Sunday, April 27, 2014

ಮರ್ಯಾದಾ ಹತ್ಯೆ, ಜಾತೀಯ ವ್ಯವಸ್ಥೆ!

ಅವತ್ತು ನಿಗಿ ನಿಗಿ ಉರಿಯುವ ಬಿಸಿಲು, ಹೊರಗೆ ಕಾಲಿಡುವುದು ಹೇಗಪ್ಪಾ ಎಂದು ಯೋಚಿಸುವ ಹೊತ್ತಲ್ಲಿಯೇ ಒಂದು ಅನಾಮಿಕ ಕರೆ. ಇಂಥಹ ಊರಿನಲ್ಲಿ ಪ್ರೇಮಿಸಿದ ಅನ್ಯ ಜಾತಿಯ ಪ್ರೇಮಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದು ಮರಕ್ಕೆ ಕಟ್ಟಿ ಹಾಕಲಾಗಿದೆ ಬನ್ನಿ. ಸರಿ ತಕ್ಷಣ ಆ ಹಳ್ಳಿಗೆ ಧಾವಿಸಿದೆ, ಹುಡುಗಿ ಪರಿಶಿಷ್ಠ ಜಾತಿ, ಹುಡುಗ ಕುರುಬ ಸಮುದಾಯದವ ಇಬ್ಬರನ್ನು ಹಿಂದಿನ ದಿನದ ಸಂಜೆಯಿಂದ ಮರುದಿನದ ಮದ್ಯಾಹ್ನದ ವರೆಗೂ ಕಟ್ಟಿಹಾಕಲಾಗಿತ್ತು. ಅಷ್ಟಕ್ಕೂ ಕಟ್ಟಿ ಹಾಕಿದ್ದು ಯಾರು ಎಂದರೆ ತಂದೆ ತಾಯಿಗಳಲ್ಲ ಗ್ರಾಮದ ಜನ! ಹುಡುಗ ಹುಡುಗಿ ಬೇರೆ ಜಾತಿಯವರು ಹೇಗೆ ಮದುವೆ ಆಗುತ್ತಾರೆ ಅದೆಲ್ಲಾದರೂ ಸಾಧ್ಯವೇ ಎಂಬ ಪ್ರಶ್ನೆ ಎಸೆದರು, ಅಷ್ಟೊತ್ತಿಗೆ ಪೋಲೀಸ್ ಬಂದು ಹುಡುಗ ಹುಡುಗಿಯನ್ನು ಬಿಡುಗಡೆ ಮಾಡಿ ಪೋಷಕರ ಸಮೇತ ಸ್ಟೇಷನ್ ಗೆ ಕರೆದೊಯ್ದರು. ಅಲ್ಲಿ ಮಾಮೂಲಿ ರಾಜೀ ಪಂಚಾಯ್ತಿ ಕಡೆಗೆ ಹುಡುಗ-ಹುಡುಗಿ ಅವರವರ ಮನೆಗೆ ವಾಪಾಸಾಗಿ ಬಿಟ್ಟರು, ಪೆಚ್ಚಾಗುವ ಸರದಿ ನನ್ನದು. 
        ಮರುದಿನವೇ ಮಂಡ್ಯದ ಹಳ್ಳಿಯೊಂದರಲ್ಲಿ ದಲಿತ ಹುಡುಗ, ಗೌಡರ ಹುಡುಗಿಯನ್ನು ಮದುವೆ ಓಡಿ ಹೋದರು, ತಿಂಗಳಾದ ಮೇಲೆ ಎಲ್ಲ ಮರೆತಿರುತ್ತಾರೆ ಎಂದು ಊರಿಗೆ ಬಂದರೆ ಹುಡುಗಿಯ ಅಪ್ಪನೇ ಉಪಾಯವಾಗಿ ಹುಡುಗಿಯನ್ನು ಕರೆತಂದು ದನಕ್ಕೆ ಬಡಿದ ಹಾಗೆ ಬಡಿದು ಎಲ್ಲರೂ ನೋಡುತ್ತಿದ್ದ ಹಾಗೆಯೇ ನೇಣು ಬಿಗಿದು ಬಿಟ್ಟ. ಅದೇ ರೀತಿ ರಾಮನಗರದಲ್ಲಿ ಉಪ್ಪಾರರ ಹುಡುಗನೊಬ್ಬ ಲಿಂಗಾಯಿತರ ಹುಡುಗಿಯನ್ನು ಮದುವೆಯಾಗಿದ್ದ ನೆಂಬ ಕಾರಣಕ್ಕೆ ಅವನನ್ನು ಅಟ್ಟಾಡಿಸಿ ಬಡಿದು ಹುಡುಗಿಯನ್ನು ನಡು ರಸ್ತೆಯಲ್ಲೇ ಕಗ್ಗೊಲೆ ಮಾಡಲಾಯಿತು. ಕಳೆದ ವರ್ಷ ದಲಿತನೋರ್ವನನ್ನು ಮದುವೆಯಾದ ಲಿಂಗಾಯಿತ ಸಮುದಾಯದ ಉಪನ್ಯಾಸಕಿಯನ್ನು ಅವಳ ಅಣ್ಣನೇ ಕೊಲೆಗೈದು ಬಿಟ್ಟ! ಇದೀಗ ಮತ್ತೆ ಅಂತಹುದೇ ಸುದ್ದಿ ಬಂದಿದೆ. ಅದೇ ಮಂಡ್ಯ ಜಿಲ್ಲೆಯಿಂದ ನಾಯಕರ ಪೈಕಿ ಹುಡುಗಿಯನ್ನು ಎರಡೂ ಕಡೆಯ ಪೋಷಕರ ವಿರೋಧದ ನಡುವೆಯೇ ಮದುವೆಯಾದ ದಲಿತ ಹುಡುಗ ತಿಂಗಳು ಬಾಳಿಸಲಿಲ್ಲ, ಚಿಕ್ಕಪ್ಪ-ಚಿಕ್ಕಮ್ಮ ಎನಿಸಿಕೊಂಡವರೇ  ಬೆಂಕಿ ಹಾಕಿ ಬರ್ಭರವಾಗಿ ಕೊಲೆಗೈದಿದ್ದಾರೆ. 

    12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರರ ಜಯಂತಿ ಮುನ್ನಾ ದಿನಗಳಲ್ಲೇ ಇಂತಹ ಕೃತ್ಯ ವರದಿಯಾಗಿರುವುದು ಆಧುನಿಕ ಸಮಾಜದಲ್ಲಿ ಕ್ರೌರ್ಯ ಮತ್ತು ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುವುದು ಅತ್ಯಂತ ನೋವಿನ ಸಂಗತಿ. ಮರ್ಯಾದಾ ಹತ್ಯೆ ಎನ್ನುವುದು ಆಧುನಿಕ ಸಮಾಜದ ಕೊಡುಗೆ ಮತ್ತು ಅರಗಿಸಿಕೊಳ್ಳಲಾಗದ ಅಮಾನವೀಯ ಕೃತ್ಯ. ಇದುವರೆವಿಗೂ ಮರ್ಯಾದಾ ಹತ್ಯೆಗಳು ಅನಕ್ಷರತೆ, ಮೌಡ್ಯ, ಜಾತೀಯತೆ ಹೆಚ್ಚಿರುವ ಉತ್ತರದ ಭಾರತದ ವಿವಿಧ ರಾಜ್ಯಗಳಿಂದ ಮಾತ್ರ ವರದಿಯಾಗುತ್ತಿತ್ತು. ಈಗ ನಮ್ಮ ಕಣ್ಣ ಮುಂದೆಯೇ ನಮ್ಮ ರಾಜ್ಯದಲ್ಲಿಯೇ ಅದು ಅಸ್ತಿತ್ವ ಕಂಡು ಕೊಂಡಿರುವುದು ಎಷ್ಟೊಂದು ಅಸಹನೀಯ ಅಲ್ಲವೇ?
        ಜಾತೀಯ ವ್ಯವಸ್ಥೆಯನ್ನು ತೊಡೆಯಲು ಮುಕ್ತ ವ್ಯವಸ್ಥೆಯಲ್ಲಿ ಅಂತರ್ಜಾತೀಯ ವಿವಾಹಗಳಾಗಬೇಕು ಎಂದು 70 ಮತ್ತು 80ರ ದಶಕದಲ್ಲಿ ಬುದ್ದಿ ಜೀವಿ ವಲಯ ಆಲೋಚಿಸಿದ್ದಲ್ಲದೇ ಅದನ್ನು ಕಾರ್ಯಗತ ಗೊಳಿಸಿ ಬಿಟ್ಟಿದ್ದರು. ಸಾಹಿತಿ ಯು ಆರ್ ಅನಂತಮೂರ್ತಿ, ಪ್ರೊ. ರಾಮದಾಸ್, ದೇವನೂರ ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಅರವಿಂದ ಮಾಲಗತ್ತಿ ಹೀಗೆ ಅನೇಕ ಮಂದಿ ಅಂತರ್ಜಾತೀಯ ವಿವಾಹ ಬಂಧನಕ್ಕೊಳಗಾದವರು. ಅಲ್ಲಿ ಜಾತಿಗಿಂತ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿತ್ತು. ಜಗತ್ತಿನಲ್ಲಿ ಮೊದಲು ಹುಟ್ಟಿದ್ದೇ ಪ್ರೀತಿ, ಅದು ಹುಟ್ಟುವಾಗ ಜಾತಿ ಯಾವುದು ಎಂದು ನೋಡಿ ಹುಟ್ಟುವಂತಹದ್ದಲ್ಲ, ಹೀಗಿರುವಾಗ ಅದು ಗಟ್ಟಿಗೊಳ್ಳಲು ಜಾತಿ ಅಗತ್ಯವಿರಲಿಲ್ಲ ಅವತ್ತು. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ, ಜಾತೀಯ ಕಂದಕಗಳು ಮೊದಲಿಗಿಂತ ಹೆಚ್ಚು ತೆರೆದುಕೊಂಡಿವೆ, ಪ್ರೀತಿ ಹುಟ್ಟುವ ಮೊದಲು ಜಾತಿ ನೋಡಿ ಪ್ರೀತಿಸುವ ಪರಿಪಾಠ ಬೆಳೆಯುತ್ತಿರುವುದು ಇಲ್ಲವೇ ಜಾತಿ ನೋಡದೇ ಪ್ರೀತಿಸಿದ ಯುವ ಮನಸ್ಸುಗಳನ್ನು ಕೊಲ್ಲುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ.      
         ಪ್ರಬುದ್ದತೆಯ ಕೊರತೆಯ ಜೊತೆಗೆ ಸಂಕುಚಿತ ಜಾತಿ ಮನಸ್ಸು ಪ್ರತೀ ಹಂತದಲ್ಲೂ ಜಾಗೃತವಾಗುವಂತಹ ಕ್ರಿಯೆಗಳು ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವುದು ಮತ್ತು ಜಾತಿ ಮೀರುವ ಕ್ರಿಯೆಗೆ ಪೂರಕವಾದ ವಾತಾವರಣ ಇಲ್ಲದಿರುವುದು ಮರ್ಯಾದಾ ಹತ್ಯೆಯಂತಹ ಕೃತ್ಯಗಳಿಗೆ ಅವಕಾಶ ಮಾಡುತ್ತಿದೆ. ಮಹಾಪುರುಷರು ಶತಮಾನಗಳ ಆದಿಯಿಂದಲೇ ಜಾತಿ ಮೀರುವ ಕ್ರಿಯೆಗೆ ಚಾಲನೆ ನೀಡಿದ್ದಾರೆ, ಅನೇಕ ಪರಿವರ್ತನೆಗಳಿಗೆ ನಾಂದನೆ ಹಾಡಿದ್ದಾರೆ, ದೀಕ್ಷೆ ನೀಡಿದ್ದಾರೆ ಆದರೆ ವರ್ತಮಾನದಲ್ಲಿ ಅವೆಲ್ಲ ಜಾತೀಯ ವಿಷಬೀಜಗಳಾಗಿ ಬದಲಾಗಿವೆ. ಸಮಾಜದ ಎಲ್ಲ ಸ್ಥರದಲ್ಲೂ ಜಾತೀಯತೆ ಮೇರೆ ಮೀರಿದೆ. ಇದಕ್ಕೆ ಸಾಮಾಜಿಕ ಕಾರಣಗಳು ಮಾತ್ರವಲ್ಲ ರಾಜಕೀಯ ಪಕ್ಷಗಳ ಮನಸ್ಥಿತಿ, ಸರ್ಕಾರಗಳ ದುರ್ಬಲ ನೀತಿಗಳು ಕಾರಣವಾಗಿರ ಬಹುದು. ತಮ್ಮ ಮತ ಬ್ಯಾಂಕ್ ಗಾಗಿ ತರುವ ಯೋಜನೆಗಳು ಜಾತಿಯ ನಡುವೆ ಕಂದಕ ಸೃಷ್ಟಿಸಿದರೆ, ಸಾಮಾಜಿಕ ನ್ಯಾಯದ ನೆಪದಲ್ಲಿ ಎಲ್ಲ ಜಾತಿಗಳನ್ನು ಮೀಸಲು ಅಡಿಯಲ್ಲಿ ತರುವ ಕ್ರಿಯೆಯೂ ಸಹಾ ಕಂದಕಕ್ಕೆ ಅವಕಾಶ ಕಲ್ಪಿಸಿದೆ. ಸಂವಿಧಾನಾತ್ಮಕವಾಗಿ ಸಮಾಜದ ಅತ್ಯಂತ ಕೆಳಸ್ಥರದ ವರ್ಗಕ್ಕೆ ಮೀಸಲಾತಿಯನ್ನು ಆದ್ಯತೆ ಮೇಲೆ ಕೊಟ್ಟರೂ ಸಹಾ ಮತಬ್ಯಾಂಕ್ ನ ಉದ್ದೇಶದಿಂದ ಸ್ಪೃಶ್ಯ ಸಮುದಾಯಗಳನ್ನು ಸಹಾ ಮೀಸಲು ಅಡಿಗೆ ತರಲಾಗಿದೆ. 

       ಸರ್ಕಾರದ ಯೋಜನೆಗಳನ್ನು ಒಂದು ವರ್ಗ ಪಡೆಯುತ್ತಿದೆ ಅಥವಾ ಮೀಸಲು ಅನುಕೂಲವನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಶೇ.10ರಷ್ಟು ಮಂದಿ ವಾಸ್ತವ ನೆಲೆಗಟ್ಟಿನಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಅದರೊಳಗೆ ಸೇರಿರುವ ಸ್ಪೃಶ್ಯ ಸಮುದಾಯ ಕೊಡ ಫಲಾನುಭವಿಯಾಗಿ ಇತರರ ಕಣ್ಣು ಕೆಂಪಗಾಗಲು ಕಾರಣವಾಗಿಬಿಡ ಬಹುದು. ಎದೆಗೆ ಬಿದ್ದ ಅಕ್ಷರದಲ್ಲಿ ದೇವನೂರ ಮಹಾದೇವ ಹೀಗೆ ಬರೆಯುತ್ತಾರೆ, ನಂಜನಗೂಡಿನ ಹಾಸ್ಟೆಲ್ ಒಂದರಲ್ಲಿ ಒಬ್ಬ ಗಿರಿಜನ ಯುವಕನಿಗೆ ಮೇಲಿನಿಂದ ಎತ್ತಿ ನೀರನ್ನು ಕೊಡಲಾಗುತ್ತಿತ್ತು ಕುಡಿಯಲೋಸುಗ, ಅದೇ ರೀತಿ ಒಕ್ಕಲಿಗನ ಮನೆಯ ಆಹಾರವನ್ನು ಮೇಲ್ಜಾತಿಯ ಮಗುವೊಂದು ಪಡೆದುದನ್ನು ಅವರಮ್ಮ ಆಕ್ಷೇಪಿಸುತ್ತಿದ್ದಳು ಎಂಬುದು. ಕಳೆದ ವರ್ಷ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯನ್ನು ಓದಿದ್ದೆ ಗುಂಡ್ಲುಪೇಟೆ, ಚಾಮರಾಜನಗರ ಭಾಗದಲ್ಲಿ ನಾಗರೀಕತೆಯನ್ನೇ ಕಾಣದ ಗಿರಿಜನರು ತಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಪರಿಶಿಷ್ಠ ಜಾತಿಯ ಮಹಿಳೆ ಅಡುಗೆ ಮಾಡುವುದನ್ನು ಮತ್ತು ತಮ್ಮ ಮಕ್ಕಳು ಅದನ್ನು ತಿನ್ನುವುದನ್ನು ಸಹಿಸಲಾಗದೇ ಶಾಲೆಗೆ ಮಕ್ಕಳನ್ನೇ ಕಳುಹಿಸಲಿಲ್ಲ. ಈ ಘಟನೆಗಳು ಏನನ್ನು ಸಾಕ್ಷೀಕರಿಸುತ್ತವೆ ಮತ್ತು ಜಾತೀಯ ತೀವ್ರತೆಯನ್ನು ಹೇಗೆ ಪ್ರತಿನಿಧಿಸುತ್ತವೆ ಎಂದರೆ ಸರಪಳಿ ಮಾದರಿಯ ಜಾತೀಯ ವ್ಯವಸ್ಥೆಯಿಂದ  ವರ್ತಮಾನದಲ್ಲೂ ಬಿಡುಗಡೆಯಿಲ್ಲ ಎನ್ನುವುದು. ಜನರ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಕೂಡ ಜಾತೀಯ ವ್ಯವಸ್ಥೆಯನ್ನು ಹಿಂದೆಂದಿಗಿಂತ ಹೆಚ್ಚು ಪೋಷಿಸಲು ಅವಕಾಶ ಮಾಡಿದೆ. ಪರಿಣಾಮ ತಮ್ಮ ಮಗ ಅಥವಾ ಮಗಳು ಬೇರೆ ಜಾತಿಯವರನ್ನು ಇಷ್ಟ ಪಡಬಹುದು ಎಂಬ ಕಾರಣಕ್ಕೆ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಈ ಆಧುನಿಕ ದಿನಮಾನದಲ್ಲಿಯೂ. ಬಾಲ್ಯದಿಂದಲೇ ಜಾತೀಯ ಪಾಠಗಳನ್ನು ಪೋಷಕರು ಹೇಳಿಕೊಡುತ್ತಿದ್ದಾರೆ ಕಂದಕಗಳು ಹೆಚ್ಚಾಗಲು ಕಾರಣರಾಗುತ್ತಿದ್ದಾರೆ, ನಮ್ಮ ರಾಜಕೀಯ ನಾಯಕರು ಕೂಡಾ ಜಾತಿಗೊಬ್ಬ ಸ್ವಾಮೀಜಿಗಳನ್ನು ಹುಟ್ಟು ಹಾಕುತ್ತಾ ಮಠ ಮಾನ್ಯಗಳನ್ನು ಬೆಳೆಸುತ್ತಾ ಜಾತಿಯ ಭಾವನೆ ಇನ್ನಷ್ಟು ಕೆರಳುವಂತೆ ಮಾಡಿದ್ದಾರೆ, ನಾವೆಲ್ಲ ಪ್ರೀತಿಸುವ ಕವಿರತ್ನ ಕಾಳಿದಾಸ, ಕನಕದಾಸ, ಸಂಗೊಳ್ಳಿ ರಾಯಣ್ಣ, ಭಗೀರಥ, ವಿಶ್ವಕರ್ಮ, ಬಸವಣ್ಣ, ವಾಲ್ಮೀಕ , ಟಿಪ್ಪುಸುಲ್ತಾನ್ ಇವರಿಗೆಲ್ಲ ಒಂದೊಂದು ಜನ್ಮ ಜಯಂತಿಯನ್ನು ಘೋಷಣೆ ಮಾಡಿ ಜಾತಿಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ, ಇವು ಸಮಾಜವನ್ನು ಕಟ್ಟುವ ಕ್ರಿಯೆಗಳಲ್ಲ ಬದಲಿಗೆ ಸಮಾಜದ ಕಂದಕವನ್ನು ಹೆಚ್ಚಿಸುವ ಕ್ರಿಯೆಗಳು. ಮತ್ತು ಮರ್ಯಾದ ಹತ್ಯೆಯಂತ ಕ್ರಿಯೆಗಳಿಗೆ ಇಂತಹ ಕ್ರಿಯೆಗಳ ಕೊಡುಗೆಯೇ ಹೆಚ್ಚು ಅಲ್ಲವೇ?

No comments: