Sunday, September 23, 2012

ಅಸೀಂ ತ್ರಿವೇದಿ ಎಂಬ ಅವಿವೇಕಿ ರಾಜದ್ರೋಹಿ!

ದು ಸೆಪ್ಟಂಬರ್ 9, ಅಸೀಂ ತ್ರಿವೇದಿ ಎಂಬ ವ್ಯಂಗ್ಯ ಚಿತ್ರಕಾರ ಮೂರ್ಖತನ ಹಾಗೂ ಅವಿವೇಕದಿಂದ ಬಂಧನಕ್ಕೊಳಗಾಗಿದ್ದ  ಅಷ್ಟೇ ಅಲ್ಲ ತಾನು ಮಾಡಿದ ಘನಂದಾರಿ ಕೆಲಸಕ್ಕೆ ತನ್ನ ವಿರುದ್ದದ ಮೊಕದ್ದಮೆ ಕೈ ಬಿಡಬೇಕು, ಜಾಮೀನು ಸಿಕ್ಕರೂ ಬೇಡ ಎಂದು ರಚ್ಚೆ ಹಿಡಿದು ಕುಳಿತು ಅನಾಯಾಸವಾಗಿ ರಾಷ್ಟ್ರಾಧ್ಯಂತ ಪ್ರಚಾರ ಪಡೆದ ಭೂಪ!.  ಆತ ಅಣ್ಣಾ ಹಜಾರೆ ತಂಡದ ಬೆಂಬಲಿಗ ಮತ್ತು ಕರಪ್ಷ್ಯನ್ ಎಗೆನಸ್ಟ್ ಇಂಡಿಯಾದ ಸದಸ್ಯನೂ ಹೌದು. ಅಷ್ಟಕ್ಕೂ ಈತ ಮಾಡಿದ ಘನಂಧಾರಿ ಕೆಲಸ ಏನು? ಇವನನ್ನು ಬಂಧಿಸಿದ್ದೇಕೆ? ವ್ಯಂಗ್ಯ ಚಿತ್ರ ರಾಜದ್ರೋಹ ಹೇಗಾದೀತು? ತ್ರಿವೇದಿಯನ್ನ ಅಣ್ಣಾ ತಂಡ ಬೆಂಬಲಿಸೋದ್ಯಾಕೆ? ತ್ರಿವೇದಿಯ ವಿಚಾರದಲ್ಲಿ 'ಅಭಿವ್ಯಕ್ತಿ' ಸ್ವಾತಂತ್ರ್ಯದ ಹರಣ ಆಗಿದೆಯೇ? ಎಂಬ ವಿಚಾರದ ಚರ್ಚೆ ಅಗತ್ಯವಾಗಿ ಆಗಬೇಕಿದೆ.

          ಅಸೀಂ ತ್ರಿವೇದಿ 25ರ ಹರೆಯದ ಬಿಸಿ ರಕ್ತದ ತರುಣ, ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ್ ಬಳಿಯ ಶುಕ್ಲಗಂಜ್ ಎಂಬ ಊರಿನಲ್ಲಿ. ವಿವಾದಾತ್ಮಕ ರಾಜಕೀಯ ವ್ಯಂಗ್ಯ ಚಿತ್ರಕಾರನಾದ ಈತ 'ಕಾರ್ಟೂನ್ಸ್ ಎಗೆನಸ್ಟ್ ಕರಪ್ಷ್ಯನ್' ಎಂಬ ಅಂತರ್ಜಾಲ ತಾಣ ನಡೆಸುವ ಜೊತೆಗೆ ಹಿಂದಿ ಪತ್ರಿಕೆಗಳಿಗೆ ಪ್ರೀ ಲಾನ್ಸ್ ಕಾರ್ಟೂನಿಸ್ಟ್. ತನ್ನ ಅಂತರ್ಜಾಲ ತಾಣದಲ್ಲಿ ಈ ಮೇಲೆ ಪ್ರಕಟಿಸಲಾಗಿರುವ ಮಾದರಿಯ ಅನೇಕ ಚಿತ್ರಗಳನ್ನು ವ್ಯಂಗ್ಯದ ತಳಹದಿಯಲ್ಲಿ ಬರೆದಿದ್ದಾನೆ. ಆ ಚಿತ್ರಗಳಾದರೂ ಎಂಥಹವು? ದೇಶದ ಘನತೆಯ ಪ್ರತೀಕವಾಗಿರುವ ಮೂರು ಸಿಂಹಗಳ ಲಾಂಛನದ ಬದಲಿಗೆ 3ತೋಳಗಳ ಚಿತ್ರ, ಅಶೋಕ ಚಕ್ರದ ಬದಲಿಗೆ ಮನುಷ್ಯ ತಲೆಬುರುಡೆ ಚಿಹ್ನೆ ಜೊತೆಗೆ ಎಚ್ಚರಿಕೆಯ ಸಂದೇಶ, ಭಾರತದ ಸಂವಿಧಾನ ಪುಸ್ತಕದ ಮೇಲೆ ನಾಯಿರೂಪದ ಉಗ್ರ ಕಸಬ್ ಕಾಲೆತ್ತಿ ಗಲೀಜು ಮಾಡುತ್ತಿರುವ ಚಿತ್ರ, ಭಾರತದ ಸಂಸತ್ ಭವನವನ್ನು ಮಲವಿಸರ್ಜಿಸುವ ಕಮೋಡ್ ರೀತಿ ಚಿತ್ರಿಸಿ ಮತದಾನ ಪತ್ರವನ್ನು ಟಿಶ್ಯೂ ಪೇಪರ್ ಹಾಗೂ ಸಂಸದರನ್ನು ಮಲದ ಮೇಲೆ ಹಾರಾಡುವ ನೊಣಗಳಂತೆ ಚಿತ್ರಿಸಿರುವುದು, ರಾಷ್ಟ್ರ ಪಕ್ಷಿಯ ಸ್ಥಾನದಲ್ಲಿ ರಣಹದ್ದಿನ ಚಿತ್ರ, ಭಾರತ ಮಾತೆಯನ್ನ ಸಾರ್ವಜನಿಕವಾಗಿ ರೇಪ್ ಮಾಡುವ ಚಿತ್ರ ಹೀಗೆ ಒಂದೇ ಎರಡೆ ರಾಷ್ಟ್ರದ ಅಂತ: ಶಕ್ತಿಯ ಪ್ರತೀಕವಾದ ಸಂಕೇತಗಳನ್ನು ಮನಬಂದಂತೆ ಚಿತ್ರಿಸಲಾಗಿದೆ.ಹೀಗೆ ರಚಿಸಿದ  ಅಂತರ್ಜಾಲ ತಾಣದ ಅತ್ಯಂತ ಶಾರ್ಪ್ ಎನಿಸುವಂತಹ  ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಮುಂಬೈ ಮೆಟ್ರೊಪಾಲಿಟನ್ ರೀಜನಲ್ ಡೆವಲಪ್ ಮೆಂಟ್ ಅಥಾರಿಟಿ ಯಲ್ಲಿ ಮೊದಲ ಭಾರಿಗೆ ಪ್ರದರ್ಶಿಸುವ ಹುಂಬತನವನ್ನು ತೋರಿದ್ದ. ಮುಂಬೈ ಮೂಲದ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಆರ್ ಪಿ ಪಾಂಡೆ ಮುಂಬೈ ಕ್ರೈಂ ಬ್ರಾಂಚ್ ಪೋಲೀಸರಿಗೆ ನೀಡಿದ ದೂರಿನ ಮೇರೆಗೆ 27 ಡಿಸೆಂಬರ್ 2011ರಲ್ಲಿ ಅವಹೇಳನಕಾರಿ ಚಿತ್ರಗಳ ಈತನ ಅಂತರ್ಜಾಲ ತಾಣವನ್ನ ಮುಂಬೈ ಪೋಲೀಸರು ನಿಷೇಧಿಸಿದ್ದರು. ಒತ್ತಡಗಳ ನಡುವೆ ತೀರ ತಡವಾಗಿ ಅಂದರೆ ಅಣ್ಣಾಹಜಾರೆ ತಂಡ ಮುಂಬೈನಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ವೇಳೆ ಈತ ರಚಿಸಿದ್ದ ವ್ಯಂಗ್ಯ ಚಿತ್ರಗಳನ್ನು ಪ್ಲೈ ಕಾರ್ಡ್ಗಳ ಮೂಲಕ ಪ್ರದರ್ಶಿಸಿದ್ದರಿಂದ ಜನವರಿ  2012ರಲ್ಲಿ ಅಸೀಂ ತಿವಾರಿಯ ವಿರುದ್ದ 124(ಎ) ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 66 ಎ ಪ್ರಕರಣ ದಾಖಲಾಯಿತು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಈತ ಮತ್ತೆ ತನ್ನ ಚಾಳಿಯನ್ನ ಮುಂದುವರೆಸಿದ್ದ. ಕೇಂದ್ರ ಸಚಿವ ಕಪಿಲ್ ಸಿಬಲ್ ಮತ್ತಿತರರ ವಿರುದ್ದ ಪ್ರಚೋದನಾಕಾರಿಯಾದ ಮತ್ತು ತೀರ ವೈಯುಕ್ತಿಕ ಎನಿಸುವ ಅಂಶಗಳನ್ನು ವ್ಯಂಗ್ಯ ಚಿತ್ರದ ಮೂಲಕ ಹೊರ ಹಾಕಿದ್ದ. ಇದೇ ವೇಳೆ ಕಲ್ಕತ್ತಾದಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ತನ್ನ ವ್ಯಂಗ್ಯ ಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರನ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಮುಂದಾದಾಗ ಅದೇ ಘಟನೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಸೇವ್ ಯುವರ್ ವಾಯ್ಸ್ ಎಂಬ ಅಂತರ್ಜಾಲ ತಾಣ ಚಳುವಳಿಯನ್ನು ಹುಟ್ಟುಹಾಕಿದ್ದ. ಮುಂಬೈನ ಬಾಂದ್ರಾ ಮೆಟ್ರೋಪಾಲಿಟನ್ ಕೋರ್ಟ್ ಜಾಮೀನು ರಹಿತ ವಾರಂಟ್ ಅನ್ನು ತ್ರಿವೇದಿಯ ಬಂಧನಕ್ಕಾಗಿ ಆಗಸ್ಟ್ ತಿಂಗಳಲ್ಲಿ ಹೊರಡಿಸಿದಾಗ ಚುರುಕಾದ ಪೋಲೀಸರು 
ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಗಂಗಾಘಾಟ್ ಬಳಿ ಸೆ.8ರಂದು ಅಸೀಂ ತ್ರಿವೇದಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯ ತ್ರಿವೇದಿಯನ್ನು ಸೆ.24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಅಷ್ಟೇ ಅಲ್ಲ ಆತನ ವಿರುದ್ದ ಹೂಡಲಾಗಿರುವ ರಾಜದ್ರೋಹದ ಆಪಾದನೆಯ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯ ಬಯಸಿದೆ.ಇಂದಿಗೆ (ಸೆ.24) ಆತನ ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದೆ. ಒಂದೊಮ್ಮೆ ಅಪರಾಧ ಸಾಬೀತಾದರೆ ತ್ರಿವೇದಿಗೆ 2ವರ್ಷ ಜೈಲು ಶಿಕ್ಷೆ ಜೊತೆಗೆ 5000ರೂ ದಂಡ ತೆರಬೇಕಾತ್ತದೆ. ಇಂತಹುದೇ ಪ್ರಕರಣದಲ್ಲಿ ಒಮ್ಮೆ ತಮಿಳುನಾಡಿನ ಫ್ರಂಟ್ ಲೈನ್ ಪತ್ರಿಕೆ ಶಿಕ್ಷೆ ಅನುಭವಿಸಿತ್ತೆಂಬುದು ಇಲ್ಲಿ ಸ್ಮರಣೀಯ.

        ಇಡೀ ಪ್ರಕರಣದಲ್ಲಿ ಅಸೀಂ ತ್ರಿವೇದಿಯ ವಿರುದ್ದ ಹೂಡಲಾಗಿರುವ ರಾಜದ್ರೋಹದ ಆಪಾದನೆ ಆತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ವ್ಯವಸ್ಥೆಯ ವ್ಯಂಗ್ಯವನ್ನು ಆತ ವ್ಯಕ್ತಪಡಿಸಿದ್ದಾರೆ ಇದು ರಾಜ ದ್ರೋಹವಲ್ಲ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಸೇರಿದಂತೆ ಪ್ರಮುಖ ಪತ್ರಿಕೆಗಳ ಸಂಪಾದಕೀಯದಲ್ಲಿ ಮೂಂಬೈ ಪೋಲೀಸರ ಕ್ರಮವನ್ನು ಟೀಕಿಸಲಾಗಿದೆ.ಅಷ್ಟೇ ಅಲ್ಲ ಕನ್ನಡದ ಪ್ರಮುಖ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಕೆಲ ತಿಂಗಳ ಹಿಂದೆ ಅಂಬೇಡ್ಕರ್ ಕುರಿತ ವ್ಯಂಗ್ಯ ಚಿತ್ರಕ್ಕೆ ತಮಿಳುನಾಡಿನಲ್ಲಿ ಆಕ್ಷೆಪ ವ್ಯಕ್ತವಾದದ್ದನ್ನು ಸಮೀಕರಿಸಿ ಅಸೀಂ ತ್ರಿವೇದಿ ಯ ಬೆಂಬಲಕ್ಕೆ ನಿಂತಿದ್ದಾರೆ.ಕಾಂಗ್ರೆಸ್ ವಿರೋಧಿ ಧೋರಣೆಯ ಬಿಜೆಪಿ ಮತ್ತಿತರ ವಿರೋಧ ಪಕ್ಷಗಳು ಈ ಪ್ರಕರಣವನ್ನು ಅನುಕೂಲ ಸಿಂಧುವಾಗಿ ಬಳಸಿಕೊಂಡಿವೆ.  ಅಭಿವ್ಯಕ್ತ ಸ್ವಾತಂತ್ರ್ಯ ಹರಣ ಎಂಬುದೇನೋ ಸರಿ ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಒಂದು ಇತಿಮಿತಿ ಎಂಬುದು ಇದೆಯಲ್ಲವೇ? ರಾಜಕಾರಣಿಗಳನ್ನ, ಅಧಿಕಾರಸ್ಥರನ್ನ ಮತ್ತು ಸಮಾಜ ಘಾತುಕರನ್ನ ಎಲ್ಲೆಯ ಚೌಕಟ್ಟಿನಲ್ಲಿ ಟೀಕಿಸುವುದು ಖಂಡಿತಾ ತಪ್ಪಲ್ಲ. ಆದರೆ ದೇಶದ ಘನತೆಯ ಪ್ರತೀಕವಾದವುಗಳನ್ನ ಕೀಳು ಅಭಿರುಚಿಯಲ್ಲಿ ಚಿತ್ರಿಸುವುದು ಎಷ್ಟು ಸರಿ? ಅದು ಖಂಡಿತವಾಗಿಯೂ ದೇಶ ದ್ರೋಹವೇ ಹೌದಲ್ಲ.ಕೆಲವು ತಿಂಗಳ ಹಿಂದೆ ವಿವಾದಕ್ಕೆಡೆಯಾದ ಅಂಬೇಡ್ಕರ್ ಕುರಿತ ಚಿತ್ರ ಒಂದು ಕಾಲಘಟ್ಟಕ್ಕೆ ಸರಿ, ಸ್ವತ: ಅಂಬೇಡ್ಕರ್ ಈ ಕುರಿತು ನಕ್ಕು ಸುಮ್ಮನಾಗಿದ್ದರಂತೆ. ಆದರೆ ಅದನ್ನೇ ಮಕ್ಕಳ ಪಠ್ಯದಲ್ಲಿ ಅಳವಡಿಸುವುದು ಯಾವ ಕಾರಣಕ್ಕೂ ಸಧಭಿರುಚಿಯ ಲಕ್ಷಣವಲ್ಲ ಹಾಗಿದ್ದಾಗ ಈ ಪ್ರಕರಣವನ್ನು ಅಸೀಂ ತ್ರಿವೇದಿಯ ವ್ಯಂಗ್ಯ ಚಿತ್ರಗಳ ಜೊತೆ ಪ್ರಜಾವಾಣಿ ಸಂಪಾದಕೀಯದಲ್ಲಿ ಹೋಲಿಸಿದ್ದು ಅದರ ಬದಲಾದ ಧೋರಣೆಯ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ! 

        ದೇಶದ ಘನತೆಯ ಪ್ರತೀಕವಾದ ಸಂಕೇತಗಳನ್ನು ಕೀಳು ಅಭಿರುಚಿಯಲ್ಲಿ ಚಿತ್ರಿಸಿದ್ದನ್ನು ಯಾವ ಮಾನದಂಡದ ಆಧಾರದ ಮೇಲೆ ಅಡ್ವಾಣಿ, ಅರವಿಂದ ಕ್ರೇಜಿವಾಲ ಮತ್ತಿತರರು ಬೆಂಬಲಿಸುತ್ತಿದ್ದಾರೆ. ಸಾಂಕೇತಿಕ ವ್ಯಂಗ್ಯದ ಭಾವನೆಗಳನ್ನು ಅವರು ಒಪ್ಪಿಕೊಳ್ಳುವರೇ?  ಕೆಲವೇ ವರ್ಷಗಳ ಹಿಂದೆ ದೇಶದ ಖ್ಯಾತ ಕಲಾವಿದ ಎಂ ಎಫ್ ಹುಸೇನ್ ಹಿಂದೂ ದೇವತೆಗಳ ಕುರಿತು ರಚಿಸಿದ್ದ ಚಿತ್ರಗಳಲ್ಲಿ ಇವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಂಡಿರಲಿಲ್ಲವೇ? ಮನನೊಂದು ದೇಶ ತೊರೆದ ಹುಸೇನರ ವಿರುದ್ದ ನಿಂತಿದ್ದ ಇದೇ ಗ್ಯಾಂಗ್ ಇವತ್ತು ರಾಜದ್ರೋಹಿ ಆಪಾದನೆಯಡಿ ಬಂಧಿತನಾಗಿರುವ ತ್ರಿವೇದಿಯನ್ನು ಬೆಂಬಲಿಸುತ್ತಿರುವುದರ ಹಿಂದಿನ ಹುನ್ನಾರವೇನು ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಅಷ್ಟಕ್ಕೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಳವಡಿಕೆಯಾಗಿರುವ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಯಾವುದೇ ಉಲ್ಲೇಖಗಳಿಲ್ಲ ಆದಾಗ್ಯೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಸೀಮೀತ ಚೌಕಟ್ಟಿನಲ್ಲಿ ಆರೋಗ್ಯಕರ ಟೀಕೆ ಟಿಪ್ಪಣಿ ಇರಬೇಕೆ ವಿನಹ ಭಾವನೆಗಳನ್ನು ಕೆಣಕುವ ಯಾವುದೇ ಕ್ರಿಯೆಯೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬಿಂಬಿತವಾಗಬಾರದರು. ಅದು ಹುಸೇನ್ ಇರಲಿ ಅಸೀಂ ತ್ರಿವೇದಿ ಇರಲಿ ಲಂಗು ಲಗಾಮಿಲ್ಲದೇ ಅಪಚಾರ ಎಸಗುವ ಕೃತ್ಯಗಳಲ್ಲಿ ತೊಡಗಿದಾಗ ಅದು ಖಂಡಿತವಾಗಿಯೂ ಅಪರಾಧವೇ ಆಗಿರುತ್ತದೆ ಎಂಬುದು ಸತ್ಯ ಅಲ್ಲವೇ? ಇನ್ನು ಅಣ್ನಾತಂಡ ಇಡೀ ದೇಶದ ಭಾವನೆಗಳನ್ನ ಒಗ್ಗೂಡಿಸಿ ಅದನ್ನು ಕಾಯ್ದುಕೊಳ್ಳಲಾಗದೇ ಪ್ರಹಸನ ನಡೆಸಿ ವಿಸರ್ಜನೆಯಾಗಿದೆ ಆ ತಂಡದ ಹಿಂದಿನ ಹುನ್ನಾರಗಳೇನು? ಅವುಗಳ ಹಿಂದೆ ಯಾರೆಲ್ಲ ಇದ್ದಾರೆ? ಅಣ್ನಾತಂಡದ ಮುಖವಾಡವೇನು ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ ಹೀಗಿರುವಾಗ ಕಾಂಗ್ರೆಸ್ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಣ್ಣಾತಂಡ ತ್ರಿವೇದಿಯನ್ನು ಬೆಂಬಲಿಸಿದ್ದು ಒಪ್ಪತಕ್ಕ ಮಾತೇ?