Sunday, January 20, 2013

ಮುಸ್ಲಿಂ ವಿವಿ ವಿವಾದದ ಕರಿನೆರಳು.!ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಉದ್ದೇಶಿತ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಗೆ ಗೆ ಯಾವುದೇ ಸಹಕಾರ ನೀಡುವುದಿಲ್ಲ. ಟಿಪ್ಪು ವಿವಿ ಸ್ಥಾಪಿಸಿದರೆ ಉಗ್ರಗಾಮಿಗಳ ಕೇಂದ್ರವಾಗಲಿದೆ. ಈಗಾಗಲೇ ಆಲಿಗಢ ಉಗ್ರರ ತಾಣವಾಗಿದೆ ಎಂದು ಗೋ ಮಧುಸೂದನ್  ಹೇಳಿದ ನಂತರ ಟಿಪ್ಪು ವಿವಿ ಸ್ಥಾಪನೆಗೆ ಸಂಚಕಾರ ಎದುರಾಗಿದೆ. ಇದರ ಬೆನ್ನಲ್ಲೇ, ಅಲಿಘರ್ ವಿವಿ ಸ್ಥಾಪಿಸಿ ಈಗಾಗಲೇ ಮಾಡಿಕೊಂಡಿರುವ ರಗಳೆ ಸಾಕು, ಮುಸ್ಲಿಂ ವಿವಿ ಬೇಡ. ಮುಸ್ಲಿಂ ವಿವಿ ಸ್ಥಾಪನೆ ಆಗುವುದಾದರೆ ಅದಕ್ಕೆ ಬೇರೆ ಹೆಸರಿಡಿ. ಟಿಪ್ಪು ದೇಶ ದ್ರೋಹಿ, ಹೀಗೆ ನಾನಾ ತರದ ಪ್ರತಿಕ್ರಿಯೆಗಳು ನಿತ್ಯವೂ ಕೇಳಿ ಬರುತ್ತಿವೆ. ಹಾಗಾದರೆ ಮುಸ್ಲಿಂ ವಿವಿ   ಏಕೆ ಬೇಕು, ಯಾಕೆ ಬೇಡ ಇವೆರೆಡರ ಹಿಂದಿನ ಹುನ್ನಾರಗಳೇನು? ಗೋ ಮಧುಸೂಧನ್ ಮತ್ತು ಚಿದಾನಂದ ಮೂರ್ತಿ ಮಾತುಗಳಲ್ಲಿ ಸತ್ಯ ಎಷ್ಟು ? ಮಿಥ್ಯ ಎಷ್ಟು? ಇವುಗಳ ಲಾಭ ಯಾರಿಗೆ ಎಂಬ ಪ್ರಶ್ನೆಗಳು ಸಹಜವೇ.

      ಬಹುಶ: ವಿವಿ ಗಳಿಗೆ ಹೆಸರಿಡುವುದು, ಪ್ರತಿಮೆ ಸ್ಥಾಪಿಸುವುದು ಕೇವಲ ಸ್ವಾರ್ಥ ಸಾಧನೆಯ ಉದ್ದೇಶಗಳೇ ವಿನಹ ಇದರಿಂದ ಜನಸಾಮಾನ್ಯನಿಗೆ ಕಿಂಚಿತ್ತೂ ಒಳ್ಳೆಯದಾಗುವುದಿಲ್ಲ, ಹಾಗೆಯೇ ಒಳ್ಳೆಯ ಭಾವನೆಗಳು ಬೆಳೆಯುವುದಿಲ್ಲ ಬದಲಿಗೆ ಕೋಮು ಭಾವನೆಗಳು ಜಾಗೃತವಾಗುತ್ತವಷ್ಟೇ! ಅದು ಸತ್ಯವಾದ ವಿಚಾರ ಸ್ಥೀರಾಸ್ಥಿಗಳಿಗೆ ಹೆಸರಿಟ್ಟ ಮಾತ್ರಕ್ಕೆ ಆ ಪುಣ್ಯಾತ್ಮರ ಹೆಸರಿಗೆ ಸಾರ್ಥಕತೆ ದಕ್ಕುವುದಿಲ್ಲ ಆದರೆ ಕೆಡುಕುಗಳಾದಾಗ ಆ ಕಳಂಕಗಳು ತಟ್ಟಿ ಬಿಡುತ್ತವೆ ಇದು ಸಾಬೀತಾದ ವಿಚಾರ. ಈ ಮೊದಲೇ ಪ್ರಸ್ಥಾಪಿಸಿದಂತೆ ವೈಯುಕ್ತಿಕ ಜಾತೀಯ ಭಾವನೆಗಳಿಗೆ ಇಂಥವು ಬಳಕೆಯಾಗುವುದು ದುರಂತವೇ ಸರಿ. ಅಂದ ಹಾಗೆ ಮುಸ್ಲಿಂ ವಿವಿ ಸ್ಥಾಪನೆಗೆ ಯಾಕೆ ಇಷ್ಟು ವಿರೋಧ? ನಿಜಕ್ಕೂ ಅಲಿಘರ್ ವಿವಿ ಉದ್ದೇಶ ಏನಾಗಿತ್ತು? ಆದರೆ ಅದು ದುರ್ಭಳಕೆ ಆಗಿದ್ದು ಹೇಗೆ? ಎಂಬುದು ಇಂಟರೆಸ್ಟಿಂಗ್ ಸಂಗತಿ ನಂತರ ರಾಜ್ಯದ ವಿಚಾರಕ್ಕೆ ಬರೋಣ.

       ಉತ್ತರ ಪ್ರದೇಶದಲ್ಲಿ ಅಲೀಘರ್ ನಲ್ಲಿ ಸ್ಥಾಪಿತವಾದ ಮುಸ್ಲಿಂ ವಿಶ್ವ ವಿದ್ಯಾನಿಲಯಕ್ಕೆ ಅಜಮಾಸು 138ವರ್ಷಗಳು ಸಂದಿವೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ತಾಪನೆಗೊಂಡ ಈ  ವಿವಿ ಅಸ್ತಿತ್ವಕ್ಕೆ ಬಂದಿದ್ದು 1875ರಲ್ಲಿ, ಇದನ್ನು ಸ್ಥಾಪಿಸಿದ್ದು ಸೈಯ್ಯದ್ ಅಹಮದ್ ಖಾನ್  ಆತ ಭಾರತೀಯ ಮುಸ್ಲಿಂ ಸಮಾಜದ ತತ್ವಜ್ಞಾನಿ ಹಾಗೂ ಸಾಮಾಜಿಕ ಕಾರ್ಯಕರ್ತ. 18ನೇ ಶತಮಾನದಲ್ಲಿ ಬದುಕಿದ್ದ 2ನೇ ಶಾ ಆಲಂ ಎಂಬ ಚಕ್ರವರ್ತಿ ಮರಿಮೊಮ್ಮಗ ನಾಗಿದ್ದ ಸೈಯ್ಯದ್ ಆಲಂ ಖಾನ್ ಸರ್ ಪದವಿ ಪಡೆದ ಪ್ರಾಜ್ಞರು ಹೌದು. ಬಿಟೀಷ್ ಆಡಳಿತದಲ್ಲಿ ಜ್ಯೂರಿಸ್ಟ್ ಆಗಿದ್ದ ಮಹತ್ವಕಾಂಕ್ಷಿ ಆಗಿದ್ದ ಈತ ಪಾಶ್ಚಿಮಾತ್ಯ ಶೈಲಿಯ ಶಿಕ್ಷಣವನ್ನು ದೇಶೀಯವಾಗಿ ಅಳವಡಿಸಿ,ಹಿಂದೂ ರಾಜ ಜೈಕಿಸನ್ ಎಂಬುವವರ ಸಹಾಯ ಪಡೆದು  ದೇಸೀ ಮುಸ್ಲಿಂ ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ 'ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜು' ನ್ನು ತೆರೆದ. ಈ ಸೈಯ್ಯದ್, ಅಂದಿನ ದಿನಗಳಲ್ಲಿ  ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರದಾನ ಪಾತ್ರ ವಹಿಸಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದ್ದ ಮತ್ತು ಬ್ರಿಟೀಷ್ ರಾಜ್ ಅನ್ನು ಬೆಂಬಲಿಸುವ ಸಂಶಯಾಸ್ಪದ ಧೋರಣೆಗಳನ್ನು ಹೊಂದಿದ್ದ, ಮತ್ತು ಬ್ರಿಟೀಷ್ ರಿಗೆ ಸಹಕಾರಿಯಾಗುವಂತೆ ಪ್ರತ್ಯೇಕ ಮುಸ್ಲಿಂ ಸಂಘಟನೆಯನ್ನು ಹುಟ್ಟುಹಾಕಿದ್ದ. ಉರ್ದು ಪ್ರಾತಿನಿದ್ಯಕ್ಕಾಗಿ ಪ್ರತಿಪಾದಿಸುತ್ತಿದ್ದ ಈತ ಪ್ರತಿಭಟನೆಗಳು ಎದುರಾದಾಗ ಹಿಂದಿ-ಉರ್ದು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ. ಆದರೆ ನಂತರದ ದಿನಗಳಲ್ಲಿ ತನ್ನ ಅಸಲು ಬಣ್ಣವನ್ನು ವ್ಯಕ್ತಪಡಿಸುತ್ತ ಹಿಂದೂ ವಿರೋಧಿ ಧೋರಣೆ ಹೊಂದಿದ್ದ. ಇಂತಹ ಕೋಮುವಾದಿ ಹುಟ್ಟುಹಾಕಿದ ಕಾಲೇಜು ಮುಂದೆ 1920ರಲ್ಲಿ ಅಲಿಘರ್ ಮುಸ್ಲಿಂ ವಿವಿ ಯಾಗಿ ಬದಲಾಯಿತು. 1939ರ ವರೆಗೆ ಭಾರತ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತಿದ್ದ ವಿವಿ ನಂತರದ ದಿನಗಳಲ್ಲಿ ಅಸಲಿ ಮುಖವನ್ನು ಪ್ರದರ್ಶಿಸಲಾರಂಭಿಸಿತು, ವಿವಿ ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಮುಸಲ್ಮಾನ ಪ್ರತ್ಯೇಕವಾದದ ಚಳುವಳಿಗೆ ಬೆಂಬಲಿಸಲು ನಿಂತು ಬಿಟ್ಟರು, ಅವತ್ತು ಈ ವಿವಿ ಬೆಂಬಲಕ್ಕೆ ನಿಂತಿದ್ದು ಭಾರತ ವಿಭಜನೆಗೆ ಕಾರಣಕರ್ತನಾದ ಮೊಹಮ್ಮದ್ ಆಲಿ ಜಿನ್ನಾ ಬೆನ್ನ ಹಿಂದೆ! ಸರಿ ಸುಮಾರು 1155ಎಕರೆ ವಿಸ್ತೀರ್ಣವನ್ನು ಹೊಂದಿರುವ ಅಲೀಘರ್ ವಿವಿ 300ಕ್ಕೂ ಹೆಚ್ಚು ಕೋರ್ಸುಗಳನ್ನು ಹೊಂದಿದೆ. ದೇಶ ವಿದೇಶಗಳಿಂದ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ.ದೇಶದ 20ಸಂಶೋಧನಾ ವಿವಿ ಗಳ ಪೈಕಿ ಈ ವಿವಿ ಗೆ 8ನೇ ಸ್ಥಾನವಿದೆ. 30000ಕ್ಕೂ ಹೆಚ್ಚು ವಿದ್ಯಾರ್ಥಿಗಳು, 2000ಕ್ಕೂ ಹೆಚ್ಚು ಪ್ರಾಧ್ಯಾಪಕರುಗಳು, 95ವಿಭಾಗಗಳು ಇರುವ ಪ್ರತಿಷ್ಠಿತ ವಿವಿ ಗಳಲ್ಲಿ ಒಂದು. 

       ದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಂವಿಧಾನತ್ಮಕವಾಗಿ ಅವಕಾಶಗಳನ್ನು ನೀಡಲಾಗಿದೆ, ಆದರೆ ಪ್ರತ್ಯೇಕತೆಯ ಭಾವನೆಗಳನ್ನು ಸೃಷ್ಟಿಸುವ ಕ್ರಿಯೆಗಳು ಇಂತಹ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ನಡೆಯುತ್ತಿದೆ. ಚುನಾವಣೆಗಳು ಹತ್ತಿರ ಬರುತ್ತಿರುವಾಗಲೇ ಮತಬ್ಯಾಂಕಿಗಾಗಿ ಕೇಂದ್ರ ಸರ್ಕಾರ ಇಂತಹದ್ದೊಂದು ಕ್ರಿಯೆಗೆ ಕೈ ಹಚ್ಚಿದ್ದು ಮಾತ್ರ  ಅಪರಾಧವೇ ಸರಿ. ರಾಜೇಂದ್ರ ಸಾಚಾರ್ ಮುಸ್ಲಿಂರ ಏಳಿಗೆಗಾಗಿ ಅನೇಕ ಅಂಶಗಳ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ 23ವರ್ಷ ಕಳೆದಿದೆ, ಆಗೆಲ್ಲ ಮುಸಲ್ಮಾನರ ಏಳಿಗೆಗೆ ಕ್ರಮ ಜರುಗಿಸದ ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ವಿರುವ ದಿನಗಳಲ್ಲೆ ಅದು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯದಲ್ಲಿ ಮುಸ್ಲಿಂ ವಿವಿ ಸ್ಥಾಪಿಸುವ ಅಗತ್ಯವಿತ್ತೆ? ರಾಜ್ಯದಲ್ಲಿ ಈಗಾಗಲೇ 10 ವಿವಿಗಳು ಅಸ್ತಿತ್ವದಲ್ಲಿವೆ ಹೀಗಿರುವಾಗ ಪ್ರತ್ಯೇಕವಾಗಿ ಮುಸ್ಲಿಂ ವಿವಿ ಅಗತ್ಯತೆ ಏನು? ಇದು ಯಾರನ್ನು ಓಲೈಸುವ ಕ್ರಮ ? ಇದರಿಂದ ಮುಸ್ಲಿಂ ರಿಗೆ ಯಾವ ರೀತಿಯ ಪ್ರಯೋಜನವಾಗಲು ಸಾಧ್ಯ? ಅಲ್ಲವೇ. ದೇಶದಲ್ಲಿ ಮುಸ್ಲಿಂರ ಪರವಾಗಿ ಯಾವುದೇ ಪರಿಣಾಮಕಾರಿಯಾದ ಯೋಜೆನಗಳನ್ನು ಅನುಷ್ಠಾನಗೊಳಿಸುವ ಯೋಗ್ಯತೆಯಿಲ್ಲದ ಸರ್ಕಾರ ವಿವಿ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳಬೇಕೇ? 
      ಇನ್ನು ಬಿಜೆಪಿಗಳು ಟಿಪ್ಪು ಸುಲ್ತಾನ್ ನ ದೇಶಭಕ್ತಿಯ ಬಗೆಗೆ ಹಲವು ವರ್ಷಗಳಿಂದಲೂ ವಿವಾದಗಳು ಇದ್ದೇ ಇವೆ. ಚಿದಾನಂದ ಮೂರ್ತಿ, ಡಿ ಎಚ್ ಶಂಕರ ಮೂರ್ತಿ ಇತ್ಯಾದಿಗಳು ಈ ಕುರಿತು ತಮ್ಮದೇ ಧಾಟಿಯಲ್ಲಿ ವಾದ ಮುಂದಿಡುತ್ತಾರಾದರೂ ಆತ ಬ್ರಿಟೀಷರ ವಿರುದ್ದ ಮೈಸೂರು ರಾಜ್ಯ ಉಳಿಸಿಕೊಳ್ಳಲು ಹೋರಾಡಿದ್ದ ಎಂಬುದು ನಿರ್ವಿವಾದ. ಮುಸ್ಲಿಂ ವಿವಿ ಸ್ಥಾಪನೆಗೆ ಕೇಂದ್ರದಲ್ಲಿ ಸಚಿವರಾಗಿರುವ ರೆಹಮಾನ್ ಖಾನ್ ಹೇಳಿಕೆ ನೀಡಿದಾಗ ಬಿಜೆಪಿ ಯ ಗೋ ಮಧುಸೂಧನ್ , ಸಿ ಟಿ ರವಿ ಕೋಮು ನಾಲಗೆಯನ್ನು ಹರಿಬಿಟ್ಟಿದ್ದಾರೆ. ಮುಸ್ಲಿಂ ವಿವಿ ಸ್ಥಾಪನೆ ಆದಾಕ್ಷಣ ಅದು ಮುಸ್ಲಿಂ ರಿಗೆ ಸೀಮಿತವಾಗಿರೊಲ್ಲ ಅಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಕೋಮುಗಳಿಗೂ ಸಮಾನ ಪ್ರವೇಶಾವಕಾಶ ಇದ್ದೇ ಇರುತ್ತದೆ ಮತ್ತು ಭಾರತ ದೇಶದ ಕಾನೂನಿನಂತೆ ಕಾರ್ಯ ನಿರ್ವಹಿಸುತ್ತದೆ ವಿನಹ ಪಾಕೀಸ್ತಾನದ ಕಾನೂನಿನಂತೆ ಅಲ್ಲ. ಆದರೆ ಅಲೀಘರ್ ವಿವಿ ಯ ನೆಪದಲ್ಲಿ ಮುಸ್ಲಿಂ ಭಾವನೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾಡುವುದು ತಪ್ಪು. ಮುಸ್ಲಿಂ ವಿವಿ ಮುಸಲ್ಮಾನರ ಅಡಗು ತಾಣವಾಗುತ್ತದೆ ಎಂಬ ಹೇಳಿಕೆ ನೀಡುವ ಮಧುಸೂಧನ ಮರುದಿನವೇ ಶ್ರೀರಂಗ ಪಟ್ಟಣದ ಮಸೀದಿಗಳಿಗೆ ತೆರಳಿ ಅಲ್ಲಿನ ಗೋಡೆಗಳಲ್ಲಿ ಶ್ರೀ ರಂಗನಾಥನ ಕುರುಹುಗಳನ್ನು ಪರೀಕ್ಷಿಸ ಹೊರಡುವುದು ಆ ಮೂಲಕ ಕೋಮುಭಾವನೆಯನ್ನು ಪ್ರಚೋದಿಸದಂತೆ ಅಲ್ಲವೇ? ಇತಿಹಾಸದಲ್ಲಿ ಸಾಕಷ್ಟು ತಪ್ಪುಗಳು ಆಗಿ ಹೋಗಿವೆ ಆದರೆ ಮತ್ತೆ ಮರುಕಳಿಸ ಬೇಕೆ? ಅಯೋದ್ಯೆ ಘಟನೆ ನಮ್ಮ ಕಣ್ಣ ಮುಂದಿದೆ ಅದಕ್ಕಾಗಿ ನಾವು ತೆತ್ತ ಸಾವು ನೋವುಗಳು ಅವರಿಗೆ ಅರಿವಾಗ ಬೇಕಿದೆ. ಸಚಿವ ರೆಹಮಾನ್ ಖಾನ್ ಕೂಡ ಮುಸ್ಲಿಂರ ಭಾವನೆಯನ್ನು ಪ್ರಚೋದಿಸುವ ದಾಟಿಯಲ್ಲಿ ರಾಜ್ಯದಲ್ಲಿ ಮುಸ್ಲಿಂ ವಿವಿ ಸ್ಥಾಪಿಸಿಯೇ ಸಿದ್ದ ಎಂದು ಹೇಳುವುದು ಸರಿಯಲ್ಲ.
         ಇಲ್ಲಿನ ಮುಸಲ್ಮಾನರಿಗೆ ಇಲ್ಲಿರುವ ವಿವಿ ಗಳೇ ಸಾಕು, ಸಧ್ಯ ಅವರ ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳ ಜೊತೆಗೆ ಆರ್ಥಿಕ ಸಹಾಯ ಮಾಡಿ, ಬಡ ಮುಸಲ್ಮಾನರ ಬದುಕು ಸುಧಾರಣೆಗೆ ಸಾಚಾರ್ ಆಯೋಗದ ಶಿಫಾರಸ್ಸಿನಂತೆ ಪ್ರಯೋಜನ ಕಾರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತನ್ನಿ, ಚುನಾವಣೆ ಸಮಯ ಇದಕ್ಕೆ ಮಾನದಂಡ ಅಗಬೇಕಿಲ್ಲ ಸಮಯಸಾಧಕತನ ಬೇಡ ಅಂದ ಹಾಗೆ ರಾಜ್ಯ ಮುಸ್ಲಿಂ ವಿವಿ ಬೇಕು ಅಥವ ಬೇಡ ಎಂಬ ಬಗ್ಗೆ ಆಕ್ರೋಶಗೊಂಡಿಲ್ಲ ಬದಲಿಗೆ ಟಿಪ್ಪು ಸುಲ್ತಾನ್ ನನ್ನು ದೇಶದ್ರೋಹಿ ಎನ್ನುವುದನ್ನು ಸಹಿಸುತ್ತಿಲ್ಲ, ಅಂಬೇಡ್ಕರ್ ದಲಿತರ ಭಾವನೆಗೆ , ಬಸವಣ್ಣ ವೀರಶೈವರ ಭಾವನೆಗೆ ಪ್ರಾಮುಖ್ಯತೆ ಪಡೆದಿರುವಂತೆಯೇ ಟಿಪ್ಪು ಸಧ್ಯಕ್ಕೆ ಮುಸ್ಲಿಂ ಭಾವನೆಗಳಲ್ಲಿ ಇದ್ದಾನೆ. ಆತನನ್ನು ನಿರಾಕರಿಸುವುದು ಮುಸ್ಲಿಂರ ಅಸ್ಥಿತ್ವವನ್ನೇ ಭಾರತದಲ್ಲಿ ನಿರಾಕರಿಸಿದಂತೆ ಎಂದು ಭಾವಿಸಲಾಗುತ್ತಿದೆ ಇವೆಲ್ಲವೂ ಅಪಾಯಕಾರಿ ಲಕ್ಷಣಗಳೇ ಆದರೆ ಇವೆಲ್ಲವನ್ನು ಮೀರಿ ನಿಲ್ಲುವ ರಾಷ್ಟ್ರೀಯ ಭಾವನೆ ಬೆಳೆಯಬೇಕಾದರೆ ರಾಷ್ಟ್ರ ನಾಯಕರುಗಳನ್ನು ಸ್ವತಂತ್ರಗೊಳಿಸುವ ಅವಶ್ಯಕತೆಯೂ ಇದೆ. ಅದಕ್ಕೆ ಸ್ವಲ್ಪ ಸಮಯ ಬೇಕು. ಮುಸ್ಲಿಂ ವಿವಿ ಬಂದರೆಷ್ಟು ಬಿಟ್ಟರೆಷ್ಟು ಕಾಂಗ್ರೆಸ್ಸಿಗರು ಮತ್ತು ಬಿಜೆಪಿ ಗಳು ಮತ್ತು ಯಾರಾದರೊಬ್ಬರನ್ನು ಬೆಂಬಲಿಸುವ ಇತರೆ ರಾಜಕೀಯ ಪಕ್ಷಗಳ ಬೇಳೆ ಬೇಯದಿದ್ದರೆ ಸಾಕಷ್ಟೇ.