Sunday, March 23, 2014

ಮೌಡ್ಯ ಮತ್ತು ವಾಸ್ತವ!


ಲೇಶಿಯಾದ ನಾಗರಿಕ ಸೇವಾ ವಿಮಾನ ಎಂ ಹೆಚ್ 307 ಕಣ್ಮರೆಯಾಗಿ 16ದಿನಗಳಾಗುತ್ತಿವೆ. ಆಧುನಿಕತೆ ತಂತ್ರಜ್ಞಾನ ಮುಂದುವರೆದಿದ್ದರೂ ಸಹಾ ವಿಮಾನದ ಸುಳಿವನ್ನು ಪತ್ತೆ ಹಚ್ಚುವಲ್ಲಿ ತಂತ್ರಜ್ಞರು ವಿಫಲರಾಗಿದ್ದಾರೆ. ಬರೀ ಊಹಾಪೋಹಗಳ ಕಂತೆಯಲ್ಲೆ ದಿನಗಳನ್ನು ತಳ್ಳಲಾಗುತ್ತಿದೆ. ಸಂಬಂಧಿಕರನ್ನು ಕಳೆದುಕೊಂಡ ಬಂಧುಗಳು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ. ಐವರು ಭಾರತೀಯರು ಸಹಾ ಸದರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ದುಖಕರ ಸಂಗತಿ. ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಸಹಾ ವಿಮಾನ ಪತ್ತೆಗೆ ಸಹಾಯ ಹಸ್ತ ಚಾಚಿವೆ, ಕೋಟ್ಯಾಂತರ ರೂಪಾಯಿಗಳ ವೆಚ್ಚವಾಗುತ್ತಿದೆ ಆದರೆ ಇನ್ನು ಸುಳಿವು ಸಿಗದಿರುವುದು ಮತ್ತು ವಿಮಾನ ನಾಪತ್ತೆ ಪ್ರಕರಣ ನಿಗೂಢವಾಗುತ್ತಿರುವುದು ವಿಷಾಧನೀಯ ಸಂಗತಿ. 

        ವಿಮಾನ ನಾಪತ್ತೆ ಕುರಿತಂತೆ ಸ್ವತ: ಮಲೇಶಿಯಾ ಸರ್ಕಾರವೇ ಸ್ಪಷ್ಟ ನಿಲುವುಗಳನ್ನು ಹೊಂದದೆ ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದು ಆ ದೇಶದ ಹೊಣೆಗೇಡಿತನವನ್ನ ಪ್ರದರ್ಶನಕ್ಕಿಟ್ಟಂತಿದೆ. ಇಷ್ಟೆಲ್ಲಾ ತಂತ್ರಜ್ಞಾನ ಅಭಿವೃದ್ದಿ ಹೊಂದಿದ್ದರೂ ಸಹಾ ವಿಮಾನವೊಂದನ್ನು ಪತ್ತೆ ಹಚ್ಚಲಾಗಿಲ್ಲ ಎಂಬುದು ವಿಪರ್ಯಾಸವೇ ಸರಿ. ಮಲೇಶಿಯಾದಲ್ಲೂ ಮೌಢ್ಯವೇ ಹೆಚ್ಚಿರುವುದರಿಂದ ಅಲ್ಲಿ ಗಂಭೀರ ಕ್ರಮವನ್ನು ವಾಸ್ತವ ನೆಲೆಗಟ್ಟಿನಲ್ಲಿ ಕೈಗೊಳ್ಳದೇ ನಂಬಿಕೆಗಳ ಆಚರಣೆಗೆ ಮೊರೆ ಹೋಗಿದ್ದಾರೆ ಎಂಬ ಸಂಗತಿ ಕೇಳಿದ್ದೇನೆ. ಇದು ಅತ್ಯಂತ ದೊಡ್ಡ ಮೂರ್ಖತನವೇ ಸರಿ. 

       ಇರಲಿ ಭಾರತದಲ್ಲಿ , ಮಲೇಶಿಯಾ ನಾಗರಿಕ ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂತಹ ಕ್ರಮವಾಗುತ್ತಿದೆ ಎಂದು ನೋಡುವುದಾದರೆ, ಭಾರತ ಸರ್ಕಾರವೂ ಸಹಾ ಮಲೇಶಿಯಾದ ನೆರವಿಗೆ ನಿಂತಿದೆ ತನ್ನ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದೆ ಹಾಗೂ ತನ್ನ ಸೆಟಿಲೈಟ್ ನೆರವನ್ನು ನೀಡಿದೆ. ಇವೆಲ್ಲ ಸರಿ ಬಿಡಿ ಆದರೆ ರಾಜ್ಯದ ಅಷ್ಟೂ ಟಿವಿಗಳಲ್ಲಿ ಅಟಕಾಯಿಸಿಕೊಂಡಿರುವ ಜ್ಯೋತಿಷಿಗಳು, ಬಾಬಾಗಳು, ಸ್ವಾಮೀಜಿಗಳು ಈಗ ವಿಮಾನ ನಾಪತ್ತೆ ಕುರಿತಂತೆ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿ ಜನರಿಗೆ ಮನರಂಜನೆ ನೀಡುತ್ತಿರುವುದು ಮತ್ತು ದೃಶ್ಯ ಮಾಧ್ಯಮಗಳು ಅಂತಹ ಸುದ್ದಿಗೆ ಮಾನ್ಯತೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಮಾತ್ರ ಖಂಡನಾರ್ಹ!

         ವಿಮಾನ ನಾಪತ್ತೆಯಾದ ನಾಲ್ಕೈದು ದಿನಗಳಿಗೆ ಅದ್ಯಾರೋ ಕಣ್ಕಟ್ಟು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮಚಂದ್ರ ಗುರೂಜಿ ಎಂಬಾತ ಚಾನಲ್ ಒಂದರಲ್ಲಿ ಒಂದಿಬ್ಬರು ಪ್ರಾಯೋಜಿತ ಗಿರಾಕಿಗಳನ್ನ ಕರೆತಂದು ಲೈವ್ ಆಗಿ ಅವರನ್ನು ಮಾತನಾಡಿಸಿ ವಿಮಾನದಲ್ಲಿದ್ದ ಆತ್ಮವನ್ನ ಅವಾಹನೆ ಮಾಡಿಬಿಟ್ಟ! ವಿಮಾನ ಸುರಕ್ಷಿತವಾಗಿದೆ ವಾರದಲ್ಲೇ ಪತ್ತೆಯಾಗಲಿದೆ ಎಂದು ಘೋಷಿಸಿ ಬಿಟ್ಟ! ಅಷ್ಠೇ ಅಲ್ಲ ವಿಮಾನದಲ್ಲಿರುವ ಪ್ರಯಾಣಿಕರ ಮೊಬೈಲ್ ಗಳು ರಿಂಗಣಿಸುತ್ತಿವೆ ಇತ್ಯಾದಿ ಪ್ರವರವನ್ನು    ತೇಲಿಬಿಟ್ಟ, ಅದನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿದ ವೀಕ್ಷಕರು ಮಂಗಗಳಾಗಿ ಹೋದರು. ಸುವರ್ಣ ಸುದ್ದಿ ವಾಹಿನಿ ತನ್ನ ವಾಹಿನಿಯ ಟಿ ಆರ್ ಪಿ ಗಾಗಿ ಇಂತಹ ಕೀಳು ದರ್ಜೆಯ ಲೈವ್ ಕಾರ್ಯಕ್ರಮವನ್ನು ಮಾಡಿ  ಸಾಮಾಜಿಕ ಹೊಣೆಗೇಡಿತನವನ್ನ ಪ್ರದರ್ಶಿಸಿತು. ಹೋಗಲಿ ಇಷ್ಟೆಲ್ಲ ಆದ ಮೇಲೆ ಆತ ಹೇಳಿದಂತೆ ಏನಾದರೂ ನಡೆಯಿತೆ ಎಂದರೆ ಅದು ಶೂನ್ಯ!

       ರಾಜ್ಯದಲ್ಲಿ ಎಗ್ಗಿಲ್ಲದೇ ನ್ಯೂಸ್ ಚಾನಲ್ ಗಳು ಹುಟ್ಟಿಕೊಂಡ ಮೇಲೆ ಜನಸಾಮಾನ್ಯರ ಹಿತಾಸಕ್ತಿಗಳಿಗಿಂತ ಮುಖ್ಯವಾಗಿ ವ್ಯಾಪಾರಿಕರಣದ ಪ್ರತಿನಿಧಿಗಳಾಗಿ, ಖಾಸಗಿ ವ್ಯಕ್ತಿಗಳ ದರ್ದಿಗೆ  ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳು ಪ್ರಸ್ತುತ ಪಡಿಸುತ್ತಿವೆ. ಜಾಗತೀಕರಣದ ಪ್ರಭಾವದಿಂದಾಗಿ ದುಡ್ಡು ಮಾಡುವ ಉಮ್ಮೇದಿಗೆ ಹುಟ್ಟಿಕೊಂಡ ಚಾನಲ್ ಗಳನ್ನು ದೊಡ್ಡ ದೊಡ್ಡ ಉದ್ಯಮದ ಪ್ರಚಾರದ ಭಾಗವಾಗಿ ಸಾರ್ವಜನಿಕರ ಮುಂದೆ ತರಲಾಗುತ್ತಿದೆ. ಆಂದ್ರ, ತಮಿಳು ನಾಡು ಮತ್ತು ಕೇರಳ ರಾಜ್ಯದಲ್ಲಿ ವ್ಯಕ್ತಿಗಳು ಮತ್ತು ಪಕ್ಷಗಳ ಹಿತಾಸಕ್ತಿಗಾಗಿ ಮುದ್ರಣ ಮಾಧ್ಯಮಗಳು ಮತ್ತು ದೃಶ್ಯ ವಾಹಿನಿಗಳು ಕೆಲಸ ಮಾಡುತ್ತಿವೆ ಹಾಗೂ ಸಾರ್ವತ್ರಿಕವಾಗಿ ಮಾನ್ಯತೆಯನ್ನು ಕಳೆದುಕೊಂಡಿವೆ. ರಾಜ್ಯದಲ್ಲೂ ಅಂತಹ ಸ್ಥಿತಿ ಇದೆ ಆದರೆ ಸ್ವಲ್ಪ ಭಿನ್ನವಾಗಿದೆ, 80ರ ದಶಕದಲ್ಲಿ ಲಂಕೇಶ್ ಪತ್ರಿಕೆ ಯಂತಹ ಟ್ಯಾಬ್ಲಾಯ್ಡ್ ಪತ್ರಿಕೆ ಬಂದಾಗ ರಾಜ್ಯ ರಾಜಕಾರಣದಲ್ಲಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ತರವಾದ ಬದಲಾವಣೆಗೆ ಮತ್ತು ಹೊಸ ತುಡಿತಗಳಿಗೆ ನಾಂದಿ ಹಾಡುವ ಕ್ರಿಯೆ ನಡೆದಿತ್ತು. ಜನರ ಭಾವನೆಗೆ ಪೂರಕವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸದ್ದನ್ನ ಪಿ ಲಂಕೇಶ್ ಸಾಕ್ಷೀಕರಿಸಿದ್ದರು. ಆದರೆ ಇವತ್ತು ಪರಿಸ್ಥಿತಿ ಬೇರೆಯೇ ಆಗಿದೆ. 

      ಪ್ರಜಾಪ್ರಭುತ್ವದಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿಬೇಕಿದ್ದ ಮಾಧ್ಯಮ ಅದರಲ್ಲೂ ದೃಶ್ಯ ಮಾಧ್ಯಮಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿವೆ. ಜನಸಾಮಾನ್ಯರ ಭಾವನೆಗಳ ಮೇಲೆ ಹೇರಿಕೆಯಾಗುವ ಕಾರ್ಯಕ್ರಮಗಳನ್ನು, ಮೌಡ್ಯವನ್ನು ಜತನದಿಂದ ಬಿತ್ತುವ ಕೆಲಸವನ್ನ ಮಾಡುತ್ತಿವೆ. ಅಪರಾಧ ಮತ್ತು ಅನೈತಿಕತೆಗೆ ನೀಡುವ ಮಾನ್ಯತೆಯನ್ನ ವೈಚಾರಿಕ ಮತ್ತು ಅಭಿವೃದ್ದಿ ಸಂಬಂಧಿತ ಕಾರ್ಯಕ್ರಮಗಳಿಗೆ ನೀಡುತ್ತಿಲ್ಲ! ದಿನಬೆಳಗೆದ್ದರೆ ಟಿವಿ ಯಲ್ಲಿ ವಕ್ಕರಿಸಿಕೊಳ್ಳುವ ಜ್ಯೋತಿಷಿಗಳು ಮತ್ತು ಬಾಬಾಗಳು ವಿವಿಧ ರೀತಿಯಲ್ಲಿ ಜಾತಕಗಳನ್ನು ಫಲಗಳನ್ನ ಮತ್ತು ಪರಿಹಾರಗಳನ್ನು ತಮಗೆ ತೋಚಿದಂತೆ ಹೇಳುತ್ತಾರೆ. ಭಾರತ ಹೇಳಿ ಕೇಳಿ ವೈವಿದ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಬಲವಾಗಿ ಪ್ರತಿಪಾದಿಸುವ ಮನಸ್ಸುಗಳನ್ನು ಹೊಂದಿದ ದೇಶ, ಹೀಗಿರುವಾಗ ನಂಬಿಕೆಗಳನ್ನ ವಾಸ್ತವದ ನೆಲೆಗಟ್ಟಿನಿಂದ ಹೊರತು ಪಡಿಸಿದಂತೆ ಮತ್ತು ಹಣ ಮಾಡುವ ಹಪಾಹಪಿಯಿಂದ ದುರ್ಬಲ ನಂಬಿಕೆಗಳನ್ನ ಬಂಡವಾಳ ಮಾಡಿಕೊಂಡು ಜನಸಾಮಾನ್ಯರ ಸ್ವಾಸ್ಥ್ಯಕ್ಕೆ ಭಂಗ ತರಲಾಗುತ್ತಿದೆ. 

       ಒಂದೆರೆಡು ದಶಕಗಳ ಹಿಂದೆ ಅದ್ಯಾರೋ ಜೈನ್ ಎಂಬಾತ ಉದಯ ಟೀವಿಯಲ್ಲಿ ಜಾತಕ ಹೇಳುತ್ತಿದ್ದರು, ಒಮ್ಮೆ ತುಮಕೂರಿನಲ್ಲಿ ಮನೆಯ ಮುಂದೆ ಆಡುತ್ತಿದ್ದ ಮಗು ನಾಪತ್ತೆಯಾಯಿತು. ಪೋಷಕರು ಪ್ರಸಿದ್ದ ಜ್ಯೋತಿಷಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಜೈನ್ ನನ್ನ ಭೇಟಿ ಯಾದರು. ಆತ ಮಗು ಬದುಕಿದೆ ಇಂತಹ ದಿಕ್ಕಿನಲ್ಲಿ ಹುಡುಕಿ ಎಂದ, ನಾಲ್ಕೈದು ದಿನ ಹುಡುಕಿ ಸುಸ್ತಾದ ಪೋಷಕರು ಮನೆಯ ಮುಂದೆ ಕಾರು ನಿಲ್ಲಿಸಿ ಒಳಹೋಗುವಾಗ ಡಿಕ್ಕಿಯಲ್ಲಿ ಅದೆಂತಹುದೋ ಕೆಟ್ಟ ವಾಸನೆ ತೆರೆದು ನೋಡಿದರೆ ಆ ಪುಟ್ಟ ಕಂದ ಕಾರಿನ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದ, ಅಕಸ್ಮಿಕವಾಗಿ ತೆರೆಯಲ್ಪಟ್ಟಿದ ಡಿಕ್ಕಿ ಒಳಗೆ ಹೋಗಿ ಕುಳಿತ ಮಗುವಿಗೆ ಹೊರಬರಲಾಗಿರಲಿಲ್ಲ ಪೋಷಕರು ನೋಡಿರಲಿಲ್ಲ. ಅದೇ ರೀತಿ ಹಾಸನ ಬಳಿಯ ರಾಜಘಟ್ಟದ ಬಳಿ ದಶಕಗಳ ಹಿಮದೆ ಓರ್ವ ಮಹಿಳೆ ಸತ್ತು ಹೋದ ಬಾಲಕಯೊಬ್ಬಳನ್ನು ಬದುಕಿಸುತ್ತೇನೆ ಎಂದು ಅಮಾಯಕ ರೈತ ದಂಪತಿಗಳ ಬಳಿ ಹಣ ಪಡೆದು ಹೋಮ ಹವನ ಪೂಜೆ ಮಾಡಿದ್ದಳು, ಮದ್ಯರಾತ್ರಿಯ ಪೂಜೆಯ ನಂತರ ಬಾಲಕಿ ಎದ್ದು ಬರುತ್ತಾಳೆಂದು ತಿಳಿಸಲಾಗಿತ್ತು, ಸರಿ ಈ ಸಂಗತಿ ಬಾಯಿಂದ ಬಾಯಿಗೆ ಹರಡಿ ಸಾವಿರಾರು ಜನ ಪವಾಡ ನೋಡಲು ಅವತ್ತು ನೆರೆದು ಬಿಟ್ಟಿದ್ದರು! ಮದ್ಯರಾತ್ರಿ ಕಳೆದರೂ ಬಾಲಕಿ ಬದುಕಿ ಬರದಿದ್ದಾಗ ಜನ ಆಕೆಯಿದ್ದ ಮನೆಗೆ ಬೆಂಕಿ ಹಚ್ಚಿ ಅಟ್ಟಾಡಿಸಿ ಹೊಡೆದಿದ್ದರು. ಹೀಗೆ ಅನೇಕ ಸಂಗತಿಗಳು ನಮ್ಮ ನಡುವೆಯೇ ನಡೆಯುತ್ತಿದ್ದರೂ ಸಹಾ ದುರ್ಬಲ ಮನಸ್ಸಿನ ಮಂದಿ ನಂಬಿಕೆಗಳಿಗೆ ಜೋತು ಬಿದ್ದಿದ್ದಾರೆ. ಇಂತಹವರ ನಂಬಿಕೆಗಳನ್ನು ಪ್ರೋತ್ಸಾಹಿಸಲು ಚಾನಲ್ ಗಳು ಕಾರ್ಯಕ್ರಮವನ್ನ ಪ್ರಸಾರ ಮಾಡುತ್ತಿವೆ. 
  
      ಅದ್ಯಾರೋ ಒಬ್ಬ ಬಿಕನಾಸಿ ಸಂಖ್ಯಾಶಾಸ್ತ್ರಜ್ಞ ಲೈವ್ ನಲ್ಲಿ ಮಹಿಳೆಯೋರ್ವರ ಕರೆ ಸ್ವೀಕರಿಸುತ್ತಾನೆ, ಅತ್ತಲಿಂದ ಆ ಮಹಿಳೆ ತಮ್ಮ ಸಂಸಾರ ಗುಟ್ಟುಗಳ  ಕುರಿತು ಹೇಳಿಕೊಳ್ಳುತ್ತಾಳೆ, ಇವನು ಲೈವ್ ನಲ್ಲಿಯೇ ಅವಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಬೇಟಿ ಯಾಗುವಂತೆ ತಿಳಿಸುತ್ತಾನೆ! ಮುಂದೆ ಏನಾಯ್ತು ಗೊತ್ತಿಲ್ಲ. ಇನ್ನು ಕೆಲವು ಬೃಹಸ್ಪತಿಗಳಿದ್ದಾರೆ, ವಿಳ್ಯದೆಲೆ ಜೋಡಿಸಿ ನೋಡುವುದು, ಕವಡೆ ಬಿಟ್ಟು ಹೇಳುವುದು, ಇನ್ನೊಬ್ಬ ಕರ್ಣ ಪಿಚಾಚಿ ಇದ್ದಾನೆ ಅದೇನೋ ಕಿವಿಯ ಬಳಿ ಕೇಳಿಸಿಕೊಂಡಂತೆ ನಟಿಸುತ್ತಾನೆ ಮತ್ತೊಬ್ಬ ತನ್ನ ಮುಂದಿರುವ ತಟ್ಟೆಯ ನೀರನ್ನು ನೋಡಿ ಮತ್ತೇನೋ ಬೊಗಳುತ್ತಾನೆ. ಅಷ್ಠೇ ಆದರೆ ಪವಾಗಿಲ್ಲ ತಾವು ಹೇಳಿದ್ದು ವೇದ ವಾಕ್ಯವೆಂಬಂತೆ ಮತ್ತು ಪಾಲಿಸಲೇ ಬೇಕೆಂಬ ಆಜ್ಞೆಯನ್ನು ಮಾಡಿ ಬಿಡುತ್ತಾರೆ. ಚಾನಲ್ ನಲ್ಲಿ ಬಂದ ಕೆಲ ದಿನಗಳ ನಂತರ ಊರೂರು ಸುತ್ತಿ ತಾಯತ ಮತ್ತಿತರ ಪದಾರ್ಥಗಳನ್ನ ನೀಡಿ ಜನರನ್ನ ವಂಚಿಸುವ ಈ ವಂಚಕರು ಖಾಸಗಿಯಾಗಿ ಅದೆಷ್ಟರ ಮಟ್ಟಿಗೆ ಬೆಳೆದಿರುತ್ತಾರೆಂದರೆ ಅದು ಊಹೆಗೂ ನಿಲುಕದ್ದು. 
  
       ಕೆಲ ದಿನಗಳ ಹಿಂದೆ ಕುತೂಹಲದಿಂದ ಛಾನಲ್ ನಲ್ಲಿ ಬರುವ ಗುರೂಜಿ ಯೊಬ್ಬನನ್ನು ನೋಡಲು ಅಚಾನಕ್ಕಾಗಿ ಹೋಗ ಬೇಕಾಯ್ತು. ಬೆಂಗಳೂರು ಹೊರವಲಯದಲ್ಲಿ ಆತನ ಮಠ, ಮುಖ್ಯ ನಗರದಿಂದ 10-15ಕಿಮಿ ಒಳ ರಸ್ತೆಯಲ್ಲಿ ಹೋದರೆ ಸುಮಾರು ನೂರಾರು ಎಕರೆಯಲ್ಲಿ ವಿಶಾಲವಾಗಿ ಸ್ಥಾಪಿಸಲ್ಪಟ್ಟ ಮಠ! ಅದಕ್ಕೆ ಭದ್ರ ಬೇಲಿ, ಸೆಕ್ಯುರಿಟಿ ಗುರೂಜಿಯ ಅಪ್ಪಣೆಯಿಲ್ಲದೇ ಒಳಗೆ ಪ್ರವೇಶವಿಲ್ಲ. ಇನ್ನು ಅವನ ಹಿನ್ನೆಲೆ ಕೇಳಿ ದಂಗಾಗುವ ಸರದಿ ನನ್ನದು, ಆತ ಒಬ್ಬ ಉಂಡಾಡಿ ಗುಂಡ, ಸರಿಯಾಗಿ ಓದದೇ ಬೆಂಗಳೂರಿನ ಗಲ್ಲಿಯಲ್ಲಿ ಕಾಲ ಕಳೆಯುತ್ತಾ ಕೀಟಲೆ ಮಾಡಿಕೊಂಡಿದ್ದವನು, ಕೇವಲ ನಾಲ್ಕೈದು ವರ್ಷಗಳಲ್ಲಿ ಹೀಗಾಗಿ ಬಿಟ್ಟಿದ್ದ, ಅವನ ವೇಷಭೂಷಣವೂ ಬದಲಾಗಿದೆ, ಓಡಾಟಕ್ಕೆ ಐಷಾರಾಮಿ ಕಾರು ಬಂದಿದೆ, ಟಿವಿ ಯಲ್ಲಿ ನೋಡಿ ಬರುವವರಿಗೆ ಸಾವಿರ ಗಟ್ಟಲೇ ಫೀಸು ಸುಲಿಯುತ್ತಾನೆ. ಇದು ಇವನೊಬ್ಬನ ಕಥೆಯಲ್ಲ ಟೀವಿಯಲ್ಲಿ ಬರುವ ಬಹುತೇಕ ಎಲ್ಲಾ ಅಸಾಮಿಗಳ ಕಥೆ. ಇನ್ನೂ ಕೆಲವರಿದ್ದಾರೆ ವಾಸ್ತು ತಜ್ಞರೆಂಬ ಕೋಡು ಬೇರೆ ಇವರಿಗೆ, ಹೊಟ್ಟೆ ಹೊರೆಯಲು ಪ್ರಾಮಾಣಿಕವಾದ ಹಲವು ದಾರಿಗಳಿದ್ದರೂ ಸಹಾ ನಂಬಿಕೆಗಳನ್ನ ಬಂಡವಾಳವಾಗಿ ಮಾಡಿಕೊಂಡು ಜನರನ್ನು ಹೆದರಿಸುತ್ತಾ ದುಡ್ಡು ಮಾಡಲು ನಿಂತು ಬಿಟ್ಟಿದ್ದಾರೆ. ದೃಶ್ಯ ಮಾಧ್ಯಮಗಳು ಇಂಥಹವರಿಗೆ ಸಾಥ್ ನೀಡುತ್ತಾ ಬೇಜವಾಬ್ದಾರಿತನ ಪ್ರದರ್ಶಿಸುತ್ತಿವೆ. 
  
      ರಾಜ್ಯ ಸರ್ಕಾರ ಮೌಡ್ಯಗಳ ನಿರ್ಬಂಧ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ, ಸಧ್ಯ ಲೋಕಸಭಾ ಚುನಾವಣೆ ಮುಗಿದ ಮೇಲಾದರೂ ಈ ಕುರಿತು ನಿಷ್ಟುರವಾದ ನಿಲುವನ್ನು ಪ್ರದರ್ಶಿಸಿ ಮೌಡ್ಯದ ಪರಿಮಿತಿಯನ್ನು ಗುರುತಿಸಿ ಜ್ಯೋತಿಷಿಗಳಿಗೆ, ಬಾಬಾಗಳಿಗೆ, ವಾಸ್ತುತಜ್ಞರಿಗೆ, ಮೌಢ್ಯ ಪ್ರಸಾರ ಮಾಡುವವರಿಗೆ ನಿರ್ಬಧ ಹಾಕುವುದು ಒಳಿತು. ಜನರಿಗೆ ಸೌಲಭ್ಯಗಳು ಹೆಚ್ಚಾದಂತೆ ದುಡ್ಡು ಹೆಚ್ಚಾದಂತೆ ನಂಬಿಕೆಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ, ಮೌಡ್ಯ-ಕಂದಾಚಾರಗಳಿಗೆ ಬಲಿಯಾಗುತ್ತಿದ್ದಾರೆ ಅದು ವರ್ತಮಾನದ ದುರಂತಗಳಲ್ಲೊಂದು, ನಂಬಿಕೆಗಳನ್ನು ಸಹಾ ವೈಚಾರಿಕವಾಗಿ ವಿಶ್ಲೇಷಿಸುವ ಮತ್ತು ಚೌಕಟ್ಟಿನಲ ಎಲ್ಲೆಯೊಳಗೆ ಸರಿ ಕಂಡಿದ್ದನ್ನು ಒಪ್ಪಿಕೊಳ್ಳುವ ಜಾಗೃತ ಸ್ಥಿತಿಯನ್ನ ಪ್ರದರ್ಶಿಸಬೇಕಿದೆ.