Sunday, January 11, 2015

ದೊಡ್ಡವರ ಸಣ್ಣತನಗಳು!

ಲವಾರು ಬಾರಿ ಸಾರ್ವಜನಿಕ ಇಮೇಜಿನಲ್ಲಿ ದೊಡ್ಡವರು ಎನಿಸಿಕೊಂಡ ಅನೇಕರು ಸಣ್ಣತನದ ಅವಿವೇಕವನ್ನು ಪ್ರದರ್ಶಿಸಿ ಸಾರ್ವತ್ರಿಕ ಅಸಹ್ಯ ಸೃಷ್ಟಿಸಿ ಕೊಳ್ಳುವುದು ಮಾಮೂಲು ಸಂಗತಿ.  ಅಲ್ಲಿ ಕಮರ್ಷಿಯಲ್ ಅಂಶಗಳು ಪ್ರಧಾನವಾದರೆ ಇನ್ನು ಕೆಲವೊಮ್ಮೆ ತಾವೆಷ್ಟು ಬ್ಯುಸಿ ಎಂದು ತೋರಿಸಿಕೊಳ್ಳುವ ಹಮ್ಮು  ಅಡಗಿರುತ್ತದೆ. ಅಂತಹ ಕೆಲವು ಸ್ಯಾಂಪಲ್ ಗಳು ನಿಮಗಾಗಿ
    ಸಾಂಸ್ಕೃತಿಕ ನಗರಿಗೆ ಹೋಗಿದ್ದೆ, ಅವತ್ತು ಅಚಾನಕ್ ಆಗಿ ರಸ್ತೆ ಬದಿಯ ಕಾಂಪೌಂಡ್ ಬಳಿ ಕಾರು ಪಾರ್ಕ ಮಾಡಿದೆ, ಜೊತೆಯಲ್ಲಿದ್ದ ಗೆಳೆಯರೊಬ್ಬರು ಕಾರಿನಿಂದಿಳಿದವರೇ ಕಾಂಪೌಂಡ್ ಗೋಡೆಯ ಮೇಲೆ ಇದ್ದ ಹೆಸರು ಕಂಡು ಅಚ್ಚರಿಯಿಂದ ತೋರಿಸಿದರು, ನಾನು ಕೂಡ ಬೆರಗಾದೆ. ಅವರ ಕನ್ನಡ ಸಾರಸ್ವತ ಲೋಕ ಕಂಡ ದೊಡ್ಡ ಸಾಹಿತಿಗಳು, ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಧೀಮಂತರು ಹೌದು. ವರ್ತಮಾನದಲ್ಲೂ ಅವರ ಕೃತಿಗಳು ಬಿಡುಗಡೆಯಾಗಿವೆ ಮತ್ತು ಬೇರೆ ಸಾಹಿತ್ಯದ ಪುಸ್ತಕಗಳಿಗಿಂತ ದಾಖಲೆಯ ಮಾರಾಟ, ಜನಪ್ರಿಯತೆಯನ್ನು ಗಳಿಸಿದೆ.    ಸರಿ ಘನ ಸಾಹಿತಿಗಳನ್ನು ಭೇಟಿ ಮಾಡುವ ಎಂದು ಕೊಂಡು ಮನೆಯ ಕಡೆ ನೋಡಿದೆ. ಅಲ್ಲಿ ಎಲ್ಲೋ ನೋಡಿದ ಪರಿಚಯದ ಮುಖವೊಂದು ಹ್ಯಾಪು ಮೋರೆ ಹೊತ್ತು ಆಚೆಗೆ ಬರುತ್ತಿತ್ತು. ಹೌದಲ್ವಾ ಅಂತಂದುಕೊಂಡು ಮಾತನಾಡಿಸಿದೆ. ಅವರ ಮಾತು ಕೇಳಿ ಘನ ಸಾಹಿತಿಯವರನ್ನ ಭೇಟಿ ಮಾಡುವ ಅಪೇಕ್ಷೆಗೆ ತಣ್ಣೀರೆರಚಿದಂತೆ ಆಯಿತು. ಆತ ತಿಂಗಳ ಹಿಂದೆಯೇ ಸಾಹಿತ್ಯ ಸಂಬಂಧಿತ ಸಮ್ಮಾನದ ಕಾರ್ಯಕ್ರಮವೊಂದಕ್ಕೆ ಸದರಿ ಸಾಹಿತಿಗಳನ್ನು ಬುಕ್ ಮಾಡಿದ್ದರು. ಅವರನ್ನು ವಾಹನ ಮಾಡಿ ಆಡಳಿತದ ರಾಜಧಾನಿಗೆ ಕರೆದುಕೊಂಡು ಹೋಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ ಸೇಪ್ಟಿಯಾಗಿ ಮತ್ತೆ ಸಾಂಸ್ಕೃತಿಕ ರಾಜಧಾನಿಗೆ ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗಿತ್ತು. ಅವತ್ತು ಸಂಜೆ ಸಾಹಿತ್ಯದ ಕಾರ್ಯಕ್ರಮ  ಸಂಘಟನೆಯ ಹೊಣೆ ಹೊತ್ತ ಆ ಯುವಕ ನಿನ್ನೆಯಿಂದಲೇ ಸಾಹಿತಿಯನ್ನು ಭೇಟಿಯಾಗಲು ಹೆಣಗುತ್ತಿದ್ದ ಪ್ರತೀ ಸಲ ಹೋಗಿ ಬಾಗಿಲು ತಟ್ಟಿದಾಗಲೂ ಕೆಲಸದವರು ಇಲ್ಲವೇ ಮನೆಯ ಸದಸ್ಯರು ಬಾಗಿಲು ತೆರೆದು 'ಅವರಿಲ್ಲ' ಮಲಗಿದ್ದಾರೆ, ಉಷಾರಿಲ್ಲ, ಆಮೇಲೆ ಬನ್ನಿ ಹೀಗೆ ಸಾಗ ಹಾಕುತ್ತಲೆ ಇದ್ದರು. ಆತನಂತು ಸಾಹಿತಿಯ ದರ್ಶನವಾಗದೇ ಹೈರಾಣಾಗಿ ಹೋಗಿದ್ದ. ಅವತ್ತಿನ ಸಾಹಿತ್ಯದ ಕಾರ್ಯಕ್ರಮದಲ್ಲಿ ಅವರೇ ಪ್ರಧಾನ ವಾಗಿದ್ದರು. ಆದರೆ ಗಂಟೆ 12.30 ಆದರೂ ಆ ಸಾಹಿತಿಯ ದರ್ಶನ ಭಾಗ್ಯವೂ ಅವರಿಗೆ ದಕ್ಕಿರಲಿಲ್ಲ, ಅವರನ್ನ ಶತಾಯ ಗತಾಯ ಕರೆಸುವ ಪ್ರಯತ್ನವನ್ನ ಹಾಸನ ಜಿಲ್ಲೆಯಲ್ಲು ಮಾಡಲಾಗಿತ್ತು ವಿವಿಧ ಕಾರಣ ನೀಡಿ ಅವರು ಬಂದಿರಲಿಲ್ಲ ಬಹುಶ: ವಯೋಮಾನ ಕಾರಣ ಇರಬಹುದೇನೋ ಆದರೆ ಇಚ್ಚಾಶಕ್ತಿಯೂ ಬೇಕಲ್ಲವೇ? ಯಾರದ್ದೋ ತೀಟೆಗೆ ಕರೆಯುವುದಿಲ್ಲ ಜನರ ಪ್ರೀತಿಗೆ ಕರೆಯುವ ಪ್ರಯತ್ನ ಮಾಡಿ ಕಿರಿ ಕಿರಿ ಆಗದಂತೆ ನೋಡಿಕೊಂಡರೆ ಬರಲು ಏನು ಅಡ್ಡಿಯೋ ಗೊತ್ತಿಲ್ಲ. ಅಂದ ಹಾಗೆ ಆ ಸಾಹಿತಿಗಳು ಹಾಸನ ಜಿಲ್ಲೆಯ ಮೂಲದವರು!
      ಅದೊಂದು ಸಾಧಕರನ್ನು ಸನ್ಮಾನಿಸುವ ಬಹು ದೊಡ್ಡ ಕಾರ್ಯಕ್ರಮ. ಊರಿನ ಜನರ ಪ್ರೀತಿಯ ಅಹವಾಲಿಗೆ ಮಣಿದ ಸಂಘಟಕರು ಆ ಕಲಾವಿದನನ್ನು ಸಭೆಗೆ ಕರೆದರು. ಆತ ಹುಟ್ಟೂರಿನ ಸಭೆಗೆ ಬರಲು ದೊಡ್ಡ ಬೇಡಿಕೆಯನ್ನೇ ಇಟ್ಟುಬಿಟ್ಟ ! ರಾಜಧಾನಿಯಿಂದ ಊರಿಗೆ ಬರಲು ಬಾಡಿಗೆ ಇನ್ನೋವಾ ಕಾರು, ಕಾಲ್ ಶೀಟ್ ಲೆಕ್ಕದಲ್ಲಿ ಸಂಭಾವನೆ, ಉಳಿಯಲು ಸರ್ಕ್ಯೂಟ್ ಹೌಸ್ ( ಊರಿನಲ್ಲಿ ಆತನದ್ದೇ ಮನೆಯಿದೆ) ಮತ್ತು ಸಂಜೆಗೆ ದೊಡ್ಡ ದರದ ಅಬಕಾರಿ ವ್ಯವಸ್ಥೆ! ಅಲ್ಲಾ ಸಾರ್  ಹುಟ್ಟೂರಿಗೆ ಬರಲು ಇಷ್ಟೇಲ್ಲ ವ್ಯವಸ್ಥೆ ಮಾಡಬೇಕಾ? ನಾವ್ ಕರಿತಿರೋದು ಸನ್ಮಾನಕ್ಕೆ ಎಂದರೆ, ನೋಡಿ ಇವ್ರೆ ನನಗೆ ಅವೆಲ್ಲಾ ಗೊತ್ತಿಲ್ಲ, ಎಂಥ ಹುಟ್ಟೂರು ಅದು ನನಗೇನೂ ಕೊಟ್ಟಿದೆ ಅದು ಎನ್ನಬೇಕೆ, ಸಂಘಟಕರು ಸುಸ್ತು. ಹಿಂದೊಮ್ಮೆ ಇನ್ನೊಂದು ಸಾರ್ವಜನಿಕ ಸಂಘಟನೆಯೊಂದು ಕಾರ್ಯಕ್ರಮ ಮಾಡಿ ಈ ಕಲಾವಿದನನ್ನು ಕರೆದಾಗ ಮಾಮೂಲು ಬೇಡಿಕೆಗಳು ಬಂದವು ಆತನು ಬಂದು ಸರ್ಕ್ಯೂಟ್ ಹೌಸ್ ನಲ್ಲಿ ಉಳಿದ ಗುಂಡು ಒಳಗೆ ಹೋದ ಮೇಲೆ ಸಂಘಟಕರಿಗೆ ಫೋನು, ಏನ್ರೀ ನನ್ನ ಅಭಿಮಾನಿಗಳು ಕೇಳ್ತಾವ್ರೆ ನನ್ನ ಫೋಟೋದ ಬ್ಯಾನರ್ ದೊಡ್ಡದಾಗಿಲ್ವಂತೆ ಅಂತ ಕಿಡಿಕಾರಿಬಿಟ್ಟ, ಹೀಗೆಲ್ಲ ಆದರೆ ನಾನು ಬರೋದಿಲ್ಲ ನೋಡಿ ಎಂದ. ತಾಳ್ಮೆ ಕಳೆದುಕೊಂಡ ಸಂಘಟಕರು ನೀನು ಬರದಿದ್ರೆ ನಷ್ಟ ಏನಿಲ್ಲ ಇಡಯ್ಯಾ ಫೋನು ಎಂದರು. ಆತ ಏನಿಲ್ಲವೆಂದರೂ 1000ಕ್ಕೂ ಮಿಕ್ಕಿದ ಸಿನಿಮಾಗಳಲ್ಲಿ ನಟಿಸಿದ ಕಾಮಿಡಿ ಆಕ್ಟರ್ರು, ರಾಜ್ ಕ್ಯಾಂಪಿನಲ್ಲಿ ಗುರುತಿಸಿಕೊಂಡವರು ಮತ್ತು ಹಾಸನ ಜಿಲ್ಲೆಯ ಮೂಲದವರು!
      ಮೊನ್ನೆಯಷ್ಟೇ ಹೊಯ್ಸಳ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅದೇ ಊರಿನಲ್ಲಿ ಜನಿಸಿದ ಸಾಧಕರ ಸನ್ಮಾನದ ಸಲುವಾಗಿ ಹೆಸರು ಮಾಡಿದ ಕಲಾವಿದಯೊಬ್ಬರನ್ನು ಸಂಘಟಕರು ಆಹ್ವಾನಿಸಿದರು, ಕಾರ್ಯಕ್ರಮದಲ್ಲಿ ಗೊಂಬೆಯೊಂದಿಗೆ ಒಂದು ಶೋ ನೀಡಿದರೆ ಸಂಭಾವನೆ ನೀಡುವುದಾಗಿಯೂ ತಿಳಿಸಿದರು. ಆದರೆ ಫೋನೆತ್ತಿಕೊಂಡ ಆಕೆ ತಾನು ಬಾಂಬೆಗೆ ಕಾರ್ಯಕ್ರಮದ ಸಲುವಾಗಿ ಹೋಗುತ್ತಿದ್ದೇನೆ ಆದ್ದರಿಂದ ಊರಿನಲ್ಲಿ ನಡೆಯುತ್ತಿರುವ ಉತ್ಸವದ ಕಾರ್ಯಕ್ರಮಕ್ಕೆ ಬರಲು ಬಿಡುವಾಗುತ್ತಿಲ್ಲ ಎಂದು ಬಿಟ್ಟರು. ಸರಿ ಎಂದು ಕೊಂಡ ಸಂಘಟಕರು ಅವರನ್ನು ಕೈಬಿಟ್ಟು ಉತ್ಸವವನ್ನು ಸಂಘಟಿಸಿದರು. ಆದರೆ ಆ ಕಲಾವಿದೆ ಊರಿನ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಬಾಂಬೆಗೆ ಹೋಗುತ್ತಿದ್ದೇನೆ ಎಂದು ಹೇಳಿದ ದಿನವೇ ಜಿಲ್ಲಾ ಕೆಂದ್ರದಲ್ಲಿ ನಡೆದ ಹೊಯ್ಸಳ ಮಹೋತ್ಸವದ ಕಾರ್ಯಕ್ರಮಕ್ಕೆ ಬಾರೀ ಮೊತ್ತದ ಸಂಭಾವನೆ ಪಡೆದು ಹಾಜರಾಗಿದ್ದರು! ಆಕೆಯೂ ಹಾಸನ ಜಿಲ್ಲೆಯ ಮೂಲದವರೇ