Sunday, February 5, 2012

ಪೇಜಾವರ ಶ್ರೀಗಳೇ ಮೌಡ್ಯಾಚರಣೆಗೆ ಸಮರ್ಥನೆ ಬೇಕಿತ್ತಾ?

"ಈ ದಲಿತರನ್ನ ಬಿಟ್ಟರೆ ಬೇರೆಯವರು ಪಂಕ್ತಿ ಭೇಧಕ್ಕೆ ಪ್ರತಿಭಟನೆ ನಡೆಸುತ್ತಿಲ್ಲ,ಈ ವಿಷಯದಲ್ಲಿ ಕೇವಲ ವಿವಾದಕ್ಕೋಸ್ಕರ ಟೀಕೆ, ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಪಂಕ್ತಿ ಬೇಧ ವೀರಶೈವ ಮಠಗಳಲ್ಲೂ ಇದೆ. ಆದರೆ ಇಂದು ಬ್ರಾಹ್ಮಣ ಮಠಗಳನ್ನು ಮಾತ್ರ ಗುರಿ ಮಾಡಲಾಗುತ್ತಿದೆ" ಎಂಬ ಮಾತನ್ನು ಹಿಂದೂ ಧರ್ಮದ ಪ್ರವರ್ತಕ ನಂತಿರುವ ಸನ್ಮಾನ್ಯ ಪೇಜಾವರ ಶ್ರೀ ಆಡಿದ್ದಾರೆ.ಧಾರ್ಮಿಕ ಗುರುವಾಗಿ, ಸಂಘದ ಸ್ವಾಮಿಯಾಗಿ, ರಾಜಕೀಯ ಸಂಧಾನಕಾರನಾಗಿ! ದೇಶದ ಉದ್ದಗಲಕ್ಕೂ ಓಡಾಡುವ ಈ ಸ್ವಾಮೀಜಿಯ ಸಂಕುಚಿತ ಭಾವನೆಯ ಮಾತುಗಳು ಸಾರ್ವಜನಿಕವಾಗಿ ಅವರ ಅಂತರಂಗವನ್ನು ಬಯಲು ಮಾಡುತ್ತಿದೆ. ಹೌದು ಇವತ್ತು ಪೇಜಾವರ ಶ್ರೀ ಮಾತ್ರವಲ್ಲ ಸಮಾಜದಲ್ಲಿ ಅನೇಕ ಮಂದಿ ಪ್ರಾಜ್ಞರೆನಿಸಿಕೊಂಡವರು ತಮ್ಮ ಅರಳು ಮರಳು ವಯಸ್ಸಿನಲ್ಲಿ ಇಂತಹ ಸಣ್ಣತನವನ್ನ ಪ್ರದರ್ಶಿಸುವ ಮೂಲಕ 'ತೂಕ' ಕಳೆದುಕೊಳ್ಳಲಾರಂಭಿಸಿದ್ದಾರೆ.
          ಸಾರ್ವಜನಿಕವಾಗಿ ಒಮ್ಮೆ ಸಾಧನೆಯ ಮೂಲಕ ಗುರುತಿಸಿಕೊಂಡ ವ್ಯಕ್ತಿ ತನ್ನ ವೈಯುಕ್ತಿಕ ತಿಕ್ಕಲು ತನಗಳನ್ನು ಹತ್ತಿಕ್ಕಲಾಗದೇ ಸಾರ್ವಜನಿಕವಾಗಿಯೇ ಹರಿಯ ಬಿಡುವ ಮೂಲಕ ನಗೆಪಾಟಲಿಗೆ ಈಡಾಗುತ್ತಿದ್ದಾರೆ.ಪೇಜಾವರ ತೀರ್ಥರಿಗೆ ವ್ಯಕ್ತಿಗತವಾಗಿ ಮತ್ತು ಸಮೂಹದಲ್ಲಿ ತಮ್ಮದೇ ಆದ ಸ್ಥಾನ ಮಾನವಿದೆ, ಜಾತ್ಯಾತೀತವಾಗಿ ಅವರನ್ನು ಗೌರವಿಸುವ ಸಮೂಹವೇ ಇದೆ ಹೀಗಿರುವಾಗ ಪೇಜಾವರ ತೀರ್ಥರು ಇಂತಹ ಪ್ರತಿಕ್ರಿಯೆ ನೀಡಿದ್ದು ಎಷ್ಟು ಸರಿ?.ಬೇರೆ ಕಡೆ ಇಂಥ ಪದ್ದತಿ ಜೀವಂತವಾಗಿದೆ ಎಂದ ಮಾತ್ರಕ್ಕೆ ಈ ಅನಿಷ್ಠ ಪದ್ದತಿಗಳನ್ನು ಒಪ್ಪಿಕೊಳ್ಳಬೇಕೆ? ಅಷ್ಟಕ್ಕೂ ವೀರಶೈವ ಮಠಗಳಲ್ಲಿ ಪಂಕ್ತಿ ಭೇಧವಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಸಾರ್ವಜನಿಕವಾಗಿ ದೇವರುಗಳೆಂದು ಬಿಂಬಿತವಾಗುತ್ತಿರುವ ಮಠಾಧೀಶರುಗಳು ಸಹಾ ತಮ್ಮ ಮಠಗಳಲ್ಲಿ ಇಂತಹದ್ದೊಂದು ಭೇಧವನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ.ಇಂತಹ ಪದ್ದತಿಗಳು ಸ್ಪಷ್ಟವಾಗಿ ಜಾತಿ ಸೂಚಕವಾಗಿ ವ್ಯಕ್ತವಾಗುತ್ತವೆ, ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಿದ್ದ ಮಠಗಳು ಜಾತೀಯ ಕೇಂದ್ರಗಳಾಗಿ ರೂಪಿತವಾಗಿವೆ. ಇಂತಹ ಮಠಗಳಿಗೆ ಕೇಸರಿ ಸರ್ಕಾರ ಕಳೆದ ಸಾಲಿನಲ್ಲಿ 370ಕೋಟಿಗೂ ಹೆಚ್ಚು ಹಣವನ್ನು ನೀಡಿರುವ ಮಾಹಿತಿಯಿದೆ, ಮಠಗಳಿಗೆ ಮಾತ್ರವಲ್ಲ ಮಸೀದಿಗಳಿಗೂ ಈ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಕೇಸರಿ ಸರ್ಕಾರ ಹಣ ಬಿಡುಗಡೆ ಮಾಡಿ ಅಚ್ಚರಿ ಹುಟ್ಟಿಸಿದೆ. ಇದು ವೋಟ್ ಬ್ಯಾಂಕ್ ತಂತ್ರವಲ್ಲದೇ ಮತ್ತೇನಲ್ಲ. ಇರಲಿ ಪಂಕ್ತಿ ಭೇಧಕ್ಕೆ ಜೈ ಎನ್ನುವ ಮಂದಿ ಸಾರ್ವಜನಿಕವಾಗಿ ಸಮಾನತೆಯ ಮುಖವಾಡ ಧರಿಸುವುದು, ದೇವರೆಂದು ಬಿಂಬಿಸಿಕೊಳ್ಳುವುದು ತಪ್ಪಲ್ಲವೇ? ಕನಿಷ್ಠ ಪಕ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ/ಸರ್ಕಾರಿ ಹಣದಿಂದ ನಡೆಯುವ ದಾಸೋಹಗಳಲ್ಲಾದರೂ ಪಂಕ್ತಿ ಬೇಧದಂತಹ ಕೆಟ್ಟ ಚಾಳಿಗಳನ್ನು ಬಿಡಬೇಕು. ಈ ಆಚರಣೆಯ ತೀವ್ರತೆ ಎಷ್ಟೆಂದರೆ ತಾನು ವೀರಶೈವ ಇಲ್ಲವೇ ಬ್ರಾಹ್ಮಣ ಎಂದು ಗುರುತು ಮಾಡಲು ಮೈ ಮೇಲಿನ ಬಟ್ಟೆ ತೆಗೆದು ಅಡ್ಡ ದಾರವನ್ನು ಗುರುತಿನ ಚೀಟಿಯಂತೆ ತೋರಿಸಿಕೊಂಡು ಒಳ ಹೋಗಬೇಕು, ಯಾರಾದರೂ ದಿಕ್ಕು ತಪ್ಪಿ ಗೊತ್ತಿಲ್ಲದೇ ಬಂದು ಕುಳಿತನೋ ಆತನ ಪರಿಸ್ಥಿತಿ ನಾಯಿಗಿಂತ ಕಡೆಯಾಗಿ ಬಿಡುತ್ತದೆ, ಇದು ದೇಗುಲಗಳಲ್ಲಿ ನಾವು ಪ್ರತೀ ಭಾರಿಯೂ ಕಾಣಬರುವ ದೃಶ್ಯವೇ ಆಗಿದೆ.

            ಸಮಾಜದಲ್ಲಿ ಪಂಕ್ತಿ ಭೇಧದಂತಹ ಆಚರಣೆ, ಎಂಜುಲು ಎಲೆಯ ಮೇಲೆ ಉರುಳುವ ಪದ್ದತಿ, ಬರಿಯ ನೆಲದ ಮೇಲೆ ಉಣ್ಣುವ ಪ್ರತೀತಿ ಮತ್ತಿತರ ಮೌಡ್ಯಾಚರಣೆಗಳು ಆಧುನಿಕ ಸಮಾಜದಲ್ಲೂ ಮುಂದುವರೆದರೆ ನಾವು ಕನಸು ಕಂಡ ಆದರ್ಶ ಸಮಾಜ ಉಳಿಯುವುದೇ?ಪ್ರಗತಿಯತ್ತ ಸಾಗುವುದು ಎಂದರೆ ನಮ್ಮ ಸಂಸ್ಕೃತಿಯನ್ನು ಮರೆಯುವುದು ಎಂದರ್ಥವಲ್ಲ ಆದರೆ ಪ್ರತ್ಯೇಕತೆ ಮತ್ತು ಜಾತೀಯ ಭಾವನೆಯಿಂದ ಹಿಂದಿನವರು ಹುಟ್ಟುಹಾಕಿದ ಕೆಲವು ಅನಿಷ್ಠ ಸಂಪ್ರದಾಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತೊಡೆದು ಹಾಕಿ ಆರೋಗ್ಯ ಪೂರ್ಣವಾದ ಮತ್ತು ಸಮಾಜದಲ್ಲಿ ಸಮ್ಮತವಾದ ಆಚರಣೆಗಳನ್ನು ಉಳಿಸಿಕೊಳ್ಳುವುದು ತಪ್ಪಲ್ಲ. ತಮ್ಮನ್ನು ತಾವು ಸಂಸ್ಕಾರವಂತರೆಂದು ಗುರುತಿಸಿಕೊಳ್ಳುವ ಮಠಾಧೀಶರುಗಳು, ಸ್ವಾಮೀಜಿಗಳು ಇಂಥ ಮೌಡ್ಯಾಚರಣೆಗಳನ್ನು ಬೆಂಬಲಿಸುವುದು ನವನಾಗರಿಕ ಸಮಾಜದ ಲಕ್ಷಣವಲ್ಲ. ಯಾವುದೋ ದುರುದ್ದೇಶದಿಂದ ಒಂದು ವರ್ಗ ಇದನ್ನು ಪೋಷಿಸಿದೆಯೆಂದರೆ ಸಮಾನತೆಯ ತಳಹದಿಯಿರುವ ಇಂದಿನ ಸಮಾಜದಲ್ಲಿ ಅದನ್ನು ಬೆಳೆಸಿಕೊಂಡು ಹೋಗುವುದು ಸರಿಯಾಗಲಾರದು.

            ಇನ್ನು ಸಮಾಜ ಮೌಡ್ಯ ಕೃತ್ಯಗಳಿಗೆ ಬೆಂಬಲದ ದಾಟಿಯಲ್ಲಿ ಮಾತನಾಡುವವರು ಸಮರ್ಪಕವಲ್ಲದ ಸಮರ್ಥನೆಗಳನ್ನು ಕೊಡುತ್ತಾ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಾರೆ. ಆ ಮೂಲಕ ಸಣ್ಣತನವನ್ನು ಪ್ರದರ್ಶಿಸಿ ಬಿಡುತ್ತಾರೆ. ಸಾರ್ವತ್ರಿಕವಾಗಿ ವ್ಯಕ್ತವಾಗುವ ಇಂಥ ಅಭಿಪ್ರಾಯಗಳು ಅಂತಹ ಮಾತುಗಳನ್ನಾಡುವವವರ ಸಂಕುಚಿತ ತನವನ್ನು ಪ್ರದರ್ಶನಕ್ಕಿಡುತ್ತದೆ. ಗಣ್ಯರೆನಿಸಿ ಕೊಂಡವರನೇಕರು ಇಂತಹ ಪ್ರವೃತ್ತಿಗೆ ಇಳಿಯುತ್ತಿದ್ದು ಅದು ನಿಯಂತ್ರಣ ತಪ್ಪಿದ ಅಣ್ಣಾ ಹಜಾರೆ, ಬಾಬಾ ರಾಮದೇವ, ಪ್ರಮೋದ್ ಮುತಾಲಿಕ್,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ,ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿ ಎಸ್ ಉಗ್ರಪ್ಪ,ನಿಡುಮಾಮಿಡಿ ಸ್ವಾಮೀಜಿ,ಚಂದ್ರಶೇಖರ ಕಂಬಾರ ಹೀಗೆ ಅನೇಕರು ಆಡಬಾರದ್ದನ್ನು ಆಡಿದ್ದಾರೆ. ಅನುಭವಿಸಿಯೂ ಇದ್ದಾರೆ. ಹೀಗಿರುವಲ್ಲಿ ಪೇಜಾವರ ಶ್ರೀಯಂತಹವರು ತಮ್ಮ ಪ್ರತೀ ನಡೆಯನ್ನು ಸಮೂಹ ಗಮನಿಸುತ್ತದೆ, ಅವರು ಸದ್ಯ ಖಾಸಗಿ ವ್ಯಕ್ತಿತ್ವವಲ್ಲ, ಸಾರ್ವಜನಿಕ ಕೇಂದ್ರ ಬಿಂದು ಎಂದು ಅರ್ಥ ಮಾಡಿಕೊಂಡು ತಮ್ಮ ನಾಲಗೆಯನ್ನು ಹದ್ದುಬಸ್ತಿನಲ್ಲಿಟ್ಟು ಕೊಂಡರೆ ಅವರ ಬಗೆಗಿನ ಗೌರವ ಭಾವವೂ ಉಳಿಯುತ್ತದೆ ಅಲ್ಲವೇ?

1 comment:

Anonymous said...

@ಅರಕಲಗೂಡು ಜಯಕುಮಾರ್,
ನಿಮ್ಮ ಲೇಖನ ಸತ್ಯಕ್ಕೆ ಹತ್ತಿರವಾಗಿದೆ, ಉಡುಪಿ ಮಠಕ್ಕೆ ಹೋದಾಗ ನಮಗೂ ಇಂಥ ಅನುಭವವಾಗಿದೆ. ಇಂಥ ವ್ಯವಸ್ಥೆಯನ್ನು ದಿಕ್ಕರಿಸಿ ಕುಟುಂಬ ಸಮೇತ ಆಚೆಗೆ ಎದ್ದು ಬಂದಿದ್ದೆ, ಪೇಜಾವರರು ಪಂಕ್ತಿಭೇಧದಂತಹ ಹೀನ ಆಚರಣೆಯನ್ನ ಸಮರ್ಥಿಸಿಕೊಳ್ಳುವ ಮೂಲಕ ತಮ್ಮ ಮನಸ್ಥಿತಿ ಎಂಥದ್ದು ಎಂಬುದನ್ನು ಜಗಜ್ಜಾಹೀರು ಗೊಳಿಸಿದ್ದಾರೆ.
_ಶಾಂತಮಲ್ಲಪ್ಪ,ಅರಕಲಗೂಡು