Sunday, July 20, 2014

ಹುಚ್ಚುಮನಸ್ಸಿನ ವಿಕೃತಿಗಳು ಮತ್ತು ಒಂದು ಅನ್ಯಾಯ!


ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಷ್ಠೆ! ಬೆಳಿಗ್ಗೆ 10.30ರ ವೇಳೆಗೆ ಬಂದ ದೂರವಾಣಿ ಕರೆಯೊಂದು ನನ್ನ ಮನಸ್ಸಿಗೆ ಆಘಾತ ಉಂಟುಮಾಡಿತ್ತು.ಹಾಸನ ಜಿಲ್ಲೆಯ ಕೊಣನೂರು ಗ್ರಾಮದ ಪರಿಧಿಯಲ್ಲಿ ಬರುವ ಗ್ರಾಮವೊಂದರಲ್ಲಿ ಪಕ್ಕದ ಮನೆಯ ವಿಕೃತ ಯುವಕನೊಬ್ಬ ಮನೆ ಮುಂದೆ ಆಡುತ್ತಿದ್ದ 4-5ವಯಸ್ಸಿನ ಪುಟ್ಟ ಮಗುವನ್ನ ಮನಯೊಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದನಲ್ಲದೇ ನಂತರವೂ ಅತ್ಯಂತ ಹೀನಾಯವಾಗಿ ಮಗುವಿನೊಂದಿಗೆ ನಡೆದುಕೊಂಡಿದ್ದ. 2ದಿನಗಳ ನಂತರ ಮಗು ತೀವ್ರ ಜ್ವರ ಮತ್ತು ಉದರ ಬಾಧೆಯಿಂದ ನರಳಿ ಮಲಗಿತು, ಗಾಬರಿಗೊಂಡ ಪೋಷಕರು ಕೊಣನೂರು ಠಾಣೆಯ ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗಲೇ ಘೋರ ಸತ್ಯದ ಅನಾವರಣಗೊಂಡಿದ್ದು. ಬಹುಶ: ಅಲ್ಲಿ ಪರೀಕ್ಷಿಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳದಿದ್ದರೆ ಹೊರ ಜಗತ್ತಿಗೆ ಅದು ತಿಳಿಯುತ್ತಿರಲಿಲ್ಲವೇನೋ. ಇದು ಒತ್ತಟ್ಟಿಗಿರಲಿ ಇದಕ್ಕಿಂತಲೂ ಅತ್ಯಂತ ಕೆಟ್ಟ ಸಂಗತಿಯೆಂದರೆ ಜಾತೀಯ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನ ಮುಚ್ಚಿ ಹಾಕಿ ರಾಜೀ ಮಾಡಿಸಲು ಸಮುದಾಯದ ಮಂದಿ ಪ್ರಯತ್ನಿಸಿದ್ದು. ಅದೃಷ್ಠವಶಾತ್ ಹೀನ ಮನಸ್ಥಿತಿಯ ಜನರ ಪ್ರಯತ್ನ ಕೈಗೂಡಲಿಲ್ಲ ಕೇಸು ದಾಖಲಾಯ್ತು, ವಿಕೃತನನ್ನು ಜೈಲಿಗಟ್ಟಲಾಯ್ತು. ಸುದ್ದಿ ಮಾಧ್ಯಮಗಳಲ್ಲೂ ಪ್ರಕಟವಾಯಿತು, ಭಾವನಾತ್ಮಕವಾಗಿ ಮಿಡಿಯಬೇಕಾದ ಹೃದಯಗಳು ಈ ಸಂಧರ್ಭದಲ್ಲಿ ನಿದ್ರಾವಸ್ಥೆಯಲ್ಲಿದ್ದವು ಈ ಸುದ್ದಿಗಿಂತ ಅವತ್ತು ಕೇಂದ್ರ ಬಜೆಟ್ ಎಲ್ಲರಿಗೂ ಮುಖ್ಯವಾಗಿತ್ತು. ಮಾನವೀಯತೆಯ ತುಡಿತ ಸತ್ತು ಮಲಗಿತ್ತು.  ಮೀಡಿಯಾಗಳಲ್ಲೂ ಈ ಸುದ್ದಿಗೆ ಆಧ್ಯತೆ ಇರಲಿಲ್ಲ ಎಂಬುದು ಅಷ್ಟೇ ವಿಷಾಧನೀಯ ಸಂಗತಿ. 
         ಇವತ್ತು ಬೆಂಗಳೂರಿನಲ್ಲೇನಾಗಿದೆ? 1ನೇ ತರಗತಿಯಲ್ಲಿ ಓದುತ್ತಿದ್ದ ವಿಬ್ ಗಯಾರ್ ಶಾಲೆಯ ಮಗುವಿನ ಮೇಲೆ ಶಾಲೆಯಲ್ಲೇ ವಿಕೃತಿಯನ್ನ ಪ್ರದರ್ಶಿಸಲಾಗಿದೆ ಎರಡು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಕಳೆದ ವಾರ ಯುವತಿಯೋರ್ವಳ ಮೇಲೆ ವಿಕೃತರ ಗ್ಯಾಂಗ್ ದೌರ್ಜನ್ಯ ನಡೆಸಿದ್ದಲ್ಲದೇ ಅನೈಸರ್ಗಿಕ ವಿಕೃತಿಯನ್ನೆಸಗಿದೆ. ಮೀಡಿಯಾಗಳಲ್ಲಿ , ವಿಧಾನ ಸಭೆಗಳಲ್ಲಿ, ಜನಸಾಮಾನ್ಯರ ನಡುವೆ ಇದೇ ಚರ್ಚೆ ತಮಗೆ ತೋಚಿದ ರೀತಿಯಲ್ಲಿ ನಡೆಯುತ್ತಿದೆ. ನಗರ ಪ್ರದೇಶದಲ್ಲಿ ನಡೆದರೆ ಮಾತ್ರ ಅಂತಹ ವಿಕೃತಿಗಳಿಗೆ ಮಾನ್ಯತೆಯೇ ? ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅನಾಚಾರ ನಡೆದಾಗ ಕಠಿಣ ಕ್ರಮಕ್ಕೆ ಮತ್ತು ಕಾನೂನು ಜಾರಿಗೆ ಯಾಕೆ ಚರ್ಚೆಗಳು ನಡೆಯುವುದಿಲ್ಲ? ಮಿಡಿಯಾಗಳಲ್ಲಿ ಆಧ್ಯತೆ ಸಿಗಬೇಕಾದ ವಿಚಾರಗಳಿಗಿಂತ ವಿಕೃತಿಯ ಪರಮಾವಧಿಯನ್ನೆ ಎಳೆ ಎಳೆಯಾಗಿ ವಿವರಿಸಿ ಮತ್ತಷ್ಟು ವಿಕೃತಿಗೆ ಅವಕಾಶ ಮಾಡಿಕೊಡುವುದು ಸರಿಯೇ? ಸಾಮಾಜಿಕ ಸ್ವಾಸ್ತ್ಯ ಕಾಪಾಡ ಬೇಕಾದವರು ಯಾರು ? ಅರಿವಿನ ಪ್ರಜ್ಞೆ ಮೂಡಿಸುವ ಹೊಣೆಗಾರಿಕೆ ಯಾರದ್ದು ? ವಿಕೃತಿಯ ಬಲಿಪಶುವಾದವರು ಇಂತಹ ಕ್ರಿಯೆಗಳಿಂದ ಅನುಭವಿಸುವ ನೋವಿಗೆ ಪರಿಹಾರ ಏನು?

             ಹೌದು ಇಂತಹದ್ದೊಂದು ಚರ್ಚೆ ಇವತ್ತು ಅನಿವಾರ್ಯ,ಅತ್ಯಾಚಾರದಂತಹ ಹೀನ ಕ್ರಿಯೆಗೆ ಪೋಸ್ಕೋ ದಂತಹ ಕಠಿಣ ಕಾನೂನು ಜಾರಿಗೆ ಬರಲು ನಿರ್ಭಯಾ ಪ್ರಕರಣ ನಾಂದಿ ಹಾಡ ಬೇಕಾಯ್ತು, ಅದೇ ರೀತಿ ಬೆಂಗಳೂರಿನಲ್ಲಿ ನಡೆದಿರುವ  ಎರಡು ಹೀನ ಪ್ರಕರಣಗಳು ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕಾನೂನು ಜಾರಿಯಾಗುವಂತೆ ಕ್ರಿಯೆಗೆ ಸಾಕ್ಷಿಯಾಗಿದೆ. ಇವತ್ತು ಇಡೀ ಪ್ರಕರಣಗಳು ದೃಶ್ಯ ಮಾಧ್ಯಮಗಳ ಅತಿರೇಕದ ವರದಿಗಳಿಂದ ಆಗುತ್ತಿವೆಯೆಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ, ಸುಪ್ರಿಂ ಕೋರ್ಟು ನಿರ್ದೇಶನದಂತೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಪೋಷಕರು, ಗೆಳೆಯರು, ಶಾಲೆ, ಕಾಲೇಜು ಮತ್ತು ಸಂತ್ರಸ್ಥರ ಯಾವುದೇ ಗುರುತಿಸಲ್ಪಡುವ ಸಂಗತಿಗಳನ್ನು ಪ್ರಕಟಿಸುವಂತಿಲ್ಲ, ಇಂತಹ ಕ್ರಿಯೆಗಳು ಸಂತ್ರಸ್ಥರನ್ನು ಭೂಮಿಯ ಮೇಲೆ ಬದುಕಿದ್ದು ಸತ್ತಂತೆ ಮಾಡಿ ಬಿಡುತ್ತವೆ ಮತ್ತು ನಿಖರವಾಗಿ ಹೇಳುವುದಾದರೆ ಯಾರಿಗಾದರೂ ತಿಳಿಯದಂತೆ ಅತ್ಯಾಚಾರ ಎಸಗುವ ಕಾಮುಕರಿಗಿಂತ ಸಾರ್ವತ್ರಿಕವಾಗಿ ಇದನ್ನು ಪ್ರಸಾರ ಮಾಡುವವರು ಹೆಚ್ಚು ಕ್ರೂರಿಗಳಾಗಿ ಬಿಡುತ್ತಾರೆ. ಅತ್ಯಾಚಾರ ನಡೆದಾಗ ಮಾನವೀಯ ತುಡಿತದ ವಿಚಾರಗಳಿಗೆ ಆಸ್ಪದವಾಗಬೇಕು ಕಾಮುಕರ ಶಿಕ್ಷೆಯ ಕುರಿತು ಚರ್ಚೆಗಳಾಗ ಬೇಕು ಆದರೆ ಮತೀಯ ಲಾಭದ ಕುರಿತ ಚರ್ಚೆ, ಅತ್ಯಾಚಾರ ಹೇಗೆ ಆಯಿತು ಎಂಬುದನ್ನು ಚಿತ್ರಗಳ ಮೂಲಕ ಸವಿವರವಾಗಿ ತಿಳಿಸುವ ಸಂಗತಿ ಇದೆಯಲ್ಲ ಅರಗಿಸಿಕೊಳ್ಳಲಾಗದ್ದು. 


           ಈ ಸಂಧರ್ಬದಲ್ಲಿ ಚರ್ಚೆಯಾಗಬೇಕಾದ ಮತ್ತೊಂದು ಅಂಶವೆಂದರೆ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿಯ ಮೇಲೆ ದೇಶದಲ್ಲೇ ಮೊದಲ ಬಾರಿಗೆ 166(ಎ) ಪ್ರಕರಣ ದಾಖಲಾಗಿರುವುದು!ಬೆಂಗಳೂರು ಮಹಾನಗರದ ಪುಲಿಕೇಶಿ ನಗರ ಠಾಣ ವ್ಯಾಪ್ತಿಯಲ್ಲಿ ಯುವತಿಯೋರ್ವಳ ಮೇಲೆ  ಜರುಗಿದ ಅನೈಸರ್ಗಿಕ ಅತ್ಯಾಚಾರ ಪ್ರಕರಣದಲ್ಲಿ ಮೀಡಿಯಾಗಳ ವಿಕೃತಿಯಿಂದ ದಕ್ಷ ಮತ್ತು ಪ್ರಾಮಾಣಿಕರೆಂದೇ ಹೆಸರು ಮಾಡಿದ್ದ ರಾಜಧಾನಿಯ ಇನ್ಸ್ ಪೆಕ್ಟರ್  ಮೊಹಮ್ಮದ್ ರಫಿ ಅಮಾನತುಗೊಂಡಿದ್ದಲ್ಲದೇ ಬಂಧನಕ್ಕೊಳಗಾಗಿದ್ದು.  ಬಹುಶ: ಹಾಸನ ಜಿಲ್ಲೆಯ ಜನತೆಗೆ ತಿಳಿದಿರಲಾರದು ಈ ಮೊಹಮ್ಮದ್ ರಫಿ ಜಿಲ್ಲೆಯ ಅರಕಲಗೂಡು ಪಟ್ಟಣದವರು. ಇಡೀ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತ ದಿನಕ್ಕೊಂದು ಗಾಸಿಪ್ ಸುದ್ದಿಗೆ ಆಹಾರವಾಗಿದ್ದಾರೆ. ಮೊಹಮ್ಮದ್ ರಫಿ ಬಿಎ, ಬಿಡಿ ಪಧವೀಧರ 1997 ರಿಂದ 1998ರ ವರೆಗೆ ಪ್ರೌಢಶಾಲಾ ಶಿಕ್ಷಕ ವೃತ್ತಿಯಲ್ಲಿದ್ದವರು. ಬೀಡಿ ಕಟ್ಟುವ ವೃತ್ತಿಯಲ್ಲಿ ತೊಡಗಿಸಿಕೊಂಡ ಬಡಕುಟುಂಬದಿಂದ ರಫಿ 1998ರಲ್ಲಿ ರಾಜ್ಯ ಪೋಲೀಸ್ ಸೇವೆಗೆ ಸೇರಿ ಎಸ್ಸೈ ಆದರು. ಕೋಲಾರ ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ರಫಿ ಕೋಲಾರ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ರೌಡಿಗಳನ್ನು ಮಟ್ಟ ಹಾಕಿದರು, ಅನೇಕ ಪಾತಕಿಗಳನ್ನು ಎನ್ ಕೌಂಟರ್ ಮಾಡಿದರು, ಕೊಲೆಗೈದು 14ಕೆಜಿ ಚಿನ್ನ ಹೊತ್ತೊಯ್ದಿದ್ದ ಪಾತಕಿಯೇ ಠಾಣೆಯ ಮುಂದೆ ಜನರನ್ನ ಕಲೆಹಾಕಿ ಅಪರಾಧಿಗಳನ್ನು ಹಿಡಿಯುವಂತೆ ಪ್ರತಿಭಟನೆ ನಡೆಸುತ್ತಿದ್ದಾಗ ಕುಶಲತೆಯಿಂದ ಆತನನ್ನ ಹೆಡೆಮುರಿದು ಕಟ್ಟಿ ಜೈಲಿಗೆ ದಬ್ಬಿದ್ದು ರಫಿ ಹೆಸರನ್ನು ಇವತ್ತಿಗೂ ಅಜರಾಮರವಾಗಿಸಿದೆ. ಬೆಂಗಳೂರಿಗೆ ಇನ್ಸ್ ಪೆಕ್ಟರ್ ಆಗಿ ಬಂದ ಮೇಲೆ 1999 ರಿಂದ 2011ರ ವರೆಗೆ ಬೆಂಗಳೂರು ರೌಡಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ರಫಿ , ಜಾನ್ ಸನ್ ಎಂಬ ಪುರಾತನ ಪಾತಕಿಯನ್ನು ಮತ್ತು 14ವಿವಿಧ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ನಮ್ರಾಜ್ ಬಹಾದ್ದೂರ್ ಥಾಪ ಎಂಬಾತನನ್ನು ಶೂಟೌಟ್ ಮಾಡಿ ಕೆಡವಿ ಹಾಕಿದ್ದರು. ಅಷ್ಟೇ ಅಲ್ಲ 70ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ದೊಡ್ಡ ಗ್ಯಾಂಗ್ ಅನ್ನು ಸೆರೆಹಿಡಿದು ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು, ಮಹಾನಗರದಲ್ಲಿರುವ ಯುಟಿವಿ ಮೋಷನ್ ಬೆದರಿಕೆ ಪ್ರಕರಣದಲ್ಲಿ ರವಿ ಪೂಜಾರಿ ಗ್ಯಾಂಗ್ ಅನ್ನು ಸದೆ ಬಡಿದಿದ್ದರಲ್ಲದೇ 37ಕೆಜಿ ಚಿನ್ನ ಮತ್ತು ನಗದು ವಶಪಡಿಸಿಕೊಂಡು 8ಕ್ಕೂ ಹೆಚ್ಚು ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು. ಇದೇ ಕಾರಣಕ್ಕಾಗಿ ರಫಿಗೆ ಬಿಜೆಪಿ ಸರ್ಕಾರವಿದ್ದಾಗ  ಎರಡು ಬಾರಿ ಪುರಸ್ಕಾರವೂ ದೊರಕಿದೆ. ವೈಜ್ಞಾನಿಕ ತನಿಖೆಗಾಗಿ ಅತ್ಯುತ್ತಮ ವೈಜ್ಞಾನಿಕ ತನಿಖೆ ಪ್ರಶಸ್ತಿ ದಕ್ಕಿದ್ದರೆ, ಸೇವಾ ಶ್ರೇಷ್ಠತೆಗಾಗಿ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದಾರೆ. ಇಂತಹ ರಫಿ ಅತ್ಯಾಚಾರದಂತಹ ಪ್ರಕರಣದಲ್ಲಿ ಅಮಾನತು ಮತ್ತು ಬಂದನಕ್ಕೊಳಗಾಗುವುದೆಂದರೆ ಚಕಿತಗೊಳ್ಳುವ ಸಂಗತಿ ಇದು. 
    ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ ತಿಳಿದದ್ದು ಇಷ್ಟು ಕಳೆದ ಜುಲೈ 10ರಂದು ಬೆಂಗಳೂರಿನ ಯುವತಿಯ ಮೇಲೆ ನಡೆದ ದೌರ್ಜನ್ಯದ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದುಜುಲೈ 13ರಂದು ಮದ್ಯ ರಾತ್ರಿ, ಅವತ್ತು ಪುಲಿಕೇಶಿ ನಗರ ಠಾಣೆಗೆ ಗೆಳೆಯನೊಂದಿಗೆ ಬಂದ ಯುವತಿ ಆರೋಪಿಯನ್ನು ಪೋಲೀಸ್ ವಶಕ್ಕೆ ನೀಡಿದಳೆ ಹೊರತು ಅತ್ಯಾಚಾರ ಪ್ರಕರಣ ದಾಖಲಿಸಲು ಸಿದ್ದಳಿರಲಿಲ್ಲ, ಕರ್ತವ್ಯದಲ್ಲಿದ್ದ ಎಎಸ್ಸೈ , ಠಾಣೆಯ ಇನ್ಸ್ ಪೆಕ್ಟರ್ ರಫಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಯುವತಿಯೊಂದಿಗೆ ಮಾತನಾಡಿದ ಅವರು ಪ್ರಕರಣದ ತೀವ್ರತೆ ಅರಿತು ದೂರು ನೀಡುವಂತೆ ಸಲಹೆ ಮಾಡಿದ್ದಾರೆ ಮತ್ತು ಅದೇ ಪ್ರಕಾರವಾಗಿ ಎಎಸ್ಸೈ ಸೆ.354 ಮತ್ತು 377ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಬಂದ ಇನ್ಸ್ ಪೆಕ್ಟರ್ ರಫಿ ಅಪರಾಧಿಯನ್ನ ವಿಚಾರಣೆಗೊಳಪಡಿಸಿದ್ದಾರೆ, ಆ ವೇಳೆಗೆ ದೂರುದಾರರು ಸ್ಥಳದಲ್ಲಿಲ್ಲ, ಸೋಮವಾರ ಅಪರಾಧಿಯನ್ನ ಜೈಲಿಗೆ ಅಟ್ಟಲಾಗಿದೆ, ಮಂಗಳವಾರ ಗೆಳೆಯನ ಜೊತೆ ಠಾಣೆಗೆ ಬಂದ ಯುವತಿ ದೂರಿನ ದೃಢೀಕರಣ ಪಡೆಯುವ ಸಂಧರ್ಬ ಬೆಂಗಳೂರಿನ ಸಂಜೆ ಆಂಗ್ಲ ಪತ್ರಿಕೆಯೊಂದರ ವರದಿಗಾರ ಗಮನಿಸಿದ್ದಾನೆ. ಪ್ರಕರಣದ ಪೂರ್ವಾಪರ ತಿಳಿಯುವ ಮುನ್ನವೇ ತನಗೆ ತೋಚಿದಂತೆ ಸುದ್ದಿ ಪ್ರಕಟಿಸಿದ್ದಾನೆ. ಕ್ಷಣ ಮಾತ್ರದಲ್ಲಿ ಸುದ್ದಿ ಮಿಂಚಿನಂತೆ ಹರಡಿ ದೃಶ್ಯ ಮಾಧ್ಯಮದ ಮಂದಿ ತಮಗೆ ತಿಳಿದಂತೆ ಸುದ್ದಿಯನ್ನು ವರದಿ ಮಾಡಿದ್ದಾರೆ. ರಫಿ ಪ್ರಕರಣವನ್ನ ರಾಜಿ ಮಾಡಲು ಯತ್ನಿಸಿದರು, ಸರಿಯಾದ ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರಿದರು ಆ ಮೂಲಕ ಅಪರಾಧಿಯನ್ನು ರಕ್ಷಿಸಲು ಯತ್ನಿಸಿದರು ಇತ್ಯಾದಿ ಅಷ್ಟೇ ಅಲ್ಲ ಮರುದಿನ ಬಂಧನಕ್ಕೊಳಗಾಗಿ ಅತ್ಯಾಚಾರ ಪ್ರಕರಣದ ಕೇಸು ದಾಖಲಿಸಲು ಸೆಕ್ಷನ್ ತಿಳಿದಿರಲಿಲ್ಲ ಎಂದೆಲ್ಲ ವರದಿಯಾಗಿದೆ. ಆದರೆ ಪೋಲೀಸ್ ದಾಖಲೆಗಳು ಹೇಳುವುದೇ ಬೇರೆ. ಅಸಲಿಗೆ ಪ್ರಕರಣ ದಾಖಲಿಸಿದ್ದು ಎಎಸ್ಸೈ ಮತ್ತು ಎಸ್ಸೈ, ಅಪರಾಧಿ ಬಂದನವಾಗಿ ಜೈಲಿಗಟ್ಟಿದ ಮೇಲೆ ಸುದ್ದಿ ಮಾಧ್ಯಮಗಳಲ್ಲಿ ಕಲ್ಪಿತ ಸುದ್ದಿಗಳ ಪ್ರಕಟವಾಗಿದೆ, ಬಂಧನಕ್ಕೊಳಗಾದ ರಫಿ ತನಿಖಾ ವೇಳೆ ಸೆಕ್ಷನ್ ಅರಿವಿರಲಿಲ್ಲ ಎಂದು ಹೇಳಿಕೆಯನ್ನೇ ನೀಡಿಲ್ಲ ಎಂದು ಪೋಲೀಸ್ ಮೂಲಗಳು ಖಚಿತವಾಗಿ ಹೇಳುತ್ತವೆ. ಸುದ್ದಿ ಮೀಡಿಯಾಗಳಲ್ಲಿ ಬಂದ ನಂತರ ಸ್ವತ: ಯುವತಿಯೇ ಪೋಲೀಸ್ ಕಮಿಷನರ್ ಬಳಿ ತೆರಳಿ ಇನ್ಸ್ ಪೆಕ್ಟರ್ ರಫಿಯದ್ದು ತಪ್ಪಿಲ್ಲ ಎಂದು ಹೇಳಿದ್ದಾಳೆ ಮತ್ತು ಪ್ರಕರಣದ ಕುರಿತು ಕಲ್ಪಿತ ಸುದ್ದಿ ಪ್ರಕಟಿಸಿದ ಮತ್ತು ತನ್ನ ಗುರುತನ್ನು ಪತ್ತೆ ಹಚ್ಚುವ ರೀತಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ದ ಅದೇ ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆದರೆ ಇದ್ಯಾವುದು ಇವತ್ತಿಗೂ ಸುದ್ದಿಯಾಗಿಲ್ಲ ಆದರೆ ಅಮಾಯಕ ಇನ್ಸ್ ಪೆಕ್ಟರ್ ಮೇಲೆ ವಿನಾಕಾರಣ ಕ್ರಮ ಜರುಗಿಸಲಾಗಿದೆ. ಅತ್ಯಾಚಾರದ ಪ್ರಕರಣ ತೀವ್ರತೆ ಒಬ್ಬ ಇನ್ಸ್ಪೆಕ್ಟರನನ್ನು ಆತನ ಪ್ರಾಮಾಣಿಕತೆ ಮತ್ತು ವಾಸ್ತವತೆಗಿಂತ ಜಾತೀಯ ನೆಲೆಗಟ್ಟಿನಲ್ಲಿ ನೋಡುವಂತಾಗಿದದು ಅತ್ಯಂತ ದುರದೃಷ್ಠಕರ. ಇನ್ಸ್ ಪೆಕ್ಟರ್ ಮೊಹಮ್ಮದ್ ರಫಿ  ಪ್ರಕರಣದಿಂದ ನೊಂದಿದ್ದಾರೆ  ಸಾರ್ವತ್ರಿಕವಾಗಿ ವಾಸ್ತವ ಸಂಗತಿಗಳನ್ನು ಅರುಹುವ ದೃಷ್ಟಿಯಿಂದ ಪ್ರಕರಣ ಸಮಾಪ್ತಿಯಾದ ಮೇಲೆ ಹೈಕೋರ್ಟುನಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತಿದ್ದಾರೆ. ಸತ್ಯ ಬೇಗ ಹೊರ ಬರಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿ