Wednesday, May 30, 2012

ಕನಸುಗಾರ ನಾ, ನಿಮಗೆ ಇನ್ನು ನಾ...?

ಕನ್ನಡ ಚಿತ್ರರಂಗ 70ರದಶಕದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರಗಳನ್ನು ಕೊಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಬಿಸಿತ್ತು. ಸಿನಿಮಾ ಗಳೆಂದರೆ ಕನ್ನಡ ಸಿನಿಮಾಗಳಂತಿರಬೇಕು ಎಂಬ ಹಾಗೆ ಇದ್ದ ಕಾಲವದು. ಪ್ರಯೋಗಶೀಲತೆಗೆ ಹೆಸರುವಾಸಿಯಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಆ ವೇಳೆಗಾಗಲೇ 'ರಾಜಣ್ಣ' ಹೆಮ್ಮರವಾಗಿ ಬೆಳೆದುನಿಂತಿದ್ದರು ಶಂಕರ್ ನಾಗ್ ರಂತ ವರ್ಕಾಲಿಕ್ ನಟ-ನಿರ್ದೇಶಕ, ವಿಷ್ಣುವರ್ಧನ್ ರಂತಹ ಮೇರು ನಟರು,ಮಂಡ್ಯದ ಗಂಡು ಅಂಬರೀಷ್ ಉದಯವಾಗಿದ್ದರು.80ರ ದಶಕದ ಆರಂಬದಲ್ಲಿ ಇವರಿಗೆ ಜೊತೆಯಾಗಿದ್ದು ಟೈಗರ್ ಪ್ರಭಾಕರ್ ಇಂತಹ ದಿಗ್ಗಜರುಗಳ ಅಬ್ಬರದ ನಡುವೆಯೇ ಅದ್ದೂರಿ ಕಮರ್ಷಿಯಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಡೂಪರ್ ಚಿತ್ರ ಕೊಡುವ ಮೂಲಕ ಇಡೀ ದೇಶದ ಚಿತ್ರ ಪ್ರೇಮಿಗಳು ನಿಬ್ಬೆರಗಾಗಿ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಮಾಡಿದ ಸಾಹಸಿ ಯುವಕನೇ ವಿ ರವಿಚಂದ್ರನ್! ಯುವಪೀಳಿಗೆಯಲ್ಲಿ ಮತ್ತು ಲಲನಾ ಮಣಿಯರ ನಡುವೆ ರವಿಚಂದ್ರನ್ ಎನ್ನುವ ಹೆಸರೇ ರೋಮಾಂಚನ ಉಂಟು ಮಾಡುವಂತದ್ದು. ರವಿ  ಈಗ 51 ತುಂಬಿ 52ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಸಂಧರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸತನದ ಟ್ರೆಂಡ್ ಸೃಷ್ಟಿಸಿದ ಕನಸುಗಾರ ರವಿಯ ಕುರಿತು ಅವಲೋಕಿಸುವುದು ಸೂಕ್ತವಾಗಬಹುದು.
           ರವಿಚಂದ್ರನ್ ಹೆಸರು ಕೇಳಿದರೆ ಇವತ್ತಿಗೂ ಮೈ ಪುಳಕಗೊಳ್ಳುವವರು ಎಷ್ಟೋ ಮಂದಿ ಇದ್ದಾರೆ! ಅಂತಹ ಮಾಂತ್ರಿಕ ಶಕ್ತಿಯನ್ನು ರವಿ ತನ್ನ ಚಿತ್ರಗಳ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪಡೆದಿದ್ದಾರೆ. ಪ್ರಯೋಗಶೀಲತೆ ಮತ್ತು ಕಲಾತ್ಮಕ ಚಿತ್ರಗಳ ಕಾಲಘಟ್ಟದ ನಂತರ ಕನ್ನಡದಲ್ಲಿ ಹೊಸಅಲೆಯ ಕಮರ್ಷಿಯಲ್ ಚಿತ್ರ ನೀಡುವ ಮೂಲಕ ಚಲನಚಿತ್ರದಲ್ಲಿ ಹೊಸ ಸಂಗೀತದ ಪರಿಚಯವನ್ನು, ಸಾಹಿತ್ಯದ ಕಸುವನ್ನು, ಹಂಸಲೇಖರಂತಹ ರತ್ನವನ್ನು ಕನ್ನಡದ ಜನತೆಗೆ ಪರಿಚಯಿಸಿದ್ದು ಒನ್ಸ್ ಎಗೇನ್ ಇದೇ ರವಿಚಂದ್ರನ್. ತಂದೆ ವೀರಾಸ್ವಾಮಿ ಚಿತ್ರ ನಿರ್ಮಾಪಕರಾಗಿದ್ದರೂ ಸಹಾ ಅವರ ಛಾಯೆಯಿಲ್ಲದೇ ಗಾಡ್ ಫಾದರ್ ಗಳ ನೆರವಿಲ್ಲದೇ ದಿಗ್ಗನೆ ಎದ್ದು ನಿಂತದ್ದು ರವಿಚಂದ್ರನ್.  1984ರಲ್ಲಿ ಪ್ರಳಯಾಂತಕ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿ ಪಡೆದ ರವಿ ಖಳನಾಗಿ ಅಭಿನಯಿಸಿದ್ದರು ಅದೂ ಮಾತಿಲ್ಲದ ಪಾತ್ರದಲ್ಲಿ ! ಪೂರ್ಣ ಪ್ರಮಾಣದ ಹೀರೋ ಆಗಿ ಅವತರಿಸಿದ್ದು 'ನಾನೇರಾಜ' ಚಿತ್ರದ ಮೂಲಕ. ಅಲ್ಲಿಂದ ಮುಂದೆ ಬಂದ ಹಲವು ಚಿತ್ರಗಳಲ್ಲಿ ಸೈಕಲ್ ಹೊಡೆದರು, ದೊಡ್ಡ ಬ್ರೇಕ್ ನೀಡಿದ್ದು ಮಾತ್ರ 1987ರಲ್ಲಿ ರವಿ ಆಲ್ ಇನ್ ಒನ್ ಆಗಿ ನಟಿಸಿ ನಿರ್ದೇಶಿಸಿ ನಿರ್ಮಿಸಿದ 'ಪ್ರೇಮಲೋಕ'ಚಿತ್ರ. ಹಲವು ಹೊಸತನಗಳಿಗೆ ಹೊಸಪ್ರತಿಭೆಗಳಿಗೆ ನಾಂದಿ ಹಾಡಿದ ಈ ಚಿತ್ರದ ನಂತರ ರವಿಚಂದ್ರನ್ ನಟಿಸಿದ ರಣದೀರ, ಶಾಂತಿಕ್ರಾಂತಿ, ಯುದ್ದಕಾಂಡ, ಅಂಜದಗಂಡು ಹೀಗೆ ಒಂದೇ ಎರಡೇ ಸಾಲು ಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟರು. ಯುವಜನತೆ ರವಿಚಂದ್ರನ್ ಸಿನಿಮಾಗಳೆಂದರೆ ಕಾದು ಕೂರುವಂತ ಪರಿಸ್ಥಿತಿ ಸೃಷ್ಟಿಯಾಯಿತು, ಎಲ್ಲ ವರ್ಗದ ಜನರಿಗೂ ರವಿ ಇಷ್ಟವಾಗುವಂತಹ ಪಾತ್ರಗಳಲ್ಲಿ ಬಂದು ಹೋದರು. ನಿಜ ಹೇಳಬೇಕೆಂದರೆ 80ರ ದಶಕದಲ್ಲಿ ಉತ್ತುಂಗದಲ್ಲಿದ್ದ ಅಂಬಿ ಮತ್ತು ವಿಷ್ಣು ಜೊತೆಗೆ ಸರಿಸಮನಾಗಿ ಮತ್ತು ವಿಭಿನ್ನವಾದ ಇಮೇಜ್ ಸೃಷ್ಟಿಸಿಕೊಂಡರು. ಜನರಿಗೆ ಹೊಸ ನೋಟದ ಸವಿಯನ್ನು ಉಣಬಡಿಸಿದರು. ರವಿ ಚಿತ್ರಗಳ ಹಾಡುಗಳು, ಅದ್ದೂರಿತನ, ಕಲಾತ್ಮಕತೆ, ತಾಂತ್ರಿಕ ನೈಪುಣ್ಯತೆ, ಕಲ್ಪನೆ ಗಳನ್ನು ಬೇರೆಯವರ ಸಿನಿಮಾಗಳಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರವಿ ಬೆಳೆದು ನಿಂತರು. ಏಕಾಂಗಿ ಎಂಬ ಚಿತ್ರವನ್ನು ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದರಾದರೂ ಗಲ್ಲಾ ಪೆಟ್ಟಿಗೆಯಲ್ಲಿ ಅದು ಯಶಸ್ಸು ಕಾಣದಿದ್ದುದರಿಂದ ಮಂಕಾದ ರವಿ ನಂತರದ ದಿನಗಳಲ್ಲಿ ಸೋಲುಗಳನ್ನು ಕಂಡರು. ಈ ನಡುವೆ ವಿವಾದಗಳು ರವಿಯನ್ನು ಅರಸಿಕೊಂಡು ಬಂದವು, ಹಳ್ಳಿಮೇಷ್ಟ್ರು ಸಿನಿಮಾ ನಾಯಕಿಯಾಗಿದ್ದ ಬಿಂದಿಯಾ, ರವಿ ಮೇಲೆ ಮಾಡಿದ ಆರೋಪ ಇಮೇಜ್ ಕೆಡಿಸದಿದ್ದರೂ ವಿವಾದಕ್ಕೆ ತಾನೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿತು. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಸರು ಮಾಡಿದ ಜೂಹಿಚಾವ್ಲಾ ಮತ್ತು ಖುಷ್ ಬೂ ಗೆ ಮೊದಲ ಅವಕಾಶ ನೀಡಿ ಬೆಳ್ಳಿತೆರೆಗೆ ಪರಿಚಯಿಸಿದ ರವಿಚಂದ್ರನ್ ಅನೇಕ ಹೊಸ ಮುಖಗಳನ್ನು ಕನ್ನಡಕ್ಕೆ ತಂದಿದ್ದಾರೆ. 
          ಹೀಗಿರುವಾಗಲೇ ಇತ್ತೀಚಿನ 'ನರಸಿಂಹ', ದಶಮುಖ ದಂತಹ ಪ್ಲಾಪ್ ಚಿತ್ರಗಳ ಸೋಲಿನ ನಡುವೆಯ ಕನಸಿನ ಮಂಜಿನ ಹನಿ ಎಂಬ ಚಿತ್ರವನ್ನು 3-4ವರ್ಷಗಳಿಂದ ನಿರ್ಮಿಸುತ್ತಲೇ ಇದ್ದಾರೆ. ಅದು ತಾನಂದುಕೊಂಡಂತೆ ಬಂದಿಲ್ಲ ಮತ್ತೆ ಮೂರನೇ ಬಾರಿಗೆ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ, ಆ ಚಿತ್ರ ಬರುವ ತನಕ ತನ್ನ ಹುಟ್ಟ ಹಬ್ಬದ ಸಂಭ್ರಮ ಇಲ್ಲ ಎಂದು ಘೋಷಿಸಿದ್ದರು.ಆದರೆ ಅಭಿಮಾನಿಗಳ ಒತ್ತಡಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರವಿ ಕಾಲಿರಿಸಿ 26ವರ್ಷಗಳು ಸಂದಿವೆ. ಈಗ ಅವರ ಅಭಿನಯದ ಕ್ರೇಜಿ ಲೋಕ ತೆರೆಗೆ ಬರಲು ಸಜ್ಜಾಗಿದೆ. ರಾಜ್ಯದಲ್ಲಿ ಹಾಲಿವುಡ್ ಮಾದರಿಯ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸೌಲಭ್ಯಗಳಿರುವ ಅತ್ಯಾಧುನಿಕ ಸಿನಿ ನಗರವನ್ನು 350ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಕನಸುಗಾರ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ ಚಿತ್ರ ತಂದ ನಂತರ ರವಿಯ ಕನಸಿನ  ಕ್ರೇಜೀಸ್ಟಾರ್ ಸಿನಿಮಾ ಬರಲಿದೆ. ಈಗ ಕನ್ನಡ ಸಿನಿಮಾಗಳಲ್ಲಿ ಹೊಸತನ ಬಂದಿದೆ, ಹೊಸಬರ ಆಗಮನವಾಗಿದೆ ಅಭಿಮಾನಿಗಳು ಮೊದಲಿನಂತಿಲ್ಲ ಬದಲಾವಣೆ ಬಯಸುತ್ತಾರೆ ಈ ಎಲ್ಲಾ ವೈರುದ್ಯಗಳ ನಡುವೆ ಕನಸುಗಾರ ಮತ್ತೊಮ್ಮೆ ಎದ್ದು ಬರುವನೇ ಕಾದು ನೋಡೋಣ..

Monday, May 7, 2012

ಕನ್ನಡ ಕಟ್ಟಾಳು ಅನಕೃ ನೆನಪಾಗ್ತಾರೇನ್ರೀ??ಮೊನ್ನೆ  ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಸಲಿಗೆ ಕನ್ನಡ ಸೇವೆ ಮಾಡುವ, ಕನ್ನಡ ಪರ ಚಿಂತನೆಗಳನ್ನಿಟ್ಟುಕೊಂಡ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವ ಮನೋಭಾವದ ಜನ ಎಷ್ಟು ಮಂದಿ ಆಯ್ಕೆಯಾಗಿದ್ದರೋ ಗೊತ್ತಿಲ್ಲ. ಆದರೆ ಕನ್ನಡ ತೇರು ಎಳೆಯುವ ಸಾರಥಿಗಳಿಗೆ ಮತ್ತು ಕನ್ನಡಿಗರಿಗೆ ಸದಾ ಕಾಲಕ್ಕೂ ನೆನಪಾಗ ಬೇಕಾದುದು ಮಾತ್ರ ಅರಕಲಗೂಡು ನರಸಿಂಗ ಕೃಷ್ಣರಾಯರು(ಅನಕೃ). ಇವತ್ತು ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಹಲವು ಪ್ರಕ್ರಿಯೆಗಳು ಜಾರಿಯಲ್ಲಿವೆ ಇಂತಹವುಗಳ ವಿರುದ್ದ ಮೊದಲ ಬಾರಿಗೆ ಸೆಟೆದು ನಿಂತದ್ದು ಮತ್ತು ಸಮಸ್ತ ಕನ್ನಡಿಗರನ್ನು ಒಗ್ಗೂಡಿಸಿದ ಕೀರ್ತಿ ಮಾತ್ರ ಅನಕೃ ಅವರಿಗೆ ಸಲ್ಲುತ್ತದೆ. ಇದೇ ಮೇ 9ಕ್ಕೆ ಅನಕೃ ಅವರ 104ನೇ ಜನ್ಮಜಯಂತಿ. ಪ್ರಸಕ್ತ ಸಂಧರ್ಭದಲ್ಲಿ ಅನಕೃ ಅವರ ವಿಚಾರ ಮಂಥನ ಹಾಗೂ ಕನ್ನಡದ ಹೋರಾಟಕ್ಕೆ, ತುಡಿತಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬ ಬಲ್ಲದು.
ಅನಕೃ ಹುಟ್ಟಿದ್ದು 9ನೇ ಮೇ 1908ರಂದು. ಅವರ ಮೂಲ ಕೋಲಾರ, ಆದರೆ ಅವರ ಅಜ್ಜ ಮತ್ತು ತಂದೆ ನರಸಿಂಗರಾಯ, ತಾಯಿ ಅನ್ನಪೂರ್ಣಮ್ಮ ನೆಲೆಸಿದ್ದು ಹಾಸನ ಜಿಲ್ಲೆಯ ಅರಕಲಗೂಡು. ಉದ್ಯೋಗ ನಿಮಿತ್ತ ನೆಲೆಯಾಗಿದ್ದ ಪೋಷಕರೊಂದಿಗೆ ಬಾಲ್ಯವನ್ನು ಅರಕಲಗೂಡಿನಲ್ಲೇ ಕೆಲ ಕಾಲ ಕಳೆದ ಅನಕೃ ಪ್ರೈಮರಿ ಹಂತದ ಶಿಕ್ಷಣವನ್ನು ಸಹಾ ಇಲ್ಲಿಯೆ ಪೂರೈಸಿದರು.. ಮತ್ತು ಆ ಕಾರಣಕ್ಕಾಗಿಯೇ ತಮ್ಮ ಹೆಸರಿನ ಮುಂದೆ ವಾತ್ಸಲ್ಯದಿಂದ ಅರಕಲಗೂಡು ಎಂದು ಸೇರ್ಪಡೆ ಮಾಡಿಕೊಂಡಿದ್ದರು. ಅದೇ ಕಾರಣಕ್ಕಾಗಿ ಇವತ್ತಿಗೂ ಅನಕೃ ಎಂದೊಡನೆ ನೆನಪಾಗುವುದು ಅರಕಲಗೂಡು ಆಗಿದೆ. ಯಾರೂ ಅವರನ್ನು ಕೋಲಾರ ಜಿಲ್ಲೆಯವರೆಂದು ಹೇಳಲಾರರು. ಇಷ್ಟೇ ಯಾಕೆ ಅನಕೃ ನೆಲೆಯಾಗಿದ್ದ ವಾಸದ ಮನೆ ಇವತ್ತಿಗೂ ಅರಕಲಗೂಡಿನ ಬ್ರಾಹ್ಮಣರ ಬೀದಿಯಲ್ಲಿದೆ. ಆದರೆ ಅವರ ಸಂಬಂಧಿಗಳು ಯಾರೂ ಅಲ್ಲಿಲ್ಲ, ಅದನ್ನು ಬಹಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ! ಅವರ ಮಕ್ಕಳು ಅನಕೃ ಟ್ರಸ್ಟ್ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಸ್ಮರಣೆ ಕಾರ್ಯಕ್ರಮ ಮಾಡುತ್ತಾರೆಯೇ ವಿನಹ ಅರಕಲಗೂಡಿನೆಡೆಗೆ ತಿರುಗಿ ನೋಡಿಲ್ಲ. ಆದರೆ ಅನಕೃ ನೆನಪಿಸಲು ಅರಕಲಗೂಡು ಪಟ್ಟಣದ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನಿಡಲಾಗಿದೆಯಲ್ಲದೇ ಸುಂದರ ಮೂರ್ತಿಯನ್ನು ಮಂಟಪ ಕಟ್ಟಿ ಇರಿಸಲಾಗಿದೆ. ಪಟ್ಟಣದ ಗ್ರಂಥಾಲಯಕ್ಕೂ ಅನಕೃ ಸ್ಮಾರಕ ಗ್ರಂಥಾಲಯವೆಂದು ಹೆಸರಿಡಲಾಗಿದೆ. ವರ್ಷಕ್ಕೊಮ್ಮೆ ಅವರ ಕುರಿತ ಕಾರ್ಯಕ್ರಮಗಳು ಸ್ಥಳೀಯರ ಆಸಕ್ತಿಯ ಮೇರೆಗೆ ಏರ್ಪಾಡಾಗುತ್ತವೆಯಷ್ಟೇ. ಇರಲಿ ಅನಕೃ ಪ್ರವರ್ಧಮಾನಕ್ಕೆ ಬಂದುದು ಕಥಾಮಂಜರಿ ಹಾಗೂ ವಿಶ್ವವಾಣಿ ಎಂಬ ಪತ್ರಿಕೆಗಳನ್ನು ಸಂಪಾದಿಸುವ ಮೂಲಕ,ಆದರೆ ಸಾರ್ವಜನಿಕವಾಗಿ ಅಧಿಕೃತವಾಗಿ ಪರಿಚಯಗೊಂಡಿದ್ದು ಕನ್ನಡದ ಆಸ್ತಿ ಎಂದೇ ಪರಿಗಣಿತವಾಗಿರುವ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರ ಮೂಲಕ. ಅನಕೃ ಅವರ ಸಾಹಿತ್ಯ ಪ್ರೇಮ ಮತ್ತು ವಿದ್ವತ್ತನ್ನು ಗ್ರಹಿಸಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತುಂಬಿದ ಸಭೆಯೊಂದರಲ್ಲಿ "ನಾನು ತಮಿಳು ಕನ್ನಡಿಗ, ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಕನ್ನಡಿಗ ಆದರೆ ನಿಮ್ಮ ನಡುವೆ ನಿಮಗೆ ತಿಳಿಯದಂತೆ ಇರುವ ಈ ಯುವಕ ಅನಕೃ ಮಾತ್ರ 'ಅಚ್ಚ ಕನ್ನಡಿಗ" ಎಂದು ಪರಿಚಯಿಸಿದಾಗ ಕಿವಿಗಡಚುಕ್ಕುವ ಕರತಾಡನ ಮೊರೆಯಿತು. ಹೀಗೆ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಗೊಂಡ ಅನಕೃ ಬ್ರಿಟೀಷ್ ಆಡಳಿತದಲ್ಲಿ ಕಂಗೆಟ್ಟು ಹೋಗಿದ್ದ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಕೆಲಸವನ್ನು ಸಾಹಿತ್ಯದ ಪರಿಚಾರಿಕೆ ಮಾಡುವ ಮೂಲಕ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ "ಕನ್ನಡ ನುಡಿ"ಗೆ ಸಂಪಾದಕರಾಗಿ ಇವರು ಮಾಡಿದ ಸೇವೆ ಅವಿಸ್ಮರಣೀಯವಾದುದು, ಒಮ್ಮೆ 1929ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್ ಆರ್ ದಿವಾಕರ್ಅವರ ಹಿಂದಿ ಬಾಷಾ ನೀತಿಯ ನಿಲುವುಗಳನ್ನು ಖಂಡಿಸಿ ಪರಿಷತ್ ಹೊರತರುತ್ತಿದ್ದ ಕನ್ನಡ ನುಡಿಯಲ್ಲಿ ಟೀಕಾತ್ಮಕ ಲೇಖನ ಬರೆದು ಪ್ರತಿಭಟಿಸಿದರು. ಕಡೆಗೆ ಪ್ರತಿಭಟನೆಯ ಭಾಗವಾಗಿ ತನ್ನ ಸಿದ್ದಾಂತವನ್ನು ಬಿಡದೇ ಕನ್ನಡ ನುಡಿಯ ಸಂಪಾದಕ ಹುದ್ದೆಯನ್ನೆ ತ್ಯಜಿಸಿ ಹೋದರು. ಆ ದಿನಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಮೊಟ್ಟ ಮೊದಲ ಬಾರಿಗೆ ಸಂಘಟಿಸಿ ಕನ್ನಡಿಗರ ಹಿತಕ್ಕೆ ಧಕ್ಕೆಯಾಗದಂತೆ ಧ್ವನಿಯೆತ್ತಿದ ಕನ್ನಡದ ಕಟ್ಟಾಳು ಈ ಅನಕೃ.
ಸತತವಾಗ 4ದಶಕಗಳ ಕಾಲ ಅಂದರೆ 40ವರ್ಷಗಳ ಕಾಲ ಸಾಹಿತ್ಯ ಕೃಷಿ ನಡೆಸಿದ ಅನಕೃ ಬರೆದ ಮೊದಲ ಕಾದಂಬರಿ "ಜೀವನಯಾತ್ರೆ", ಹೀಗೆ ಆರಂಭವಾದ ಸಾಹಿತ್ಯ ಸೇವೆಯಲ್ಲಿ 100ಕ್ಕೂ ಹೆಚ್ಚು ಕಾದಂಬರಿಗಳು, ಕಥೆಗಳು, ನಾಟಕಗಳು, ವಿಮರ್ಶೆಗಳು, ಲೇಖನಗಳು ಸಂಪಾದಿತ ಕೃತಿಗಳನ್ನು ಅನಕೃ ರಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅನಕೃ ಬರೆದಷ್ಟು ವೈವಿಧ್ಯಮಯ ಸಾಹಿತ್ಯವನ್ನು ಕನ್ನಡದ ಯಾವ ಸಾಹಿತಿಯೂ ಬರೆದಿಲ್ಲ ಎಂಬುದು ಗಮನಾರ್ಹ. ಅಷ್ಟೇ ಏಕೆ ದೇಶದ ಸಾಹಿತ್ಯ ಲೋಕದಲ್ಲಿ ಇವರಷ್ಟು ಸಂಖ್ಯೆಯ ಕಾದಂಬರಿಗಳನ್ನೂ ಯಾರೂ ಬರೆದಿರಲಾರರು. ಅವರ ಕಾದಂಬರಿಗಳು ಹಾಗೆಯೇ ಕಪೋಲ ಕಲ್ಪಿತವಲ್ಲ, ವಾಸ್ತವಕ್ಕೆ ಹತ್ತಿರವಾದ ಮತ್ತು ಜನಸಾಮಾನ್ಯರ ನಡುವಣ ಕಥಾನಕಗಳೇ ಕಾದಂಬರಿಯ ವಸ್ತುಗಳಾಗಿ ಪಾತ್ರಗಳಾಗಿ ರೂಪು ತಳೆದಿವೆ. ಆಳವಾದ ಅಧ್ಯಯನ ಶೀಲತೆ ಮತ್ತು ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಉಣಬಡಿಸುತ್ತಿದ್ದ ರೀತಿ ಸಾಹಿತ್ಯ ಪ್ರಿಯರಿಗೆ ಹಬ್ಬದೂಟವಾಗುತ್ತಿತ್ತು!
      ನವೋದಯ ಸಾಹಿತ್ಯದ ಆರಂಭದ ದಿನಗಳಲ್ಲಿ ಸಾಹಿತ್ಯ ಸೇವೆ ನಡೆಸಿದ ಅನಕೃ ಸತ್ಯ ಮತ್ತು ವಾಸ್ತವ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರಲ್ಲದೇ ಪ್ರಗತಿಶೀಲ ಸಾಹಿತ್ಯ ಚಳುವಳಿಯನ್ನು ತಮ್ಮ ಕೃತಿಗಳ ಮೂಲಕ ಆರಂಭಿಸಿಯೆ ಬಿಟ್ಟರು. ಇದು ಅಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಆ ಕಾಲಕ್ಕೆ ಪ್ರಗತಿ ಶೀಲ ಸಾಹಿತ್ಯದ ಪರಿಣಾಮ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು, ತ.ರಾ ಸುಬ್ಬರಾಯರು, ಬಸವರಾಜ ಕಟ್ಟಿಮನಿ ಮತ್ತು ನಿರಂಜನ ಪ್ರಗತಿಶೀಲ ಸಾಹಿತ್ಯದ ಮೂಲಕ ಅನಕೃ ಅವರನ್ನು ಹಿಂಬಾಲಿಸಿದರು. ಆ ಮೂಲಕ ಒಂದು ಹೊಸ ಶಕೆಯೇ ಸೃಷ್ಟಿಯಾಯಿತು. ಆ ಅನಕೃ ದಿನಗಳಲ್ಲಿ ಬರೆದ ನಗ್ನಸತ್ಯ, ಸಂಜೆಗತ್ತಲು ಹಾಗೂ ಶನಿಸಂತಾನ ಕೃತಿಗಳು ವೇಶ್ಯಾವೃತ್ತಿಯ ವಿಷಯವನ್ನು ವಿಷಧ ಪಡಿಸಿದ್ದು ಅದೊಂದು ಅಶ್ಲೀಲ ಸಾಹಿತ್ಯ ಎಂದು ಟೀಕೆಗಳು ವ್ಯಕ್ತವಾದವು, ಆದರೆ ಅದಕ್ಕೆ ಪ್ರತ್ಯುತ್ತರವಾಗಿ ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ಪುಸ್ತಕ ಬರೆದು ವಿರೋಧಿಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅನಕೃ ಪ್ರಶಂಸೆಗೂ ಪಾತ್ರರಾದರು. ಅನಕೃ ರಚಿಸಿದ ಹೆಚ್ಚು ಪ್ರಸಿದ್ದಿ ಪಡೆದ ಕಾದಂಬರಿ ಸಂಧ್ಯಾರಾಗ ಕನ್ನಡದಲ್ಲಿ ಸಿನಿಮಾ ಆಗಿಯೂ ಹೊರಬಂತು. ನಾಟಕ ರಚನೆಯಲ್ಲಿ ಜೀವನ್ಮುಖಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಅನಕೃ ಆ ಪಾತ್ರಗಳ ಮೂಲಕ ಪರಿಣಾಮಕಾರಿ ಸಂಭಾಷಣೆಗಳನ್ನು ಕಟ್ಟಿಕೊಡುತ್ತಿದ್ದರು ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಇಮ್ಮುಡಿಗೊಳಿಸಿತ್ತು. ಮಣಿಪಾಲದಲ್ಲಿ ನಡೆದ 43ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅನಕೃ ಅವರಿಗೆ ಗೌರವಾರ್ಥವಾಗಿ ಮೈಸೂರು ವಿವಿಯು ಕೂಡ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೂ ಕಾರಣವಾಗಿವೆ.
ಇಂತಹ ಅನಕೃ ಗೋಕಾಕ್ ಚಳುವಳಿಯನ್ನು ಸಂಘಟಿಸುವ ಮೂಲಕ ಕನ್ನಡಿಗರ ಹಿತಕ್ಕೆ ಧಕ್ಕೆ ತರುವ ವಿವಿಧ ಆಯಾಮಗಳ ವಿರುದ್ದ ಸ್ಪಷ್ಟ ಸಂದೇಶ ಸಾರಿದ್ದರು. ಇವತ್ತು ನಡೆಯುತ್ತಿರುವ ಕನ್ನಡ ಚಿತ್ರಗಳ ಡಬ್ಬಿಂಗ್ ವಿವಾದ ಇರಬಹುದು. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಆಡಳಿತದಲ್ಲಿ ಕನ್ನಡ ಭಾಷೆ, ನದಿ ನೀರಿನ ಹಂಚಿಕೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಹಲವು ಕನ್ನಡ ಪರ ಹೋರಾಟಕ್ಕೆ ಮತ್ತು ಚಿಂತನೆಗೆ ಒತ್ತಾಸೆಯಾಗಿ ನಾಯಕತ್ವ ನೀಡಿದ್ದು ಇದೇ ಅನಕೃ. ಆದರೆ ಇವತ್ತಿನಕನ್ನಡ ಚಳುವಳಿಯ ಮಂಚೂಣಿಯಲ್ಲಿ ನಿಂತವರ ಮನಸ್ಥಿತಿ ಹಾಗಿಲ್ಲ ಬದಲಿಗೆ ಕನ್ನಡದ ಹೆಸರಿನಲ್ಲಿ ಮೆರೆಯುವ, ದುಡ್ಡು ದೋಚುವ, ಪ್ರತಿಷ್ಟೆಗಾಗಿ ಹವಣಿಸುವ, ವಿವಿಧ ಅವಕಾಶಗಳಿಗಾಗಿ ಕನ್ನಡದ ಹೆಸರನ್ನು ಬಳಸುವ ಜನರೇ ಹೆಚ್ಚು. ಸಧ್ಯ ರಾಜ್ಯ ಕಸಾಪ ಕ್ಕೆ ಆಯ್ಕೆಯಾಗಿರುವ ಪುಂಡಲಿಕ ಹಾಲಂಬಿ ಆ ನಿಟ್ಟಿನಲ್ಲಿ ಸಜ್ಜನರು ಹಾಗೂ ಬದ್ದತೆ ಪ್ರದರ್ಶಿಸುವ ಮನೋಭಾವದವರು. ಇವರು ಸಹಾ ಹುಟ್ಟಿದ್ದು ಮತ್ತು ಪ್ರೌಢಶಾಲ ಹಂತದ ಶಿಕ್ಷಣ ಪೂರೈಸಿದ್ದು ಅರಕಲಗೂಡಿನಲ್ಲೇ, ಕನ್ನಡ ಜಾನಪದ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಡಾ ಎಚ್ ಜೆ ಲಕ್ಕಪ್ಪ ಗೌಡ ಕೂಡ ಅರಕಲಗೂಡಿನವರೇ ಆಗಿದ್ದಾರೆ. ಇಂಥಹವರ ಮಾರ್ಗದರ್ಶನದಲ್ಲಿ ಅನಕೃ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮತ್ತು ಕನ್ನಡ ಚಳುವಳಿಗೆ ಶಕ್ತಿ ತುಂಬುವ ಕೆಲಸ ಆಗಬೇಕಲ್ಲವೇ?