶಾಲೆಗಳನ್ನು ಮುಚ್ಚುವ ಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದೆ. ವಾಸ್ತವದಲ್ಲಿ ಶಿಕ್ಷಣ ಇಲಾಖೆ ನೀಡುವ ಮಾಹಿತಿಯನುಸಾರವೇ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 68301. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪ್ರಮಾಣ ಶೇ.85, ಬಡತನ ಮತ್ತು ಸಾಮಾಜಿಕ ಅಸಮಾನತೆಯ ಕಾರಣಗಳಿಗಾಗಿ ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತವಾಗಿವೆ ಹೀಗಿರುವಾಗ ಈ ವಾಸ್ತವವನ್ನು ಮರೆಮಾಚಿ ಗೋವಿಂದ ವರದಿಯ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಕ್ರಿಯೆಯನ್ನು ಒಪ್ಪಲು ಸಾಧ್ಯವೇ, ಇದನ್ನು ನೀವು ಅರಿಯಬೇಕು, ಸೂಕ್ಷ್ಮ ಸಂವೇದನೆಯ ಮನಸ್ಸಿನವರಾಗಿದ್ದರೆ, ಸ್ವಾಭಿಮಾನವಿದ್ದರೆ ಗೋವಿಂದ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕ್ರಿಯೆಗಳು ಆಗಬೇಕು. 

ಕರುನಾಡಿಗೆ ಗಡಿ ಸಮಸ್ಯೆ ಇಂದು ನೆನ್ನೆಯದಲ್ಲ, ಒಂದೆಡೆ ಬೆಳಗಾವಿಯಲ್ಲಿ ಮರಾಠಿಗರ ದುಂಡಾವರ್ತನೆ, ಕಾಸರಗೋಡಿನಲ್ಲಿ ಮಲೆಯಾಳಿಗಳು ಕಿರುಕುಳ ನೀಡುತ್ತಿದ್ದರೆ ಬಳ್ಳಾರಿ, ಚಾಮರಾಜ ನಗರದ ಗಡಿ ಪ್ರದೇಶಗಳಲ್ಲಿ ಕ್ರಮವಾಗಿ ತೆಲುಗು ಮತ್ತು ತಮಿಳು ಭಾಷಿಕರಿಂದ ಆತಂಕಕಾರಿ ಕ್ರಿಯೆಗಳು ಆಗಿಂದ್ದಾಗ್ಯೆ ನಡೆಯುತ್ತಲೇ ಇವೆ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವ ಉಮೇಶ್ ಕತ್ತಿ, ವಿಧಾನ ಸಭೆಯ ಸ್ಪೀಕರ್ ಕೆ ಜಿ ಬೋಪಯ್ಯನಂತಹವರು ಪ್ರತ್ಯೇಕ ರಾಜ್ಯದ ಕೂಗಿಗೆ ಒತ್ತಾಸೆಯಾಗಿ ನಿಲ್ಲುವ ಮೂಲಕ ಆಂತರಿಕವಾಗಿಯೇ ಸಮಸ್ಯೆ ಸೃಷ್ಟಿಗೆ ಕಾರಣವಾಗಿದ್ದಾರೆ. ಮೊನ್ನೆ ಮೊನ್ನೆ ಉಮೇಶ್ ಕತ್ತಿ ಒಬ್ಬ ಸಚಿವರಾಗಿ ತನ್ನ ಹುದ್ದೆಯ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವಿಷಬೀಜ ಬಿತ್ತುವ ಹೇಳಿಕೆ ನೀಡಿದ್ದಾರೆ. ಆ ಮೂಲಕ ಆತ ರಾಜ್ಯದ ಸಚಿವನಾಗಿ ಉಳಿಯಲು ಯೋಗ್ಯನಲ್ಲ. ಆದಾಗ್ಯೂ ಈತನ ಹೇಳಿಕೆಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡೆಯೂ ಸಂಶಯಾಸ್ಪದವೇ ಆಗಿದೆ. ಶೆಟ್ಟರ್ ಕೂಡಾ ಉ.ಕ.ಭಾಗದವರೇ ಆಗಿದ್ದು ಇದಕ್ಕೆ ಪೂರಕವಾಗಿದೆ. ಕೊಡಗು ಜಿಲ್ಲೆಯ ಪ್ರತ್ಯೇಕತೆಯ ಹೋರಾಟಕ್ಕೆ ವಿಧಾನ ಸಭಾ ಸ್ಪೀಕರ್ ಆಗಿರುವ ಕೆ ಜಿ ಬೋಪಯ್ಯ ಸಹಮತ ವ್ಯಕ್ತ ಪಡಿಸಿದ್ದು, ಸಚಿವ ಅಸ್ನೋಟಿಕರ್ ಕಾರಾವಾರ ಜಿಲ್ಲೆಯನ್ನು ಗೋವಾಕ್ಕೆ ಸೇರಿಸಿ ಎಂದು ಬೊಬ್ಬೆ ಇಟ್ಟದ್ದು ಇವೆಲ್ಲ ಬೇಕಾ? ಇಷ್ಟೆಲ್ಲ ಆದ ಮೇಲೂ ಉಮೇಶ ಕತ್ತಿ ಕನ್ನಡ ಹೋರಾಟಗಾರರ ಮೇಲೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಒಂದು ವಿಷಯ ತಿಳಿದಿರಲಿ  ಬೆಳಗಾವಿ ಮಹಾನಗರ ಪಾಲಿಕೆ ಮರಾಠಿಗರ ಪಾಲಾಗಬಾರದು ಆ ಮೂಲಕ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆಯಾಗಬಾರದು ಎಂಬ ದೂರದೃಷ್ಟಿಯಿಂದ ಶ್ರಮಿಸಿ ಕನ್ನಡಿಗರೇ ಬಹುಮತದಿಂದ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ ಶ್ರೇಯಸ್ಸು ಕರ್ನಾಟಕ ರಕ್ಷಣಾ ವೇದಿಕೆಯ ಟಿ ಎ ನಾರಾಯಣ ಗೌಡರಿಗೆ ಸಲ್ಲುತ್ತದೆ. ಬೆಳಗಾವಿಯ ಮೇಯರ್ ಆಗಿದ್ದಾಕೆ ಕನ್ನಡ ಧ್ವಜಕ್ಕೆ ಅಪಮಾನ ಮಾಡಿದಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿದ್ದು,, ಉ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನ ವಿಧಿಯ ಜಾರಿಗೆ ಬೀದಿಗಿಳಿದು ಹೋರಾಟ ನಡೆಸಿದ್ದು, ಗೋವಾದ ಮಹದಾಯಿ ಯೋಜನೆಯಿಂದ ಕನ್ನಡಿಗರಿಗೆ ತೊಂದರೆಯಾದಾಗ ಪ್ರತಿಭಟಿಸಿದ್ದು, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಪ್ರಬಲವಾದ ಹೋರಾಟಕ್ಕೆ ಚಾಲನೆ ನೀಡಿದ್ದು, ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯಲ್ಲಿ ಕನ್ನಡಿಗರೇ ಇಲ್ಲದಿದ್ದಾಗ ಮಾತೃಭಾಷೆಯಲ್ಲಿ ರೈಲ್ವೇ ಪರೀಕ್ಷೆ ನಡೆಸಲು ಹೋರಾಟ ನಡೆಸಿದ್ದು ಕರ್ನಾಟಕ ರಕ್ಷಣಾ ವೇದಿಕೆ, ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವ ಸಲುವಾಗಿ ಹೋರಾಟಗಾರರು ಮತ್ತು ಮಠಾಧೀಶರನ್ನು ದೆಹಲಿಗೆ ಕರೆದೊಯ್ದು ಬೃಹತ್ ಪ್ರದರ್ಶನ ನಡೆಸಿದ್ದು, ಬೆಂಗಳೂರಿನಲ್ಲಿ ನೆಲೆಯೂರಿರುವ ಅನ್ಯ ಭಾಷಿಕರ ಸಂಸ್ಥೆಗಳಲ್ಲಿ ದುಡಿಯುವ ಕನ್ನಡಿಗರಿಗೆ ತೊಂದರೆಯಾದಾಗ ನೆರವಿಗೆ ಧಾವಿಸುವುದು ಕರವೇ ನಾರಾಯಣ ಗೌಡರೆ ವಿನಹ ಉಮೇಶ ಕತ್ತಿಯಲ್ಲ. ಸಾರ್ವಜನಿಕವಾಗಿಯೂ ಕೆಟ್ಟ ನಡವಳಿಕೆಗಳನ್ನು ಹೊಂದಿರುವ ಕತ್ತಿ ತನ್ನ ನಡತೆಯನ್ನು ಮತ್ತು ವಿಚಾರವನ್ನು ತಿದ್ದುಕೊಂಡರೆ ಅದು ರಾಜ್ಯಕ್ಕೆ ಒಳಿತಾದೀತು. 

ಇವತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನರಿಗೆ ಜಮೀನು ಮನೆಗಳಿದ್ದರೂ ಹೊಟ್ಟೆ ಪಾಡಿನ ಕೂಲಿಯನ್ನರಸಿ ದಕ್ಷಿಣದೆಡೆಗೆ ಬರುತ್ತಾರೆ ಅಷ್ಟೆ ಅಲ್ಲ ಅಕ್ಕ ಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಹೀಗೆ ಪಕ್ಕದ ಗೋವಾ ರಾಜ್ಯಕ್ಕೆ ತೆರಳಿದ ಕನ್ನಡದ ಕೂಲಿ ಕಾರ್ಮಿಕರನ್ನು ಕೆಲ ವರ್ಷಗಳ ಹಿಂದೆ ಎತ್ತಂಗಡಿ ಮಾಡಿ ಕಿರುಕುಳ ನೀಡಿದ್ದನ್ನು ಮರೆಯುವಂತಿಲ್ಲ. ಆದರೆ ಇಲ್ಲಿ ಕನ್ನಡಿಗರಿಂದ ಯಾವುದೇ ಕಿರುಕುಳವಾಗದಿದ್ದರೂ ಗಾಳಿ ಸುದ್ದಿಗಳಿಗೆ ಹೆದರಿ ಊರು ಬಿಟ್ಟ ಈಶಾನ್ಯ ರಾಜ್ಯಗಳ ಜನರನ್ನು ಕರೆದು ತರಲು ಸ್ವತ: ರಾಜ್ಯದ ಗೃಹ ಸಚಿವ ಅಶೋಕ ಹೋಗಿದ್ದಲ್ಲದೇ ಅವರಿಗೆ ಬೆಂಗಳೂರಿಗೆ ಮರಳಲು ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿತ್ತು, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ತಮಿಳೀಗರ ವಿಶ್ವಾಸ ಗಳಿಸಲು (ಮತ ಬ್ಯಾಂಕ್ ದುರಾಸೆಗೆ) ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲಾಯಿತು. ಇದು ಕನ್ನಡಿಗರ ಔದಾರ್ಯ!. ಆದರೆ ಬೇರೆ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರ ಪರಿಸ್ಥಿತಿ ಈ ರೀತಿ ಇಲ್ಲ, ಇತ್ತೀಚೆಗೆ ಗುಜರಾತಿನಿಂದ ಬಂದಿದ್ದ ಕಿರಿಯನೊಬ್ಬ ಹೇಳುತ್ತಿದ್ದ ದಕ್ಷಿಣದವರು ಅದರಲ್ಲೂ ಕರ್ನಾಟಕದವರೆಂದರೆ ಒದೆ ಗ್ಯಾರಂಟಿ ಹಾಗಾಗಿ ಅಲ್ಲಿಯ ಭಾಷೆ ಕಲಿತು ಅಲ್ಲಿಯವರಾಗಿಯೇ ಬದುಕೋದು ಅನಿವಾರ್ಯವಾಗಿದೆ ಅಂತ. ಆದರೆ ನಮ್ಮಲ್ಲಿ ಹಾಗಿಲ್ಲ ಇಲ್ಲಿಗೆ ಆಗಮಿಸುವ ಯಾವುದೇ ಭಾಷಿಕರೊಂದಿಗೆ ಅವರದ್ದೆ ಭಾಷೆ ಕಲಿತು ವ್ಯವಹರಿಸವಷ್ಟು ನಿಪುಣರು. ಇರಲಿ ಇಂತಹುದೆ ನಿಲುವುಗಳು ಮಾತೃಭಾಷೆಯ ಉಳಿವಿಗೂ ಅರಿವಿನೊಂದಿಗೆ ಆಗಬೇಕಾಗಿದೆಯಲ್ಲವೇ??

Sunday, September 23, 2012

ಅಸೀಂ ತ್ರಿವೇದಿ ಎಂಬ ಅವಿವೇಕಿ ರಾಜದ್ರೋಹಿ!

ದು ಸೆಪ್ಟಂಬರ್ 9, ಅಸೀಂ ತ್ರಿವೇದಿ ಎಂಬ ವ್ಯಂಗ್ಯ ಚಿತ್ರಕಾರ ಮೂರ್ಖತನ ಹಾಗೂ ಅವಿವೇಕದಿಂದ ಬಂಧನಕ್ಕೊಳಗಾಗಿದ್ದ  ಅಷ್ಟೇ ಅಲ್ಲ ತಾನು ಮಾಡಿದ ಘನಂದಾರಿ ಕೆಲಸಕ್ಕೆ ತನ್ನ ವಿರುದ್ದದ ಮೊಕದ್ದಮೆ ಕೈ ಬಿಡಬೇಕು, ಜಾಮೀನು ಸಿಕ್ಕರೂ ಬೇಡ ಎಂದು ರಚ್ಚೆ ಹಿಡಿದು ಕುಳಿತು ಅನಾಯಾಸವಾಗಿ ರಾಷ್ಟ್ರಾಧ್ಯಂತ ಪ್ರಚಾರ ಪಡೆದ ಭೂಪ!.  ಆತ ಅಣ್ಣಾ ಹಜಾರೆ ತಂಡದ ಬೆಂಬಲಿಗ ಮತ್ತು ಕರಪ್ಷ್ಯನ್ ಎಗೆನಸ್ಟ್ ಇಂಡಿಯಾದ ಸದಸ್ಯನೂ ಹೌದು. ಅಷ್ಟಕ್ಕೂ ಈತ ಮಾಡಿದ ಘನಂಧಾರಿ ಕೆಲಸ ಏನು? ಇವನನ್ನು ಬಂಧಿಸಿದ್ದೇಕೆ? ವ್ಯಂಗ್ಯ ಚಿತ್ರ ರಾಜದ್ರೋಹ ಹೇಗಾದೀತು? ತ್ರಿವೇದಿಯನ್ನ ಅಣ್ಣಾ ತಂಡ ಬೆಂಬಲಿಸೋದ್ಯಾಕೆ? ತ್ರಿವೇದಿಯ ವಿಚಾರದಲ್ಲಿ 'ಅಭಿವ್ಯಕ್ತಿ' ಸ್ವಾತಂತ್ರ್ಯದ ಹರಣ ಆಗಿದೆಯೇ? ಎಂಬ ವಿಚಾರದ ಚರ್ಚೆ ಅಗತ್ಯವಾಗಿ ಆಗಬೇಕಿದೆ.

          ಅಸೀಂ ತ್ರಿವೇದಿ 25ರ ಹರೆಯದ ಬಿಸಿ ರಕ್ತದ ತರುಣ, ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ್ ಬಳಿಯ ಶುಕ್ಲಗಂಜ್ ಎಂಬ ಊರಿನಲ್ಲಿ. ವಿವಾದಾತ್ಮಕ ರಾಜಕೀಯ ವ್ಯಂಗ್ಯ ಚಿತ್ರಕಾರನಾದ ಈತ 'ಕಾರ್ಟೂನ್ಸ್ ಎಗೆನಸ್ಟ್ ಕರಪ್ಷ್ಯನ್' ಎಂಬ ಅಂತರ್ಜಾಲ ತಾಣ ನಡೆಸುವ ಜೊತೆಗೆ ಹಿಂದಿ ಪತ್ರಿಕೆಗಳಿಗೆ ಪ್ರೀ ಲಾನ್ಸ್ ಕಾರ್ಟೂನಿಸ್ಟ್. ತನ್ನ ಅಂತರ್ಜಾಲ ತಾಣದಲ್ಲಿ ಈ ಮೇಲೆ ಪ್ರಕಟಿಸಲಾಗಿರುವ ಮಾದರಿಯ ಅನೇಕ ಚಿತ್ರಗಳನ್ನು ವ್ಯಂಗ್ಯದ ತಳಹದಿಯಲ್ಲಿ ಬರೆದಿದ್ದಾನೆ. ಆ ಚಿತ್ರಗಳಾದರೂ ಎಂಥಹವು? ದೇಶದ ಘನತೆಯ ಪ್ರತೀಕವಾಗಿರುವ ಮೂರು ಸಿಂಹಗಳ ಲಾಂಛನದ ಬದಲಿಗೆ 3ತೋಳಗಳ ಚಿತ್ರ, ಅಶೋಕ ಚಕ್ರದ ಬದಲಿಗೆ ಮನುಷ್ಯ ತಲೆಬುರುಡೆ ಚಿಹ್ನೆ ಜೊತೆಗೆ ಎಚ್ಚರಿಕೆಯ ಸಂದೇಶ, ಭಾರತದ ಸಂವಿಧಾನ ಪುಸ್ತಕದ ಮೇಲೆ ನಾಯಿರೂಪದ ಉಗ್ರ ಕಸಬ್ ಕಾಲೆತ್ತಿ ಗಲೀಜು ಮಾಡುತ್ತಿರುವ ಚಿತ್ರ, ಭಾರತದ ಸಂಸತ್ ಭವನವನ್ನು ಮಲವಿಸರ್ಜಿಸುವ ಕಮೋಡ್ ರೀತಿ ಚಿತ್ರಿಸಿ ಮತದಾನ ಪತ್ರವನ್ನು ಟಿಶ್ಯೂ ಪೇಪರ್ ಹಾಗೂ ಸಂಸದರನ್ನು ಮಲದ ಮೇಲೆ ಹಾರಾಡುವ ನೊಣಗಳಂತೆ ಚಿತ್ರಿಸಿರುವುದು, ರಾಷ್ಟ್ರ ಪಕ್ಷಿಯ ಸ್ಥಾನದಲ್ಲಿ ರಣಹದ್ದಿನ ಚಿತ್ರ, ಭಾರತ ಮಾತೆಯನ್ನ ಸಾರ್ವಜನಿಕವಾಗಿ ರೇಪ್ ಮಾಡುವ ಚಿತ್ರ ಹೀಗೆ ಒಂದೇ ಎರಡೆ ರಾಷ್ಟ್ರದ ಅಂತ: ಶಕ್ತಿಯ ಪ್ರತೀಕವಾದ ಸಂಕೇತಗಳನ್ನು ಮನಬಂದಂತೆ ಚಿತ್ರಿಸಲಾಗಿದೆ.ಹೀಗೆ ರಚಿಸಿದ  ಅಂತರ್ಜಾಲ ತಾಣದ ಅತ್ಯಂತ ಶಾರ್ಪ್ ಎನಿಸುವಂತಹ  ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಮುಂಬೈ ಮೆಟ್ರೊಪಾಲಿಟನ್ ರೀಜನಲ್ ಡೆವಲಪ್ ಮೆಂಟ್ ಅಥಾರಿಟಿ ಯಲ್ಲಿ ಮೊದಲ ಭಾರಿಗೆ ಪ್ರದರ್ಶಿಸುವ ಹುಂಬತನವನ್ನು ತೋರಿದ್ದ. ಮುಂಬೈ ಮೂಲದ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಆರ್ ಪಿ ಪಾಂಡೆ ಮುಂಬೈ ಕ್ರೈಂ ಬ್ರಾಂಚ್ ಪೋಲೀಸರಿಗೆ ನೀಡಿದ ದೂರಿನ ಮೇರೆಗೆ 27 ಡಿಸೆಂಬರ್ 2011ರಲ್ಲಿ ಅವಹೇಳನಕಾರಿ ಚಿತ್ರಗಳ ಈತನ ಅಂತರ್ಜಾಲ ತಾಣವನ್ನ ಮುಂಬೈ ಪೋಲೀಸರು ನಿಷೇಧಿಸಿದ್ದರು. ಒತ್ತಡಗಳ ನಡುವೆ ತೀರ ತಡವಾಗಿ ಅಂದರೆ ಅಣ್ಣಾಹಜಾರೆ ತಂಡ ಮುಂಬೈನಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ವೇಳೆ ಈತ ರಚಿಸಿದ್ದ ವ್ಯಂಗ್ಯ ಚಿತ್ರಗಳನ್ನು ಪ್ಲೈ ಕಾರ್ಡ್ಗಳ ಮೂಲಕ ಪ್ರದರ್ಶಿಸಿದ್ದರಿಂದ ಜನವರಿ  2012ರಲ್ಲಿ ಅಸೀಂ ತಿವಾರಿಯ ವಿರುದ್ದ 124(ಎ) ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 66 ಎ ಪ್ರಕರಣ ದಾಖಲಾಯಿತು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಈತ ಮತ್ತೆ ತನ್ನ ಚಾಳಿಯನ್ನ ಮುಂದುವರೆಸಿದ್ದ. ಕೇಂದ್ರ ಸಚಿವ ಕಪಿಲ್ ಸಿಬಲ್ ಮತ್ತಿತರರ ವಿರುದ್ದ ಪ್ರಚೋದನಾಕಾರಿಯಾದ ಮತ್ತು ತೀರ ವೈಯುಕ್ತಿಕ ಎನಿಸುವ ಅಂಶಗಳನ್ನು ವ್ಯಂಗ್ಯ ಚಿತ್ರದ ಮೂಲಕ ಹೊರ ಹಾಕಿದ್ದ. ಇದೇ ವೇಳೆ ಕಲ್ಕತ್ತಾದಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ತನ್ನ ವ್ಯಂಗ್ಯ ಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರನ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಮುಂದಾದಾಗ ಅದೇ ಘಟನೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಸೇವ್ ಯುವರ್ ವಾಯ್ಸ್ ಎಂಬ ಅಂತರ್ಜಾಲ ತಾಣ ಚಳುವಳಿಯನ್ನು ಹುಟ್ಟುಹಾಕಿದ್ದ. ಮುಂಬೈನ ಬಾಂದ್ರಾ ಮೆಟ್ರೋಪಾಲಿಟನ್ ಕೋರ್ಟ್ ಜಾಮೀನು ರಹಿತ ವಾರಂಟ್ ಅನ್ನು ತ್ರಿವೇದಿಯ ಬಂಧನಕ್ಕಾಗಿ ಆಗಸ್ಟ್ ತಿಂಗಳಲ್ಲಿ ಹೊರಡಿಸಿದಾಗ ಚುರುಕಾದ ಪೋಲೀಸರು 
ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಗಂಗಾಘಾಟ್ ಬಳಿ ಸೆ.8ರಂದು ಅಸೀಂ ತ್ರಿವೇದಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯ ತ್ರಿವೇದಿಯನ್ನು ಸೆ.24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಅಷ್ಟೇ ಅಲ್ಲ ಆತನ ವಿರುದ್ದ ಹೂಡಲಾಗಿರುವ ರಾಜದ್ರೋಹದ ಆಪಾದನೆಯ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯ ಬಯಸಿದೆ.ಇಂದಿಗೆ (ಸೆ.24) ಆತನ ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದೆ. ಒಂದೊಮ್ಮೆ ಅಪರಾಧ ಸಾಬೀತಾದರೆ ತ್ರಿವೇದಿಗೆ 2ವರ್ಷ ಜೈಲು ಶಿಕ್ಷೆ ಜೊತೆಗೆ 5000ರೂ ದಂಡ ತೆರಬೇಕಾತ್ತದೆ. ಇಂತಹುದೇ ಪ್ರಕರಣದಲ್ಲಿ ಒಮ್ಮೆ ತಮಿಳುನಾಡಿನ ಫ್ರಂಟ್ ಲೈನ್ ಪತ್ರಿಕೆ ಶಿಕ್ಷೆ ಅನುಭವಿಸಿತ್ತೆಂಬುದು ಇಲ್ಲಿ ಸ್ಮರಣೀಯ.

        ಇಡೀ ಪ್ರಕರಣದಲ್ಲಿ ಅಸೀಂ ತ್ರಿವೇದಿಯ ವಿರುದ್ದ ಹೂಡಲಾಗಿರುವ ರಾಜದ್ರೋಹದ ಆಪಾದನೆ ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ವ್ಯವಸ್ಥೆಯ ವ್ಯಂಗ್ಯವನ್ನು ಆತ ವ್ಯಕ್ತಪಡಿಸಿದ್ದಾರೆ ಇದು ರಾಜ ದ್ರೋಹವಲ್ಲ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಸೇರಿದಂತೆ ಪ್ರಮುಖ ಪತ್ರಿಕೆಗಳ ಸಂಪಾದಕೀಯದಲ್ಲಿ ಮೂಂಬೈ ಪೋಲೀಸರ ಕ್ರಮವನ್ನು ಟೀಕಿಸಲಾಗಿದೆ.ಅಷ್ಟೇ ಅಲ್ಲ ಕನ್ನಡದ ಪ್ರಮುಖ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಕೆಲ ತಿಂಗಳ ಹಿಂದೆ ಅಂಬೇಡ್ಕರ್ ಕುರಿತ ವ್ಯಂಗ್ಯ ಚಿತ್ರಕ್ಕೆ ತಮಿಳುನಾಡಿನಲ್ಲಿ ಆಕ್ಷೆಪ ವ್ಯಕ್ತವಾದದ್ದನ್ನು ಸಮೀಕರಿಸಿ ಅಸೀಂ ತ್ರಿವೇದಿ ಯ ಬೆಂಬಲಕ್ಕೆ ನಿಂತಿದ್ದಾರೆ.ಕಾಂಗ್ರೆಸ್ ವಿರೋಧಿ ಧೋರಣೆಯ ಬಿಜೆಪಿ ಮತ್ತಿತರ ವಿರೋಧ ಪಕ್ಷಗಳು ಈ ಪ್ರಕರಣವನ್ನು ಅನುಕೂಲ ಸಿಂಧುವಾಗಿ ಬಳಸಿಕೊಂಡಿವೆ.  ಅಭಿವ್ಯಕ್ತ ಸ್ವಾತಂತ್ರ್ಯ ಹರಣ ಎಂಬುದೇನೋ ಸರಿ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಒಂದು ಇತಿಮಿತಿ ಎಂಬುದು ಇದೆಯಲ್ಲವೇ? ರಾಜಕಾರಣಿಗಳನ್ನ, ಅಧಿಕಾರಸ್ಥರನ್ನ ಮತ್ತು ಸಮಾಜ ಘಾತುಕರನ್ನ ಎಲ್ಲೆಯ ಚೌಕಟ್ಟಿನಲ್ಲಿ ಟೀಕಿಸುವುದು ಖಂಡಿತಾ ತಪ್ಪಲ್ಲ. ಆದರೆ ದೇಶದ ಘನತೆಯ ಪ್ರತೀಕವಾದವುಗಳನ್ನ ಕೀಳು ಅಭಿರುಚಿಯಲ್ಲಿ ಚಿತ್ರಿಸುವುದು ಎಷ್ಟು ಸರಿ? ಅದು ಖಂಡಿತವಾಗಿಯೂ ದೇಶ ದ್ರೋಹವೇ ಹೌದಲ್ಲ.ಕೆಲವು ತಿಂಗಳ ಹಿಂದೆ ವಿವಾದಕ್ಕೆಡೆಯಾದ ಅಂಬೇಡ್ಕರ್ ಕುರಿತ ಚಿತ್ರ ಒಂದು ಕಾಲಘಟ್ಟಕ್ಕೆ ಸರಿ, ಸ್ವತ: ಅಂಬೇಡ್ಕರ್ ಈ ಕುರಿತು ನಕ್ಕು ಸುಮ್ಮನಾಗಿದ್ದರಂತೆ. ಆದರೆ ಅದನ್ನೇ ಮಕ್ಕಳ ಪಠ್ಯದಲ್ಲಿ ಅಳವಡಿಸುವುದು ಯಾವ ಕಾರಣಕ್ಕೂ ಸಧಭಿರುಚಿಯ ಲಕ್ಷಣವಲ್ಲ ಹಾಗಿದ್ದಾಗ ಈ ಪ್ರಕರಣವನ್ನು ಅಸೀಂ ತ್ರಿವೇದಿಯ ವ್ಯಂಗ್ಯ ಚಿತ್ರಗಳ ಜೊತೆ ಪ್ರಜಾವಾಣಿ ಸಂಪಾದಕೀಯದಲ್ಲಿ ಹೋಲಿಸಿದ್ದು ಅದರ ಬದಲಾದ ಧೋರಣೆಯ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ! 

        ದೇಶದ ಘನತೆಯ ಪ್ರತೀಕವಾದ ಸಂಕೇತಗಳನ್ನು ಕೀಳು ಅಭಿರುಚಿಯಲ್ಲಿ ಚಿತ್ರಿಸಿದ್ದನ್ನು ಯಾವ ಮಾನದಂಡದ ಆಧಾರದ ಮೇಲೆ ಅಡ್ವಾಣಿ, ಅರವಿಂದ ಕ್ರೇಜಿವಾಲ ಮತ್ತಿತರರು ಬೆಂಬಲಿಸುತ್ತಿದ್ದಾರೆ. ಸಾಂಕೇತಿಕ ವ್ಯಂಗ್ಯದ ಭಾವನೆಗಳನ್ನು ಅವರು ಒಪ್ಪಿಕೊಳ್ಳುವರೇ?  ಕೆಲವೇ ವರ್ಷಗಳ ಹಿಂದೆ ದೇಶದ ಖ್ಯಾತ ಕಲಾವಿದ ಎಂ ಎಫ್ ಹುಸೇನ್ ಹಿಂದೂ ದೇವತೆಗಳ ಕುರಿತು ರಚಿಸಿದ್ದ ಚಿತ್ರಗಳಲ್ಲಿ ಇವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಂಡಿರಲಿಲ್ಲವೇ? ಮನನೊಂದು ದೇಶ ತೊರೆದ ಹುಸೇನರ ವಿರುದ್ದ ನಿಂತಿದ್ದ ಇದೇ ಗ್ಯಾಂಗ್ ಇವತ್ತು ರಾಜದ್ರೋಹಿ ಆಪಾದನೆಯಡಿ ಬಂಧಿತನಾಗಿರುವ ತ್ರಿವೇದಿಯನ್ನು ಬೆಂಬಲಿಸುತ್ತಿರುವುದರ ಹಿಂದಿನ ಹುನ್ನಾರವೇನು ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಅಷ್ಟಕ್ಕೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಳವಡಿಕೆಯಾಗಿರುವ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಯಾವುದೇ ಉಲ್ಲೇಖಗಳಿಲ್ಲ ಆದಾಗ್ಯೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಸೀಮೀತ ಚೌಕಟ್ಟಿನಲ್ಲಿ ಆರೋಗ್ಯಕರ ಟೀಕೆ ಟಿಪ್ಪಣಿ ಇರಬೇಕೆ ವಿನಹ ಭಾವನೆಗಳನ್ನು ಕೆಣಕುವ ಯಾವುದೇ ಕ್ರಿಯೆಯೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬಿಂಬಿತವಾಗಬಾರದರು. ಅದು ಹುಸೇನ್ ಇರಲಿ ಅಸೀಂ ತ್ರಿವೇದಿ ಇರಲಿ ಲಂಗು ಲಗಾಮಿಲ್ಲದೇ ಅಪಚಾರ ಎಸಗುವ ಕೃತ್ಯಗಳಲ್ಲಿ ತೊಡಗಿದಾಗ ಅದು ಖಂಡಿತವಾಗಿಯೂ ಅಪರಾಧವೇ ಆಗಿರುತ್ತದೆ ಎಂಬುದು ಸತ್ಯ ಅಲ್ಲವೇ? ಇನ್ನು ಅಣ್ನಾತಂಡ ಇಡೀ ದೇಶದ ಭಾವನೆಗಳನ್ನ ಒಗ್ಗೂಡಿಸಿ ಅದನ್ನು ಕಾಯ್ದುಕೊಳ್ಳಲಾಗದೇ ಪ್ರಹಸನ ನಡೆಸಿ ವಿಸರ್ಜನೆಯಾಗಿದೆ ಆ ತಂಡದ ಹಿಂದಿನ ಹುನ್ನಾರಗಳೇನು? ಅವುಗಳ ಹಿಂದೆ ಯಾರೆಲ್ಲ ಇದ್ದಾರೆ? ಅಣ್ನಾತಂಡದ ಮುಖವಾಡವೇನು ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ ಹೀಗಿರುವಾಗ ಕಾಂಗ್ರೆಸ್ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಣ್ಣಾತಂಡ ತ್ರಿವೇದಿಯನ್ನು ಬೆಂಬಲಿಸಿದ್ದು ಒಪ್ಪತಕ್ಕ ಮಾತೇ?

Wednesday, September 5, 2012

ಸುವರ್ಣ ಸಂಭ್ರಮದಲ್ಲಿ ಶಿಕ್ಷಕ ದಿನ ಮತ್ತು ಜಿಜ್ಞಾಸೆ! ಇದು ಶಿಕ್ಷಕರ ದಿನಾಚರಣೆಯ ಸುವರ್ಣ ಸಂಭ್ರಮದ ಆಚರಣೆ ಅಂದರೆ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಗಿ 50ವರ್ಷಗಳು ಸಂದಿವೆ. ಮೊದಲ ಶಿಕ್ಷಕರ ದಿನಾಚರಣೆ ನಡೆದದ್ದು ಸೆ.5, 1962. ಅದು ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತದ ಉಪ ರಾಷ್ಟ್ರಪತಿಯಾಗಿ ನೇಮಕವಾದ ವರ್ಷ ಅಷ್ಟೇ ಅಲ್ಲ ರಾಧಾಕೃಷ್ಣನ್ ಜನಿಸಿದ ದಿನಾಂಕವೂ ಹೌದು. ಆದರೆ ಕುರಿತು ಜಿಜ್ಞಾಸೆ ಇರುವುದನ್ನು ಅವರ ಜೀವನ ಕುರಿತ ಪುಸ್ತಕದಲ್ಲಿ ಡಾ ಸರ್ವೆಪಲ್ಲಿ ಗೋಪಾಲ್ ಉಲ್ಲೇಖಿಸಿದ್ದಾರೆ. ಹಾಗಾಗಿ ಯುನೆಸ್ಕೋ ಘೋಷಿಸಿರುವಂತೆ ಅಕ್ಟೋಬ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಏನೇ ವೈರುಧ್ಯಗಳಿದ್ದರೂ ದಿನಕ್ಕೆ 50ವರ್ಷ ಸಂದಿರುವುದರಿಂದ ಇದನ್ನೆ ಶಿಕ್ಷಕರ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಸಂಧರ್ಭದಲ್ಲಿ ಶಿಕ್ಷಕರ ಮತ್ತು ಶೈಕ್ಷಣಿಕ ವಾತಾವರಣದ ಕುರಿತು ಮಾತನಾಡಬೇಕಾದ ಅಗತ್ಯವಿದೆ.

 ಅದಕ್ಕೂ ಮುನ್ನ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ಕುರಿತ ಪುಟ್ಟ ಮಾಹಿತಿ ನಿಮಗಾಗಿ. ಸರ್ವೆಪಲ್ಲಿ ರಾಧಾಕೃಷ್ಣನ್  ತೆಲುಗು ಬ್ರಾಹ್ಮಣ ಬಡ ಕುಟುಂಬದಲ್ಲಿ ಹುಟ್ಟಿದ್ದು ತಮಿಳುನಾಡಿನ ತಿರುತ್ತಾನಿ ಎಂಬ ಗ್ರಾಮದಲ್ಲಿಒಬ್ಬ ತತ್ವಜ್ಞಾನಿಯಾಗಿ ಆದರ್ಶ ಪ್ರಾಧ್ಯಾಪಕನಾಗಿ ಬೆಳೆದ ಸರ್ವಪಲ್ಲಿ ರಾಧಾಕೃಷ್ಣನ್ ಸಾಧನೆಯ ಶೃಂಗಕ್ಕೇರಿ ಅಂತಿಮವಾಗಿ ಭಾರತದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಪದವಿಗೇರಿದರು. ಮೂಲಕ ಒಬ್ಬ ಸಾಮಾನ್ಯ ಶಿಕ್ಷಕ ವ್ಯಕ್ತಿಯ ನಿರ್ಮಾಣ ಮಾತ್ರವಲ್ಲದೇ ರಾಷ್ಟ್ರದ ಆಡಳಿತವನ್ನು ನಿಭಾಯಿಸುವ ಪರಮೋಚ್ಚ ಪದವಿಗೇರಬಹುದು ಎಂಬುದನ್ನು ಸಾಬಿತು ಪಡಿಸಿದರು.1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದರು. 1918ರಲ್ಲಿ ಮೈಸೂರು ವಿವಿಯಲ್ಲಿ ಪ್ರೋಫೆಸರ್ ಆದರು. ನಂತರ ದೇಶ ಮತ್ತು ವಿದೇಶಗಳ ಹಲವು ವಿವಿ ಗಳಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಸಾಧನೆ ಗೈದರು. ಪೌರಾತ್ಯ ಮತ್ತು ಪಾಶ್ಚಿಮಾತ್ಯ ತತ್ವ ಜ್ಞಾನದ ಪದ್ದತಿಗಳನ್ನು ವಿವರವಾಗಿ ರಚಿಸಿದ ರಾಧಾಕೃಷ್ಣನ್ ತನ್ನ ವಿದ್ವತ್ ನಿಂದಾಗಿ ಕಲ್ಕತ್ತಾ ಮತ್ತು ಆಕ್ಸ್ ಫರ್ಡ್ ವಿವಿಗಳಲ್ಲಿ ಅವಕಾಶ ಪಡೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಿಟ್ರೀಷ್ ಸಂಸ್ಥಾನ ನೀಡುತ್ತಿದ್ದ ಸರ್ ಪದವಿ ಪಡೆದಿದ್ದರು. 1954ರಲ್ಲಿ ಅವರಿಗೆ ಭಾರತ ಸರ್ಕಾರ ಜೀವಿತಾವಧಿಯಲ್ಲೇ ಭಾರತ ರತ್ನ ಪ್ರಶಸ್ತಿಯನ್ನೂ ಸಹಾ ನೀಡಿ ಗೌರವಿಸಿದೆ. ಬರಿಟೀಷ್ ಅಕಾಡೆಮಿ ಫೆಲೋಶಿಪ್ ನೀಡಿದೆಯಲ್ಲದೇ ಜರ್ಮನಿಯ ಪ್ರತಿಷ್ಟಿತ ಟೆಂಪ್ಲೆಟಾನ್ ಪ್ರಶಸ್ತಿ ಅವರ ಮುಡಿಗೇರಿದೆ. ತತ್ವಶಾಸ್ತ್ರದಲ್ಲಿನ ಅವರ ಅನುಪಮ ಸೇವೆಗಾಗಿ ಸತತವಾಗಿ 5ರವರ್ಸಗಳ ಕಾಲ ಅವರ ಹೆಸರು ನೋಬೆಲ್ ಪ್ರಶಸ್ತಿಗಾಗಿ ಶಿಫಾರಸ್ಸಾಗಿತ್ತು ಎಂಬುದು ಗಮನಾರ್ಹ. ಅವರು ರಾಷ್ಟ್ರಪತಿ ಹುದ್ದೆಗೇರುವ ಮುನ್ನ ಯುನೆಸ್ಕೋ ದಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದರಲ್ಲದೇ ಸೋವಿಯತ್ ಯೂನಿಯನ್ ನಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದರು.ರಾಷ್ರ್ಟಪತಿಯಾಗಿದ್ದಾಗ ಅವರ ಹುಟ್ಟಿದ ಹಬ್ಬವನ್ನು ಆಚರಿಸಲು ಬಂಧುಗಳು ಮತ್ತು ಸ್ನೇಹಿತರು ಮುಂದಾದಾಗ ಅದನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಅವರು ಸೂಚಿಸಿದ್ದರಲ್ಲದೇ ಮೂಲಕ ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೌರವವನ್ನು ಅರ್ಪಣೆ ಮಾಡಿದ್ದಾರೆ.

            ನಡುವೆ ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದರ ಕುರಿತು ಹಲವು ಆಕ್ಷೇಪಣೆಗಳು ಕೇಳಿ ಬಂದಿವೆ. ನೇರ ನಡೆ ನುಡಿಯ ದಿಟ್ಟ ವಿಮರ್ಶಕ ಪ್ರೊ. ಜಿ ಎಚ್ ನಾಯಕ ಕುರಿತ ಪ್ರಸ್ತಾವಗಳನ್ನು ಪತ್ರಿಕೆಯೊಂದರ ಮೂಲಕ ಹೊರಗೆಡವಿದ್ದಾರೆ. ರಾಧಾಕೃಷ್ಣನ್ ಪುತ್ರ ಇತಿಹಾಸಕಾರ,ಇತಿಹಾಸ ಪ್ರಾಧ್ಯಾಪಕ,ಅಂತರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ  ಡಾ ಸರ್ವೆಪಲ್ಲಿ ಗೋಪಾಲ್  ಬರೆದಿರುವ  "ರಾಧಾಕೃಷ್ಣನ್ - ಭಯಾಗ್ರಫಿ" ಪುಸ್ತಕದಲ್ಲಿ ಜನ್ಮ ದಿನದ ಗೋಂದಲ, ರಾಧಾಕೃಷ್ಣನ್ ಜನ್ಮದ ಕುರಿತ ಅಶ್ಲೀಲ ಕಥೆ, ಅದೇ ಕಾರಣಕ್ಕಾಗಿ ತಾಯಿಯನ್ನು ದೂರವಿರಿಸಿದ್ದು, ಅವರು ಪ್ರಾಧ್ಯಾಪಕರಾಗಿದ್ದಾಗ ಮೈಸೂರಿನಲ್ಲಿ ಪಕ್ಕದ ಮನೆಯವನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅದೇ ಆರಂಭವಾಗಿ ಮುಂದೆ ಹಲವು ಹೆಂಗೆಳೆಯರ ಸಹವಾಸ ಮಾಡಿದ್ದು, ಅವರ ಭಾಷಣಗಳಲ್ಲಿ ಆತ್ಮವಂಚನೆಯ ಭಾಷಣಗಳನ್ನು ಮಾಡುತ್ತಿದ್ದುದು, ತನ್ನ ಐವರು ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡಿದ್ದು, ವೃತ್ತಿಯ ಬಗೆಗಿನ ಪ್ರೇಮದಿಂದ ಅಧಿಕಾರಕ್ಕೆ ಅಂಟಿಕೊಳ್ಳುವ ನೀತಿಯನ್ನು ಪ್ರದರ್ಶಿಸಿದ್ದು ಒಂದೇ ಎರಡೇ ಹೀಗೆ ರಾಧಾಕೃಷ್ಣನ್ ನೆಗೆಟೀವ್ ಅಂಶಗಳನ್ನು ಪ್ರಸ್ಥಾಪಿಸುವ ಮೂಲಕ ಇಂತಹವರ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಅದು ಸಮಂಜಸವೂ ಇರಬಹುದು ಆದರೆ ಅದೇ ಅಂತಿಮವೂ ಆಗಬೇಕಿಲ್ಲ. ಹಿಂದೆಸ್ವಾಮಿ ವಿವೇಕಾನಂದರ ಕುರಿತು ಇಂತಹುದ್ದೇ ಸತ್ಯಗಳು ಅನಾವರಣಗೊಂಡಿದ್ದವು ಅವರೊಬ್ಬ ದಡ್ಡ ಮತ್ತು ಮೂರ್ಖ, ವಾಸಿಯಾಗದ ಕಾಯಿಲೆಗಳಿದ್ದವು ಮತ್ತು ಆತ ಶುದ್ದ ಮಾಂಸಹಾರಿ ಇತ್ಯಾದಿ.ಆದರೆ ಸಮಾಜದಲ್ಲಿ ಉನ್ನತ ಧ್ಯೇಯ ಮತ್ತು ಆದರ್ಶ ಪುರುಷರಂತೆ ಕಾಣಿಸುವ ವ್ಯಕ್ತಿಗಳ ವೈಯುಕ್ತಿಕ ಬದುಕು ಏನೇ ಆಗಿದ್ದರೂ ಸಹಾ ಸಮಾಜ ಮುಖಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿತ್ವಗಳು ಮತ್ತು ವಿಚಾರಗಳು ಹೆಚ್ಚು ಆಧ್ಯತೆ ಪಡೆಯುತ್ತವೆ.

            ಇನ್ನು ಪ್ರಸಕ್ತ ವಿಷಯಕ್ಕೆ ಬರುವುದಾದರೆ ಶಿಕ್ಷಕ ದಿನಾಚರಣೆ ಶಿಕ್ಷಕ ಸ್ಥಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಗೌರವವನ್ನು ಸಾರಿ ಹೇಳುವ ದಿನ. ಹಿಂದಿನ ದಶಕಗಳಲ್ಲಿ ಗುರು ಮತ್ತು ಶಿಷ್ಯರ ನಡುವೆ ಇದ್ದ ಬಾಂಧವ್ಯಗಳು ಈಗ ಇಲ್ಲ. ಆಧುನೀಕರಣದ ಪ್ರವಾಹದಲ್ಲಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯೂ ಈಗ ಉಳಿದಿಲ್ಲ, ಶಿಕ್ಷಣ ವ್ಯಾಪಾರೀಕರಣವಾಗಿದೆ ಶಾಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಲಭ್ಯಗಳು ಬಂದಿವೆ, ಸಂಬಳ-ವಗೈರೆಗಳು ಹೆಚ್ಚಿವೆ. ಜೊತೆಗೆ ಶಿಕ್ಷಕರ ಕಾರ್ಯಗಳು ವಿಸ್ತೃತವಾಗಿವೆ. ಶಿಕ್ಷಕರು ಈಗ ಮಕ್ಕಳಿಗೆ ಪಾಠ ಹೇಳುವ ಗುರುಗಳಾಗಿ ಮಾತ್ರ ಉಳಿಯದೇ ಬೇರೆ ಚಟುವಟಿಕೆಗಳು ಅವರ ಹೆಗಲೇರಿವೆ. ಕಲಿಸುವ ಉತ್ಸಾಹ ಕುಂದಿದೆ, ವಿದ್ಯಾರ್ಥಿಗಳೂ ಈಗ ಹಿಂದಿನಂತೆ ಉಳಿದಿಲ್ಲ ಶಿಕ್ಷಕರನ್ನೆ ನಿಯಂತ್ರಿಸುವ ಅಗೌರವ ತೋರುವ ಪ್ರವೃತ್ತಿಯೂ ಬೆಳೆದಿದೆ. ಇದಕ್ಕೆ ಶಿಕ್ಷಕರು ಪರೋಕ್ಷವಾಗಿ ಕಾರಣ ಎಂಬ ಮಾತನ್ನು ಅಲ್ಲಗೆಳೆಯುವಂತಿಲ್ಲ. ಶಿಕ್ಷಕರು ತಮ್ಮ ವೃತ್ತಿಯ ಗಾಂಭಿರ್ಯತೆಯನ್ನು ಅರಿಯದೇ ತೋರುವ ನಡವಳಿಕೆಗಳು, ಬಾಹ್ಯ ಚಟುವಟಿಕೆಗಳು, ಅಭಿರುಚಿಗಳು ಸ್ಥಾನದ ಪಾವಿತ್ಯತೆಯನ್ನು ಕಳೆದಿವೆ.ಪ್ರಾಮಾಣಿಕವಾಗಿ ವೃತ್ತಿಯನ್ನು ನಿರ್ವಹಿಸುವ ಪ್ರಜ್ಞೆಯನ್ನು ತೋರದೇ ರಾಜಕೀಯ, ಪುಡಾರಿತನ, ವ್ಯವಹಾರ ಮತ್ತು ಸಮಾಜ ಹೇಸಿಗೆ ಪಟ್ಟುಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಾದ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ದುರಂತದ ಸಂಗತಿ. ಹತ್ತು ಶಿಕ್ಷಕರಲ್ಲಿ ಒಬ್ಬಿಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗುತ್ತಾರಾದರೂ ಇತರ ಶಿಕ್ಷಕರು ಅಡ್ಡಗಾಲು ಹಾಕುವ ಪ್ರವೃತ್ತಿಯಿಂದಾಗಿ ಅವರು ತಟಸ್ಥರಾಗಿ ಉಳಿಯುವ ಸಂಭವವೇ ಹೆಚ್ಚು ಇಂತಹದ್ದನ್ನು ಪ್ರತೀ ಶಾಲೆ ಮತ್ತು ಕಾಲೇಜುಗಳಲ್ಲೂ ಕಾಣಬಹುದು. ಕಲಿಕೆಯಲ್ಲೂ ಅಂತಹ ಗುಣಾತ್ಮಕ ಅಂಶಗಳನ್ನು ಕಾಣಲಾಗುತ್ತಿಲ್ಲಅಧ್ಯಯನದ ಕೊರತೆ, ಅನುಭವದ ಕೊರತೆ ಎದ್ದು ಕಾಣುತ್ತಿದ್ದು ವೈಯುಕ್ತಿಕ ಹಿತಾಸಕ್ತಿಗಳೂ ಕೂಡಾ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಜಾಗೃತರಾಗಬೇಕಿದೆ. ತಮ್ಮ ಸ್ತಾನದ ಘನತೆ ಗೌರವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.