Sunday, February 22, 2015

ಫ್ಲಕ್ಸ್ ಬ್ಯಾನರು ಹಾವಳಿಗೊಂದು ಮಸೂದೆ ಇರಲಿ!

ರಾಜ್ಯ ಸರ್ಕಾರ ಬಜೆಟ್ ನಂತರದಲ್ಲಿ ಸಾರ್ವತ್ರಿಕವಾಗಿ ಬಿಡು ಬೀಸಾಗಿ ಫ್ಲಕ್ಸ್ ಮತ್ತು ಬ್ಯಾನರ್ ಹಾಕುವುದನ್ನು ನಿಷೇದಿಸಲು ಚಿಂತನೆ ನಡೆಸಿದೆ ಎಂಬ ಸಂಗತಿ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬ್ಯುಸಿನೆಸ್ಸಿಗೆ ಕುಳಿತ ಬಂಡವಾಳಶಾಹಿಗಳ ನಿದ್ದೆಗೆಡಿಸಿದೆ. ಚುನಾವಣೆ ಸಂಧರ್ಭಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಫ್ಲಕ್ಸ್ ಮತ್ತು ಬ್ಯಾನರ್ ವಹಿವಾಟಿಲ್ಲದೆ ಬಕ್ಕಬಾರಲು ಬಿದ್ದಿತ್ತು, ಬ್ಯಾನರುಗಳಲ್ಲಿ ರಾರಾಜಿಸಲು ಕಾದು ಕುಂತಿದ್ದವರಿಗೂ ದೊಡ್ಡ ನಿರಾಸೆಯಾಗಿತ್ತು, ಈಗ ಮತ್ತೆ ಅದೇ ನಿರಾಸೆ ಇಣುಕುತ್ತಿದೆ. ವರ್ಚಸ್ಸು ಮತ್ತು ಪ್ರತಿಷ್ಠೆಯ ಸಂಕೇತಗಳಾಗಿರುವ ಫ್ಲಕ್ಸ್ ಬ್ಯಾನರುಗಳ ಭರಾಟೆ ಲಂಗು ಲಗಾಮಿಲ್ಲದೇ ಮುಂದುವರೆದಿರುವಾಗ ಅದಕ್ಕೊಂದು ನಿಯಂತ್ರಣ ಹಾಕುವ ಸರ್ಕಾರದ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ ಹೊಟ್ಟೆಪಾಡಿಗಾಗಿ ಬಂಡವಾಳ ಹಾಕಿ ಕುಳಿತ ನಿರುದ್ಯೋಗಿ ಇಂತಹ ನಿಲುವುಗಳಿಂದ ತತ್ತರಿಸಬಹುದು. ಸರ್ಕಾರ ಬ್ಯಾನರ್ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿದ್ದೇಕೆ? ಅವುಗಳು ಉಂಟು ಮಾಡುತ್ತಿದ್ದ ಕಿರಿ ಕಿರಿಗಳಾದರೂ ಎಂಥಹವು? ಕಾಲ ಘಟ್ಟಗಳಲ್ಲಿ ಆದ ಬದಲಾವಣೆಗಳು ಯಾವೆಲ್ಲ ಸಂಗತಿಗಳನ್ನು ಆಪೋಶನ ತೆಗೆದುಕೊಂಡವು ಎಂಬ ಇಣುಕು ನೋಟ ಇಲ್ಲಿದೆ. 
      ಆಧುನಿಕ ತಂತ್ರಜ್ಞಾನದಿಂದಾಗಿ ಕೆಲಸಗಳು ತ್ವರಿತ ಗತಿಯಲ್ಲಿ ಶೀಘ್ರವಾಗಿ ಆಗುತ್ತವೆ ಎಂಬ ಕಾರಣಕ್ಕೆ ಯಂತ್ರೋಪಕರಣಗಳನ್ನು ಜನ ಜೀವನದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ ಹಾಗಾಗಿ ಇಲ್ಲಿ ಶ್ರಮಕ್ಕಿಂತ 'ಕೌಶಲ್ಯ'ಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆಯಷ್ಟೇ.ವರ್ತಮಾನದ ಪ್ರತೀ ಆಗು ಹೋಗುಗಳು ಸಹಾ ಸಾರ್ವತ್ರಿಕವಾಗಿ ಜಾಹೀರಾಗಬೇಕಾದರೆ ವಿವಿಧ ಆಯಾಮಗಳಲ್ಲಿ ಅದನ್ನು ಪ್ರಸ್ತುತ ಪಡಿಸಲಾಗುತ್ತದೆ. ಜನ ಸಾಮಾನ್ಯರ ಅಗತ್ಯತೆಗಳಿಗೆ ಅನುಗುಣವಾಗಿ ಜಾಹೀರಾತುಗಳನ್ನು ಧ್ವನಿಯ ಮೂಲಕ, ಅಕ್ಷರಗಳ ಮೂಲಕ, ಚಿತ್ರಗಳ ಮೂಲಕ, ಗೋಡೆ ಬರಹಗಳ ಮೂಲಕ, ಕರ ಪತ್ರಗಳ ಮೂಲಕ, ಸುದ್ದಿ ವಾಹಿನಿಗಳ ಮೂಲಕ, ಅಂತರ್ಜಾಲದ ಮೂಲಕ, ಮೊಬೈಲ್ ಗಳ ಮೂಲಕ ಹೀಗೆ ಅನೇಕ ವಿಧಗಳ ಮೂಲಕ ಅಭಿವ್ಯಕ್ತಿಸಲಾಗುತ್ತಿದೆ. ನಿಮಗೆ ಗೊತ್ತಿರ ಬೇಕು ರಾಜ ಮಹಾರಾಜರ ಕಾಲದಲ್ಲಿ ಎಲೆಗಳ ಮೇಲೆ, ತಾಳೆಗರಿಗಳಲ್ಲಿ ಭಿನ್ನವತ್ತಳೆಗಳನ್ನು ಮತ್ತು ಬರಹಗಳನ್ನು ಬರೆಯಲಾಗುತ್ತಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಂ ದೇಶಗಳಲ್ಲಿ ಮೊದಲ ಬಾರಿಗೆ ಸಾರ್ವತ್ರಿಕವಾದ ಪ್ರಚಾರ ಅಭಿವ್ಯಕ್ತಿಗಳನ್ನು ಕಾಣ ಬಹುದಾಗಿತ್ತು. ಕಲ್ಲುಗಳ ಮೇಲೆ ಅಕ್ಷರಗಳನ್ನು, ಅಂಕಿಗಳನ್ನು ಮತ್ತು ಚಿತ್ರಗಳನ್ನು ಕೆತ್ತನೆ ಮಾಡುವ ಮೂಲಕ ಪ್ರಚಾರದ ತಂತ್ರವನ್ನು ಕಂಡು ಕೊಳ್ಳಲಾಯಿತು. ಇದು ಕಂಡು ಬಂದಿದ್ದು ಕ್ರಿ.ಪೂ.4000 ರಲ್ಲಿ!
     ಮುಂದೆ ಇದೇ ತಂತ್ರವನ್ನು ಬಣ್ಣದ ಮೂಲಕ ಕಲ್ಲಿನ ಮೇಲೆ ಬರೆಯುವ ಕ್ರಿಯೆ ಆರಂಭವಾಗಿ ಅದು ಏಷ್ಯಾ ಖಂಡ, ಆಫ್ರಿಕಾ ಖಂಡ ಮತ್ತು ಅಮೇರಿಕಾ ಖಂಡದ ವಿವಿಧ ದೇಶಗಳಿಗೆ ವಿಸ್ತರಿಸಲ್ಪಟ್ಟಿತು. ವಾಣಿಜ್ಯ ಉದ್ದೇಶಕ್ಕೆ, ಸಾಹಿತ್ಯ ಪ್ರಸಾರಕ್ಕೆ, ಕ್ರಾಂತಿಕಾರಿ ಹೋರಾಟಗಳಿಗೆ, ಸ್ವಾತಂತ್ರ್ಯದ ಹೋರಾಟಗಳಿಗೆ ಜಾಹೀರಾತಿನ ವಿವಿಧ ಆಯಾಮಗಳನ್ನು ಅನ್ವೇಷಿಸಲಾಯಿತು. 7ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ಅವಿಷ್ಕಾರದಲ್ಲಿ ಪೇಪರಿನ ಮೇಲೆ ಇಂಕನ್ನು ಬಳಸಿ ಬರೆಯುವ ಮೂಲಕ ಹೊಸ ಸಾಧ್ಯತೆಗಳು ತೆರೆದುಕೊಂಡವು. ಹೀಗೆ ಕಾಲ ಘಟ್ಟದಲ್ಲಿ ಬದಲಾವಣೆಗೊಂಡ ಜಾಹೀರಾತು ಅಭಿವ್ಯಕ್ತಿ ಮಾಧ್ಯಮಗಳು ಫ್ಲಕ್ಸ್ ಮತ್ತು ಬ್ಯಾನರ್ ನ ರೂಪದಲ್ಲಿ ಬಂದುನಿಂತಿವೆ. ಈ ಫ್ಲಕ್ಸ್ ಮತ್ತು ಬ್ಯಾನರ್ ಗೂ ಮೊದಲು ಡಿಜಿಟಲ್ ತಂತ್ರಜ್ಞಾನದಲ್ಲಿ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಬೃಹತ್ ಪರದೆಗಳನ್ನಿಟ್ಟು ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದರೆ ಅಲ್ಲಿನ ಜಾಹೀರಾತು ದರ ಎಲ್ಲರಿಗೂ ಎಟಕುವಂತಿರಲಿಲ್ಲ ಹಾಗಾಗಿ ಅದು ಬಂದಷ್ಟೇ ವೇಗದಲ್ಲಿ ಅಂತ್ಯ ಕಂಡಿತು. ದೊಡ್ಡ ದೊಡ್ಡ ಎಂ ಎನ್ ಸಿ ಕಂಪನಿಗಳು ಮಾತ್ರ ಅದನ್ನು ಬಳಸುತ್ತಿವೆ. 
      ಸಕಲ ಮಂದಿಗೂ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಕೈಗೆಟುಕುವಂತಹ ಜಾಹೀರಾತು ಮಾಧ್ಯಮ ಫ್ಲಕ್ಸ್ ಬ್ಯಾನರ್ ಗಳು. ಆದರೆ ಇವು ಮಾಡುವ ಕಿರಿ ಕಿರಿಗಳು ಒಂದೆರೆಡಲ್ಲ. ತಮಿಳು ನಾಡು ಮತ್ತು ಆಂದ್ರ ಪ್ರದೇಶದಲ್ಲಿ ಹುಟ್ಟಿಕೊಂಡ ಬ್ಯಾನರ್ ಹಾವಳಿ ನಂತರ ರಾಜ್ಯಕ್ಕೆ ವಿಸ್ತರಿಸಿತು. ದಶಕಗಳ ಹಿಂದೆ ಒಂದು ಫ್ಲಕ್ಸ್ ಬ್ಯಾನರ್ ಮಾಡಿಸ ಬೇಕೆಂದರೆ ರಾಜಧಾನಿಗೆ ಹೋಗ ಬೇಕಿತ್ತು. ಈಗ ಪ್ರತೀ ಊರುಗಳಲ್ಲೂ ಪ್ರಿಂಟಿಂಗ್ ಮೆಷಿನುಗಳು ಬಂದು ಕುಳಿತಿವೆ. ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದ ಬ್ಯಾನರ್ ಹಾವಳಿ, ಹೋರಾಟದ ಸಂಘಟನೆಗಳ ಪ್ರತಿಷ್ಠೆಗೆ, ಪುಡಾರಿಗಳ ಪ್ರತಿಷ್ಠೆಗೆ, ಮದುವೆಗೆ, ಆರತಿ ಶಾಸ್ತ್ರಕ್ಕೆ, ಹುಟ್ಟಿದ ಹಬ್ಬಕ್ಕೆ, ತಿಥಿಗೆ ಮತ್ತು ಸತ್ತಾಗ, ಕೆಟ್ಟಾಗ ಎಲ್ಲದಕ್ಕೂ ಬ್ಯಾನರ್ ಹಾಕಲಾಗುತ್ತಿದೆ. 
      ಅದ್ಯಾರೋ ರೌಡಿ ಮಾಡ ಬಾರದ ಕೆಲಸ ಮಾಡಿ ಮರ್ಡರ್ ಆದರೆ, ಪೋಲಿ ತಿರುಗಿಕೊಂಡು ಸಮಾಜ ಕಂಟಕ ಎನಿಸಕೊಂಡವ ಕುಡಿದು, ಕೆಟ್ಟ ಚಟಗಳಿಂದ ಮತಿ ಬ್ರಾಂತನಾಗಿ ಸತ್ತು ಹೋದರೆ 'ಮತ್ತೆ ಹುಟ್ಟಿ ಬಾ ಗೆಳೆಯ' ಎಂಬ ಬ್ಯಾನರುಗಳು ರೇಜಿಗೆ ಹುಟ್ಟಿಸಿ ಬಿಡುತ್ತವೆ. ಗೌಪ್ಯವಾಗಿರ ಬೇಕಾದ ಆರತಿ ಶಾಸ್ತ್ರದ ಸಂಗತಿಯನ್ನು ಜಗಜ್ಜಾಹೀರು ಮಾಡುವುದಲ್ಲದೇ ಪ್ರೌಢಾವಸ್ತೆಗೆ ಬಂದ ಹುಡುಗಿಯ ಚಿತ್ರಗಳನ್ನೇ ವಿವಿಧ ಮಾದರಿಯಲ್ಲಿ ಪ್ರಿಂಟು ಹಾಕಿಸಿ ಊರೆಲ್ಲ ಹಚ್ಚಿ ಬಿಡುತ್ತಾರೆ! ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗಲಂತೂ ನೂರಾರು ಮಂದಿಯ ಫೋಟೋಗಳನ್ನ್ನು ಒಂದೇ ಬ್ಯಾನರಿಗೆ ಹಾಕಿ ಬೆಳಗಾಗುವುದರೊಳಗೆ ತಂದು ನಿಲ್ಲಿಸಿ ಬಿಡುತ್ತಾರೆ. ಮಂಡ್ಯ ಕಡೆ ಜನರಂತೂ ಗರಿ ಗರಿ ಖಾದಿ ಬಟ್ಟೆಗಳನ್ನು ಹಾಕಿಕೊಂಡು ಒಂದು ಕೈಯಲ್ಲಿ ಫೋನು ಕಿವಿಗೆ ಸಿಕ್ಕಿಸಿಕೊಂಡು ಮತ್ತೊಂದು ಕೈಯಲ್ಲಿ ಜನ ನಾಯಕರ ರೀತಿ ಕೈ ಬೀಸುತ್ತಾ ಇರುವ ಚಿತ್ರಗಳ ಬ್ಯಾನರುಗಳನ್ನು ಹಾಕಿಸಿಕೊಂಡರೆ, ನೆಚ್ಚಿನ ಸಿನಿಮಾ ನಟ ಅಥವ ನಟಿಯ ಕೆನ್ನೆಗೆ, ಕೈಯಿಗೆ ಮುತ್ತಿಡುವ ಚಿತ್ರಗಳನ್ನು ಯಾವುದೇ ಮುಜುಗರವಿಲ್ಲದೇ ಪ್ರಿಂಟು ಹಾಕಿಸಿಕೊಂಡು ಸಾರ್ವತ್ರಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಬಿಡುತ್ತಾರೆ. ಒಮ್ಮೊಮ್ಮೆ ಈ ಅತಿರೇಕ ಯಾವ ಮಟ್ಟಕ್ಕೆ ಹೋಗಿ ಬಿಡುತ್ತದೆಂದರೆ ಯಾವುದಾದರೂ ಕಾರ್ಯಕ್ರಮ ಇದೆ ಎಂದಾದರೆ ನೂರಾರು ಸಂಖ್ಯೆಯ ಬ್ಯಾನರುಗಳನ್ನು ಮಾಡಿಸಿ ಇಂಚು ಜಾಗ ಬಿಡದಂತೆ ಊರ ತುಂಬ ಹಾಕಿಸುತ್ತಾರೆ. ಇವೆಲ್ಲ ಎಷ್ಟು ಕಿರಿ ಕಿರಿ ಉಂಟು ಮಾಡಿ ಬಿಡುತ್ತವೆಂದರೆ, ಅನೇಕ ಸಲ ಬ್ಯಾನರುಗಳ ವಿಷಯಕ್ಕೆ ದೊಡ್ಡ ಮಟ್ಟದ ಹೊಡದಾಟಗಳು ಆಗಿ ಬಿಡುತ್ತವೆ, ಒಬ್ಬನ ಬ್ಯಾನರಿಗೆ ಇನ್ನೊಬ್ಬ ಬೆಂಕಿ ಹಾಕುತ್ತಾನೆ, ಬ್ಲೇಡು ಹೊಡೆಯುತ್ತಾನೆ ಇಲ್ಲವೇ, ಎದುರಾಳಿಯ ಕಾರ್ಯಕ್ರಮ ಇದ್ದ ದಿನ ಆತನಿಗೆ ಅವಕಾಶ ಸಿಗದಂತೆ ಇವನೇ ಊರತುಂಬ ಇವನ ಚಿತ್ರಗಳ ಬ್ಯಾನರುಗಳನ್ನು ಅಂಟಿಸಿ ಬಿಡುತ್ತಾನೆ. 
    ಬ್ಯಾನರುಗಳು ಬಂದ ಮೇಲೆ ಬಟ್ಟೆಯ ಮೇಲೆ, ಗೋಡೆಯ ಮೇಲೆ ಬರೆಯುತ್ತಿದ್ದ ಕಲಾವಿದರುಗಳು ಕೆಲಸ ಕಳೆದುಕೊಂಡು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡರು, ತಂತ್ರಜ್ಞಾನದ ಅರಿವಿದ್ದವರು ಅಲ್ಲಿ ಪುನರ್ವಸತಿ ಪಡೆದರು, ಆದರೆ ಬಹುತೇಕ ಕಲಾವಿದರ ಬದುಕು ಮೂರಾ ಬಟ್ಟೆ ಆಯಿತು. ಬ್ಯಾನರುಗಳನ್ನು ಅನುಮತಿ ಪಡೆದು, ನಿಗದಿತ ಅವಧಿಗೆ ಮಾತ್ರ ಪ್ರದರ್ಶಿಸುವ ಮಾರ್ಗಸೂಚಿ ತಯಾರಾಗುತ್ತಿದೆ, ಈ ಮಾರ್ಗಸೂಚಿಯಲ್ಲಿ ಯಾವ ಕ್ರಿಯೆಗಳಿಗೆ ಬ್ಯಾನರು ಪ್ರಕಟಣೆ ಮಾಡ ಬಾರದು, ಮತ್ತು ಎಷ್ಟು ಸಂಖ್ಯೆಯಲ್ಲಿರಬೇಕು ಎಂಬುದರ ಜೊತೆಗೆ ಬ್ಯಾನರು ಪ್ರಿಂಟು ಮಾಡಿಸುವವರನ್ನು ಕಡ್ಡಾಯವಾಗಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ನಿಯಂತ್ರಣ ಹೇರಬೇಕಾದುದು ಇಂದಿನ ಅನಿವಾರ್ಯತೆ ಎನಿಸುವುದಿಲ್ಲವೇ? ಅತಿಯಾದರೆ ಎಲ್ಲವೂ ವಿಷವಲ್ಲವೇ? 

No comments: