Sunday, March 9, 2014

ಆಮ್ ಆದ್ಮಿಯ ಗುಂಗು ಮತ್ತು ಕೇಜ್ರಿವಾಲ್!ಸಮಾಜ ಜೀವನದಲ್ಲಿ ಅನೇಕ ಕಾರಣಗಳಿಗೆ ಅನೇಕರು ಪ್ರಸಿದ್ದಿಗೆ ಬಂದು ಬಿಡಬಹುದು, ರಾಜಕಾರಣಿ, ಕಳ್ಳ, ಭಯೋತ್ಪಾದಕ, ಆಟಗಾರ, ಹಾಡುಗಾರ, ಕಲಾವಿದ, ಶಿಕ್ಷಣ ತಜ್ಞ ಹೀಗೆ ವಿವಿಧ ಆಯಾಮಗಳಲ್ಲಿ ಸಾದನೆ! ಗೈದಿದ್ದಕ್ಕಾಗಿ ಅಥವ ಅವರ ಕನಸುಗಳನ್ನು ನನಸು ಮಾಡಿಕೊಂಡಿದ್ದಕ್ಕಾಗಿ! ದಿಡೀರ್ ಪ್ರಸಿದ್ದಿಗೆ ಬಂದು ಬಿಡಬಹುದು. ಅನೇಕ ವೇಳೆ ಹಾಗೆ ಹೆಸರು ಮಾಡುವ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದ ಹಾಗೆ ಅದು ದಕ್ಕಿ ಬಿಡಬಹುದು ಒಳ್ಳೆಯ ಕಾರಣಕ್ಕೊ ಕೆಟ್ಟ ಕಾರಣಕ್ಕೋ ಏನೂ ಆಗಬಹುದು. ಅದು ಒಂದು ಕಡೆಯಾದರೆ ಇನ್ನು ಅಂತಹದ್ದೊಂದು ಜನಪ್ರಿಯತೆ! ದಕ್ಕಿದ ಮೇಲೆ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಹಾ ಮತ್ತೊಂದು ಅಧ್ಯಾಯವನ್ನ ತೆರೆದಿಡುತ್ತದೆ. ಹಾಗಾದರೆ ಜನಪ್ರಿಯತೆಯ ಮಾನದಂಡ ಏನು? ಜನಪ್ರಿಯ ಎಂದರೆ ಅದು ಹೇಗಿರಬೇಕು? ಜನಪ್ರಿಯರೆನಿಸಿಕೊಂಡವರು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತೆರೆದಿಡುವ ಪುಟ್ಟ ಪ್ರಯತ್ನವಷ್ಟೇ ಇದು. 


          ಬಹುಶ: ನಿಮಗೂ ಇಂತಹ ಅನುಭವಗಳು ಆಗಿರುತ್ತವೆ ಎಂದು ಕೊಳ್ಳುತ್ತಾ. ನನ್ನ ವೈಯುಕ್ತಿಕ ಅನುಭವದಿಂದಲೇ ನಿಮ್ಮ ಮುಂದೆ ತೆರೆದುಕೊಳ್ಳುತ್ತೇನೆ. ಅವನು ಕನಸುಗಾರ! ಒಂದೇ ಮುಟಿಗೆ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಭ್ರಷ್ಟಾಚಾರವನ್ನು ಸದೆಬಡಿಯುತ್ತೇನೆ ಮತ್ತು ಅದಕ್ಕೆ ಮೂಲ ಕಾರಣರಾದವರನ್ನ ಬೆದರಿಸುತ್ತೇನೆ ಆ ಮೂಲಕ ಜಾಗೃತಿಯ ಸಂಚಲನವನ್ನ ಉಂಟು ಮಾಡುತ್ತೇನೆ ಎಂದು ಕೊಂಡಿದ್ದು ಆ ಸಬ್ ಇನ್ಸ್ ಪೆಕ್ಟರ್! ಆತ ಕಟ್ಟಾ ಸಿದ್ದಾಂತದ ಪಾಲಕ ಮತ್ತು ನೈತಿಕತೆ ಪ್ರಾಮಾಣಿಕತೆ ಇತ್ಯಾದಿಗಳನ್ನ ಇಟ್ಟುಕೊಂಡಿದ್ದವರು, ಆದರ್ಶದ ಬೆನ್ನು ಹತ್ತಿ ಉನ್ನತ ವ್ಯಾಸಂಗ ಮಾಡಿದ್ದರೂ ಸಹಾ ಆಯ್ದು ಕೊಂಡದ್ದು ಮಾತ್ರ ಸಬ್ ಇನ್ಸ್ ಪೆಕ್ಟರ್ ಹುದ್ದೆ, ವೃತ್ತಿಯನ್ನು ಹಾಗೆ ನಿಭಾಯಿಸುತ್ತಿದ್ದರೆನ್ನಿ! ಯಾವ ರಾಜಕಾರಣಿಯ ಶಿಫಾರಸ್ಸುಗಳಿಗೂ ಬೆಲೆ ಕೊಡುತ್ತಿರಲಿಲ್ಲ, ನ್ಯಾಯಯುತವಾದುದಕ್ಕೆ ಮಾತ್ರ ಮನ್ನಣೆ, ಶಾಲಾ ಕಾಲೇಜು ಗಳಿಗೆ ತೆರಳಿ ಅಧ್ಯಾಪಕರಿಲ್ಲದ ವಿಷಯಗಳ ಕ್ಲಾಸುಗಳಿಗೆ ಲೆಕ್ಚರ್ ಕೊಡುತ್ತಿದ್ದ, ಹುಡುಗರ ದಂಡು ಕಟ್ಟಿಕೊಂಡು ಆಟೋಟ ಪಂದ್ಯಗಳನ್ನು ಏರ್ಪಡಿಸುತ್ತಿದ್ದ ಒಟ್ಟಾರೆ ಆತ ಕಾರ್ಯ ನಿರ್ವಹಿಸುತ್ತಿದ್ದ ಕಡೆಗಳಲೆಲ್ಲ ಜನರ ಕಣ್ಮಣಿಯಾಗಿದ್ದ. ಸಖತ್ ಉತ್ಸಾಹಿಯಾಗಿದ್ದ ಆ ಎಸ್ ಐ ಇಲಾಖೆಯ ಕ್ರೀಡೆಗಳಲ್ಲೂ ಮುಂದು ಮುಖ್ಯವಾಗಿ ರೈಫಲ್ ಶೂಟಿಂಗ್ ನಲ್ಲಿ ರಾಜ್ಯಕ್ಕೆ ನಂ.1. ಸದಾ ರೈಫಲ್ ಅನ್ನು ಬಗಲಲ್ಲೇ ಇಟ್ಟುಕೊಂಡು ಸಮಾಜ ಬದಲಾವಣೆಯ ಕನಸು ಕಾಣುತ್ತಾ ಮಲಗುತ್ತಿದ್ದ ಆತ ಸಹಪಾಠಿಗಳೊಂದಿಗೆ ಬೆರೆತದ್ದು ಕಮ್ಮಿ ಹೀಗಿದ್ದ ಮನುಷ್ಯ ಒಮ್ಮೆ ಇಲಾಖೆಯ ರಾಷ್ಟ್ರೀಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದ ಬೆಂಗಳೂರಿನಲ್ಲಿ ಅಭ್ಯಾಸಕ್ಕೆ ಬಂದವನು ಮರುದಿನ ಬೆಂಗಳೂರು ಬಿಡಬೇಕಿತ್ತು ಆದರೆ ಆಗಿದ್ದೇ ಬೇರೆ, ಅವತ್ತು ಶಾಸಕರ ಭವನಕ್ಕೆ ಹುಸಿ ಬಾಂಬ್ ಇಟ್ಟು ಬಿಟ್ಟಿದ್ದ! ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಶಕ್ತಿಕೇಂದ್ರದ ವಾರಸುದಾರ ಭವನ ಅದು, ಈ ನಡುವೆ ತಾನೇ ಮಾಡಿಕೊಂಡ ಎಡವಟ್ಟಿನಿಂದ ಪೋಲೀಸರಿಗೆ ಸಿಕ್ಕುಬಿದ್ದ ಮತ್ತು ಪರಪ್ಪನ ಅಗ್ರಹಾರ ಜೈಲು ಪಾಲಾಗಿಬಿಟ್ಟ! ಅಷ್ಟೇ ಸಾಕಿತ್ತು ಆತನ ಜನಪ್ರಿಯತೆಗೆ, ಆದರ್ಶ ಸರಿ ಆದರೆ ಅದನ್ನು ನಿಭಾಯಿಸುವಲ್ಲಿ ಎಡವಿ ಹುಂಬತನ ಪ್ರದರ್ಶಿಸಿದ್ದ ಆ ಎಸ್ ಐ ಇದೇ ಕಾರಣಕ್ಕೆ ತನ್ನ ಪ್ರೀತಿಯ ಖಾಕಿಯನ್ನು ಕಳಚ ಬೇಕಾಯ್ತು! ಜೈಲು ಸೇರಿದ ಆತ 15ದಿನಕ್ಕೆ ಬಿಡುಗಡೆಯಾದಾಗ ಆತನನ್ನು ಎದುರುಗೊಳ್ಳಲು ದೊಡ್ಡ ಗುಂಪು ಕಾದಿತ್ತು. ಹೆಸರು ಮಾಡಿದ ಅನೇಕ ಬುದ್ದಿಜೀವಿಗಳು ಆತನ ಬೆನ್ನಿಗೆ ನಿಂತಿದ್ದರು, ಜನಪ್ರೀತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಆತ ಆ ಹೊತ್ತಿಗೆ ತಣ್ಣಗೆ ಬಿಚ್ಚಿಕೊಳ್ಳುತ್ತಿದ್ದ ಮಾಹಿತಿ ಹಕ್ಕಿನ ಹೋರಾಟದ ಕಾವು ಹರಡಲು ರಾಜ್ಯದಾಧ್ಯಂತ ಸುತ್ತಿದ,ಜನಪ್ರಿಯತೆಯಿಂದಾಗಿ ಕಿರುತೆರೆಯ ದಾರವಾಹಿ ಗಳಲ್ಲಿ ಸಿನಿಮಾಗಳಲ್ಲಿ ಅವಕಾಶವೂ ಬಂತು, ತಾನೇ ಬೆರಳೇಣಿಕೆಯ ಚಿತ್ರಗಳಲ್ಲಿ ನಾಯಕನೂ ಆದ ಬರಕತ್ತಾಗಲಿಲ್ಲ. ಮುಂದೆ ಬಿಜೆಪಿ ಸರ್ಕಾರ ಆತನ ಜನಪ್ರಿಯತೆಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ನಿಗಮವೊಂದಕ್ಕೆ ಅಧ್ಯಕ್ಷನನ್ನಾಗಿ ಮಾಡಿತು. ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ನೀಡಿತು, ಅದೇ ಗುಂಗಲ್ಲಿ ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಕಳೆದ ಸಲ ವಿಧಾನ ಸಭೆಯ ಚುನಾವಣೆಗೂ ನಿಂತ ಸಬ್ ಇನ್ಸ್ ಪೆಕ್ಟರ್ ಹೀನಾಯ ಸೋಲು ಅನುಭವಿಸಿದರು! ಈಗ ಅವರ ಹೆಸರು ಯಾವ ಗಲ್ಲಿಯಲ್ಲೂ ಕೇಳಿ ಬರುತ್ತಿಲ್ಲ!ಎಲ್ಲ ಗಪ್ ಚುಪ್!


         ಇವತ್ತು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ನರೇಂದ್ರ ಮೋದಿ ಮತ್ತು ಅಣ್ಣಾ ಹಜಾರೆಯ ವಿಷಯದಲ್ಲೂ ಅಷ್ಟೇ ಆಗುತ್ತಿದೆ. ಆಡಳಿತ ಸೇವೆಯ ಅಧಿಕಾರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವತ್ತು ಅಣ್ಣಾ ಹಜಾರೆಯ ಬೆನ್ನೆಲುಬಾಗಿ ನಿಂತು ಲೋಕಪಾಲ್ ಬಿಲ್ ಅನುಷ್ಠಾನಕ್ಕೆ ನಡೆಸಿದ ಹೋರಾಟ ಇಡೀ ದೇಶವನ್ನೇ ಸೆಳೆದು ಬಿಟ್ಟಿತ್ತು. ಒಂದು ಬೃಹತ್ ಸಮೂಹ ಸನ್ನಿಯನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳದೇ ಅಣ್ನಾಹಜಾರೆ ತೆರೆಮರೆಗೆ ಸರಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಎನ್ ಕ್ಯಾಶ್ ಮಾಡಿಕೊಂಡಿದ್ದು ಇದೇ ಅರವಿಂದ ಕೇಜ್ರಿವಾಲ್ ! ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ದೆಹಲಿ ವಿಧಾನ ಸಭೆ ಚುನಾವಣೆಗಳಲ್ಲಿ ಯಶ ಕಂಡ ಆಮ್ ಆದ್ಮಿ ಕಾಂಗೈ ಬೆಂಬಲ ಪಡೆದು ಅಧಿಕಾರಕ್ಕೆರಿದ್ದು ಎಂಥಹವರು ತಲೆತೂಗುವಂತೆ ಮಾಡಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಆಡಳಿತಗಾರ ಎಂಬುದನ್ನೆ ಮರೆತು ಬೀದಿ ಹೋರಾಟಕ್ಕಿಳಿದ ಕೇಜ್ರಿ ಎಲ್ಲ ವಿಷಯಗಳಲ್ಲೂ ದುಡುಕಿನ ನಿರ್ಧಾರ ತೆಗೆದುಕೊಂಡರು ಎನಿಸುತ್ತದೆ, ಆದರೆ ಅಧಿಕಾರಕ್ಕೆ ಅಂಟಿ ಕೂರದೇ ಆಡಿದ ಮಾತಿನಂತೆ 48ದಿನಗಳಿಗೆ ಖುರ್ಚಿ ಬಿಟ್ಟು ಇಳಿದು ಹೋಗಿದ್ದು ದೇಶದ ರಾಜಕಾರಣಿಗಳಿಗೆ ಮಾದರಿಯೇ ಸರಿ! ಆದರೆ ಇಂತಹ ಕೇಜ್ರಿವಾಲ್ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಅಧಿಕಾರ ಕಳೆದುಕೊಂಡಿದ್ದು ಮಾತ್ರ ಮೂರ್ಖತನವೇ ಸರಿ! ಇವತ್ತು ಆಮ್ ಆದ್ಮಿ ಪಾರ್ಟಿಯಿಂದ ಇಡೀ ದೇಶದಾಧ್ಯಂತ 45000ಕ್ಕೂ ಅದಿಕ ಮಂದಿ ಸಂಸತ್ ಚುನಾವಣೆಗೆ ಅಭ್ಯರ್ಥಿಗಳಾಗಲು ಅರ್ಜಿ ಸಲ್ಲಿಸಿದ್ದಾರೆ ಈ ಪೈಕಿ 3500ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಎಂಬುದು ದಿಟ. ದೆಹಲಿಯಲ್ಲಿ ಅಧಿಕಾರ ಹಿಡಿಯುವ ಮುನ್ನ ಕೇಜ್ರಿಯ ಪಾರದರ್ಶಕ ನಡೆ, ಅಧಿಕಾರಕ್ಕೇರಿದ ನಂತರ ಪ್ರದರ್ಶಿಸಿದ ನಿಲುವುಗಳು ವಿಭಿನ್ನ ನೆಲೆಗಟ್ಟಿನಲ್ಲಿ ಒಪ್ಪಿತವಾಗಬಹುದು ಇಲ್ಲ ನಿರಾಕರಣೆಗೆ ಒಳಗಾಗಬಹುದು ಆದರೆ ಆತನಿಗೆ ಮತ್ತು ಪಕ್ಷಕ್ಕೆ ದಕ್ಕಿದ ಜನಪ್ರಿಯತೆ ಅದೇ ಮೈಲೇಜನ್ನು ಕಾಯ್ದು ಕೊಂಡಿದೆಯೆ ಎಂಬ ಪ್ರಶ್ನೆಗೆ ಮಾತ್ರ ಸಿಗುವ ಉತ್ತರ ನಿರಾಸೆಯನ್ನು ಹುಟ್ಟಿಸುತ್ತದೆ. ಭರವಸೆಯ ಕ್ರಿಯೆಗಳು ಜನಪ್ರಿಯತೆಯ ಅಮಲಿನಲ್ಲಿ ಕೈಗೊಳ್ಳುವ ನಿರ್ಧಾರಗಳು ಎಲ್ಲ ಕಾಲಕ್ಕೂ ತುಡಿತವನ್ನು ಕಾಯ್ದಿಟ್ಟುಕೊಳ್ಳಲಾರದೇನೋ. ಕೆಲವೊಮ್ಮೆ ಅಂತಹ ನಿರ್ಧಾರಗಳು ಆತ್ಮ ವಂಚನೆಯ ನಿಲುವುಗಳಾಗಿ ನೈತಿಕ ಅಧ:ಪತನಕ್ಕೆ ದೂಡುತ್ತವೆ. ಸಧ್ಯ ಕೇಜ್ರಿವಾಲ್ ಹಾಗಾಗದಿರಲಿ, ಪಕ್ಷದ ಸಂಘಟನೆ ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವ ಕೇಜ್ರಿವಾಲ್ ಆಯ್ದ ಜನರನ್ನು ಉದ್ದೆಶಿಸಿ ಮಾತುಕತೆ ನಡೆಸಲಿದ್ದಾರೆ. ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವುದು ಈ ಮಾತುಕತೆಯ ಗುರಿಯಂತೆ. ಬೆಂಗಳೂರಿನ ಟೆಕ್ಕಿಯೊಬ್ಬರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಈ ಕೂಟದಲ್ಲಿ ಪಾಲ್ಗೊಳ್ಳುವವರು ತಲಾ 20ಸಾವಿರ ದೇಣಿಗೆಯನ್ನು ಪಕ್ಷಕ್ಕೆ ನೀಡಬೇಕಂತೆ. ಈಗಾಗಲೇ ಆಮ್ ಆದ್ಮಿ ಪಕ್ಷ ಬುದ್ದಿಜೀವಿಗಳೆನಿಸಿಕೊಂಡವರನ್ನ ಸಮಾಜವಾದಿಗಳನ್ನ ತೆಕ್ಕೆಗೆ ತಂದುಕೊಂಡಿದೆ, ಬದಲಾವಣೆಯ ಭ್ರಮೆ ಹೊತ್ತವರನ್ನು ಸಹಾ, ಈ ನಡುವೆ ಕಳ್ಳ ಕಾಕರೂ ಸಹಾ ನುಸುಳುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ AAP ಕಡಿದಾಳು ಶಾಮಣ್ಣ, ಹಾಜಬ್ಬ, ಕೋದಂಡರಾಮಯ್ಯ,  ರವಿಕೃಷ್ಣಾರೆಡ್ಡಿ, ಅರಕೇಶ್, ಶಶಿಧರ್ ಭಟ್ ರಂಥ ಕಳಂಕರಹಿತರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದೆಯಂತೆ.AAP ಬೇರೆ ರಾಜ್ಯಗಳಿಂದ ಎರವಲು ತಂದ ನಾಯಕರು-ಕಾರ್ಪಟೇಟ್ ಕುಳಗಳನ್ನು ಕಣಕ್ಕೆ ಇಳಿಸುತ್ತಿಲ್ಲವೆನಿಸುತ್ತದೆ. ಇದು ಒಳ್ಳೆಯ ಸುದ್ದಿ.

          

No comments: